VIDEO | ಇಂಗ್ಲೆಂಡ್ ವಿರುದ್ಧ ಅಂತಿಮ ಟಿ20 ಪಂದ್ಯದಲ್ಲಿ ಆಸೀಸ್‌ಗೆ ಸಮಾಧಾನಕರ ಗೆಲುವು

aus vs eng
Published on

ಸೌಥಾಂಪ್ಟನ್: ಮಿಚೆಲ್ ಮಾರ್ಷ್ (39* ರನ್, 36 ಎಸೆತ, 2 ಬೌಂಡರಿ, 1 ಸಿಕ್ಸರ್) ಸಮಯೋಚಿತ ಬ್ಯಾಟಿಂಗ್ ನಿರ್ವಹಣೆಯ ನೆರವಿನಿಂದ ಆಸ್ಟ್ರೇಲಿಯಾ ತಂಡ ಆತಿಥೇಯ ಇಂಗ್ಲೆಂಡ್ ವಿರುದ್ಧದ 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ 5 ವಿಕೆಟ್‌ಗಳಿಂದ ಸಮಾಧಾನಕರ ಗೆಲುವು ದಾಖಲಿಸಿದೆ. ಈ ಜಯದೊಂದಿಗೆ ಆರನ್ ಫಿಂಚ್ ಬಳಗ ಸರಣಿ ಸೋಲಿನ ಅಂತರವನ್ನು 1-2ಕ್ಕೆ ಇಳಿಸಿಕೊಂಡಿತು. ಕರೊನಾ ಕಾಲದಲ್ಲಿ ಆಸೀಸ್‌ಗೆ ಇದು ಮೊದಲ ಗೆಲುವಾಗಿದೆ.

ರೋಸ್ ಬೌಲ್ ಮೈದಾನದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಇಂಗ್ಲೆಂಡ್ ತಂಡ, ಆಸೀಸ್ ಸಂಘಟಿತ ಬೌಲಿಂಗ್ ನಿರ್ವಹಣೆ ಎದುರು 6 ವಿಕೆಟ್‌ಗೆ 145 ರನ್ ಪೇರಿಸಲಷ್ಟೇ ಶಕ್ತವಾಯಿತು. ಪ್ರತಿಯಾಗಿ ಆಸೀಸ್ 19.3 ಓವರ್‌ಗಳಲ್ಲಿ 5 ವಿಕೆಟ್‌ಗೆ 146 ರನ್ ಪೇರಿಸಿ ಗೆಲುವು ದಾಖಲಿಸಿತು. ಈ ಜಯದೊಂದಿಗೆ ಆಸೀಸ್ ಐಸಿಸಿ ಟಿ20 ರ‌್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡರೆ, ಇಂಗ್ಲೆಂಡ್ ಸರಣಿ ಜಯದ ನಡುವೆಯೂ 2ನೇ ಸ್ಥಾನದಲ್ಲೇ ಉಳಿಯಿತು.

ಆಸೀಸ್ ತಂಡ ಉತ್ತಮ ಆರಂಭ ಪಡೆದರೂ, ಸ್ಪಿನ್ನರ್ ಆದಿಲ್ ರಶೀದ್ (21ಕ್ಕೆ 3) ದಾಳಿಗೆ ನಲುಗಿ ಮಧ್ಯಮ ಕ್ರಮಾಂಕದಲ್ಲಿ ಕುಸಿತ ಕಂಡಿತು. ಆಗ ಮಿಚೆಲ್ ಮಾರ್ಷ್ ಮತ್ತು ಆಶ್ಟನ್ ಅಗರ್ (16*) ಮುರಿಯದ 6ನೇ ವಿಕೆಟ್‌ಗೆ 46 ರನ್ ಪೇರಿಸಿ ಇನ್ನೂ 3 ಎಸೆತ ಬಾಕಿ ಇರುವಂತೆಯೇ ಗೆಲುವು ತಂದರು.

ಸರಣಿಯ ಈ ಔಪಚಾರಿಕ ಪಂದ್ಯಕ್ಕೆ ಇಂಗ್ಲೆಂಡ್ ತಂಡ ನಾಯಕ ಇವೊಯಿನ್ ಮಾರ್ಗನ್‌ಗೆ ವಿಶ್ರಾಂತಿ ನೀಡಿತ್ತು. ಇದರಿಂದ ಉಪನಾಯಕ ಮೊಯಿನ್ ಅಲಿ ತಂಡವನ್ನು ಮುನ್ನಡೆಸಿದರು. ಅತ್ತ ಆಸೀಸ್ ತಂಡ ಎಡಗೈ ಆರಂಭಿಕ ಡೇವಿಡ್ ವಾರ್ನರ್ ಮತ್ತು ವೇಗಿ ಪ್ಯಾಟ್ ಕಮ್ಮಿನ್ಸ್‌ಗೆ ವಿಶ್ರಾಂತಿ ನೀಡಿತ್ತು. ಇನ್ನು ಶುಕ್ರವಾರದಿಂದ ಮ್ಯಾಂಚೆಸ್ಟರ್‌ನಲ್ಲಿ ಉಭಯ ತಂಡಗಳ ನಡುವೆ 3 ಪಂದ್ಯಗಳ ಏಕದಿನ ಸರಣಿ ನಡೆಯಲಿದೆ.

ಇಂಗ್ಲೆಂಡ್: 6 ವಿಕೆಟ್‌ಗೆ 145 (ಬೇರ್‌ಸ್ಟೋ 55, ಮಲಾನ್ 21, ಬಿಲ್ಲಿಂಗ್ಸ್ 4, ಮೊಯಿನ್ ಅಲಿ 23, ಡೆನ್ಲಿ 29*, ಆಡಂ ಜಂಪಾ 34ಕ್ಕೆ 2, ಸ್ಟಾರ್ಕ್ 20ಕ್ಕೆ 1, ಹ್ಯಾಸಲ್‌ವುಡ್ 23ಕ್ಕೆ 1, ರಿಚರ್ಡ್‌ಸನ್ 31ಕ್ಕೆ 1), ಆಸ್ಟ್ರೇಲಿಯಾ: 19.3 ಓವರ್‌ಗಳಲ್ಲಿ 5 ವಿಕೆಟ್‌ಗೆ 146 (ವೇಡ್ 14, ಆರನ್ ಫಿಂಚ್ 39, ಸ್ಟೋಯಿನಿಸ್ 26, ಮ್ಯಾಕ್ಸ್‌ವೆಲ್ 6, ಸ್ಮಿತ್ 3, ಮಿಚೆಲ್ ಮಾರ್ಷ್ 39*, ಆಶ್ಟನ್ ಅಗರ್ 16*, ಆದಿಲ್ ರಶೀದ್ 21ಕ್ಕೆ 3, ವುಡ್ 38ಕ್ಕೆ 1, ಟಾಮ್ ಕರ‌್ರನ್ 23ಕ್ಕೆ 1). ಪಂದ್ಯಶ್ರೇಷ್ಠ: ಮಿಚೆಲ್ ಮಾರ್ಷ್, ಸರಣಿಶ್ರೇಷ್ಠ: ಜೋಸ್ ಬಟ್ಲರ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net