PHOTO | ವಧುವಿನ ಅಲಂಕಾರದಲ್ಲಿ ಬ್ಯಾಟಿಂಗ್! ಬಾಂಗ್ಲಾ ಮಹಿಳಾ ಕ್ರಿಕೆಟರ್ ವೆಡ್ಡಿಂಗ್ ಫೋಟೋಶೂಟ್ ವೈರಲ್

sajida wed web
Published on

ಢಾಕಾ: ಸೀರೆಯುಟ್ಟು ವಧುವಿನಂತೆ ಅಲಂಕರಗೊಂಡಿರುವ ಮಹಿಳೆಯೊಬ್ಬಳು ಹಸೆಮಣೆಯಲ್ಲಿ ಕುಳಿತುಕೊಳ್ಳುವ ಬದಲಾಗಿ ಮೈದಾನಕ್ಕಿಳಿದು ಕ್ರಿಕೆಟ್ ಬ್ಯಾಟ್ ಹಿಡಿದು ಚೆಂಡನ್ನು ದಿಟ್ಟವಾಗಿ ಎದುರಿಸುತ್ತಿರುವ ಚಿತ್ರಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇದು ಬಾಂಗ್ಲಾದೇಶದ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಸಂಜಿದಾ ಇಸ್ಲಾಂ ಅವರ ಪ್ರಿ-ವೆಡ್ಡಿಂಗ್ ಫೋಟೋಶೂಟ್ ಚಿತ್ರಗಳಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿವೆ.

24 ವರ್ಷದ ಸಂಜಿದಾ ಇಸ್ಲಾಂ ರಂಗ್‌ಪುರದ ಪ್ರಥಮ ದರ್ಜೆ ಕ್ರಿಕೆಟಿಗ ಮಿಮ್ ಮೊಸದೆಕ್ ಅವರನ್ನು ವಿವಾಹವಾಗಿದ್ದು, ಇದಕ್ಕೆ ಮುನ್ನ ನಡೆಸಲಾದ ಫೋಟೋಶೂಟ್‌ನಲ್ಲಿ ಸೀರೆ, ಆಭರಣ ತೊಟ್ಟು ಸಾಂಪ್ರದಾಯಿಕ ಉಡುಪಿನಲ್ಲಿ ಕಂಗೊಳಿಸಿದ್ದಾರೆ. ಜತೆಗೆ ತಮ್ಮ ಮೊದಲ ಪ್ರೀತಿಯ ಕ್ರೀಡೆಯಾದ ಕ್ರಿಕೆಟ್ ಆಟಕ್ಕೆ ಆದ್ಯತೆ ನೀಡಿದ್ದು, ಕೈಯಲ್ಲಿ ಬ್ಯಾಟ್ ಹಿಡಿದು ಪೋಸ್ ಕೊಟ್ಟಿದ್ದಾರೆ.

ಇದೀಗ ಸಂಜಿದಾ ಇಸ್ಲಾಂ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಬೆನ್ನಲ್ಲೇ ಐಸಿಸಿ ಕೂಡ ಈ ಚಿತ್ರಗಳನ್ನು ಹಂಚಿಕೊಂಡಿದೆ. ಇದರ ಬೆನ್ನಲ್ಲೇ ಚಿತ್ರಗಳು ಭಾರಿ ವೈರಲ್ ಆಗಿವೆ. ‘ಡ್ರೆಸ್, ಜ್ಯುವೆಲ್ಲರಿ, ಕ್ರಿಕೆಟ್ ಬ್ಯಾಟ್. ಕ್ರಿಕೆಟಿಗರ ವೆಡ್ಡಿಂಗ್ ಫೋಟೋಶೂಟ್ ಈ ರೀತಿ ಇರುತ್ತವೆ’ ಎಂದು ಐಸಿಸಿ ಚಿತ್ರಗಳಿಗೆ ಅಡಿಬರಹ ಬರೆದಿದೆ.

ಬಾಂಗ್ಲಾದೇಶ ತಂಡದ ಮಧ್ಯಮ ಕ್ರಮಾಂಕದ ಬ್ಯಾಟುಗಾರ್ತಿಯಾಗಿರುವ ಸಂಜಿದಾ ಇಸ್ಲಾಂ ಎಂಟು ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನದಲ್ಲಿ ಇದುವರೆಗೆ 16 ಏಕದಿನ, 54 ಟಿ20 ಪಂದ್ಯಗಳನ್ನು ಆಡಿದ್ದಾರೆ. ಏಕದಿನದಲ್ಲಿ 174 ಮತ್ತು ಟಿ20ಯಲ್ಲಿ 520 ರನ್ ಗಳಿಸಿದ್ದಾರೆ. ಟಿ20ಯಲ್ಲಿ ಏಕೈಕ ಅರ್ಧಶತಕವನ್ನೂ ಬಾರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net