ಗುಡ್ಡ ಜರಿತದ ಭಾಗಕ್ಕೆ ತಡೆಗೋಡೆ : ಡಾ.ಕೆ.ವಿದ್ಯಾಕುಮಾರಿ ಭರವಸೆ; ರಾ.ಹೆ.169 ಕಾಮಗಾರಿ ಸಮಸ್ಯೆ ಪರಿಶೀಲನೆ

jilladhikari
ಸಾಣೂರು ರಾಷ್ಟೀಯ ಹೆದ್ದಾರಿ ಕಾಮಗಾರಿಯಿಂದಾಗುವ ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ನೇತೃತ್ವದ ಜಿಲ್ಲಾಡಳಿತ ತಂಡ ಶುಕ್ರವಾರ ಭೇಟಿ ಪರಿಶೀಲನೆ ನಡೆಯಿತು
Published on

ವಿಜಯವಾಣಿ ಸುದ್ದಿಜಾಲ ಕಾರ್ಕಳ

ಸಾಣೂರು ರಾಷ್ಟ್ರೀಯ ಹೆದ್ದಾರಿ-169ರಲ್ಲಿ ಕಾಮಗಾರಿಯಿಂದ ಉದ್ಭವಿಸಿದ ಸಮಸ್ಯೆಗಳ ತಾಣಗಳನ್ನು ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ನೇತೃತ್ವದ ಜಿಲ್ಲಾಡಳಿತ ತಂಡ ಶುಕ್ರವಾರ ಭೇಟಿ ಪರಿಶೀಲನೆ ನಡೆಸಲಾಯಿತು. ಸಾಣೂರು ಯುವಕ ಮಂಡಲ ಕಟ್ಟಡ ಮುಂಭಾಗದ ಮೈದಾನ ಬದಿಯಲ್ಲಿ ಉದ್ದಕ್ಕೂ ಗುಡ್ಡ ಜರಿದಿದ್ದು, 220 ಕೆವಿ ಹೈಟೆನ್ಷನ್ ಗೋಪುರ, ಪಕ್ಕದ ತಲಾ 50 ಸಾವಿರ ಲೀಟರ್ ಸಾಮರ್ಥ್ಯದ 2 ಕುಡಿಯುವ ನೀರಿನ ಓವರ್‌ಹೆಡ್ ಟ್ಯಾಂಕ್ ಮತ್ತು ತೆರೆದ ಬಾವಿಯ ಪ್ರದೇಶ ಅಪಾಯಕಾರಿ ಸ್ಥಿತಿಯಲ್ಲಿದೆ ಎಂದು ಸಾಣೂರು ಗ್ರಾಪಂ ಮಾಜಿ ಅಧ್ಯಕ್ಷ ಪ್ರಸಾದ್ ಪೂಜಾರಿ ತಿಳಿಸಿದರು.
ಗುಡ್ಡ ಜರಿತದ ಭಾಗಕ್ಕೆ ತಕ್ಷಣ ತಡೆಗೋಡೆ ನಿರ್ಮಾಣ ಕಾರ್ಯ ವಾರದೊಳಗೆ ಕೈಗೆತ್ತಿಕೊಳ್ಳಬೇಕು ಹಾಗೂ 3 ತಿಂಗಳೊಳಗೆ ಮುಗಿಸಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಇಂಜಿನಿಯರ್ ಮತ್ತು ಡಿಬಿಎಲ್ ಗುತ್ತಿಗೆದಾರ ಕಂಪನಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿರ್ದೇಶಿಸಿದರು.

ಸುರಕ್ಷಿತ ಕಾಮಗಾರಿಗೆ ಸೂಚನೆ

ಒಂದು ವರ್ಷದ ಹಿಂದೆಯೇ ಈ ಕುರಿತು ಎಚ್ಚರಿಕೆ ನೀಡಿದ್ದರೂ ಅದನ್ನು ಕಡೆಗಣಿಸಿ ತಾತ್ಕಾಲಿಕವಾಗಿ ಟಾರ್ಪಾಲು ಹೊದಿಸುವ ಅಧಿಕಾರಿಗಳ ನಿರ್ಲಕ್ಷೃ ಧೋರಣೆ ಶಾಸಕ ವಿ.ಸುನೀಲ್‌ಕುಮಾರ್ ತರಾಟೆಗೆ ತೆಗೆದುಕೊಂಡು ಸಂಭಾವ್ಯ ಅಪಾಯದಿಂದ ತಪ್ಪಿಸಲು ಸುರಕ್ಷತಾ ಕಾಮಗಾರಿ ಕೂಡಲೇ ಕೈಗೆತ್ತುಕೊಳ್ಳುವಂತೆ ಸೂಚಿಸಿದರು. ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ., ಕುಂದಾಪುರ ಉಪವಿಭಾಗ ಆಯುಕ್ತೆ ರಶ್ಮಿ, ತಹಸೀಲ್ದಾರ್ ನರಸಪ್ಪ, ತಾಪಂ ಇಒ ಗುರುದತ್ತ ಎನ್., ಭೂಸ್ವಾಧೀನಾಧಿಕಾರಿ ಇಸಾಕ್ ಮಹಮ್ಮದ್, ಸಿಬ್ಬಂದಿ ಸಂಜೀವ ಮತ್ತು ಗೋಪಾಲ ಸೇರಿಗಾರ್ ರಾಹೆ ಇಂಜಿನಿಯರ್ ನಾಸೀರ್, ಪ್ರಸಾದ್, ಡಿಬಿಎಲ್ ಕಂಪನಿ ಜನರಲ್ ಮ್ಯಾನೇಜರ್ ರಾಘವ ರಾವ್, ಸಾಣೂರು ಗ್ರಾಪಂ ಅಧ್ಯಕ್ಷ ಯುವರಾಜ ಜೈನ್, ಉಪಾಧ್ಯಕ್ಷೆ ಯಶೋದಾ ಶೆಟ್ಟಿ, ಜಿಪಂ ಮಾಜಿ ಸದಸ್ಯರಾದ ಉದಯ ಕೋಟ್ಯಾನ್, ತಾಪಂ ಸದಸ್ಯರಾದ ಪ್ರವೀಣ್ ಕೋಟ್ಯಾನ್, ಯುವಕ ಮಂಡಲ ಅಧ್ಯಕ್ಷ ಪ್ರಸಾದ್ ಶೆಟ್ಟಿ, ಸಾಣೂರು ಹೆದ್ದಾರಿ ಭೂ ಮಾಲೀಕರ ಹೋರಾಟ ಸಮಿತಿ ಸಂಚಾಲಕ ಸಾಣೂರು ನರಸಿಂಹ ಕಾಮತ್ ಉಪಸ್ಥಿತರಿದ್ದರು.

ಸರ್ವೀಸ್ ರಸ್ತೆ ನಿರ್ಮಿಸಿ

ಇರ್ವತ್ತೂರು ರಸ್ತೆ ರಾಷ್ಟ್ರೀಯ ಹೆದ್ದಾರಿ ಸಂಧಿಸುವ ಭಾಗ ಪ್ರಯಾಣಿಕರು ಹಾಗೂ ವಾಹನ ದಟ್ಟಣೆಯಿಂದ ಆಗಾಗ ಸಣ್ಣಪುಟ್ಟ ರಸ್ತೆ ಅಪಘಾತ ಸಂಭವಿಸುತ್ತಿದ್ದು, ಕೂಡಲೇ ಸರ್ವೀಸ್ ರಸ್ತೆ ನಿರ್ಮಿಸಿ ರಸ್ತೆ ಅಗಲೀಕರಣಗೊಳಿಸುವಂತೆ ಶಾಸಕ ವಿ.ಸುನೀಲ್ ಕುಮಾರ್ ಗುತ್ತಿಗೆದಾರ ಕಂಪನಿಗೆ ನಿರ್ದೇಶನ ನೀಡಿದರು.

ಬಸ್ ನಿಲ್ದಾಣ ನಿರ್ಮಾಣ ಮಾಡಿ

ಸಾಣೂರು ಪಪೂ ಕಾಲೇಜಿಗೆ ಹೋಗುವ ರಸ್ತೆ ಪಕ್ಕದಲ್ಲಿ ಹಾಕಿರುವ ವಿದ್ಯುತ್ ಕಂಬ ಸುರಕ್ಷಿತ ಅಂತರಕ್ಕೆ ಎತ್ತರಿಸಿ ವಿದ್ಯುತ್ ತಂತಿ ಅಪಾಯಕಾರಿಯಾಗಿ ಕೆಳಮಟ್ಟದಲ್ಲಿ ಹಾದುಹೋಗದಂತೆ ಎಚ್ಚರಿಕೆ ವಹಿಸಬೇಕೆಂದು, ತೀರಾ ಕೆಳಮಟ್ಟದಲ್ಲಿ ಹಾದು ಅಪಾಯವೊಡ್ಡುತ್ತಿರುವ ವಿದ್ಯುತ್ ತಂತಿಗಳನ್ನು ಹಾಗೂ ಮಣ್ಣು ಸಡಿಲಗೊಂಡು ವಾಲಿರುವ ವಿದ್ಯುತ್ ಕಂಬ, ಟ್ರಾನ್ಸ್‌ಫಾರ್ಮರ್ ಸರಿಪಡಿಸುವಂತೆ, ಹೆದ್ದಾರಿ ಕಾಮಗಾರಿಯ ವೇಳೆ ತೆರವುಗೊಳಿಸಲಾದ 4 ಬಸ್ ನಿಲ್ದಾಣ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಸ್ಥಳ ನಿಗದಿ ಮಾಡಿ ನಿರ್ಮಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net