More

    ಇಂದಿನಿಂದ ಆಸ್ಟ್ರೇಲಿಯನ್ ಓಪನ್, ವರ್ಷದ ಮೊದಲ ಗ್ರಾಂಡ್ ಸ್ಲಾಂ ಟೆನಿಸ್ ಹಬ್ಬ

    ಮೆಲ್ಬೋರ್ನ್: ವರ್ಷದ ಮೊದಲ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿ ಆಸ್ಟ್ರೇಲಿಯನ್ ಓಪನ್, ಕರೊನಾ ಹಾವಳಿ ಮತ್ತು ಕ್ವಾರಂಟೈನ್ ತಾಪತ್ರಯಗಳಿಂದಾಗಿ ಈ ಬಾರಿ 3 ವಾರ ತಡವಾಗಿ ಆರಂಭಗೊಳ್ಳುತ್ತಿದೆ. ಪೂರ್ವಭಾವಿಯಾಗಿ ನಡೆದ ಎಟಿಪಿ ಕಪ್, ಗ್ರೇಡ್ ಓಷಿಯನ್ ರೋಡ್ ಓಪನ್, ಮರ‌್ರೆ ರಿವರ್ ಓಪನ್ ಟೂರ್ನಿಗಳಲ್ಲಿ ರೋಚಕ ಹಣಾಹಣಿ ಕಂಡಿದ್ದು, ಇದೀಗ ಪ್ರತಿಷ್ಠಿತ ಕಾದಾಟಕ್ಕೆ ವೇದಿಕೆ ಸಜ್ಜಾಗಿದೆ. ಟೂರ್ನಿ ಆರಂಭಕ್ಕೂ ಮುನ್ನ ಇದ್ದ ಹಲವು ವಿಘ್ನಗಳು ನಿವಾರಣೆಯಾಗಿದ್ದು, ಸೋಮವಾರದಿಂದ ಮೆಲ್ಬೋರ್ನ್ ಪಾರ್ಕ್‌ನಲ್ಲಿ ರೋಚಕ ಕಾದಾಟ ಏರ್ಪಡಲಿದೆ. ದಿಗ್ಗಜರಾದ ನೊವಾಕ್ ಜೋಕೊವಿಕ್, ರಾಫೆಲ್ ನಡಾಲ್ ಮತ್ತು ಸೆರೇನಾ ವಿಲಿಯಮ್ಸ್ ದಾಖಲೆಗಳ ನಿರೀಕ್ಷೆಯೊಂದಿಗೆ ಕಣಕ್ಕಿಳಿಯುತ್ತಿದ್ದರೆ, 20 ಗ್ರಾಂಡ್ ಸ್ಲಾಂಗಳ ಒಡೆಯ ರೋಜರ್ ಫೆಡರರ್ ಟೂರ್ನಿಗೆ ಗೈರಾಗಿದ್ದಾರೆ.

    ದಾಖಲೆಗಳ ನಿರೀಕ್ಷೆಯಲ್ಲಿ ಜೋಕೋ, ನಡಾಲ್, ಸೆರೇನಾ
    ಕಳೆದ 13 ವರ್ಷಗಳಿಂದ ಮೆಲ್ಬೋರ್ನ್ ಅಂಗಳದಲ್ಲಿ ಪ್ರಭುತ್ವ ಸಾಧಿಸುತ್ತಾ ಬಂದಿರುವ ವಿಶ್ವ ನಂ.1 ನೊವಾಕ್ ಜೋಕೊವಿಕ್ 9ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ. ಟೂರ್ನಿಯಲ್ಲಿ ಇದುವರೆಗೆ 75 ಗೆಲುವು, 8 ಸೋಲು ಕಂಡಿರುವ ಸೆರ್ಬಿಯಾ ತಾರೆ ಜೋಕೋ, ಮೊದಲ ಸುತ್ತಿನಲ್ಲಿ ಫ್ರಾನ್ಸ್​ನ ಜೆರೆಮಿ ಚಾರ್ಡಿ ಅವರನ್ನು ಎದುರಿಸಲಿದ್ದಾರೆ. ಮತ್ತೊಂದೆಡೆ, 21ನೇ ಗ್ರಾಂಡ್ ಸ್ಲಾಂ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಸ್ಪೇನ್‌ನ ರಾಫೆಲ್ ನಡಾಲ್, 2009ರ ಬಳಿಕ ಮೆಲ್ಬೋರ್ನ್ ಪಾರ್ಕ್‌ನಲ್ಲಿ ಮತ್ತೊಮ್ಮೆ ಚಾಂಪಿಯನ್ ಪಟ್ಟಕ್ಕೇರುವ ತವಕದಲ್ಲಿದ್ದಾರೆ. ಈ ಮೂಲಕ ಗರಿಷ್ಠ ಗ್ರಾಂ ಸ್ಲಾಂ ಗೆದ್ದ ಸಾಧಕರಲ್ಲಿ ರೋಜರ್ ಫೆಡರರ್ (20) ಅವರನ್ನು ಮೀರಿಸಲಿದ್ದಾರೆ. ಜತೆಗೆ ಮುಕ್ತ ಟೆನಿಸ್ ಯುಗದಲ್ಲಿ ಪ್ರತಿ ಗ್ರಾಂಡ್ ಸ್ಲಾಂ ಟೂರ್ನಿಯನ್ನು ತಲಾ 2 ಬಾರಿ ಗೆದ್ದ ಮೊದಲ ಆಟಗಾರ ಎನಿಸಲಿದ್ದಾರೆ.

    ಇದನ್ನೂ ಓದಿ: VIDEO | ಡ್ರೆಸ್ಸಿಂಗ್ ರೂಂನಲ್ಲಿ ಕುಲದೀಪ್ ಕೊರಳು ಹಿಡಿದೆಳೆದ ಸಿರಾಜ್!

    23 ಗ್ರಾಂಡ್ ಸ್ಲಾಂ ವಿಜೇತೆ ಅಮೆರಿಕದ ಸ್ಟಾರ್ ಆಟಗಾರ್ತಿ ಸೆರೇನಾ ವಿಲಿಯಮ್ಸ್, ಹಾಲಿ ಚಾಂಪಿಯನ್ ಸೋಫಿಯಾ ಕೆನಿನ್, ಸಿಮೊನಾ ಹಲೆಪ್, ನವೊಯಿ ಒಸಾಕ, ಇಗಾ ಸ್ವಿಯಾಟೆಕ್ ಒಳಗೊಂಡ ಸ್ಟಾರ್ ಆಟಗಾರ್ತಿಯರು ಮಹಿಳಾ ಸಿಂಗಲ್ಸ್ ವಿಭಾಗದ ಪ್ರಶಸ್ತಿಗೆ ಹೋರಾಡಲಿದ್ದಾರೆ. 78ನೇ ಗ್ರಾಂಡ್ ಸ್ಲಾಂ ಆಡಲು ಸಜ್ಜಾಗಿರುವ ಸೆರೇನಾ, 24ನೇ ಪ್ರಶಸ್ತಿಯೊಂದಿಗೆ ಮಾರ್ಗರೇಟ್ ಕೋರ್ಟ್‌ರ ಸಾರ್ವಕಾಲಿಕ ದಾಖಲೆ ಸರಿಗಟ್ಟುವ ಹಂಬಲದಲ್ಲಿದ್ದಾರೆ. ಸೆಪ್ಟೆಂಬರ್‌ನಲ್ಲಿ 40ನೇ ವರ್ಷಕ್ಕೆ ಕಾಲಿಡಲಿರುವ ಸೆರೇನಾ, 2017ರಲ್ಲಿ ಆಸ್ಟ್ರೇಲಿಯನ್ ಓಪನ್‌ನಲ್ಲೇ ಕೊನೆಯ ಗ್ರಾಂಡ್ ಸ್ಲಾಂ ಪ್ರಶಸ್ತಿ ಜಯಿಸಿದ್ದಾರೆ.

    *ಆರಂಭ: ಬೆಳಗ್ಗೆ 5.30
    *ನೇರಪ್ರಸಾರ: ಸೋನಿ ನೆಟ್‌ವರ್ಕ್

    ಪ್ರಧಾನ ಸುತ್ತಿಗೆ ಅಂಕಿತಾ ರೈನಾ ಎಂಟ್ರಿ
    ಸಿಂಗಲ್ಸ್ ವಿಭಾಗದ ‘ಲಕ್ಕಿ ಲೂಸರ್’ ಅವಕಾಶದ ನಿರೀಕ್ಷೆಯಲ್ಲಿರುವ ಭಾರತದ ಆಟಗಾರ್ತಿ ಅಂಕಿತಾ ರೈನಾ, ಈ ನಡುವೆ ಡಬಲ್ಸ್ ವಿಭಾಗದಲ್ಲಿ ಆಡುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಇದರೊಂದಿಗೆ ಗ್ರಾಂಡ್ ಸ್ಲಾಂ ಪ್ರಧಾನ ಸುತ್ತಿನಲ್ಲಿ ಆಡಿದ ಭಾರತದ ಐದನೇ ಆಟಗಾರ್ತಿ ಎನಿಸಲಿದ್ದಾರೆ. ಇದಕ್ಕೂ ಮೊದಲು ನಿರುಪಮಾ ಮಂಕಡ್ (1971), ನಿರುಪಮಾ ವೈದ್ಯನಾಥನ್ (1998), ಸಾನಿಯಾ ಮಿರ್ಜಾ ಹಾಗೂ ಇಂಡೋ-ಅಮೆರಿಕನ್ ಶಿಖಾ ಓಬೆರಾಯ್ (2004) ಪ್ರಧಾನ ಸುತ್ತಿನಲ್ಲಿ ಆಡಿದ್ದ ಭಾರತದ ಆಟಗಾರ್ತಿಯರಾಗಿದ್ದಾರೆ. ಅಂಕಿತಾ ರೈನಾ ರೊಮೇನಿಯಾದ ಮಿಹೆಲಾ ಬುಜಾರ್ನೆಕು ಜತೆಗೂಡಿ ಕಣಕ್ಕಿಳಿಯಲಿದ್ದಾರೆ. ಇದರೊಂದಿಗೆ, 28 ವರ್ಷದ ಅಂಕಿತಾ ರೈನಾ ಅವರ ಹಲವು ವರ್ಷಗಳ ಕನಸು ನನಸಾದಂತಾಗಿದೆ. 6 ಗ್ರಾಂಡ್ ಸ್ಲಾಂ ಡಬಲ್ಸ್ ಪ್ರಶಸ್ತಿ ವಿಜೇತೆ ಸಾನಿಯಾ ಮಿರ್ಜಾ ಬಳಿಕ ಡಬಲ್ಸ್ ವಿಭಾಗದಲ್ಲಿ ಅರ್ಹತೆ ಗಿಟ್ಟಿಸಿಕೊಂಡ ಭಾರತದ 2ನೇ ಆಟಗಾರ್ತಿ ಎನಿಸಿಕೊಂಡಿದ್ದಾರೆ. ವರ್ಷದ ಮೊದಲ ಗ್ರಾಂಡ್ ಸ್ಲಾಂ ಟೂರ್ನಿಯ ಪ್ರಧಾನ ಸುತ್ತಿನಲ್ಲಿ ಭಾರತದಿಂದ ಒಟ್ಟು 4 ಆಟಗಾರರು ಕಣಕ್ಕಿಳಿಯುತ್ತಿದ್ದಾರೆ. ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸುಮಿತ್ ನಗಾಲ್, ಪುರುಷರ ಡಬಲ್ಸ್ ವಿಭಾಗದಲ್ಲಿ ರೋಹನ್ ಬೋಪಣ್ಣ, ದಿವಿಜ್ ಶರಣ್ ಕಣಕ್ಕಿಳಿಯಲಿದ್ದಾರೆ.

    ಪ್ರೇಕ್ಷಕರಿಗೆ ಪ್ರವೇಶ
    ಟೂರ್ನಿಯ ಪಂದ್ಯಗಳನ್ನು ವೀಕ್ಷಿಸಲು ಶೇ. 50 ಪ್ರೇಕ್ಷಕರಿಗೆ ಅವಕಾಶ ಲಭಿಸಲಿದೆ. ಅಂದರೆ ಮೊದಲ 8 ದಿನ ಪ್ರತಿದಿನ ಗರಿಷ್ಠ 30 ಸಾವಿರ ಪ್ರೇಕ್ಷಕರಿಗೆ ಪ್ರವೇಶ ಸಿಗಲಿದೆ. ಕ್ವಾರ್ಟರ್‌ೈನಲ್ ಹಂತದಿಂದ ಪ್ರತಿದಿನ ಗರಿಷ್ಠ 25 ಸಾವಿರ ಪ್ರೇಕ್ಷಕರಿಗೆ ಪ್ರವೇಶ ಲಭಿಸಲಿದೆ. 14 ದಿನಗಳ ಟೂರ್ನಿಯನ್ನು ಒಟ್ಟು 3.90 ಲಕ್ಷ ಜನರು ವೀಕ್ಷಿಸಲಿದ್ದಾರೆ. ಇದು ಕರೊನಾ ಕಾಲದಲ್ಲಿ ಗರಿಷ್ಠ ಪ್ರೇಕ್ಷಕರ ಪ್ರವೇಶ ಕಾಣುತ್ತಿರುವ ಕ್ರೀಡಾಕೂಟವಾಗಿದೆ.

    447 ಕೋಟಿ ರೂ. ಬಹುಮಾನ
    ಟೂರ್ನಿಯ ಒಟ್ಟು ಬಹುಮಾನ ಮೊತ್ತ 447 ಕೋಟಿ ರೂ. ಆಗಿದೆ. ಕರೊನಾದಿಂದಾಗಿ ಆರ್ಥಿಕ ಮುಗ್ಗಟ್ಟು ಇರುವ ನಡುವೆಯೂ ಕಳೆದ ವರ್ಷಕ್ಕಿಂತ ಶೇ. 12 ಬಹುಮಾನ ಮೊತ್ತ ಏರಿಸಲಾಗಿದೆ. ಪುರುಷರ ಮತ್ತು ಮಹಿಳಾ ಸಿಂಗಲ್ಸ್ ವಿಭಾಗದ ವಿಜೇತರು ತಲಾ 15.38 ಕೋಟಿ ರೂ. ಬಹುಮಾನ ಪಡೆಯಲಿದ್ದಾರೆ. ರನ್ನರ್‌ಅಪ್ ಸ್ಥಾನ ಪಡೆದವರು 8.39 ಕೋಟಿ ರೂ. ಬಹುಮಾನ ಗಳಿಸಲಿದ್ದಾರೆ. ಮೊದಲ ಸುತ್ತಿನಲ್ಲಿ ಸೋತವರಿಗೂ 55.87 ಲಕ್ಷ ರೂ. ಬಹುಮಾನ ಸಿಗಲಿದೆ. ಬಳಿಕ ಪ್ರತಿ ಪಂದ್ಯದ ಗೆಲುವಿಗೆ ಕನಿಷ್ಠ 27.93 ಲಕ್ಷ ರೂ. ಬಹುಮಾನ ಏರಿಕೆಯಾಗಲಿದೆ.

    ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸೆನ್ ಟ್ವೀಟ್‌ಗೆ ಪ್ರಧಾನಿ ಮೋದಿ ಕೊಟ್ಟ ಉತ್ತರವೇನು ಗೊತ್ತೇ?

    ಐಪಿಎಲ್ ಹೀರೋ ರಾಹುಲ್ ತೆವಾಟಿಯಾ ನಿಶ್ಚಿತಾರ್ಥ

    ಟೀಮ್ ಇಂಡಿಯಾದ ಸಭೆಯಲ್ಲಿ ರೈತರ ಬಗ್ಗೆ ಚರ್ಚೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts