ಒಂದೇ ಓವರ್​ನಲ್ಲಿ 12 ವೈಡ್​, 1 ನೋ ಬಾಲ್... ಓವರ್​ ಮುಗಿಸುವಷ್ಟರಲ್ಲಿ ಪಂದ್ಯ ಗೆಲುವು, ಇತಿಹಾಸದಲ್ಲೇ ಕಳಪೆ ದಾಖಲೆ! WCL 2025

WCL 2025
Published on

WCL 2025 : ಆಸ್ಟ್ರೇಲಿಯಾದ ಮಾಜಿ ಆಲ್‌ರೌಂಡರ್ ಜಾನ್ ಹೇಸ್ಟಿಂಗ್ಸ್ ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ (ಡಬ್ಲ್ಯೂಸಿಎಲ್) ಪಂದ್ಯದ ವೇಳೆ ಒಂದೇ ಓವರ್‌ನಲ್ಲಿ 18 ಎಸೆತಗಳನ್ನು ಎಸೆಯುವ ಮೂಲಕ ಮುಜುಗರಕ್ಕೀಡಾಗಿದ್ದಾರೆ. ಮಂಗಳವಾರ (ಜುಲೈ 29) ನಡೆದ ಪಂದ್ಯದಲ್ಲಿ ಹೇಸ್ಟಿಂಗ್ಸ್ ಈ ವಿಚಿತ್ರ ಓವರ್ ಎಸೆದರು.

ಆಸಿಸ್​ ನೀಡಿದ 75 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ 55/0 ಸ್ಕೋರ್ ಮಾಡಿತ್ತು. ಈ ವೇಳೆ ಹೇಸ್ಟಿಂಗ್ಸ್ 12 ವೈಡ್ ಮತ್ತು ಒಂದು ನೋ-ಬಾಲ್ ಎಸೆದರು. ಹೇಸ್ಟಿಂಗ್​ ತಮ್ಮ ಓವರ್ ಅನ್ನು ಪೂರ್ಣಗೊಳಿಸುವ ಮೊದಲೇ ಪಾಕಿಸ್ತಾನ ಪಂದ್ಯವನ್ನು ಗೆದ್ದುಕೊಂಡಿತು.

ಅಂದಹಾಗೆ, ಹೇಸ್ಟಿಂಗ್ಸ್ ಅವರ ಈ ಓವರ್ ಕ್ರಿಕೆಟ್​ ಇತಿಹಾಸದಲ್ಲೇ ಅತ್ಯಂತ ಮುಜುಗರದ ಓವರ್ ಎಂದು ಕ್ರೀಡಾಭಿಮಾನಿಗಳು ಬಣ್ಣಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಹ ವೈರಲ್​ ಆಗುತ್ತಿದೆ.

ಇನ್ನು ಇಂದು ನಡೆಯಬೇಕಿದ್ದ ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ಭಾರತವನ್ನು ಎದುರಿಸಬೇಕಿತ್ತು. ಆದರೆ, ಭಾರತ ತಂಡ ಪಂದ್ಯದಿಂದ ಹಿಂದೆ ಸರಿದಿದ್ದರಿಂದ, ಪಾಕಿಸ್ತಾನ ಈಗ ನೇರವಾಗಿ ಫೈನಲ್‌ಗೆ ಮುನ್ನಡೆದಿದೆ. ಫೈನಲ್‌ನಲ್ಲಿ ಸ್ಥಾನ ಪಡೆಯಲು ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ.

ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತೀಯ ಆಟಗಾರರು ಮತ್ತು ಪಂದ್ಯಾವಳಿಯ ಪ್ರಾಯೋಜಕರು ಪಾಕ್​ ವಿರುದ್ಧ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಪಾಕ್ ವಿರುದ್ಧ ಆಡುವುದಿಲ್ಲ ಎಂದು ಹೇಳಿದೆ. ಈ ಕಾರಣದಿಂದಾಗಿ ಭಾರತ-ಪಾಕಿಸ್ತಾನ ಲೀಗ್ ಹಂತದ ಪಂದ್ಯವನ್ನು ಅಧಿಕೃತವಾಗಿ ರದ್ದುಗೊಳಿಸಲಾಯಿತು. ಇದೀಗ ಸೆಮಿಫೈನಲ್​ನಿಂದ ಹಿಂದೆ ಸರಿದಿದ್ದು, ಟೂರ್ನಿಯಿಂದಲೇ ಹೊರಬಂದಿದೆ. ಈ ಮೂಲಕ ಟೀಮ್​ ಇಂಡಿಯಾ ಆಟಗಾರರು ಕ್ರಿಕೆಟ್​ಗಿಂತ ದೇಶವೇ ಮುಖ್ಯ ಎಂಬ ಸಂದೇಶವನ್ನು ರವಾನಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net