ಚಾಲಕನ ನಿರ್ಲಕ್ಷ್ಯತನ... ತಮ್ಮದಲ್ಲದ ತಪ್ಪಿಗೆ ಪ್ರಾಣ ಬಿಟ್ಟ ಪ್ರಯಾಣಿಕರು

auto pic
Published on

ಬೆಂಗಳೂರು: ಆಟೋ ಚಾಲಕನ ನಿರ್ಲಕ್ಷ್ಯತನಕ್ಕೆ ಚಾಲಕ ಸೇರಿದಂತೆ ಮೂವರು ಸಾವನ್ನಪ್ಪಿರುವ ಘಟನೆ ಚಿಕ್ಕಜಾಲ ಬಳಿಯ ಬಾಗಲೂರಿನಲ್ಲಿ ಶುಕ್ರವಾರ ನಡೆದಿದೆ.

ಮೃತರನ್ನು ಆಟೋ ಚಾಲಕ ಕಿರಣ್ (26), ಪ್ರಯಾಣಿಕರಾದ ಅನ್ವರ್ ಹುಸೇನ್ (28) ಮತ್ತು ರಾಹುಲ್ (21) ಎಂದು ಗುರುತಿಸಲಾಗಿದೆ. ಪ್ರಯಾಣಿಕರನ್ನ ಕೂರಿಸಿಕೊಂಡು ಚಾಲಕ ಅತಿವೇಗದಿಂದ ಅಡ್ಡಾದಿಡ್ಡಿ ಆಟೋ ಚಲಾಯಿಸಿದ್ದಾನೆ. ಈ ವೇಳೆ ನಿಯಂತ್ರಣ ತಪ್ಪಿದ ಆಟೋ ಪಲ್ಟಿಯಾಗಿ ರಸ್ತೆಯಲ್ಲಿ ಬಿದ್ದಿದೆ. ನಂತರ ಅದೇ ರಸ್ತೆಯಲ್ಲಿ ಬರುತ್ತಿದ್ದ ಕಾರು ಆಟೋಗೆ ಡಿಕ್ಕಿ ಹೊಡೆದಿದೆ.

ಅಪಘಾತದಲ್ಲಿ ಆಟೋ ಚಾಲಕ ಸೇರಿದಂತೆ ಆಟೋದಲ್ಲಿದ್ದ ಇಬ್ಬರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆಟೋದಲ್ಲಿದ್ದ ಇನ್ನೋರ್ವ ಪ್ರಯಾಣಿಕ ವಾಸಪ್ಪ ಎಂಬಾತನಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಚಾಲಕ ಮೂವರು ಪ್ರಯಾಣಿಕರನ್ನ ಕೂರಿಸಿಕೊಂಡು ಬೂದಿಗೆರೆ ಕಡೆಯಿಂದ ಬಾಗಲೂರು ಕಡೆಗೆ ಬರುತ್ತಿದ್ದ. ಈ ವೇಳೆ ಆಟೋವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬರುತ್ತಿದ್ದ ಎನ್ನಲಾಗಿದೆ.

ಅಪಘಾತದ ಬಳಿಕ ಕಾರನ್ನು ಸ್ಥಳದಲ್ಲೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಈ ಸಂಬಂಧ ಚಿಕ್ಕಜಾಲ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net