

ಶಿರಸಿ: ತಾಲೂಕಿನಾದ್ಯಂತ ವ್ಯಾಪಕ ಪ್ರಮಾಣದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜನರ ಸುರಕ್ಷಿತ ದೃಷ್ಟಿಯಿಂದ ಹುಲೇಕಲ್ ಅರಣ್ಯ ವ್ಯಾಪ್ತಿಯ ಶಿವಗಂಗಾಹಾಗೂ ಮುರೇಗಾರ ಜಲಪಾತಕ್ಕೆ ಜನರು ತೆರಳುವುದನ್ನು ನಿಷೇಧಿಸಲಾಗಿದೆ ಎಂದು ಹುಲೇಕಲ್ ವಲಯ ಅರಣ್ಯಾಧಿಕಾರಿ ಉಷಾ ಕಬ್ಬೇರ ತಿಳಿಸಿದ್ದಾರೆ.
ಈ ಸೂಚನೆಗೂ ಮೀರಿ ಜಲಪಾತಗಳಿಗೆ ತೆರಳಿ ಅನಾಹುತ ಗಳಾದರೆ ಅವರೇ ಹೊಣೆಗಾರರಾಗುತ್ತಾರೆ.
ಮಳೆ ಕಡಿಮೆಯಾಗುವವರೆಗೆ ಹಾಗೂ ಮುಂದಿನ ಸೂಚನೆ ವರೆಗೂ ಪ್ರವಾಸಿಗರು ಜಲಪಾತ ಕ್ಕೆ ಭೇಟಿ ನೀಡುವುದು ಹಾಗೂ ನೀರಿಗೆ ಇಳಿಯುವುದನ್ನು ನಿಷೇಧಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಿರಸಿ ಕುಮಟಾ ಹೆದ್ದಾರಿಯಲ್ಲಿ ಭಾರಿ ಗಾತ್ರದ ವಾಹನಗಳನ್ನು ತಾತ್ಕಾಲಿಕ ವಾಗಿ ಸ್ಥಗಿತಗೊಳಿಸಲಾಗಿದ್ದು ವಾಹನ ಚಾಲಕರು ಬದಲಿ ಮಾರ್ಗವನ್ನು ಬಳಸುವಂತೆ ಶಿರಸಿ ಉಪವಿಭಾಗಾಧಿಕಾರಿ ದೇವರಾಜ್ ಆರ್. ತಿಳಿಸಿದ್ದಾರೆ.
ಶಿರಸಿ ತಾಲೂಕಿನಾದ್ಯಂತ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಶಿರಸಿ- ಕುಮಟಾ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಭಾರಿ ಗಾತ್ರದ ವಾಹನಗಳು ಸಿಲುಕಿಕೊಂಡು ವಾಹನ ದಟ್ಟಣೆ ಉಂಟಾಗುತ್ತಿದ್ದೆ.
ಆದ್ದರಿಂದ ಪ್ರಯಾಣಿಕರ ವಾಹನವನ್ನು ಹೊರತು ಪಡಿಸಿ, ಉಳಿದಂತೆ 10 ಚಕ್ರಕ್ಕಿಂತ ಅಧಿಕ ಚಕ್ರಗಳ ವಾಹನಗಳು ಹಾಗೂ ಸರಕು ಸಾಗಾಣಿಕೆ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.