ಸಮಾಜದಲ್ಲಿ ಶಿಕ್ಷಕರ ಪಾತ್ರ ಮುಖ್ಯ: ಡಾ.ರಜತಾ ಹೇಳಿಕೆ

27
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಸಮಾಜದಲ್ಲಿ ಶಿಕ್ಷಣ, ಶಿಕ್ಷಕರ ಪಾತ್ರ ಬಹು ಮುಖ್ಯವಾಗಿದೆ. ಪರಿಪೂರ್ಣ ಶಿಕ್ಷಕನಾದರೆ ಮಾತ್ರ ಪರಿಪೂರ್ಣ ನಾಗರಿಕರನ್ನು ಸೃಷ್ಟಿಸಲು ಸಾಧ್ಯ. ಶಿಕ್ಷಕ ವೃತ್ತಿ ಕೇವಲ ಪಠ್ಯ ಪುಸ್ತಕಕ್ಕೆ ಸೀಮಿತವಾಗದೆ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪೂರಕ ಎಂದು ಉಜಿರೆ ಎಸ್‌ಡಿಎಂ ತಾಂತ್ರಿಕ ಮಹಾವಿದ್ಯಾಲಯ ಗ್ರಂಥಪಾಲಕಿ ಡಾ.ರಜತಾ ಹೇಳಿದರು.

ಶ್ರೀ ಧರ್ಮಸ್ಠಳ ಮಂಜುನಾಥೇಶ್ವರ ಶಿಕ್ಷಣ ಮಹಾವಿದ್ಯಾಲಯ(ಬಿ.ಎಡ್.)ದಲ್ಲಿ ಸೋಮವಾರ ನಡೆದ ಬಿ.ಎಡ್. ತರಗತಿ ಪ್ರಾರಂಭೋತ್ಸವ ದೀಕ್ಷಾನ್ವಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಎಸ್‌ಡಿಎಂ ಶಿಕ್ಷಣ ಸಂಸ್ಥೆ, ಉಜಿರೆ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಧನ್ಯಕುಮಾರ್ ಮಾತನಾಡಿ, ಶಿಕ್ಷಕರು ಶಿಸ್ತು, ತಾಳ್ಮೆ, ಕ್ರಿಯಾಶೀಲತೆ, ಸಮಯಪ್ರಜ್ಞೆ, ಕರ್ತವ್ಯನಿಷ್ಠೆ, ಕುಶಲತೆ ಹೊಂದಿರಬೇಕು. ವಿದ್ಯಾರ್ಥಿಗಳನ್ನು ಹಲವು ಚಟುವಟಿಕೆಗಳಲ್ಲಿ ಭಾಗವಹಿಸಿ ಅವರ ಸಾಮರ್ಥ್ಯ ಹೊರ ತರಲು ಅವಕಾಶ ಮಾಡಿಕೊಡುವವರೇ ನಿಜವಾದ ಶಿಕ್ಷಕರು ಎಂದರು.

ಕಾಲೇಜು ಪ್ರಾಂಶುಪಾಲ ಸಂತೋಷ್ ಸಲ್ಡಾನ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಸ್‌ಡಿಎಂ ಶಿಕ್ಷಣ ಸಂಸ್ಥೆ ಸಂಸ್ಕೃತಿ, ಶಿಕ್ಷಕ ತರಬೇತಿಯಿಂದ ಉತ್ತಮ ವ್ಯಕ್ತಿತ್ವ ರೂಪುಗೊಳ್ಳಲು ಸಾಧ್ಯ. ಗುಣಮಟ್ಟದ ಶಿಕ್ಷಣ ದೊರಕುವುದಲ್ಲದೇ ಸರ್ವತೋಮುಖ ಕೌಶಲ ಮೈಗೂಡಿಸಿಕೊಳ್ಳಲು ಶಿಕ್ಷಕ ತರಬೇತಿ ಅವಶ್ಯಕತೆ ಇದೆ ಎಂದರು.

ಎಸ್‌ಡಿಎಂ ಮಹಿಳಾ ಐ.ಟಿ.ಐ. ಕಾಲೇಜು ಪ್ರಾಂಶುಪಾಲ ಪ್ರಕಾಶ್ ಕಾಮತ್, ಉಪನ್ಯಾಸಕ ವೃಂದ, ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳ ಪಾಲಕರು, ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು. ಉಪನ್ಯಾಸಕ ತಿರುಮಲೇಶ್ ರಾವ್ ಎನ್.ಕೆ. ಸ್ವಾಗತಿಸಿದರು. ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿ ಅಖಿಲಾ ಎಂ.ಪಿ. ವಂದಿಸಿದರು. ರಶ್ಮಿ ಕೆ.ಪಿ. ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net