Babita phogat: 'ದಂಗಲ್'ನಲ್ಲಿ 2ಸಾವಿರ ಕೋಟಿ ಮಾಡಿದ್ರು..ಆದ್ರೆ ನಮಗೆ 1ಕೋಟಿ ಕೊಟ್ರು! ನಿರಾಸೆ ತೋಡಿಕೊಂಡ ಕುಸ್ತಿ ಪಟು!

Babita phogat
Published on

ನವದೆಹಲಿ: ಭಾರತದ ಮಾಜಿ ಮಹಿಳಾ ಕುಸ್ತಿಪಟು ಬಬಿತಾ ಫೋಗಟ್(Babita phogat) ಬಾಲಿವುಡ್ ಚಿತ್ರ ದಂಗಲ್ ಲಾಭಾಂಶದಲ್ಲಿ ಪಾಲು ಕೇಳಿದ್ದಾರೆ. ಇದು ಸಿನಿ ಇಂಡಸ್ಟ್ರಿಯಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಅಮೀರ್ ಖಾನ್ ಅಭಿನಯದ ದಂಗಲ್ ಚಿತ್ರವು ಗೀತಾ, ಬಬಿತಾ ಮತ್ತು ಅವರ ತಂದೆ ಮಹಾವೀರ್ ಫೋಗಟ್ ಅವರ ಜೀವನದಿಂದ ಸ್ಫೂರ್ತಿ ಪಡೆದಿದೆ ಎನ್ನಲಾಗಿದ್ದು, ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆ ಮಾಡಿತ್ತು.

ಕುಸ್ತಿಯಿಂದ ನಿವೃತ್ತರಾದ ನಂತರ, ಬಬಿತಾ ಫೋಗಟ್ ರಾಜಕೀಯ ಹಾದಿ ಹಿಡಿದಿದ್ದಾರೆ. ಇದೀಗ ಅವರು ದಂಗಲ್ ಚಿತ್ರದ ಹಣಕಾಸಿನ ವಿವರಗಳನ್ನು ಬಹಿರಂಗಪಡಿಸುವ ಮೂಲಕ ಚಿತ್ರರಂಗದವರನ್ನು ಆಶ್ಚರ್ಯಗೊಳಿಸಿದ್ದಾರೆ.

ದಂಗಲ್ ಚಿತ್ರ 2ಸಾವಿರ ಕೋಟಿ ರೂ.ಗೂ ಹೆಚ್ಚು ಗಳಿಸಿತ್ತು. ಆದರೆ, ಬಬಿತಾ ಫೋಗಟ್ ತಮ್ಮ ಕುಟುಂಬವು ತಯಾರಕರಿಂದ ಕೇವಲ 1 ಕೋಟಿ ರೂಪಾಯಿ ಪಡೆದಿದೆ ಎಂದು ಬಹಿರಂಗಪಡಿಸಿದ್ದಾರೆ. ಸಂದರ್ಶನವೊಂದರಲ್ಲಿ ಬಬಿತಾ ಫೋಗಟ್ ನಿರಾಶೆಹೊರಹಾಕಿ, ನಮ್ಮ ಕುಟುಂಬವು ಪ್ರೀತಿ ಮತ್ತು ಗೌರವಕ್ಕಾಗಿ ಬದುಕುತ್ತದೆ ಎಂದು ಹೇಳಿದ್ದಾರೆ.

2016 ರಲ್ಲಿ ದಂಗಲ್ ಚಿತ್ರ ಬಿಡುಗಡೆಯಾಗಿದ್ದು, ಈ ಚಿತ್ರ ಬಬಿತಾ, ಆಕೆಯ ಅಕ್ಕ ಗೀತಾ ಮತ್ತು ತಂದೆ ಮಹಾವೀರ್ ಫೋಗಟ್ ಅವರ ಕಥೆಯನ್ನು ಆಧರಿಸಿದೆ. ಮಹಾವೀರ್ ಫೋಗಟ್ ತನ್ನ ಹೆಣ್ಣು ಮಕ್ಕಳನ್ನು ಹೇಗೆ ಉನ್ನತ ದರ್ಜೆಯ ಕುಸ್ತಿಪಟುಗಳನ್ನಾಗಿ ಮಾಡಿದರು? ಅವರು ದೇಶಕ್ಕಾಗಿ ಅನೇಕ ಪದಕಗಳನ್ನು ಗೆದ್ದಿದ್ದಾರೆ ಎಂಬುದನ್ನು ಚಲನಚಿತ್ರವು ತೋರಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net