

ರಾಘವೇಂದ್ರ ಪೈ ಗಂಗೊಳ್ಳಿ
ಜೂನ್ 1ರಿಂದ 61 ದಿನಗಳ ಕಾಲ ಯಾಂತ್ರೀಕೃತ ಮೀನುಗಾರಿಕೆಗೆ ನಿರ್ಬಂಧ ಹೇರಲಾಗುತ್ತದೆ. ಉಡುಪಿ ಜಿಲ್ಲೆಯ ಪ್ರಮುಖ ಬಂದರು ಪ್ರದೇಶವಾದ ಗಂಗೊಳ್ಳಿಯಲ್ಲಿ ಅನೇಕ ಸಮಸ್ಯೆಗಳ ನಡುವೆಯೇ ಪ್ರಸಕ್ತ ಸಾಲಿನ ಮೀನುಗಾರಿಕಾ ಋತು ನಿರಾಶಾದಾಯಕ ಅಂತ್ಯ ಕಂಡಿದೆ.
ಕರ್ನಾಟಕದ ಕರಾವಳಿ ಭಾಗಗಳಲ್ಲಿ ಪ್ರತಿ ಬಾರಿ ಆಗಸ್ಟ್ ತಿಂಗಳಿನಿಂದ ಆರಂಭವಾಗುವ ಮೀನುಗಾರಿಕೆ ಮೇ ತಿಂಗಳ ಅಂತ್ಯಕ್ಕೆ ಕೊನೆಗೊಳ್ಳುತ್ತದೆ. ಪ್ರಸಕ್ತ ಮೀನುಗಾರಿಕಾ ಋತುವಿನಲ್ಲಿ ಮೀನುಗಾರರು ಅನೇಕ ಸಮಸ್ಯೆಗಳನ್ನು ಎದುರಿಸಿದ್ದು, ಹವಾಮಾನ ವೈಪರೀತ್ಯ, ಮತ್ಸ್ಯಕ್ಷಾಮ ಮೊದಲಾದ ಕಾರಣಗಳಿಂದ ಮೀನುಗಾರರು ನಿರಾಶೆಯಲ್ಲಿಯೇ ಮೀನುಗಾರಿಕಾ ಋತುವನ್ನು ಅಂತ್ಯಗೊಳಿಸಿದ್ದಾರೆ.
ಗಂಗೊಳ್ಳಿ ಬಂದರಿನಲ್ಲಿ ಸುಮಾರು 70ಕ್ಕೂ ಅಧಿಕ ಆಳ ಸಮುದ್ರ ಮೀನುಗಾರಿಕಾ ಬೋಟುಗಳು, 40ಕ್ಕೂ ಮಿಕ್ಕಿ ಪರ್ಸಿನ್ ಬೋಟುಗಳು, 70ಕ್ಕೂ ಹೆಚ್ಚು ಫಿಶಿಂಗ್ ಬೋಟುಗಳು ಮತ್ತು 250ಕ್ಕೂ ಅಧಿಕ ಮೀನುಗಾರಿಕಾ ದೋಣಿಗಳು ಮೀನುಗಾರಿಕೆ ನಡೆಸುತ್ತಿವೆ.
ಗಂಗೊಳ್ಳಿ ಬಂದರಿನ ಮೂಲಕ ಮೀನುಗಾರಿಕೆ ನಡೆಸುವ ಬೋಟುಗಳು ಸಂಖ್ಯೆ ಅಧಿಕವಾಗಿರುವ ಹಿನ್ನ್ನೆಲೆ ಬಂದರಿನಲ್ಲಿ ಸ್ಥಳಾವಕಾಶದ ಕೊರತೆ ಕಾಡುತ್ತಿದೆ. ಹೀಗಾಗಿ ಗಂಗೊಳ್ಳಿಯ ಬೋಟುಗಳು ಬೇರೆ ಬೇರೆ ಬಂದರಿನಲ್ಲಿ ವ್ಯವಹಾರ ನಡೆಸುವ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಇದು ಗಂಗೊಳ್ಳಿ ಬಂದರಿನಲ್ಲಿ ಮೀನುಗಾರಿಕಾ ಚಟುವಟಿಕೆ ಕ್ಷೀಣಿಸುವುದರೊಂದಿಗೆ ಆರ್ಥಿಕ ಗಳಿಕೆಯ ಮೇಲೂ ಪರಿಣಾಮ ಬೀರುವಂತಾಗಿದೆ.
ದಡ ಸೇರುತ್ತಿರುವ ಬೋಟುಗಳು: ಪ್ರಸಕ್ತ ಮೀನುಗಾರಿಕಾ ಋತುವಿನಲ್ಲಿ ಮತ್ಸೃಕ್ಷಾಮ, ಹವಾಮಾನ ವೈಪರೀತ್ಯ ಮೊದಲಾದ ಕಾರಣಗಳಿಂದ ಕಳೆದ ನಾಲ್ಕೈದು ತಿಂಗಳಿನಲ್ಲಿ ನಿರೀಕ್ಷೆಯಷ್ಟು ಮೀನುಗಾರಿಕೆ ನಡೆಯದಿರುವುದರಿಂದ ಬಹುತೇಕ ಬೋಟುಗಳು ಮ್ಯಾಂಗನೀಸ್ ರಸ್ತೆ ವಠಾರ, ಪೋರ್ಟ್ ಆಫೀಸ್ ಬಳಿ ಲಂಗರು ಹಾಕಿದ್ದವು. ಮೀನುಗಾರಿಕಾ ಋತುವಿನ ಕೊನೆಯ ತಿಂಗಳಿನಲ್ಲಾದರೂ ಆಶಾದಾಯಕ ಮೀನುಗಾರಿಕೆ ನಡೆಯಬಹುದೆಂಬ ಭರವಸೆಯೂ ಈಡೇರುವ ಲಕ್ಷಣ ಗೋಚರಿಸದಿರುವುದರಿಂದ ಮೀನುಗಾರರು ಒಲ್ಲದ ಮನಸ್ಸಿನಿಂದಲೇ ಬೋಟುಗಳನ್ನು ದಡ ಸೇರಿಸುತ್ತಿದ್ದಾರೆ.
ಆಳ ಸಮುದ್ರ ಮೀನುಗಾರಿಕೆ ಬೋಟು ಹೊರತುಪಡಿಸಿ ಈಗಾಗಲೇ ಶೇ.75 ರಷ್ಟು ಬೋಟುಗಳು ಗಂಗೊಳ್ಳಿ ಮ್ಯಾಂಗನೀಸ್ ರಸ್ತೆಯ ವಠಾರದಲ್ಲಿ ಹಾಗೂ ಇನ್ನಿತರ ಸುರಕ್ಷಿತ ತಾಣಗಳಲ್ಲಿ ಲಂಗರು ಹಾಕಿವೆ.
ಮತ್ಸ್ಯಕ್ಷಾಮದಿಂದ ಕಂಗಾಲು: ಕಳೆದ ಹಲವಾರು ವರ್ಷಗಳಿಂದ ಮೀನುಗಾರರನ್ನು ಕಂಗೆಡಿಸಿದ್ದ ಮತ್ಸ್ಯಕಾಮ ಈ ಬಾರಿಯೂ ಮೀನುಗಾರರನ್ನು ಕಾಡಿದೆ. ಇದು ಮೀನುಗಾರರ ಆರ್ಥಿಕ ಗಳಿಕೆಯ ಮೇಲೆ ಪರಿಣಾಮ ಬೀರಿದೆ. ಅನೇಕ ಸಮಸ್ಯೆಗಳಿರುವ ಗಂಗೊಳ್ಳಿ ಬಂದರು ಪ್ರದೇಶದಲ್ಲಿ ಮೀನುಗಾರಿಕೆ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿರುವುದು ಮೀನುಗಾರರ ಬದುಕಿಗೆ ಹೊಡೆತ ನೀಡುತ್ತಿದೆ. ಸರ್ಕಾರ, ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಿ ದಶಕಗಳ ಸಮಸ್ಯೆಗೆ ಪರಿಹಾರ ಕಂಡುಕೊಂಡು, ಮೀನುಗಾರರ ಜೀವನಕ್ಕೆ ಭದ್ರತೆ ಒದಗಿಸಬೇಕಿದೆ.
ದುರಸ್ತಿಯಾಗದ ಜೆಟ್ಟಿ
ಕುಸಿದು ಬಿದ್ದಿರುವ ಜೆಟ್ಟಿಯ ಪುನರ್ ನಿರ್ಮಾಣ ಇನ್ನೂ ಆರಂಭಗೊಂಡಿಲ್ಲ. ಹೀಗಾಗಿ ಬಂದರಿನ ಸುಮಾರು 200 ಮೀಟರ್ ಉದ್ದದ ಜೆಟ್ಟಿಯಲ್ಲಿ ಮೀನುಗಾರಿಕೆ ಚಟುವಟಿಕೆ ನಡೆಸಲು ಸಾಧ್ಯವಾಗುತ್ತಿಲ್ಲ ಹಾಗೂ ಬಂದರಿನಲ್ಲಿ ಬೋಟುಗಳು ಮತ್ತು ದೋಣಿಗಳು ತಂಗಲು ಸ್ಥಳಾವಕಾಶದ ಕೊರತೆ ಕಾಣುತ್ತಿದೆ. ಅಳಿವೆ ಪ್ರದೇಶದಲ್ಲಿ ಹೂಳೆತ್ತುವ ಕಾರ್ಯ ಸಮಪರ್ಕವಾಗಿ ನಡೆಯದಿರುವುದರಿಂದ ಅಳಿವೆ ಮೀನುಗಾರರಿಗೆ ಕಂಟಕವಾಗಿ ಪರಿಣಮಿಸುವ ಸಾಧ್ಯತೆ ಇದೆ. ಬಹುನಿರೀಕ್ಷಿತ ಹೂಳೆತ್ತುವ ಕಾರ್ಯ ಸರಿಯಾಗಿ ನಡೆಯದಿರುವುದು ಮೀನುಗಾರರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಬಾರಿ ಆರಂಭದಲ್ಲಿ ಉತ್ತಮ ಮೀನುಗಾರಿಕೆ ನಡೆದಿದ್ದು ಕೊನೆಯ ನಾಲ್ಕೈದು ತಿಂಗಳು ಮೀನುಗಾರಿಕೆ ಬಹುತೇಕ ಸ್ಥಗಿತಗೊಂಡಿದೆ. ಹವಾಮಾನ ವೈಪರೀತ್ಯ, ಮತ್ಸ್ಯಕ್ಷಾಮ ಮೊದಲಾದ ಕಾರಣಗಳಿಂದ ಮೀನುಗಾರರು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. -ರಾಮಪ್ಪ ಖಾರ್ವಿ,ಮೀನುಗಾರ ಮುಖಂಡ, ಗಂಗೊಳ್ಳಿ--- ಕಳೆದ ನಾಲ್ಕೈದು ತಿಂಗಳಿನಿಂದ ಸರಿಯಾಗಿ ಮೀನುಗಾರಿಕೆ ನಡೆಯದಿರುವುದರಿಂದ ಆರ್ಥಿಕ ಸಮಸ್ಯೆ ಎದುರಾಗಿದೆ. ಬೋಟುಗಳನ್ನು ಈಗಾಗಲೇ ದಡಕ್ಕೆ ಸೇರಿಸುವ ಕಾರ್ಯ ನಡೆಸಲಾಗುತ್ತಿದ್ದು, ಬೋಟ್ ಕೆಲಸ ಬಿಟ್ಟರೆ ಮಳೆಗಾಲದಲ್ಲಿ ಆರ್ಥಿಕ ಗಳಿಕೆಗೆ ಬೇರೆ ಉದ್ಯೋಗವಿಲ್ಲ -ರಾಘವೇಂದ್ರ ಖಾರ್ವಿಸ್ಥಳೀಯ ಮೀನುಗಾರ, ಗಂಗೊಳ್ಳಿ https://www.vijayavani.net/mla-sunil-kumar-lashes-out-at-dkshis-statement https://www.vijayavani.net/nsd-students-learn-yakshagana-steps