ಮಾರುಕಟ್ಟೆಗೆ ಬರಲಿದೆ ಆಯುರ್ವೇದಿಕ್​ ಮಾಸ್ಕ್​ !

mask
Published on

ನೆಲಮಂಗಲ: ಜಗತ್ತಿನಲ್ಲಿ ಕರೊನಾ ಕಾಣಿಸಿಕೊಳ್ಳುತ್ತಿದ್ದಂತೆ ಮಾರುಕಟ್ಟೆಗೆ ತರಹೇವಾರಿ ಮಾಸ್ಕ್​ಗಳು ಲಗ್ಗೆ ಇಟ್ಟಿವೆ. ಕಾಸಿಗೆ ತಕ್ಕಂತೆ ಕಜ್ಜಾಯ ಎಂಬಂತೆ ತ್ರೀ ಫೋಲ್ಡೆಡ್​, ಎನ್-95 ಮಾಸ್ಕ್​ಗಳ ಜತೆಗೆ ಮ್ಯಾಚಿಂಗ್​ ಮಾಸ್ಕ್​ಗಳು, ಚಿನ್ನದ ಮಾಸ್ಕ್​, ಮೋದಿ ಭಾವಚಿತ್ರವುಳ್ಳ ಮಾಸ್ಕ್​, ತೆಂಗಿನ ಕರಟದ(ಚಿಪ್ಪಿನ) ಮಾಸ್ಕ್​ಗಳೂ ಸದ್ದು ಮಾಡಿವೆ. ಇದೀಗ ಆಯುರ್ವೇದ ಔಷಧ ಗುಣ ಅಳವಡಿಸಿರುವ ಮಾಸ್ಕ್​ ಬರಲಿದೆ!

ಗಿಡಮೂಲಿಕೆ ಬಳಸಿಕೊಂಡೇ ಮಾಸ್ಕ್ ತಯಾರಿಸಲು ವಸಭಾರತ ಚಾರಿಟಬಲ್​ ಟ್ರಸ್ಟ್​ ಮುಂದಾಗಿದೆ. ಆಯರ್ವೇದದಲ್ಲಿ ತಿಳಿಸಿರುವಂತೆ ಔಷಧದ ಗಿಡಮೂಲಿಕೆಯ ಪೌಡರ್​ ಅನ್ನು ವಿಶೇಷ ಬಟ್ಟೆಯಲ್ಲಿ ಪ್ಯಾಕ್​ ಮಾಡಿ ಮೂಗಿನ ಭಾಗದ ಮಾಸ್ಕ್​ ಜಾಗದಲ್ಲಿ ಇರಿಸಲಾಗುವುದು. ಈ ಮಾಸ್ಕ್​ ಧರಿಸಿಕೊಂಡು ಉಸಿರಾಡಿದಾಗ ದೇಹದಲ್ಲಿನ ಶೀತ, ಕೆಮ್ಮು, ಕಫದಂತಹ ಕಾಯಿಲೆ ದೂರವಾಗುವ ಜತೆಗೆ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಹಾಗೆಯೇ ಪೌಡರ್​ ಮುಗಿದ ಬಳಿಕ ಮಾಸ್ಕ್​ ಸ್ವಚ್ಛಗೊಳಿಸಿ ಅದರೊಳಗೆ ಪುನಃ ಪೌಡರ್​ ಪೊಟ್ಟಣ ಇಟ್ಟುಕೊಂಡು ಮರುಬಳಕೆ ಮಾಡಬಹುದು.

ಕೇರಳ ಹಾಗೂ ಕರ್ನಾಟಕದ ಕೆಲ ಆಯುರ್ವೇದ ವೈದ್ಯರ ಸಲಹೆ ಮೇರೆಗೆ ವಿಶಿಷ್ಟ ರೀತಿಯ ಮಾಸ್ಕ್​ ತಯಾರಿ ಕಾರ್ಯಕ್ಕೆ ಕೈಹಾಕಿದ್ದೇವೆ. 1 ಲಕ್ಷ ಮಾಸ್ಕ್​ ತಯಾರಿಸುವ ಗುರಿ ಇದೆ. 3 ಮಾದರಿಯ ಮಾಸ್ಕ್​ ತಯಾರಿಸಲಾಗುತ್ತದೆ. ಸದ್ಯಕ್ಕೆ 10 ಸಾವಿರ ಮಾಸ್ಕ್​ ತಯಾರಿಕೆಗೆ ಬಟ್ಟೆ ಹಾಗೂ ಆಯುರ್ವೇದ ಔಷಧ ಇಡಲು ಬೇಕಾದ ವಿಶೇಷ ರೀತಿಯ ಬಟ್ಟೆಯನ್ನು ಸಿದ್ಧಪಡಿಸಿಕೊಳ್ಳಲಾಗಿದೆ ಎಂದು ಟ್ರಸ್ಟ್​ ವ್ಯವಸ್ಥಾಪಕ ನಿರ್ದೇಶಕ ವಿನೋದ್​ಕುಮಾರ್​ ಮಾಹಿತಿ ನೀಡಿದ್ದಾರೆ.

ನಗರದ ಭೈರವೇಶ್ವರ ಬಡಾವಣೆಯ ಶ್ರೀವೆಂಕಟರಮಣ ದೇವಾಲಯದಲ್ಲಿ ಮಾಸ್ಕ್​ ತಯಾರಿ ಕಾರ್ಯಕ್ಕೆ ನಗರಸಭೆ ಸದಸ್ಯ ಎನ್​.ಗಣೇಶ್​ ಬುಧವಾರ ಚಾಲನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net