ಬಳ್ಳಾರಿ : ಜೈವಿಕ ಶಕ್ತಿಯ ಉತ್ಪಾದನೆ ಮತ್ತು ಗ್ರಾಹಕ ಉತ್ಪನ್ನಗಳಲ್ಲಿ ವ್ಯಾಪಕ ಶ್ರೇಣಿಯ ಅನೇಕ ಹೊಸ ವಸ್ತುಗಳನ್ನು ಸೃಷ್ಟಿಸಲು ನ್ಯಾನೋ ತಂತ್ರಜ್ಞಾನವು ಸಹಕಾರಿಯಾಗಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಪ್ರೊ.ಡಾ.ಅಂಗಡಿ ಬಸವರಾಜ ಹೇಳಿದರು.
ಇಲ್ಲಿನ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭೌತಶಾಸ್ತ್ರ ವಿಭಾಗವು ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ರೀಸೆಂಟ್ ಅಡ್ವಾನ್ಸ್ ಇನ್ ನ್ಯಾನೋ ಸೈನ್ಸ್ ಅಂಡ್ ನ್ಯಾನೋ ಟೆಕ್ನಾಲಜಿ ಎನ್ನುವ ವಿಷಯದ ಕಾರ್ಯಕ್ರಮದಲ್ಲಿ ಮಾತನಾಡಿದರು. ನ್ಯಾನೋ ಪ್ರಮಾಣದ ಮೇಲೆ ಆಯಾಮಗಳನ್ನು, ಹೊಸ ವಸ್ತುಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಸಾಂಪ್ರದಾಯಿಕ ಸಾಧನ ಭೌತಶಾಸ್ತ್ರದ ವಿಸ್ತರಣೆಗಳನ್ನು ಅಣುಗಳ ಸ್ವಯಂ ಜೋಡಣೆ ಆಧಾರದ ಮೇಲೆ ಸಂಪೂರ್ಣವಾಗಿ ಹೊಸ ಮಾರ್ಗಗಳನ್ನು ಹಿಡಿದು ಅಭಿವೃದ್ಧಿ ಕಾರ್ಯವನ್ನು ತೀವ್ರವಾಗಿ ನಡೆಸಲಾಗುತ್ತಿದೆ ಎಂದು ಅಭಿಪ್ರಾಯ ಪಟ್ಟರು.
ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಎಸ್.ಮಂಜುನಾಥ ಮಾತನಾಡಿ, ಅತಿ ಸೂಕ್ಷ್ಮ ಉತ್ಪನ್ನಗಳ ತಯಾರಿಕೆ ಎಂದು ಹೇಳಲಾಗುವ ಪರಮಾಣುಗಳ ಮತ್ತು ಕಣಗಳ ನಿರ್ವಹಣೆ ನಿರ್ದಿಷ್ಟ ತಾಂತ್ರಿಕ ಗುರಿಯ ಬಗೆಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮತ್ತು ಸಂಶೋಧನಾ ತಿಳುವಳಿಕೆಯನ್ನು ಹೆಚ್ಚಿಸಲು ಇಂತಹ ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ ಎಂದರು.
ಪ್ರಾಚಾರ್ಯ ಡಾ.ಪ್ರಹ್ಲಾದ ಚೌದ್ರಿ ಮಾತನಾಡಿ, ವಿದ್ಯಾರ್ಥಿಗಳು ವಿಜ್ಞಾನ ಕ್ಷೇತ್ರದಲ್ಲಿ ಆಗುತ್ತಿರುವ ಹೊಸ ಹೊಸ ಪ್ರಯೋಗ ಮತ್ತು ಬದಲಾವಣೆಗಳ ಬಗೆಗೆ ಕುತೂಹಲಗಳಾಗಿ ತೆರೆದಗಣ್ಣಿನಿಂದ ಗಮನಿಸಬೇಕು. ಸಂಶೋಧನಾತ್ಮಕ ಗುಣಗಳನ್ನು ಈಗಿನಿಂದಲೇ ಮೈ ಗೂಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.