ವ್ಯಕ್ತಿತ್ವ ವಿಕಸನಕ್ಕೆ ಕ್ರೀಡೆ ಪೂರಕ : ಕರ್ನಲ್ ಬಸವರಾಜ್ ಅಭಿಮತ

New Project (23)
Published on

ಉಳ್ಳಾಲ: ಶಿಕ್ಷಣ ಎಂದರೆ ಕೇವಲ ಪುಸ್ತಕ ಹಾಗೂ ತರಗತಿ ಕೋಣೆಗಳಲ್ಲ, ಕ್ರೀಡೆ ಸೇರಿದಂತೆ ಪಠ್ಯೇತರ ಚಟುವಟಿಕೆಗಳಿದ್ದಾಗ ಶಿಕ್ಷಣ ಪರಿಪೂರ್ಣವಾಗುತ್ತದೆ. ಕ್ರೀಡಾಸ್ಫೂರ್ತಿ, ನಾಯಕತ್ವದ ಗುಣ, ಮೊದಲಾದ ಆದರ್ಶಗಳನ್ನು ಕ್ರೀಡೆಯಿಂದ ಮೈಗೂಡಿಸಿಕೊಂಡ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಔದ್ಯೋಗಿಕ ಹಾಗೂ ಸಾಮಾಜಿಕ ಜೀವನದಲ್ಲಿ ಈ ಗುಣ ಅಳವಡಿಸಿಕೊಳ್ಳಬಹುದು ಎಂದು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ವಿದ್ಯಾರ್ಥಿ ವ್ಯವಹಾರ ವಿಭಾಗದ ಸಹಾಯಕ ನಿರ್ದೇಶಕ ಕರ್ನಲ್ ಬಸವರಾಜ್ ಎಸ್.ಘಿವಾರಿ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಶಾಲಾ ಪದವಿಪೂರ್ವ ಶಿಕ್ಷಣ ಇಲಾಖೆ, ನಂತೂರಿನ ನಿಟ್ಟೆ ಡಾ.ಶಂಕರ ಅಡ್ಯಂತಾಯ ಸ್ಮಾರಕ ಪದವಿಪೂರ್ವ ಕಾಲೇಜಿನ ಸಹಭಾಗಿತ್ವದಲ್ಲಿ ದೇರಳಕಟ್ಟೆಯ ಬಿ.ಸಿ.ಆಳ್ವ ಒಳಾಂಗಣ ಕ್ರೀಡಾಂಗಣದಲ್ಲಿ ಮಂಗಳೂರು ತಾಲೂಕುಮಟ್ಟದ ಪದವಿಪೂರ್ವ ಕಾಲೇಜು ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾಟ ಉದ್ಘಾಟಿಸಿ ಮಾತನಾಡಿದರು.

ಪ್ರಾಂಶುಪಾಲ ಡಾ.ನವೀನ್ ಶೆಟ್ಟಿ ಕೆ.ಅಧ್ಯಕ್ಷತೆ ವಹಿಸಿ, ಪರಿಶ್ರಮ, ಛಲ, ಸಾಧನೆಗಳು ಗೆಲುವಿನ ಹಾದಿಯನ್ನು ಸುಗಮಗೊಳಿಸುತ್ತದೆ. ಸಾಮಾನ್ಯರು ಸೋತ ತಕ್ಷಣ ಆಟ ನಿಲ್ಲಿಸಿದರೆ ಸಾಧಕರು ಗೆಲ್ಲುವವರೆಗೂ ಸೋಲಲು ಸಿದ್ಧರಿರುತ್ತಾರೆ. ಸತತ ಪ್ರಯತ್ನ, ಕ್ರೀಡಾಸ್ಫೂರ್ತಿ ಮೊದಲಾದ ಉನ್ನತ ವಿಚಾರಗಳು ಕ್ರೀಡೆ ಮೂಲಕ ಬದುಕಿಗೂ ಸ್ಫೂರ್ತಿಯಾಗಬಲ್ಲದು ಎಂದರು.

ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಉಳ್ಳಾಲ ತಾಲೂಕು ಕೋಶಾಧಿಕಾರಿ ಚಂದ್ರಹಾಸ ಶೆಟ್ಟಿ, ಮಂಗಳೂರು ತಾಲೂಕು ಕ್ರೀಡಾ ಸಂಯೋಜಕ ಸುಬ್ರಾಯ ಕಾಮತ್, ನಿಟ್ಟೆ ಗುಲಾಬಿ ಶೆಟ್ಟಿ ಸ್ಮಾರಕ ಫಾರ್ಮಸಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ವಿದ್ಯಾಧರ್ ಠಾಕೂರ್, ನಂತೂರಿನ ಡಾ.ಎನ್.ಎಸ್.ಎ.ಎಂ ಪದವಿಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಕಾರ್ತಿಕ್ ರಾವ್ ಉಪಸ್ಥಿತರಿದ್ದರು.

ಪ್ರಾಪ್ತಿ ಶೆಟ್ಟಿ ಸ್ವಾಗತಿಸಿ, ಸಾನ್ವಿ ದೇವಾಡಿಗ ಅತಿಥಿಗಳನ್ನು ಪರಿಚಯಿಸಿದರು. ತನ್ವಿ ಕೆ.ಎಂ.ವಂದಿಸಿ, ಅಕ್ಷಾ ಜಿ.ನಾಯ್ಕ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net