ಅಯೋಧ್ಯೆ ರೈಲು ನಿಲ್ದಾಣ ಹೀಗಿರಲಿದೆ...

Ayodhya railway station 0
Published on

ಲಖನೌ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರಕ್ಕೆ ಭೂಮಿ ಪೂಜೆ, ಶಿಲಾನ್ಯಾಸ ಕಾರ್ಯಕ್ರಮಗಳಿಗೆ ಸಿದ್ಧತೆ ನಡೆದಿರುವ ಈ ಸಂದರ್ಭದಲ್ಲಿ ಅಯೋಧ್ಯೆಯ ರೈಲ್ವೆ ನಿಲ್ದಾಣದ ಉನ್ನತೀಕರಣದ ಯೋಜನೆಯೂ ಸಿದ್ಧವಾಗಿದೆ. ಆರಂಭಿಕವಾಗಿ ಈ ಉನ್ನತೀಕರಣ ಯೋಜನೆಗೆ ಉತ್ತರ ಪ್ರದೇಶ ಸರ್ಕಾರ 80 ಕೋಟಿ ರೂಪಾಯಿ ಮೀಸಲಿಟ್ಟಿತ್ತು. ಅದೀಗ ಪರಿಷ್ಕರಣೆಗೊಂಡು 104 ಕೋಟಿ ರೂಪಾಯಿಗೆ ಏರಿಕೆಯಾಗಿದೆ.

ರಾಮ ಮಂದಿರ ಮಾದರಿಯಲ್ಲೇ ನಿರ್ಮಾಣವಾಗಲಿದೆ ಹೊಸ ರೈಲ್ವೆ ನಿಲ್ದಾಣ. ಭಾನುವಾರ ಈ ಬಗ್ಗೆ ಟ್ವೀಟ್ ಮಾಡಿರುವ ರೈಲ್ವೆ ಸಚಿವ ಪಿಯೂಷ್ ಗೋಯೆಲ್​, ಪ್ರಧಾನ ಮಂತ್ರಿ ನರೇಂದ್ರಮೋದಿಯವರ ನೇತೃತ್ವದಲ್ಲಿ ರೈಲ್ವೆ ಇಲಾಖೆ ಅಯೋಧ್ಯೆ ರೈಲ್ವೆ ನಿಲ್ದಾಣದ ಉನ್ನತೀಕರಣ ಯೋಜನೆಯನ್ನು ಕೈಗೆತ್ತಿಕೊಂಡಿದೆ ಎಂದು ಹೇಳಿದ್ದು, ಅದರ ಜತೆಗೆ ಪ್ರಸ್ತಾವಿತ ಮಾದರಿಯ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ.

ಪ್ರಸ್ತಾವಿತ ರೈಲ್ವೆ ನಿಲ್ದಾಣದ ಮಾದರಿಯನ್ನು ಆರ್​ಐಟಿಇಎಸ್​ ಲಿಮಿಟೆಡ್​ ಮರುಅಭಿವೃದ್ಧಿಗೊಳಿಸಲಿದ್ದು, ಎರಡು ಹಂತದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಮೊದಲ ಹಂತ 2021ರ ಜೂನ್​ ತಿಂಗಳಲ್ಲಿ ಮುಗಿಯಲಿದೆ. ಇದರಲ್ಲಿ, ಮಾಡರ್ನ್​ ಆರ್ಟ್​ ಗ್ಯಾಲರಿ, ಪುರುಷ, ಮಹಿಳೆಯರಿಗೆ ಪ್ರತ್ಯೇಕ ಡೋರ್ಮೆಟ್ರಿಗಳು, ಹೆಚ್ಚಿನ ಸಂಖ್ಯೆಯ ಟಿಕೆಟ್ ಕೌಂಟರ್​ಗಳು, ಫುಡ್ ಪ್ಲಾಜಾ, ಮೇಲ್ಸೇತುವೆ, ಪ್ರವಾಸಿ ಕೇಂದ್ರ, ಟ್ಯಾಕ್ಸಿ ಬೂತ್, ವಿಐಪಿ ಲಾಂಜ್​, ಅತಿಥಿ ಗೃಹ, ಆಡಿಟೋರಿಯಂಗಳು ಇರಲಿವೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net