ಹೈದರಾಬಾದ್: 10 ರೂಪಾಯಿಗಾಗಿ ತೀವ್ರ ವಾಗ್ವಾದದ ನಂತರ ಪ್ರಯಾಣಿಕರೊಬ್ಬರು ಆಟೋ ಚಾಲಕನಿಗೆ ತೀವ್ರವಾಗಿ ಥಳಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಆಸ್ಪತ್ರೆಯಲ್ಲಿ ಆಟೋ ಚಾಲಕ ಮೃತಪಟ್ಟಿದ್ದಾನೆ. ಈ ಘಟನೆ ಹೈದರಾಬಾದ್ನಲ್ಲಿ ನಡೆದಿದೆ.
ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ತಲೆಮರೆಸಿಕೊಂಡಿರುವ ಅಪರಿಚಿತ ಪ್ರಯಾಣಿಕನ ಪತ್ತೆಗೆ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.
ವಟ್ಟೆಪಲ್ಲಿ ಪ್ರದೇಶದ ಆಟೋ ಚಾಲಕ ಮೊಹಮ್ಮದ್ ಅನ್ವರ್ (39) ಅವರನ್ನು ಜೂನ್ 12 ರಂದು ಚಾರ್ಮಿನಾರ್‌ನಲ್ಲಿ ಪ್ರಯಾಣಿಕರೊಬ್ಬರು ಕರೆದೊಯ್ದು ಶಂಶೀರ್‌ಗಂಜ್‌ನಲ್ಲಿ ಇಳಿಸಿದ್ದರು. ಶಂಶೀರ್‌ಗಂಜ್ ತಲುಪಿದ ನಂತರ ಪ್ರಯಾಣಿಕ 10 ರೂ. ಪಾವತಿಸಿದ ಆದರೆ ಅನ್ವರ್ ಇನ್ನೂ 10 ರೂ. ಕೊಡಿ ಎಂದು ಕೇಳಿದ್ದಾನೆ. ಈ ಕುರಿತಾಗಿ ಇಬ್ಬರ ನಡುವೆ ವಾಗ್ವಾದಕ್ಕೆ ಕಾರಣವಾಯಿತು.
ಪ್ರಯಾಣಿಕನು ಅನ್ವರ್‌ನನ್ನು ಅವಮಾನಿಸಿದ್ದಲ್ಲದೆ, ನಿಷ್ಕರುಣೆಯಿಂದ ತೀವ್ರವಾಗಿ ಥಳಿಸಿದನು. ಇದನ್ನು ಗಮನಿಸಿದ ಸ್ಥಳೀಯರು ಸ್ಥಳಕ್ಕಾಗಮಿಸಿದಾಗ ಪ್ರಯಾಣಿಕ ಅಲ್ಲಿಂದ ಪರಾರಿಯಾಗಿದ್ದಾನೆ. ಸ್ಥಳೀಯರು ಅನ್ವರ್‌ನನ್ನು ಹತ್ತಿರದ ಪೊಲೀಸ್ ಠಾಣೆಗೆ ಕರೆದೊಯ್ದರು ಮತ್ತು ಪೊಲೀಸರು ಅವರನ್ನು ಆಸ್ಪತ್ರೆಗೆ ಕರೆದೊಯ್ದರು. ಚಿಕಿತ್ಸೆ ಫಲಕಾರಿಯಾಗದೆ ಅನ್ವರ್ ಜೂನ್ 27ರಂದು ಮೃತಪಟ್ಟಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.