

Sonu nigam: ಬೆಂಗಳೂರಿನ ಕಾಲೇಜು ಒಂದರಲ್ಲಿ ನಡೆದ ಈವೆಂಟ್ ಕಾರ್ಯಕ್ರಮದಲ್ಲಿ ಸೋನು ನಿಗಮ್ ಹೇಳಿದ ಆ ಒಂದು ಹೇಳಿಕೆ ಇದೀಗ ಸಂಚಲನವನ್ನೇ ಸೃಷ್ಟಿ ಮಾಡಿದೆ. ಇನ್ನೂ ಕನ್ನಡ ಚಿತ್ರರಂಗದಿಂದ ಸೋನು ನಿಗಮ್ರನ್ನು ಬ್ಯಾನ್ ಮಾಡಲಾಗಿದೆ ಮತ್ತೊಂದೆಡೆ ಪೊಲೀಸರಿಂದ ನೋಟಿಸ್ ಸಹ ನೀಡಿದ್ದಾರೆ. ಇದೀಗ ಸಿಂಗರ್ ಸೋನು ನಿಗಮ್ ಇನ್ಸ್ಟಾಗ್ರಾಮ್ನಲ್ಲಿ ಸ್ಟೋರಿಯೊಂದನ್ನು ಹಾಕಿದ್ದಾರೆ.
ಕನ್ನಡ ಚಿತ್ರರಂಗದಿಂದ ಸೋನು ನಿಗಮ್ ಅವರಿಗೆ ಅಸಹಕಾರ ತೋರಲು ನಿರ್ಧರಿಸಲಾಗಿದೆ. ಈ ಬೆನ್ನಲ್ಲೇ ಸೋನು ನಿಗಮ್ ಅವರು ಸೋಶಿಯಲ್ ಮೀಡಿಯಾದ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ‘ನೀವು ಯಾವ ತೀರ್ಪು ನೀಡಿದರೂ ನಾನು ಅದನ್ನು ಗೌರವದಿಂದ ಸ್ವೀಕರಿಸುತ್ತೇನೆ’ ಎಂದು ಅವರು ಹೇಳಿದ್ದಾರೆ.
ನಾನು ಕನ್ನಡ ಭಾಷೆ, ಸಂಸ್ಕೃತಿ, ಸಂಗೀತ, ಸಂಗೀತಗಾರರು, ರಾಜ್ಯ ಮತ್ತು ಜನರಿಗೆ ಕರ್ನಾಟಕದಲ್ಲಿರುವಾಗ ಮಾತ್ರವಲ್ಲ, ವಿಶ್ವದ ಎಲ್ಲೆಡೆಯೂ ಅಪಾರವಾದ ಪ್ರೀತಿಯನ್ನು ತೋರಿದ್ದೇನೆ. ನನ್ನ ಹಿಂದಿ ಸೇರಿದಂತೆ ಇತರ ಭಾಷೆಗಳ ಹಾಡುಗಳಿಗಿಂತ ಕನ್ನಡ ಹಾಡುಗಳನ್ನು ನಾನು ಹೆಚ್ಚು ಗೌರವಿಸಿದ್ದೇನೆ. ಸಾಮಾಜಿಕ ಜಾಲತಾಣಗಳಲ್ಲಿ ಇದಕ್ಕೆ ಸಾಕ್ಷಿಯಾಗಿ ನೂರಾರು ವೀಡಿಯೊಗಳು ಪ್ರಸಾರವಾಗುತ್ತಿವೆ.
ಕರ್ನಾಟಕದಲ್ಲಿ ನಡೆಯುವ ಪ್ರತಿ ಸಂಗೀತ ಕಾರ್ಯಕ್ರಮಕ್ಕೆ ನಾನು ಒಂದು ಗಂಟೆಗೂ ಹೆಚ್ಚು ಕಾಲದ ಕನ್ನಡ ಹಾಡುಗಳನ್ನು ಸಿದ್ಧಪಡಿಸುತ್ತೇನೆ. ನಾನು ಯಾವುದೇ ಅವಮಾನವನ್ನು ಸಹಿಸಿಕೊಳ್ಳುವ ಯುವಕನಲ್ಲ, ನಾನು 51 ವರ್ಷದವನಾಗಿದ್ದೇನೆ. ಅದರಲ್ಲೂ ನನ್ನ ಕೆಲಸದ ಎರಡನೇ ಭಾಷೆಯಾದ ಕನ್ನಡದ ಹೆಸರಿನಲ್ಲಿ, ಸಾವಿರಾರು ಜನರ ಮುಂದೆ ನನ್ನನ್ನು ನೇರವಾಗಿ ಬೆದರಿಸಿದರೆ ಅದಕ್ಕೆ ಆಕ್ಷೇಪ ತೆಗೆದುಕೊಳ್ಳುವ ಹಕ್ಕು ನನಗಿದೆ ಎಂದಿದ್ದಾರೆ.