

| ರವಿ ಗೋಸಾವಿ ಬೆಳಗಾವಿ
ಕುಂದಾನಗರಿಯ ತ್ಯಾಜ್ಯ ನೀರನ್ನೆಲ್ಲ ಹೊತ್ತು ಸಾಗುವ ಬಳ್ಳಾರಿ ನಾಲಾ, ನಗರದಿಂದ 10 ಕಿ.ಮೀ ದೂರದ ಬಳಿಕ ತನ್ನ ಹರಿವಿನುದ್ದಕ್ಕೂ ಕೃಷಿ ಭೂಮಿಯ ಮೇಲೆ ವ್ಯತಿರೀಕ್ತ ರಿಕ್ತ ಪರಿಣಾಮ ಬೀರುತ್ತಿದೆ. ತಾಜ್ಯ ನೀರಿನಲ್ಲಿ ವಿಷಕಾರಿ ರಸಾಯನಿಕ ಸೇರಿದ ಪರಿಣಾಮ ಬೃಹತ್ ಪ್ರಮಾಣದಲ್ಲಿ ನೊರೆ ಏಳುತ್ತಿದ್ದು, ಪಕ್ಕದ ಜಮೀನಿನಲ್ಲಿನ ಬೆಳೆಯ ಮೇಲೆ ಬಿದ್ದು, ಸುಟ್ಟಂತಾಗಿ ಪೈರು ಕಮರುತ್ತಿದೆ.
ಕಳೆದೆರಡು ವರ್ಷದಿಂಂದ ಇಲ್ಲಿನ ಬಳ್ಳಾರಿ ನಾಲಾದಲ್ಲಿ ವಿಷಕಾರಿ ರಾಸಾಯನಿಕ ನೊರೆ ಬರುತ್ತಿದೆ. ನಾಲಾ ಹಾದುಹೋಗುವ ತೀರದ ಗ್ರಾಮಗಳಲ್ಲಿ ಅಸಹನೀಯ ಗಬ್ಬ ವಾಸನೆ ಬೀರುತ್ತಿದ್ದು, ರೋಗದ ಭೀತಿ ಶುರುವಾಗಿದೆ. ನೊರೆ ಹಾರಿ ನಾಲಾ ದಂಡೆಯ ಜಮೀನುಗಳಲ್ಲಿ ಹರಡುತ್ತಿದ್ದು, ನಾಲಾ ಪಕ್ಕದ ಜಮೀನುಗಳಲ್ಲಿ ಕೃಷಿ ಕಾಯಕದಲ್ಲಿ ತೊಡಗುವ ರೈತರಿಗೆ ಮೈ ಕೆರೆತ ಸೇರಿದಂತೆ ವಿವಿಧ ಸೋಂಕು ಅಂಟಿ ಆಸ್ಪತ್ರೆಗೆ ಅಲೆಯುತ್ತಿದ್ದಾರೆ.
ಈ ನಾಲಾ ಸುಮಾರು 30 ಕಿ.ಮೀ ಉದ್ದದ ಮಾರ್ಗದುದ್ದಕ್ಕೂ 25 ರಿಂದ 100 ಅಡಿ ಅಗಲದಷ್ಟು ಹರಿಯುವ ನಾಲಾದಲ್ಲಿ ಬಹುತೇಕ ಕಳೆ ಬೆಳೆದಿದ್ದು, ಅಲ್ಲಲ್ಲಿ ತಾಜ್ಯ ಸಂಗ್ರಹಗೊಂಡು ಗಬ್ಬೆದ್ದು ನಾರುತ್ತಿದೆ. ಪರಿಣಾಮ ನಾಲಾ ಸಮೀಪದಲ್ಲಿನ ರಸ್ತೆಯಲ್ಲಿ ಸಂಚರಿಸಲು ಹಾಗೂ ಜಮೀನುಗಳಲ್ಲಿ ಮೂಗು ಮುಚ್ಚಿಕೊಂಡೇ ಕೆಲಸ ಮಾಡಬೇಕಾದ ಸ್ಥಿತಿ ಸೃಷ್ಟಿಯಾಗಿದೆ. ಇನ್ನು ಮಳೆಗಾಲದಲ್ಲಿ ವಾಸನೆ ಕಡಿಮೆಯಾದರೂ ನಾಲಾದ ನೀರು ಸಾವಿರಕ್ಕೂ ಅಧಿಕ ಹೆಕ್ಟೇರ್ ಭೂಮಿಗೆ ನುಗ್ಗಿ ಬೆಳೆ ನಾಶ ಮಾಡುತ್ತದೆ. ಈ ಬಗ್ಗೆ ಪಾಲಿಕೆ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಗೆ ನೂರಾರು ಬಾರಿ ಮನವಿ ಮಾಡಿದರೂ ಯಾವುದೇ ಇಲಾಖೆ ಸಮಸ್ಯೆ ಪರಿಹಾರಕ್ಕೆ ಮುಂದಾಗಿಲ್ಲ.
ಎರಡ್ಮೂರು ವಾರದ ಅವಧಿಯಲ್ಲಿ ಅಲ್ಪ ಮಳೆಯಾಗಿದ್ದರಿಂದ ನೊರೆ ಕಡಿಮೆಯಾಗಿದೆ. ಮಳೆ ಇಲ್ಲದೇ ಗಾಳಿ ಬೀಸಿದರೇ ನೊರೆ ಬೃಹತ್ ಹಕ್ಕಿಗಳಂತೆ ಹಾರಿ ಬೆಳೆಗಳ ಮೇಲೆ ಬೀಳುತ್ತದೆ. ವರ್ಷವಿಡೀ ಈ ಸಮಸ್ಯೆ ಎದುರಿಸುತ್ತಿದ್ದು, ಯಾವುದೇ ಬೆಳೆ ಬೆಳೆದರೂ ನಾಲಾ ದಂಡೆಯ ಹೊಲದಲ್ಲಿ ಬೆಳೆ ಉಳಿಸಿಕೊಳ್ಳಲು ಹರಸಾಹಸ ಪಡಬೇಕಾಗುತ್ತಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು ಮುಚ್ಚಂಡಿ-ಸುಳಿಬಾವಿಯ ರೈತರು.
ಬಳ್ಳಾರಿ ನಾಲಾದ ಎರಡೂ ಬದಿಯಲ್ಲಿ ಕೃಷಿ ಜಮೀನುಗಳಿವೆ. ಇತ್ತಿಚೆಗೆ ನಾಲಾದಲ್ಲಿ ಹೆಚ್ಚಾಗಿ ಹಾರಿ ಎಲ್ಲೆಡೆ ದುರ್ವಾಸನೆ ಬೀರುತ್ತಿದ್ದು, ನಾಲಾ ಪಕ್ಕದ ಜಮೀನುಗಳಲ್ಲಿ ಕೃಷಿ ಕೆಲಸಕ್ಕೆ ಕೂಲಿಕಾರರು ಬರಲು ಹಿಂದೇಟು ಹಾಕುತ್ತಿದ್ದಾರೆ. ಅನಿವಾರ್ಯವಾಗಿ ನಾವೇ ದುಡಿದರೂ ವಾಂತಿ-ಭೇದಿಯಿಂದ ಬಳಲುತ್ತೇವೆ. ಜಾನುವಾರುಗಳಿಗೆ ನಮ್ಮ ಜಮೀನಿನಲ್ಲಿನ ಮೇವು ಕೊಯ್ದರೆ ವಿಪರೀತ ಮೈ-ಕೈ ಕೆರೆತ ಉಂಟಾಗುತ್ತದೆ. ಅಲ್ಲದೇ, ಜಾನುವಾರುಗಳಿಗೂ ಸಹ ಬೇಧಿ ಬಾಧಿಸುತ್ತದೆ. ನೊರೆ ಬೀಳುವ ಜಮೀನಿನಲ್ಲಿ ಏನೆ ಬಿತ್ತಿದರೂ ಬೆಳೆಯುತ್ತಿಲ್ಲ. ಬೆಳೆದ ಕಸ ದನಕರಗಳಿಗೆ ಮೇವು ಹಾಕಿದರೂ ಜಾನುವಾರುಗಳೂ ಅನಾರೋಗ್ಯಕ್ಕೀಡಾಗುತ್ತಿವೆ ಎಂದು ರೈತ ಪ್ರಕಾಶ ಮಾರಿಹಾಳ ಅಳಲು ತೋಡಿಕೊಂಡರು.
ಎಲ್ಲಿಲ್ಲಿ ಸಮಸ್ಯೆ !
ಬೆಳಗಾವಿ ಹೊರವಲಯದಲ್ಲಿನ ಯಳ್ಳೂರು ರಸ್ತೆಯಿಂದ ಆರಂಭವಾಗುವ ಬಳ್ಳಾರಿ ನಾಲಾ ಅನಗೋಳ, ವಡಗಾವಿ, ಶಹಾಪುರ, ಹಳೇ ಬೆಳಗಾವಿ, ಹಲಗಾ, ಕುಡಚಿ, ಕಣಬರ್ಗಿ, ಸುಳೇಬಾವಿ, ಮೋದಗಾ, ಖನಗಾಂವ ಹೀಗೆ ಅನೇಕ ಗ್ರಾಮಗಳ ಮೂಲಕ ಹಾದು ಮುಂದೆ ಗೋಕಾಕಿನತ್ತ ಸಾಗುತ್ತದೆ. ನಾಲಾದ ನೀರನ್ನು ಹಲವು ವರ್ಷಗಳ ಹಿಂದೆ ರೈತರು ಜಮೀನಿಗೆ ನಿರುಣಿಸಲೂ ಬಳಸುತ್ತಿದ್ದರು. ಆದರೆ, ಕಳೆದ ಹಲವು ವರ್ಷಗಳಿಂದ ನಾಲಾ ಹರಿಯುವ ಮಾರ್ಗದ ಸಮೀಪದಲ್ಲಿ ಸಣ್ಣ ಪ್ರಮಾಣದ ಅನೇಕ ಕೈಗಾರಿಕೆಗಳು ಕಾರ್ಯಾರಂಭಮಾಡಿದ್ದು, ಇವುಗಳಿಂದ ಸಂಸ್ಕರಿಸದ ರಸಾಯಾನಿಕ ತ್ಯಾಜ್ಯವನ್ನು ನಾಲಾಗೆ ಹರಿಬಿಡುತ್ತಿದ್ದಾರೆ. ಅಲ್ಲದೇ, ಬೃಹತ್ ಆಗಿ ಬೆಳೆಯುತ್ತಿರುವ ಬೆಳಗಾವಿ ಎಲ್ಲ ಬಡಾವಣೆಗಳ ತ್ಯಾಜ್ಯವೂ ಇದರೊಳಗೆ ಸೇರುತ್ತಿದೆ. ಆಗಾಗ ನಾಲಾ ಹರಿವು ಸ್ವಚ್ಛಗೊಳಿಸದ ಕಾರಣ ಮಲೀನ ನೀರು ಇದೀಗ ವಿಷಕಾರಿ ರಾಸಾಯನವಾಗಿ ಮಾರ್ಪಟ್ಟಿದೆ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಯೊಬ್ಬರು. ಆದರೆ, ಈ ಬಗ್ಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳನ್ನು ಸಂಪರ್ಕಿಸಿದರೇ ಪ್ರತಿಕ್ರಿಯಿಸಲು ನಿರಾಕರಿಸಿದರು.
ಬಳ್ಳಾರಿ ನಾಲಾದಿಂದ ಹಾರಿ ಬರುವ ನೊರೆಯಲ್ಲಿ ಹೆಚ್ಚಿನ ಲವಣಾಂಶ ಹಾಗೂಪಾಸ್ಪರಸ ಇರುವುದರಿಂದ ಬೆಳೆಗೆ ಸುಟ್ಟು ಕಮರುತ್ತಿರುವ ಸಾಧ್ಯತೆ ಇದೆ. ನೊರೆಯಿಂದ ರೈತರು ಅನುಭವಿಸುತ್ತಿರುವ ಸಮಸ್ಯೆ ಬಗ್ಗೆ ವಿಜ್ಞಾನಿಗಳಿಂದ ಪರಿಶೀಲನೆ ನಡೆಸಲಾಗುವುದು. ಶಿವನಗೌಡ ಪಾಟೀಲ, ಜಂಟಿ ಕೃಷಿ ನಿರ್ದೇಶಕ, ಬೆಳಗಾವಿ
ಶಿವನಗೌಡ ಪಾಟೀಲ, ಜಂಟಿ ಕೃಷಿ ನಿರ್ದೇಶಕ, ಬೆಳಗಾವಿ