ಕೋಲಾರದಲ್ಲಿ ಸೆರೆಸಿಕ್ಕ ಬೆಂಗಳೂರು ಕಳ್ಳ!

klr arrest
ಮುಳಬಾಗಿಲು ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ, ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಬಿ.ನಿಖಿಲ್​, ರವಿಶಂಕರ್​, ಜಗದೀಶ್​, ನಂದಕುಮಾರ್​, ರಾಜಣ್ಣ, ಅಣ್ಣಯ್ಯ ಇದ್ದರು.
Published on

ಕೋಲಾರ: ಮುಳಬಾಗಿಲು ನಗರ ಹಾಗೂ ಕೋಲಾರ ಗ್ರಾಮಾಂತರ ಸೇರಿ 9 ಕಡೆ ವಿವಿಧ ಸಂದರ್ಭಗಳಲ್ಲಿ ಕನ್ನ ಹಾಕಿ ಚಿನ್ನ ಹಾಗೂ ಬೆಳ್ಳಿ ಕದ್ದಿದ್ದ ಖದೀಮನನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಬನಶಂಕರಿ ಬಳಿಯ ಇಲಿಯಾಸ್​ ನಗರದ ನಿವಾಸಿ ಸೈಯದ್​ ಅಫ್ಸರ್​ (37) ಬಂಧಿತ. ಆರೋಪಿಯಿಂದ 557 ಗ್ರಾಂ ಚಿನ್ನ, ಎರಡೂವರೆ ಕೆ.ಜಿ ಬೆಳ್ಳಿ ಆಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮುಳಬಾಗಿಲು ನಗರದ ಮಂಜುನಾಥ್​ ಕಾಲನಿಯ ಸೋಮಶೇಖರಪ್ಪ ಎಂಬುವರ ನಿವಾಸದಲ್ಲಿ ಏ.4ರಂದು ಯಾರೂ ಇಲ್ಲದಾಗ ಮನೆ ಬಾಗಿಲು ಮುರಿದು ಚಿನ್ನ, ಬೆಳ್ಳಿ ಆಭರಣಗಳನ್ನು ಕಳವು ಮಾಡಿ ಪರಾರಿಯಾಗಿದ್ದ. ಈ ಸಂಬಂದ ಮುಳಬಾಗಿಲು ಠಾಣೆಯಲ್ಲಿ ದೂರು ದಾಖಲಾಗಿತ್ತು.

ಆರೋಪಿ ಪತ್ತೆಗಾಗಿ ಪೊಲೀಸರ ವಿಶೇಷ ತಂಡ ರಚಿಸಿ ತನಿಖೆ ಕೈಗೊಳ್ಳಲಾಗಿತ್ತು. ಸೈಯದ್​ ಅಫ್ಸರ್​ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಹೆಚ್ಚಿನ ವಿಚಾರಣೆ ನಡೆಸಿದಾಗ ಮುಳಬಾಗಿಲು ನಗರದಲ್ಲಿ 7, ನಂಗಲಿಯಲ್ಲಿ 1 ಕಡೆ ಹಾಗೂ ಕೋಲಾರ ಗ್ರಾಮಾಂತರದಲ್ಲಿ 1 ಕಡೆ ಸೇರಿ ಒಟ್ಟು 9 ಕಡೆ ಮನೆಗಳ್ಳತನ ಮಾಡಿರುವುದಾಗಿ ಹೇಳಿದ್ದಾನೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಬಿ.ನಿಖಿಲ್​, ಹೆಚ್ಚುವರಿ ಪೊಲೀಸ್​ ವರಿಷ್ಠಾಧಿಕಾರಿಗಳಾದ ರವಿಶಂಕರ್​, ಎಚ್​.ಸಿ.ಜಗದೀಶ್​, ಮುಳಬಾಗಿಲು ಉಪವಿಭಾಗದ ಡಿವೈಎಸ್ಪಿ ನಂದಕುಮಾರ್​ ನೇತೃತ್ವದಲ್ಲಿ ಮುಳಬಾಗಿಲು ನಗರ ಪೊಲೀಸ್​ ಠಾಣೆಯ ಇನ್​ಸ್ಪೆಕ್ಟರ್​ ರಾಜಣ್ಣ, ಪಿಎಸ್​ಐ ಅಣ್ಣಯ್ಯ, ಸಿಬ್ಬಂದಿ ಪ್ರಭು, ಆಂಜಿನಪ್ಪ, ರಾಘವೇಂದ್ರ, ಚನ್ನಪ್ಪ, ಮಧು, ವೆಂಕಟರಾಘವನ್​, ಸುಬ್ರಹ್ಮಣಿ, ಸತೀಶ್​ ಬಾಬು, ಕೆ.ಸತೀಶ್​, ವಿಶ್ವನಾಥ್​, ಪ್ರಶಾಂತ್​, ನವೀನ್​, ತಾಂತ್ರಿಕ ವಿಭಾಗದ ಮುರಳಿ ಹಾಗೂ ಶ್ರೀನಾಥ್​ ಅವರನ್ನೊಳಗೊಂಡ ವಿಶೇಷ ತಂಡ ಕಾರ್ಯಾಚರಣೆ ನಡೆಸಿತ್ತು. ವಿಶೇಷ ತಂಡದ ಕಾರ್ಯಾಚರಣೆಯನ್ನು ಎಸ್ಪಿ ಬಿ.ನಿಖಿಲ್​ ಶ್ಲಾಘಿಸಿದ್ದಾರೆ.

ಚಿನ್ನ, 6 ಬೈಕ್ ವಶ

ಮುಳಬಾಗಿಲು: ಜಿಲ್ಲೆಯ ಮುಳಬಾಗಿಲು ತಾಲೂಕಿನ ನಂಗಲಿ ಸಮೀಪದ ಬೈರಕೂರು ಗ್ರಾಮದ ಮನೆಯಲ್ಲಿ ನಡೆದಿದ್ದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಆರೋಪಿಯನ್ನು ಮುಳಬಾಗಿಲು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಮುಳಬಾಗಿಲು ತಾಲೂಕು ಎನ್​.ಕುರಬರಹಳ್ಳಿಯ ಹರೀಶ್​ (34) ಬಂಧಿತ. ಆರೋಪಿಯಿಂದ 1.25 ಲಕ್ಷ ರೂ. ಮೌಲ್ಯದ ಚಿನ್ನದ ಒಡವೆ ಹಾಗೂ 2.50 ಲಕ್ಷ ರೂ. ಮೌಲ್ಯದ 6 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.

ಆರೋಪಿಯು ಗ್ರಾಮದ ಸೀತರಾಂ ಎಂಬುವರ ಮನೆ ಬಾಗಿಲು ಒಡೆದು ಒಳ ನುಗ್ಗಿ ಬೀರುವಿನಲ್ಲಿದ್ದ ಒಂದು ಚಿನ್ನದ ಸರ, 33 ಚಿನ್ನದ ಗುಂಡುಗಳನ್ನು ಕಳವು ಮಾಡಿದ್ದ. ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇತರೆಡೆ 6 ದ್ವಿಚಕ್ರ ವಾಹನ ಕದ್ದಿರುವ ಬಗ್ಗೆ ಬಾಯ್ಬಿಟ್ಟಿದ್ದಾನೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net