

ವಿಜಯವಾಣಿ ಸುದ್ದಿಜಾಲ ಬೈಂದೂರು
ನಿಷ್ಠಾವಂತ ಸದಸ್ಯರ ಸಹಕಾರ, ನಿಸ್ವಾರ್ಥ ಮತ್ತು ಆದರ್ಶವಾದ ಆಡಳಿತ ಮಂಡಳಿ ಹಾಗೂ ನಗು ಮೊಗದ ಸೇವೆ ನೀಡುವ ಸಿಬ್ಬಂದಿಯ ಸಹಾಯದಿಂದ ಸಹಕಾರಿ ಸಂಸ್ಥೆ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಲು ಸಾಧ್ಯ ಎಂದು ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ರಾಜು ಪೂಜಾರಿ ಹೇಳಿದರು.
ನಾವುಂದದಲ್ಲಿ ಶುಕ್ರವಾರ ಸಂಘದ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಸಕ್ತ ಸಾಲಿನಲ್ಲಿ ಸಂಘ 325 ಕೋಟಿ ರೂ. ವ್ಯವಹಾರ ನಡೆಸಿದ್ದು, 1.55 ಕೋಟಿ ರೂ. ಲಾಭ ಗಳಿಸಿದೆ. ಸದಸ್ಯರಿಗೆ ಶೇ.14 ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ. ಸಂಘವು ಹಿಂದಿನ ಸಾಲಿನಲ್ಲಿ 66.64 ಕೋಟಿ ರೂ. ಠೇವಣಿ ಹೊಂದಿದ್ದು, ಸದಸ್ಯರಿಗೆ 58.86 ಕೋಟಿ ರೂ.ಸಾಲ ನೀಡಿದೆ. ಈ ಪೈಕಿ 10 ಕೋಟಿ ರೂ.ಗೂ ಹೆಚ್ಚಿನ ಕೃಷಿ ಸಾಲವನ್ನು ಸಂಘ ಸದಸ್ಯರಿಗೆ ನೀಡಿದೆ. ವಿವಿಧ ನಿಧಿಗಳಲ್ಲಿ 5.33 ಕೋಟಿ ರೂ., ಹೂಡಿಕೆಯಲ್ಲಿ 29.52ಕೋಟಿ ರೂ. ಸಂಚಯಿಸಲಾಗಿದೆ ಎಂದರು.
ಉಪಾಧ್ಯಕ್ಷ ಎಂ.ಚಂದ್ರಶೀಲ ಶೆಟ್ಟಿ, ನಿರ್ದೇಶಕರಾದ ವಾಸು ಪೂಜಾರಿ, ಭೋಜ ನಾಯ್ಕ, ಜಗದೀಶ ಪಿ. ಪೂಜಾರಿ, ನರಸಿಂಹ ದೇವಾಡಿಗ, ರಾಮೃಷ್ಣ ಖಾರ್ವಿ, ಪ್ರಕಾಶ ದೇವಾಡಿಗ, ಎಂ.ಅಣ್ಣಪ್ಪ ಬಿಲ್ಲವ, ನಾರಾಯಣ ಶೆಟ್ಟಿ, ರಾಮ, ನಾಗಮ್ಮ, ಸರೋಜಾ ಆರ್. ಗಾಣಿಗ, ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಶಿವರಾಮ ಪೂಜಾರಿ ಉಪಸ್ಥಿತರಿದ್ದರು. ನಾಮನಿರ್ದೇಶಿತ ನಿರ್ದೇಶಕ ಎಂ.ವಿನಾಯಕ ರಾವ್ ಸ್ವಾಗತಿಸಿದರು. ಪ್ರಭಾರ ಸಿಇಒ ಸುರೇಶ ಅಳ್ವೆಗದ್ದೆ ವಂದಿಸಿದರು. ಸೋಮಯ್ಯ ಬಿಲ್ಲವ ನಿರೂಪಿಸಿದರು.
ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಅತ್ಯಧಿಕ ಅಂಕ ಪಡೆದ 27 ವಿದ್ಯಾರ್ಥಿಗಳಿಗೆ ಸಂಘದ ವತಿಯಿಂದ ವಿದ್ಯಾರ್ಥಿವೇತನ ವಿತರಿಸಲಾಯಿತು. ಲೆಫ್ಟಿನೆಂಟ್ ಭರತ್ ದೇವಾಡಿಗ ಹಾಗೂ ಪಿಯುಸಿ ಪರೀಕ್ಷೆಯಲ್ಲಿ 9ನೇ ರ್ಯಾಂಕ್ ಪಡೆದ ಪ್ರಣತಿ ಉದಯಕುಮಾರ್ ಬಡಾಕೆರೆ ಅವರನ್ನು ಸನ್ಮಾನಿಸಲಾಯಿತು.