

ಬೆಂಗಳೂರು: ಕರೊನಾ ಸೋಂಕು ನಿಯಂತ್ರಿಸಲು ರಾಜ್ಯರಾಜಧಾನಿ ಮತ್ತು ಬೆಂ. ಗ್ರಾಮಾಂತರ ಜಿಲ್ಲೆಗಳಲ್ಲಿ ಇಂದು(ಮಂಗಳವಾರ) ರಾತ್ರಿ 8ರಿಂದಲೇ ಲಾಕ್ಡೌನ್ ಜಾರಿಯಾಗಿದ್ದು, ಈ ಎರಡೂ ಜಿಲ್ಲೆಗಳು ಒಂದು ವಾರ ಕಂಪ್ಲೀಟ್ ಲಾಕ್ ಆಗಲಿದೆ.
ಜು.14ರ ರಾತ್ರಿ 8ರಿಂದ ಜು. 23ರ ಮುಂಜಾನೆ 5ರವರೆಗೆ ಬೆಂಗಳೂರು ಲಾಕ್ ಎಂಬ ಸುದ್ದಿ ಬರುತ್ತಿದ್ದಂತೆ ಮೂರ್ನಾಲ್ಕು ದಿನಗಳಿಂದ ಬಹುತೇಕರು ಗಂಟುಮೂಟೆ ಕಟ್ಟಿಕೊಂಡು ರಾಜಧಾನಿಯನ್ನು ತೊರೆದ ದೃಶ್ಯ ಸಾಮಾನ್ಯವಾಗಿತ್ತು. ಈ ಅವಧಿಯಲ್ಲಿ ಅಗತ್ಯ ವಸ್ತುಗಳ ಪೂರೈಕೆ ಹೊರತುಪಡಿಸಿ ಉಳಿದೆಲ್ಲ ವಾಣಿಜ್ಯ ಚಟುವಟಿಕೆಗಳಿಗೂ ನಿರ್ಬಂಧ ಹೇರಲಾಗಿದೆ. ಅಗತ್ಯ ಸೇವೆಗಳಲ್ಲಿ ಕೆಲಸ ಮಾಡುವವರನ್ನು ಹೊರತುಪಡಿಸಿ ಉಳಿದವರು ಅನಾವಶ್ಯಕವಾಗಿ ರಸ್ತೆಗೆ ಬರುವಂತಿಲ್ಲ. ಒಂದು ಬೇಳೆ ಬಂದ್ರೆ ಪೊಲೀಸರು ಕೇಸ್ ದಾಖಲಿಸ್ತಾರೆ ಜೋಕೆ!
ಒಂದು ವಾರ ಕಾಲ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಕೆಎಸ್ಆರ್ಟಿಸಿ ಬಸ್ ಸೇವೆ ಸ್ಥಗಿತಗೊಳ್ಳಲಿದೆ. ಬಿಎಂಟಿಸಿ ಬಸ್ ಕೂಡ ಸಂಚರಿಸುವುದಿಲ್ಲ. ಆಟೋ, ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆಗಳೂ ಸ್ಥಗಿತಗೊಳ್ಳಲಿವೆ. ವೈದ್ಯಕಿಯ ಸಿಬ್ಬಂದಿ, ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವವರು, ಆರೋಗ್ಯ ಸಂಬಂಧಿ ಕೆಲಸಕ್ಕೆ ಹೋಗುವವರು ಹಾಗೂ ಹೊರಜಿಲ್ಲೆ ಮತ್ತು ರಾಜ್ಯಗಳಿಂದ ರೈಲಿನ ಮೂಲಕ ಬರುವವರ ಸಂಚಾರಕ್ಕಾಗಿ ಬಿಎಂಟಿಸಿಯಿಂದ 134 ಬಸ್ ಸೇವೆ ಕಲ್ಪಿಸಲಾಗಿದೆ. ಈ ಬಸ್ಗಳು ಬೆಳಗ್ಗೆ 7ರಿಂದ ಸಂಜೆ 7ರವರೆಗೆ ಮಾತ್ರ ಸಂಚರಿಸಲಿವೆ.
ಏನಿರುತ್ತೆ?: ಅಗತ್ಯ ವಸ್ತು ಮಾರಾಟ ಮತ್ತು ಖರೀದಿಗಷ್ಟೇ ಅನುಮತಿ ನೀಡಲಾಗಿದೆ. ಉಳಿದಂತೆ ಶಾಪಿಂಗ್ ಮಾಲ್, ವಾಣಿಜ್ಯ ಮಳಿಗೆಗಳು, ಕಾರ್ಖಾನೆ ಸೇರಿ ಇನ್ನಿತರ ಉದ್ಯಮಗಳು ತೆರೆಯುವಂತಿಲ್ಲ. ಅಂತರರಾಜ್ಯ ಮತ್ತು ಅಂತರ ಜಿಲ್ಲಾ ಸಾರಿಗೆ ಸೇವೆ ರದ್ದಾಗಿದೆ. ಮದ್ಯ ಮಾರಾಟ ಮಾಡುವಂತಿಲ್ಲ
ಲಾಕ್ಡೌನ್ ಅವಧಿಯಲ್ಲಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು, ಔಷಧಾಲಯ, ಆಂಬುಲೆನ್ಸ್, ಹಾಲು, ದಿನಪತ್ರಿಕೆ, ಪೆಟ್ರೋಲ್ ಬಂಕ್ ಕಾರ್ಯ ನಿರ್ವಹಿಸಲಿವೆ. ಆಹಾರ ಮಳಿಗೆಗಳು, ತರಕಾರಿ, ಮಾಂಸ, ಹಣ್ಣಿನ ಮಾರುಕಟ್ಟೆಗಳು ತೆರೆದಿರುತ್ತವೆ. ಸರಕು ಸಾಗಣೆಗೆ ಅವಕಾಶ ಇದೆ. ಪೊಲೀಸ್, ಅಗ್ನಿಶಾಮಕ ಸೇವೆ ನಿರಂತರ. ಬ್ಯಾಂಕ್, ಎಟಿಎಂಗಳು ತೆರೆದಿರಲಿವೆ. ಹೋಟೆಲ್ ತೆರೆದಿರುತ್ತವೆಯಾದರೂ ಪಾರ್ಸೆಲ್ಗಳಿಗಷ್ಟೆ ಅವಕಾಶ. ಆಹಾರ, ಔಷಧಗಳನ್ನು ಮನೆಗೆ ಡೆಲಿವರಿ ಕೊಡಲು ಅವಕಾಶವಿದೆ. ದಿನಪತ್ರಿಕೆ ಲಭ್ಯ ಇರಲಿದೆ.
ಮಂಗಳೂರು, ಶಿವಮೊಗ್ಗ ಸೇರಿ ಇನ್ನಿತರ ಜಿಲ್ಲೆಗಳಲ್ಲೂ ಲಾಕ್ಡೌನ್ ಮಾಡಲು ಆಯಾ ಜಿಲ್ಲಾಧಿಕಾರಿಗಳು ನಿರ್ಧರಿಸಿದ್ದಾರೆ. ಕೆಲ ಜಿಲ್ಲೆಗಳಲ್ಲಿ ಇಡೀ ದಿನ ಲಾಕ್ಡೌನ್ ಮಾಡದೆ ಅರ್ಧ ದಿನ ಲಾಕ್ಡೌನ್ ಮಾಡಲಾಗುತ್ತಿದೆ.