

ಬಂಟ್ವಾಳ: ಕರ್ನಾಟಕ ನಗರ ನೀರು ಸರಬರಾಜು ಮಂಡಳಿಯ ಅಧಿಕಾರಿಗಳು ಬಂಟ್ವಾಳ ಪುರಸಭೆಯ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸದಿರುವ ಬಗ್ಗೆ ಪುರಸಭೆಯ ಸದಸ್ಯರು ಅಕ್ರೋಶ ವ್ಯಕ್ತಪಡಿಸಿದ್ದು ಸರ್ವಪಕ್ಷದ ಸದಸ್ಯರ ನಿಯೋಗ ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ಚರ್ಚಿಸುವ ಬಗ್ಗೆ ಪುರಸಭೆಯ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಗಿದೆ.
ಪುರಸಭಾಧ್ಯಕ್ಷ ಬಿ.ವಾಸು ಪೂಜಾರಿ ಅಧ್ಯಕ್ಷತೆಯಲ್ಲಿ ಗುರುವಾರ ಬಂಟ್ವಾಳ ಪುರಸಭಾ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರೆಲ್ಲರೂ ತಮ್ಮ ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ವಿತರಣೆ ಸಮಸ್ಯೆ ಹೇಳಿದರು. ಈ ಸಂದರ್ಭ ಪುರಸಭಾಧ್ಯಕ್ಷ ಬಿ.ವಾಸು ಪೂಜಾರಿ ಅವರು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಪತ್ರ ಬರೆದ ವಿಚಾರವನ್ನು ಮುಖ್ಯಾಧಿಕಾರಿ ರೇಖಾ ಜೆ.ಶೆಟ್ಟಿ ಓದಿದರು. ಈ ವಿಚಾರಕ್ಕೆ ಸಂಬಂಧಿಸಿ ದಿನೇಶ್ ಗುಂಡೂರಾವ್ ಕಚೇರಿಯಿಂದ ಸೂಕ್ತ ಪರಿಶೀಲನೆಗೆ ಸೂಚಿಸಿ, ತನಿಖೆ ನಡೆಸಿದರೂ ಪರಿಹಾರವಾಗದ ಹಿನ್ನೆಲೆಯಲ್ಲಿ ಇದರ ಗಂಭೀರತೆ ಮನವರಿಕೆ ಮಾಡಲು ಜಿಲ್ಲಾಧಿಕಾರಿ ಬಳಿ ಹೋಗುವುದು ಎಂದು ತೀರ್ಮಾನಿಸಲಾಯಿತು. ಕುಡಿಯುವ ನೀರಿನ ಸಮಸ್ಯೆಗಳ ವಿಚಾರವಾಗಿ ಮತ್ತೆ ವಿಸ್ತೃತ ಚರ್ಚೆಯೂ ನಡೆಯಿತು.
ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಈಗ ನೀರಿನ ಹೊಸ ಸಂಪರ್ಕ ಮಾಡುವುದು ಯಾರು? ಅಕ್ರಮ ಸಂಪರ್ಕಗಳನ್ನು ತೆರವು ಮಾಡುವುದು ಯಾರು? ಎಂದು ಸದಸ್ಯ ಮಹಮ್ಮದ್ ಶರೀಫ್ ಪ್ರಶ್ನಿಸಿದರು. ಒಂದೊಂದು ಮನೆಗೆ, ಮೂರು ನಾಲ್ಕು ನೀರಿನ ಸಂಪರ್ಕಗಳಿವೆ, ಈ ಬಗ್ಗೆ ಪುರಸಭಾ ಸದಸ್ಯರಿಗೆ ಯಾವುದೇ ಮಾಹಿತಿಯಿಲ್ಲ, ಪುರಸಭೆಯ ಗಮನಕ್ಕೆ ಬಾರದೆ ನೀರಿನ ಸಂಪರ್ಕಗಳಾಗುತ್ತಿದೆ, ಪುರಸಭೆ ಮತ್ತು ನಗರ ನೀರು ಸರಬರಾಜು ಮಂಡಳಿಯ ನಡುವೆ ಹೊಂದಾಣಿಕೆ ಇಲ್ಲ ಎಂದು ಸದಸ್ಯರು ಆರೋಪಿಸಿದರು. ಪುರಸಭೆಯಲ್ಲಿ ನೀರಿನ ವ್ಯವಸ್ಥೆ ನೋಡಿಕೊಳ್ಳಲು ಉಸ್ತುವಾರಿ ಸಮಿತಿ ಇಲ್ಲ ಎಂದು ಸ್ವತಃ ಅಧ್ಯಕ್ಷರೇ ಅಸಹಾಯಕತೆ ತೋಡಿಕೊಂಡರು. ಸುದೀರ್ಘ ಚರ್ಚೆ ನಡೆದು ಹಲವು ಬಾರಿ ಸಭೆ ಕರೆದರೂ ಮಂಡಳಿಯ ಅಧಿಕಾರಿಗಳು ನೀರಿನ ಸಮಸ್ಯೆ ಪರಿಹರಿಸದೆ ಇರುವುದರಿಂದ ರಮಜಾನ್ ಬಳಿಕ ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ಚರ್ಚಿಸುವ ಬಗ್ಗೆ ದಿನ ನಿಗದಿ ಪಡಿಸಲು ಸಭೆ ತೀರ್ಮಾನಿಸಿತು.
ಬಂಟ್ವಾಳ ಪುರಸಭೆಯಲ್ಲಿ 2ನೇ ಹಂತದ ಒಳಚರಂಡಿ ಯೋಜನೆಯಡಿ ಕೆಳಗಿನ ಪೇಟೆಯಲ್ಲಿ ವೆಟ್‌ವೆಲ್ ಕಂ ಪಂಪ್‌ಹೌಸ್ ನಿರ್ಮಾಣ ಮಾಡಲು ಅಗತ್ಯವಿರುವ ಖಾಸಗಿ ಜಮೀನನ್ನು ಭೂ ಮಾಲಿಕರಿಂದ ಖರೀದಿ ಮಾಡಲು 1,11,53,760 ರೂಪಾಯಿ ಪಾವತಿ ಮಾಡಿರುವ ಬಗ್ಗೆ ಕೌನ್ಸಿಲ್ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಲ್ಲದೆ ಬಿ.ಖಾತಾ ನೀಡದಂತೆ ಆಗ್ರಹಿಸಿದರು. ಅಜೆಂಡಾದ ಮೇಲಿನ ವಿಚಾರದ ಬಗ್ಗೆ ಚರ್ಚೆ ನಡೆದಾಗ ಮುಖ್ಯಾಧಿಕಾರಿ ಮಾತನಾಡಿ, ಬಿ.ಖಾತಾ ನೀಡುವ ಬಗ್ಗೆ ತಿಳಿಸಿದರು.
ವಿಪಕ್ಷ ಸದಸ್ಯ ಗೋವಿಂದ ಪ್ರಭು ಮಾತನಾಡಿ, ಬಿ.ಮೂಡ ಗ್ರಾಮದಲ್ಲಿ ಒಳಚರಂಡಿಗಳು ಅಧಿಕವಾಗಿದ್ದು ವೆಟ್‌ವೆಲ್ ಕಂ ಪಂಪ್‌ಹೌಸ್ ನಿರ್ಮಾಣ ಆ ಪ್ರದೇಶಕ್ಕೆ ಅಗತ್ಯವಾಗಿದೆ. ಪ್ರಥಮ ಆಧ್ಯತೆಯಾಗಿ ಬಿ. ಮೂಡದಲ್ಲಿ ನಿರ್ಮಾಣಗೊಳ್ಳಲಿ ಎಂದು ಒತ್ತಾಯಿಸಿದರು. ಬಂಟ್ವಾಳ ಪುರಸಭೆಯ ಆಸ್ತಿ ತೆರಿಗೆ ಪರಿಷ್ಕೃತ ದರವನ್ನು ಶೇ.3 ಏರಿಕೆ ಮಾಡಲು ಕೌನ್ಸಿಲ್ ತೀರ್ಮಾನಿಸಿತು.
ಸದಸ್ಯರಾದ ಎ.ಗೋವಿಂದ ಪ್ರಭು, ಮಹಮ್ಮದ್ ಶರೀಫ್, ರಾಮಕೃಷ್ಣ ಆಳ್ವ, ಮಹಮ್ಮದ್ ನಂದರಬೆಟ್ಟು, ವಿದ್ಯಾವತಿ ಪ್ರಮೋದ್, ಸಿದ್ದೀಕ್ ಗುಡ್ಡೆಯಂಗಡಿ, ಝೀನತ್ ಫಿರೋಜ್, ಇದ್ರೀಸ್ ಪಿ.ಜೆ, ಜೆಸಿಂತಾ ಡಿಸೋಜ, ಹರಿಪ್ರಸಾದ್, ಹಸೈನಾರ್ ಮತ್ತಿತರರು ಚರ್ಚೆಯಲ್ಲಿ ಭಾಗವಹಿಸಿದ್ದರು.
ಜಮೀನಿಗೆ ಅಷ್ಟು ಮೊತ್ತ ಯಾಕೆ ?
ಆಡಳಿತ ಪಕ್ಷದ ಮಹಮ್ಮದ್ ಶರೀಫ್ ಹಾಗೂ ರಾಮಕೃಷ್ಣ ಆಳ್ವ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಬದಿ ಇರುವ ಜಮೀನಿಗೂ ಅಷ್ಟೊಂದು ದರವಿಲ್ಲ, ನೆರೆ ನೀರು ಬೀಳುವ ಜಮೀನಿಗೆ ಅಷ್ಟು ಮೊತ್ತ ಯಾಕೆ ಪಾವತಿಸಬೇಕು? ಇದರಲ್ಲಿ ಅವ್ಯವಹಾರ ನಡೆದಿದೆ, ಈ ದರ ನಿಗದಿಪಡಿಸಿದ್ದು ಯಾರು? ಇದರ ಕಡತ ಎಲ್ಲಿದೆ? ಎಂದು ಪ್ರಶ್ನಿಸಿದರು. ಕೌನ್ಸಿಲ್ ಅಧಿಕಾರದಲ್ಲಿ ಇಲ್ಲದೆ ವೇಳೆ ಆಡಳಿತಾಧಿಕಾರಿ ಅವಧಿಯಲ್ಲಿ ಈ ಕೆಲಸ ನಡೆದಿದೆ. ಈ ಭೂಸ್ವಾಧೀನ ಪ್ರಕ್ರಿಯೆ ಸರಿಯಾಗಿಲ್ಲ, ಯಾವುದೇ ಕಾರಣಕ್ಕೂ ಬಿ ಖಾತಾ ನೀಡದಂತೆ ಸದಸ್ಯರು ಆಗ್ರಹಿಸಿದರು. ಕಂದಾಯ ಇಲಾಖೆಯ ತಪ್ಪಿಗೆ ನಾವ್ಯಾಕೆ ಹೊಣೆಗಾರರಾಗಬೇಕು? ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿ ಎಂದು ಹರಿಪ್ರಸಾದ್ ಸಲಹೆ ನೀಡಿದರು. ಸದಸ್ಯರ ವಿರೋಧದ ಬಗ್ಗೆ ಜಿಲ್ಲಾಧಿಕಾರಿಗೆ ವಿವರವಾದ ಪತ್ರ ಬರೆಯುವುದಾಗಿ ಮುಖ್ಯಾಧಿಕಾರಿ ತಿಳಿಸಿದರು.