

ED Raid: ತಮಿಳುನಾಡು ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವ ಐ ಪೆರಿಯಸಾಮಿ ಮತ್ತು ಅವರ ಕುಟುಂಬಕ್ಕೆ ಸಂಬಂಧಿಸಿದ ಏಳು ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಶನಿವಾರ (ಆಗಸ್ಟ್ 16) ನಡೆಸಿರುವುದನ್ನು ಡಿಎಂಕೆ ಸಂಘಟನಾ ಕಾರ್ಯದರ್ಶಿ ಆರ್.ಎಸ್. ಭಾರತಿ ಟೀಕಿಸಿದ್ದಾರೆ.
ಇಡಿ ದಾಳಿಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಭಾರತಿ, ಇದು ವಿಪಕ್ಷ ನಾಯಕ ರಾಹುಲ್ ಗಾಂಧಿ ಎತ್ತಿರುವ "ಮತ ಚೋರಿ" ವಿಷಯದಿಂದ ಗಮನವನ್ನು ಬೇರೆಡೆ ಸೆಳೆಯುವ ತಂತ್ರವಾಗಿದೆ ಎಂದರು. ಡಿಎಂಕೆ ಪಕ್ಷ ಇಡಿ ಮತ್ತು ಮೋದಿಗೆ ಹೆದರುವುದಿಲ್ಲ, ಪಕ್ಷ ಈ ವಿಷಯವನ್ನು ಕಾನೂನುಬದ್ಧವಾಗಿ ಎದುರಿಸಲಿದೆ ಎಂದರು.
ಬಿಜೆಪಿ ಸ್ವಾಯತ್ತ ಸಂಸ್ಥೆಗಳನ್ನು ತನ್ನ ಚುನಾವಣಾ ಸಾಧನಗಳಾಗಿ ಬಳಸುತ್ತಿದೆ, ಇತರರ ಮೇಲೆ ಅಕ್ರಮ ಹಣ ವರ್ಗಾವಣೆ ಆರೋಪ ಮಾಡುತ್ತಿದ್ದ ಅದೇ ಬಿಜೆಪಿ, ಮತ ಕಳ್ಳತನದ ರಾಜಕೀಯ ನಡೆಸುತ್ತಿದೆ ಎಂದು ಆರೋಪಿಸಿದರು.
ಚುನಾವಣಾ ಆಯೋಗವನ್ನು ಬಳಸಿಕೊಂಡು ಬಿಜೆಪಿ ವಂಚನೆಯಲ್ಲಿ ತೊಡಗಿರುವುದು ಬಹಿರಂಗವಾಗಿದ್ದು, ಇದರಿಂದ ದೇಶವೇ ಆಘಾತಕ್ಕೊಳಗಾಗಿದೆ ಎಂದರು.
ಡಿಎಂಕೆ ಅಧಿಕಾರಕ್ಕೆ ಬಂದ ನಂತರ, ನಮ್ಮ ನಾಯಕರ ವಿರುದ್ಧ ದಾಖಲಾಗಿರುವ ಪ್ರಕರಣಗಳಲ್ಲಿ ಜಾರಿ ನಿರ್ದೇಶನಾಲಯ ಆಸಕ್ತಿ ತೋರಿಸುತ್ತಿರುವುದು ರಾಜಕೀಯ ದ್ವೇಶದಿಂದ ಎನ್ನುವುದನ್ನು ಸಣ್ಣ ಮಗುವೂ ಅರ್ಥ ಮಾಡಿಕೊಳ್ಳುತ್ತದೆ ಎಂದರು.
2006–11ರ ಡಿಎಂಕೆ ಆಡಳಿತದಲ್ಲಿ ಕಂದಾಯ, ಕಾನೂನು, ಕಾರಾಗೃಹ ಮತ್ತು ವಸತಿ ಸಚಿವರಾಗಿದ್ದಾಗ ಪೆರಿಯಸಾಮಿ 2.01 ಕೋಟಿ ರೂ.ಗಳ ಅಕ್ರಮ ಆಸ್ತಿ ಗಳಿಸಿದ್ದಾರೆ ಎಂದು ಆರೋಪಿಸಿ ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ನಿರ್ದೇಶನಾಲಯ (ಡಿವಿಎಸಿ) 2012 ರಲ್ಲಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದಾಳಿಗಳು ನಡೆದಿವೆ. ಮೂಲಗಳ ಪ್ರಕಾರ, ಪೆರಿಯಸಾಮಿ ಅವರ ಪತ್ನಿ, ಮಗ ಮತ್ತು ಪಳನಿ ಕ್ಷೇತ್ರದ ಹಾಲಿ ಶಾಸಕ ಐಪಿ ಸೆಂಥಿಲ್‌ಕುಮಾರ್, ಮತ್ತೊಬ್ಬ ಮಗ ಮತ್ತು ಮಗಳ ಹೆಸರನ್ನೂ ಡಿವಿಎಸಿ(Directorate of Vigilance and Anti-Corruption) ಆರೋಪಪಟ್ಟಿಯಲ್ಲಿ ಹೆಸರಿಸಲಾಗಿದೆ.(ಏಜೆನ್ಸೀಸ್)