

ಬಳ್ಳಾರಿ: ಸಿರುಗುಪ್ಪ ತಹಸೀಲ್ದಾರ್ ಸತೀಶ ಬಿ.ಕೂಡ್ಲಿಗಿ ಅವರ ಪತ್ನಿ ಶಂಕ್ರಮ್ಮ ಮೃತದೇಹ ಗುರುವಾರ ಬೆಳಗ್ಗೆ ನೇಣುಬಿಗಿದ ಸ್ಥಿತಿಯಲ್ಲಿ ತಹಸೀಲ್ದಾರ್ ಗೃಹ ಕಚೇರಿಯಲ್ಲಿ ಪತ್ತೆಯಾಗಿದೆ.
ಚುನಾವಣಾ ಕರ್ತವ್ಯ ಹಿನ್ನೆಲೆ ಇತ್ತೀಚೆಗೆ ಬಳ್ಳಾರಿ ಡಿಸಿ ಕಚೇರಿಗೆ ಸತೀಶ್ ವರ್ಗವಣೆಯಾಗಿದ್ದರು. ಆದರೆ, ಸಿರುಗುಪ್ಪದಲ್ಲಿನ ಮನೆಯನ್ನು ಖಾಲಿ ಮಾಡಿರಲಿಲ್ಲ. ಅಲ್ಲಿ ಪತ್ನಿ ಶಂಕ್ರಮ್ಮ ಇದ್ದರು. ಇದೇ ಮನೆಯಲ್ಲಿ ಶಂಕ್ರಮ್ಮ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಶಂಕೆಯೂ ವ್ಯಕ್ತವಾಗಿದೆ. ಇದನ್ನೂ ಓದಿರಿ 6 ದಿನದ ಹಿಂದೆ ನಾಪತ್ತೆಯಾಗಿದ್ದ ತಾಯಿ-ಮಕ್ಕಳು ಊರ ಕೆರೆಯಲ್ಲಿ ಶವವಾಗಿ ಪತ್ತೆ!
ತಹಸೀಲ್ದಾರ್ರ ಪತ್ನಿ ಮೃತಪಟ್ಟ ಸ್ಥಳಕ್ಕೆ ಎಸಿ ಕೋನಾರಡ್ಡಿ, ಶಾಸಕ ಸೋಮಲಿಂಗಪ್ಪ ಭೇಟಿ ನೀಡಿದ್ದರು. ಮೃತದೇಹವನ್ನು ಶವಾಗಾರಕ್ಕೆ ರವಾನಿಸಲಾಗಿದೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಸೋಮಲಿಂಗಪ್ಪ, ಹಲವು ವರ್ಷಗಳಿಂದ ಶಂಕ್ರಮ್ಮ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನ ಹಲವು ಬಾರಿ ಆಸ್ಪತ್ರೆಗೂ ಕರೆದುಕೊಂಡು ಹೋಗಲಾಗಿತ್ತು. ಶಂಕ್ರಮ್ಮ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ಬಗ್ಗೆ ಆಸ್ಪತ್ರೆಯ ದಾಖಲೆಗಳಿವೆ ಎಂದು ಮೃತರ ಕುಟುಂಬಸ್ಥರು ಹೇಳಿದ್ದಾರೆ ಎಂದರು.
ಆ ಮೂಲಕ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ತಹಸೀಲ್ದಾರ್ರ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪರೋಕ್ಷವಾಗಿ ಶಾಸಕರು ಹೇಳಿದಂತಾಗಿದೆ.