ಮುಳುವಾಗುತ್ತಿದೆ ಮುಳ್ಳಿಕಟ್ಟೆ ರಸ್ತೆ

ROAD
ಗಂಗೊಳ್ಳಿ ಮೀನುಗಾರಿಕಾ ಬಂದರು ಸಂಪರ್ಕಿಸುವ ನಾಯಕವಾಡಿ-ಮುಳ್ಳಿಕಟ್ಟೆ ರಸ್ತೆಯ ಇಕ್ಕೆಲಗಳಲ್ಲಿ ಬೆಳೆದು ನಿಂತಿರುವ ಗಿಡಗಂಟಿಗಳು.
Published on

ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ

ರಾಷ್ಟ್ರೀಯ ಹೆದ್ದಾರಿ 66ರಿಂದ ಮುಳ್ಳಿಕಟ್ಟೆ-ನಾಯಕವಾಡಿ ಮೂಲಕ ಗಂಗೊಳ್ಳಿ ಮೀನುಗಾರಿಕಾ ಬಂದರು ಸಂಪರ್ಕಿಸುವ ನಾಯಕವಾಡಿ-ಮುಳ್ಳಿಕಟ್ಟೆ ರಸ್ತೆಯ ಇಕ್ಕೆಲಗಳಲ್ಲಿ ಭಾರಿ ಪ್ರಮಾಣದ ಗಿಡಗಂಟಿಗಳು ಬೆಳೆದು ನಿಂತಿದ್ದು, ವಾಹನ ಸವಾರರ ಸಹಿತ ಪಾದಚಾರಿಗಳಿಗೆ ಸಂಚಾರ ಕಷ್ಟವಾಗುತ್ತಿದೆ.

ಲೋಕೋಪಯೋಗಿ ಇಲಾಖೆಗೆ ಸೇರಿದ ಈ ರಸ್ತೆಯಲ್ಲಿ ಒಂದು ವಾಹನ ಸಾಗುವಷ್ಟು ಜಾಗವಿದ್ದು, ಮತ್ತೊಂದು ವಾಹನ ಬಂದರೆ ರಸ್ತೆಯ ಇಕ್ಕಟ್ಟಿನ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಜತೆಗೆ, ಹಲವು ಕಡೆಗಳಲ್ಲಿ ಬೆಳೆದು ನಿಂತಿರುವ ಗಿಡಗಂಟಿಗಳಿಂದ ರಸ್ತೆ ಕಾಣಿಸದೆ ನಿತ್ಯವೂ ಅಪಘಾತಗಳಾಗುತ್ತಿದ್ದು, ಸಾವು ನೋವುಗಳು ಸಂಭವಿಸುತ್ತಿವೆ.ಇದೇ ಮಾರ್ಗದಲ್ಲಿ ಕೆರೆಯೂ ಇದ್ದು, ಮೂರು ಅಪಾಯಕಾರಿ ತಿರುವುಗಳೂ ಇವೆ. ಗಿಡಗಂಟಿಗಳ ರಾಶಿಯಿಂದಾಗಿ ಅವುಗಳ ಗೋಚರವಾಗದೆ ಅವಘಡಗಳು ಸಂಭವಿಸುತ್ತಿವೆ. ಜತೆಗೆ ವಿಷ ಜಂತುಗಳು ವಾಸವಿದ್ದು, ಪಾದಚಾರಿಗಳಿಗೆ ಅಪಾಯಕಾರಿಯಾಗಿದೆ. ಈ ಕಾರಣಕ್ಕಾಗಿ ರಾತ್ರಿ ಸಂದರ್ಭ ಪಾದಚಾರಿಗಳು ಈ ಭಾಗವಾಗಿ ಸಾಗಲು ಭಯಪಡುತ್ತಿದ್ದು, ದ್ವಿಚಕ್ರ ವಾಹನಗಳಿಗೂ ಅಪಾಯ ತಪ್ಪಿದ್ದಲ್ಲ.

ನಾಯಕವಾಡಿ-ಮುಳ್ಳಿಕಟ್ಟೆ ಜನರು ಈಗಾಗಲೇ ಸ್ಥಳೀಯ ಪಂಚಾಯಿತಿಯ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಿಲ್ಲದಾಗಿದೆ ಎಂದು ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಶೀಘ್ರವೇ ಕ್ರಮಕೈಗೊಳ್ಳಲಿದ್ದಲ್ಲಿ ಮೇಲಧಿಕಾರಿಗಳ ಗಮನಕ್ಕೆ ತರುವುದು ಅಥವಾ ಹೋರಾಟ ಅನಿವಾರ್ಯ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 66ರಿಂದ ಮುಳ್ಳಿಕಟ್ಟೆ-ನಾಯಕವಾಡಿ ಮೂಲಕ ಗಂಗೊಳ್ಳಿ ಮೀನುಗಾರಿಕಾ ಬಂದರು ಸಂಪರ್ಕಿಸುವ ನಾಯಕವಾಡಿ-ಮುಳ್ಳಿಕಟ್ಟೆ ರಸ್ತೆಯಲ್ಲಿ ಭಾರಿ ಪ್ರಮಾಣದಲ್ಲಿ ಗಿಡಗಂಟಿಗಳು ಬೆಳೆದು ನಿಂತಿದ್ದು, ಗಿಡಗಂಟಿಗಳಿಂದ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಹಾಗೂ ಪಾದಚಾರಿಗೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ. ಈ ಕುರಿತು ಶೀಘ್ರವೇ ಅಧಿಕಾರಿಗಳು, ಆಡಳಿತ ವರ್ಗ ಕ್ರಮ ಕೈಗೊಳ್ಳಬೇಕಿದ್ದು, ನಿರ್ಲಕ್ಷೃ ವಹಿಸಿದರೆ ಮುಂದಿನ ಹಂತವನ್ನು ನಿರ್ಧರಿಸಲಾಗುತ್ತದೆ.

-ಮಂಜುನಾಥ ಸ್ಥಳೀಯ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net