

ಸಿಡ್ನಿ: ಇತ್ತೀಚಿನ ದಿನಗಳಲ್ಲಿ ಹದಿಹರೆಯದ ಮಕ್ಕಳು ಸ್ಮಾರ್ಟ್ಫೋನ್ ಹಿಡಿಯುವುದಲ್ಲದೇ ಸಾಮಾಜಿಕ ಜಾಲತಾಣಗಳಾದ ಟಿಕ್ಟಾಕ್, ಫೇಸ್ಬುಕ್ ಹೀಗೆ ನಾನಾ ಆ್ಯಪ್ಗಳಲ್ಲಿ ಸಕ್ರಿಯರಾಗುತ್ತಿದ್ದಾರೆ. ಇದರಿಂದ ಅವರ ವಿದ್ಯಾಭ್ಯಾಸಕ್ಕೆ ಮಾತ್ರವಲ್ಲದೇ ಮನಸ್ಥಿತಿಯ ಮೇಲೂ ಭಾರೀ ಪ್ರಭಾವ ಬೀರುತ್ತದೆ ಎಂಬ ಕಾರಣವನ್ನು ಮುಂದಿಟ್ಟು, 16 ವರ್ಷದೊಳಗಿನ ಮಕ್ಕಳಿಗೆ ಸೋಷಿಯಲ್ ಮೀಡಿಯಾ ಬಳಕೆಯನ್ನು ಇದೀಗ ಆಸ್ಟ್ರೇಲಿಯಾ ಸರ್ಕಾರ ಸಂಪೂರ್ಣವಾಗಿ ನಿಷೇಧಿಸಿದೆ. ಮಸೂದೆಯನ್ನು ಅಂಗೀಕರಿಸಿದ ಸರ್ಕಾರಕ್ಕೆ ರಾಷ್ಟ್ರದ ಜನತೆಯಿಂದ ವ್ಯಾಪಕ ಪ್ರಶಂಸೆಗಳು ಹರಿದುಬರುತ್ತಿವೆ.
ಮಸೂದೆಯು ಪರವಾಗಿ 102 ಮತ್ತು ವಿರುದ್ಧವಾಗಿ 13 ಮತಗಳೊಂದಿಗೆ ಅಂಗೀಕರಿಸಲ್ಪಟ್ಟಿದೆ. ಈಗ ಸೆನೆಟ್ ಅನುಮೋದನೆಗಾಗಿ ಕಾಯುತ್ತಿದೆ. ಅಲ್ಲಿ ಅದು ಉಭಯಪಕ್ಷೀಯ ಬೆಂಬಲದೊಂದಿಗೆ ಅಂಗೀಕರಿಸುವ ನಿರೀಕ್ಷೆಯಿದೆ. ಇದು ಜಾರಿಯಾದ ತಕ್ಷಣವೇ ದಂಡವನ್ನು ವಿಧಿಸುವ ಮೊದಲು ಜಾಲತಾಣದ ಆಯಾ ಪ್ಲಾಟ್‌ಫಾರ್ಮ್‌ಗಳು ವಯಸ್ಸಿನ ಪರಿಶೀಲನಾ ವ್ಯವಸ್ಥೆಯನ್ನು ಕಾರ್ಯಗತಗೊಳಿಸಲು ಒಂದು ವರ್ಷದ ಅವಧಿಯನ್ನು ಹೊಂದಿರುತ್ತದೆ ಎಂದು ವರದಿ ಉಲ್ಲೇಖಿಸಿದೆ.
16 ವರ್ಷದೊಳಗಿನ ಮಕ್ಕಳ ಕೈಯಿಂದ ಸಾಮಾಜಿಕ ಜಾಲತಾಣವನ್ನು ದೂರವಿಡುವ ನಿಟ್ಟಿನಲ್ಲಿ ಆಸ್ಟ್ರೇಲಿಯಾ ಸರ್ಕಾರವು, ಟಿಕ್ಟಾಕ್, ಫೇಸ್ಬುಕ್, ಎಕ್ಸ್ (ಈ ಹಿಂದಿನ ಟ್ವಿಟರ್) ಬಳಕೆಗೆ ಸಂಪೂರ್ಣ ನಿಷೇಧ ಹೇರಿದೆ. ಈ ವಿಷಯವನ್ನು ಪ್ರಸ್ತಾಪಿಸಿದ ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್, ಇದು ಮುಂದಿನ ವರ್ಷದ ಕೊನೆಯಲ್ಲಿ ಕಾನೂನಿಗೆ ಸೇರ್ಪಡಲಿದೆ. ಇಲ್ಲಿಯವರೆಗೆ ಯಾವುದೇ ದೇಶವು ವಿಧಿಸದ ಕಠಿಣ ನಿಯಂತ್ರಣಗಳನ್ನು ನಾವು ಜಾರಿಗೆ ತರಲು ಚಿಂತನೆ ನಡೆಸಿದ್ದು, ಶೀಘ್ರವೇ ಇಂತಹ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು ಮಕ್ಕಳನ್ನು ಪ್ರವೇಶಿಸದಂತೆ ನಿರ್ಬಂಧಿಸಲು ಸಹಾಯ ಮಾಡಲಿದೆ. ಇಲ್ಲಿ ವಯಸ್ಸಿನ ಪರಿಶೀಲನಾ ವ್ಯವಸ್ಥೆಯನ್ನು ಹೇಗೆ ಜಾರಿಗೆ ತರಬೇಕು ಎಂಬುದರ ಕುರಿತು ಆಸ್ಟ್ರೇಲಿಯಾ ಪ್ರಯೋಗ ನಡೆಸುತ್ತಿದೆ ಎಂದು ಪ್ರಧಾನಿ ಈ ಹಿಂದೆ ತಿಳಿಸಿದ್ದರು.
“ಸಾಮಾಜಿಕ ಮಾಧ್ಯಮವು ನಮ್ಮ ಮಕ್ಕಳ ಮೇಲೆ ಭಾರೀ ಪರಿಣಾಮ ಬೀರುತ್ತಿದೆ ಹಾಗೂ ಹಾನಿ ಮಾಡುತ್ತಿದೆ. ಅತಿಯಾದ ಸೋಷಿಯಲ್ ಮೀಡಿಯಾ ಬಳಕೆಯಿಂದ ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೂ ಅಪಾಯಗಳು ಕಾಡುತ್ತಿವೆ. 14 ವರ್ಷದ ಮಕ್ಕಳ ಜೀವನದಲ್ಲಿ ಎದುರಾಗುವ ಬದಲಾವಣೆಗಳು, ಅನುಭವಗಳ ಮಧ್ಯೆ ಸೋಷಿಯಲ್ ಮೀಡಿಯಾದ ಹಾನಿಕಾರಕ ವಿಷಯಗಳು ಅವರ ಮಾನಸಿಕ ಆರೋಗ್ಯಕ್ಕೆ ತೊಂದರೆಯನ್ನು ಉಂಟು ಮಾಡಬಹುದು. ಹೀಗಾಗಿ ಈ ಎಲ್ಲಾ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು, ನಾವು ಈ ಕಾನೂನನ್ನು ಜಾರಿಗೊಳಿಸಲು ದಿಟ್ಟ ಹೆಜ್ಜೆಯಿಟ್ಟಿದ್ದೇವೆ" ಎಂದು ಪ್ರಧಾನಿ ಅಲ್ಬನೀಸ್ ಹೇಳಿದ್ದರು.
ಪೋಷಕರ ಒಪ್ಪಿಗೆ ಹೊಂದಿರುವ ಅಥವಾ ಈಗಾಗಲೇ ಖಾತೆಗಳನ್ನು ಹೊಂದಿರುವ ಮಕ್ಕಳಿಗೆ ಯಾವುದೇ ವಿನಾಯಿತಿ ಇರುವುದಿಲ್ಲ. ಮಕ್ಕಳು ಪೋಷಕರ ಹೆಸರಿನಲ್ಲಿ ಅಥವಾ ಯಾರದ್ದೂ ಹೆಸರಿನಲ್ಲಿ ಬಳಕೆ ಮಾಡಿದರೆ, ಅದು ಪೋಷಕರ ಜವಾಬ್ದಾರಿಯು ಅಲ್ಲ ಅಥವಾ ಮಕ್ಕಳ ಹೊಣೆಯೂ ಅಲ್ಲ. ಬದಲಿಗೆ ಆಯಾ ಸಾಮಾಜಿಕ ಜಾಲತಾಣದ ಹೊಣೆಯಾಗಿರಲಿದೆ. 16 ವರ್ಷದೊಳಗಿನ ಯಾವ ಮಕ್ಕಳಿಗೂ ನಿಷೇಧವನ್ನು ಮೀರಿ, ಅನುಮತಿ ನೀಡಬಾರದು. ಅಕಸ್ಮಾತ್ ಕೊಟ್ಟರೆ, ಅದಕ್ಕೆ ಆ ಸಂಸ್ಥೆಯೇ ನೇರ ಜವಾಬ್ದಾರಿ ಹೊರಲಿದೆ ಎಂದು ಪ್ರಧಾನಿ ಒತ್ತಿ ಹೇಳಿದ್ದಾರೆ,(ಏಜೆನ್ಸೀಸ್).