ಆಯುರ್ವೇದ ಒಂದು ಜೀವನ ಕ್ರಮ

20gan16
Published on

ಕುಂದಾಪುರ: ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಕುಂದಾಪುರ ತಾಲೂಕು ಆಯುಷ್ ಆಸ್ಪತ್ರೆ, ಲಯನ್ಸ್ ಕ್ಲಬ್ ಕುಂದಾಪುರದ ಅಮೃತಧಾರಾದ ಜಂಟಿ ಆಶ್ರಯದಲ್ಲಿ ದಿ ಕನ್ಸರ್ನ್ ಫಾರ್ ವಕಿರ್ಂಗ್ ಚಿಲ್ಡ್ರನ್ಸ್ ಸಂಸ್ಥೆಯ ರಾಜ್ಯ ಸಂಪನ್ಮೂಲ ಕೇಂದ್ರ - ನಮ್ಮ ಭೂಮಿಯ ಹಸಿರಿನ ತಾಣದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಹರಿತ ಯೋಗ ಕಾರ್ಯಕ್ರಮ ನಡೆಯಿತು.

ಬಹುಪಯೋಗಿ ನೇರಳೆ ಗಿಡವನ್ನು ನೆಡುವುದರ ಮೂಲಕ ಯೋಗಕ್ಕೂ ಪರಿಸರಕ್ಕೂ ಇರವು ಸಂಬಂಧವನ್ನು ತಿಳಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು.

ಲಯನ್ಸ್ ಕ್ಲಬ್ ಅಮೃತಧಾರಾ ಅಧ್ಯಕ್ಷೆ ಡಾ.ವಾಣಿಶ್ರೀ ಐತಾಳ್ ಮಾತನಾಡಿ, ಆಯುರ್ವೇದವು ಕೇವಲ ಚಿಕಿತ್ಸೆ ನೀಡುವ ಪದ್ಧತಿಯಲ್ಲ, ಇದೊಂದು ಜೀವನ ಕ್ರಮ. ಆರೋಗ್ಯ ಕಾಪಾಡಿಕೊಳ್ಳುವುದು ರೋಗ ಬಂದ ಮೇಲೆ ಮಾತ್ರವಲ್ಲ. ಬರುವ ಮೊದಲು ಎಚ್ಚರಿಕೆ ವಹಿಸುವುದೂ ಕೂಡ ಅತ್ಯಂತ ಅಗತ್ಯ ಎಂದು ಹೇಳಿದರು.

ಕುಂದಾಪುರ ತಾಲೂಕು ಆಯುಷ್ ಆಸ್ಪತ್ರೆಯ ಡಾ.ಕಿರಣ್ ಅವರು ವಿವಿಧ ಔಷಧೀಯ ಗಿಡಗಳ ಗುಣ ಮತ್ತು ಉಪಯೋಗಗಳ ಬಗ್ಗೆ, ಕುಂದಾಪುರ ತಾಲೂಕು ಆಯುಷ್ ಆಸ್ಪತ್ರೆಯ ಡಾ.ಶಿಲ್ಪಾ ಅವರು ಆರೋಗ್ಯಪೂರ್ಣ ಬದುಕಿನ ನಿರ್ವಹಣೆಯಲ್ಲಿ ಯೋಗದ ಪಾತ್ರದ ಬಗ್ಗೆ ಮಾಹಿತಿ ನೀಡಿದರು.

ರೇಡಿಯೋ ಕುಂದಾಪುರ ಕಾರ್ಯಕ್ರಮದ ನಿರ್ವಾಹಕಿ ಆರ್‌ಜೆ ಜ್ಯೋತಿ ಕುಂದಾಪುರ, ಲಯನ್ಸ್ ಕ್ಲಬ್ ಕುಂದಾಪುರ ಅಮೃತಧಾರಾದ ನಿಕಟಪೂರ್ವ ಅಧ್ಯಕ್ಷೆ ಆಶಾ ಶಿವರಾಮ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಸಿಡಬ್ಲುಸಿ ಸಂಸ್ಥೆಯ ಉಪಕಾರ್ಯಕಾರಿ ನಿರ್ದೇಶಕ ಶಿವಾನಂದ ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಕ್ಷೇತ್ರ ಕಾರ್ಯಕ್ರಮದ ಸಹನಿರ್ದೇಶಕಿ ಕೃಪಾ ಎಂ.ಎಂ. ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net