ನಗರದಲ್ಲಿ ಹಸಿರು ಹಿನ್ನಡೆ ಅಪಾಯದ ಸಂಕೇತ- ಸುಯೆಝ್ ಮಂಗಳೂರು ಸಹಯೋಗದಲ್ಲಿ ನಗರ ಕಾಡು ಅಥವಾ ಮಿಯವಾಕಿ ಕಾಡಿನ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಪರಿಸರವಾದಿ ಜೀತ್ ಮಿಲನ್ ರೋಚ್

mng_22 aprl hasiru
ವಿಶ್ವ ಭೂಮಿ ದಿನಾಚರಣೆಯಂಗವಾಗಿ ಸೋಮವಾರ ಸುಯೆಝ್ ಮಂಗಳೂರು ಸಹಯೋಗದಲ್ಲಿ ವಿದ್ಯಾರ್ಥಿಗಳಿಗಾಗಿ ನಗರ ಕಾಡು ಅಥವಾ ಮಿಯವಾಕಿ ಕಾಡಿನ ಕುರಿತ ಜಾಗೃತಿ ಕಾರ್ಯಕ್ರಮ ನಡೆಯಿತು.
Published on

ಮಂಗಳೂರು: ಪರಿಸರ ನೀತಿಯ ಪ್ರಕಾರ ಪ್ರತೀ ನಗರವು ಕನಿಷ್ಠ ಶೇಕಡಾ 35ರಷ್ಟು ಹಸಿರಿನಿಂದ ತುಂಬಿರಬೇಕು. ಆದರೆ, ಮಂಗಳೂರು ನಗರ ಕೇವಲ ಶೇಕಡಾ 6.24ರಷ್ಟು ಮಾತ್ರವೇ ಹಸಿರನ್ನು ಆವರಿಸಿದೆ. ಇದು ಅಪಾಯದ ಸಂಕೇತ ಎಂದು ಪರಿಸರವಾದಿ ಜೀತ್ ಮಿಲನ್ ರೋಚ್ ಹೇಳಿದರು.

ವಿಶ್ವ ಭೂಮಿ ದಿನಾಚರಣೆಯಂಗವಾಗಿ ಸೋಮವಾರ ಸುಯೆಝ್ ಮಂಗಳೂರು ಸಹಯೋಗದಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ನಗರ ಕಾಡು ಅಥವಾ ಮಿಯವಾಕಿ ಕಾಡಿನ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇರುವೆಯಿಂದ ಆನೆಯವರೆಗೆ ಪರಿಸರದಲ್ಲಿ ಎಲ್ಲಾ ಪ್ರಾಣಿಪಕ್ಷಿಗಳು ಕಾಡಿನ ರಚನೆಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತದೆ. ಆದರೆ, ಮನುಷ್ಯರು ಮಾತ್ರ ಪರಿಸರ ನಾಶಕ್ಕೆ ತನ್ನ ಕೊಡುಗೆಯನ್ನು ನೀಡುತ್ತಲೇ ಬಂದಿದ್ದಾರೆ. ಕಾಡನ್ನು ನಿರ್ಮಾಣ ಮಾಡುವುದು ಕಷ್ಟಸಾಧ್ಯ. ಆದರೆ, ಇಂತಹುದೇ ಕಾಡಿನ ಪುನರ್ ಸೃಷ್ಟಿಗೆ ಹಾಗೂ ಇರುವ ಕಾಡಿನ ಸಂರಕ್ಷಣೆ ಮಾಡುವುದು ಅತ್ಯಗತ್ಯವಾಗಿದೆ. ನಗರಗಳಿಗೆ ಮಿಯಾವಾಕಿ ಕಾಡು ಒಂದು ಅತ್ಯುತ್ತಮವಾದ ಪರಿಹಾರವಾಗಿದೆ. ಅತೀ ಕಡಿಮೆ ಪ್ರದೇಶದಲ್ಲೂ ತಮ್ಮ ತಮ್ಮ ಮನೆಗಳಲ್ಲಿಯೂ ಇಂತಹ ಕಾಡುಗಳನ್ನು ನಿರ್ಮಾಣ ಮಾಡಬಹುದು ಎಂದರು.

ಸುಯಝ್ ಸಂಸ್ಥೆಯ ಸಾರ್ವಜನಿಕ ಸಂಪರ್ಕಧಿಕಾರಿ ಡಾ. ರೇಶ್ಮಾ ಉಳ್ಳಾಲ್ ಪ್ರಾಸ್ತಾವಿಸಿದರು. ಸಂಸ್ಥೆಯ ಆಡಳಿತಾಧಿಕಾರಿ ರಾಕೇಶ್ ಶೆಟ್ಟಿ, ಸೇಫ್ಟಿ ವಿಭಾಗದ ಅಧಿಕಾರಿಗಳಾದ ಸನೂಪ್ ವೆಟ್ಟಿಲ್, ಸುಫಿಯಾನ್, ಗ್ರಾಹಕ ಸೇವಾ ವಿಭಾಗದ ಅಧಿಕಾರಿ ವೆರಿನಾ ಜೊವಿಟಾ ಪಿಂಟೊ, ಮಂಗಳೂರಿನ ದಯಾನಂದ ಪೈ-ಸತೀಶ್ ಪೈ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರಾದ ಪ್ರೊ. ವಸಂತಿ ಪಿ., ಅರುಣಾ ಕುಮಾರಿ, ಫಿರ್ದೋಸ್ ತೋನ್ಸೆ, ಮೆಹ್ರೋಝ್ ತೋನ್ಸೆ, ವಿನುತಾ, ಅಮೃತಾ, ಶ್ರೀಕಲಾ, ಎಂಎಸ್‌ಡಬ್ಲ್ಯೂ ಹಾಗೂ ಬಿಎಸ್ಸಿ ಪದವಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

------------------

ನಗರದಲ್ಲಿ 30 ಮಿಯಾವಾಕಿ ಕಾಡು ನಿರ್ಮಾಣ

ಅಭಿವೃದ್ಧಿ ಎಂದರೆ ಪರಿಸರವನ್ನು ನಾಶ ಮಾಡುವುದಲ್ಲ. ಯುವಜನರು ಉತ್ತಮ ಪರಿಸರ ನಿರ್ಮಾಣದ ಜವಾಬ್ದಾರಿಯನ್ನು ವಹಿಸಬೇಕು. ಮುಂದಿನ ಪೀಳಿಗೆ ಉತ್ತಮ ಗಾಳಿ, ನೀರು ಸೇವಿಸಬೇಕಾದರೆ ಕಾಡಿನ ರಚನೆ ಅನಿವಾರ್ಯ. ಈ ನಿಟ್ಟಿನಲ್ಲಿ ಜೀತ್ ಮಿಲನ್ ಹಾಗೂ ಅವರ ತಂಡ ಈಗಾಗಲೇ ಮಂಗಳೂರು ನಗರದಲ್ಲಿ 30 ಮಿಯಾವಾಕಿ ಕಾಡುಗಳನ್ನು ನಿರ್ಮಾಣ ಮಾಡಿದ್ದಾರೆ. ವನ ಚಾರಿಟೆಬಲ್ ಟ್ರಸ್ಟ್ ಮೂಲಕ ತಮ್ಮ ಯೋಜನೆಯನ್ನು ನಗರದ ಹೆಚ್ಚು ಹೆಚ್ಚು ಶಾಲಾ, ಕಾಲೇಜುಗಳಿಗೆ ವಿಸ್ತರಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net