

Baahubali The Epic: ಒಂದು ದಶಕದ ಹಿಂದೆ ಭಾರತೀಯ ಚಲನಚಿತ್ರೋದ್ಯಮದ ದಿಕ್ಕನ್ನೇ ಬದಲಿಸಿದ ಟಾಲಿವುಡ್ ರೆಬೆಲ್ ಸ್ಟಾರ್ ಅಭಿನಯದ 'ಬಾಹುಬಲಿ' ಬಿಡುಗಡೆಯಾಗಿ ಇಂದಿಗೆ 10 ವರ್ಷಗಳು ಕಳೆದಿವೆ. ಅದ್ಭುತ ದೃಶ್ಯಗಳು, ರೋಮಾಂಚಕ ನಿರೂಪಣೆ ಮತ್ತು ಅದ್ಧೂರಿ ವಿಎಫ್ಎಕ್ಸ್ ತಾಂತ್ರಿಕ ಕೆಲಸಗಳು ಸಿನಿಪ್ರಿಯರನ್ನು ಆಕರ್ಷಿಸಿತು. ಈ ಐತಿಹಾಸಿಕ ಸಂದರ್ಭವನ್ನು ಸಂಭ್ರಮಿಸಲು ಹೊಸ ಸಂಚಲನ ಮೂಡಿಸಿರುವ ಸ್ಟಾರ್ ನಿರ್ದೇಶಕ ಎಸ್.ಎಸ್. ರಾಜಮೌಳಿ, ಎರಡು ಭಾಗಗಳನ್ನು ಒಗ್ಗೂಡಿಸಿ ಮತ್ತೊಮ್ಮೆ ಚಿತ್ರಮಂದಿರಕ್ಕೆ ಬಾಹುಬಲಿಯನ್ನು ಕರೆತರಲು ಸಜ್ಜಾಗಿದ್ದಾರೆ.
ಹತ್ತು ವರ್ಷಗಳ ಈ ಪ್ರಯಾಣವನ್ನು ಭಾವನಾತ್ಮಕವಾಗಿ ನೆನೆದ ರಾಜಮೌಳಿ, ತಮ್ಮ ಸಾಮಾಜಿಕ ಜಾಲತಾಣದ 'ಎಕ್ಸ್' (ಟ್ವಿಟರ್) ಖಾತೆಯಲ್ಲಿ ಹೊಸ ವಿಷಯವನ್ನು ಸಿನಿಪ್ರಿಯರೊಂದಿಗೆ ಹಂಚಿಕೊಂಡಿದ್ದಾರೆ. ಬಾಹುಬಲಿ 1 ಮತ್ತು 2ರ ಭಾಗಗಳನ್ನು ಒಟ್ಟಿಗೆ ಸೇರಿಸಿ ಒಂದು ಪೂರ್ಣ ಪ್ರಮಾಣದ ಚಿತ್ರವಾಗಿ ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡಲು ರಾಜಮೌಳಿ ಮುಂದಾಗಿದ್ದಾರೆ. ಆ ಚಿತ್ರವೇ 'ಬಾಹುಬಲಿ: ದಿ ಎಪಿಕ್'.
“'ಬಾಹುಬಲಿ'. ಹಲವು ಪ್ರಯಾಣಗಳ ಆರಂಭ. ಅನೇಕ ಹೆಗ್ಗುರುತುಗಳು. ಅಂತ್ಯವಿಲ್ಲದ ಸ್ಫೂರ್ತಿ. ಹತ್ತು ವರ್ಷಗಳ ನಂತರ ಈ ವಿಶೇಷ ಕ್ಷಣವನ್ನು ನಾವು 'ಬಾಹುಬಲಿ: ದಿ ಎಪಿಕ್' ಎಂಬ ಶೀರ್ಷಿಕೆಯಡಿಯಲ್ಲಿ ಎರಡು ಭಾಗಗಳಲ್ಲಿ ಒಟ್ಟಿಗೆ ತರುತ್ತಿದ್ದೇವೆ. ಇದೇ ಅಕ್ಟೋಬರ್ 31, 2025ರಂದು ಬಹುತೇಕ ಚಿತ್ರಮಂದಿರಗಳಲ್ಲಿ ನಿಮ್ಮ ಮುಂದೆ ಹಾಜರಾಗಲಿದೆ" ಎಂದು ರಾಜಮೌಳಿ ಹೇಳಿದ್ದಾರೆ. ಸದ್ಯ ಈ ವಿಷಯ ಪ್ರಭಾಸ್ ಅಭಿಮಾನಿಗಳು ಮತ್ತು ಚಿತ್ರಪ್ರೇಮಿಗಳಲ್ಲಿ ಕುತೂಹಲ ಹೆಚ್ಚಿಸಿದ್ದು, ಬ್ಲಾಕ್ಬಸ್ಟರ್ ಚಿತ್ರವನ್ನು ಮತ್ತೊಮ್ಮೆ ಬೆಳ್ಳಿ ಪರದೆಯ ಮೇಲೆ ಕಣ್ತುಂಬಿಕೊಳ್ಳಲು ಕಾತರ ವ್ಯಕ್ತಪಡಿಸಿದ್ದಾರೆ.