ಮಹಿಳೆ ಸಹಿತ ಮಕ್ಕಳ ಮತಾಂತರಕ್ಕೆ ಯತ್ನ : ಕೇರಳದಿಂದ ಆಗಮಿಸಿದಾತನಿಂದ ಕೃತ್ಯ : ಆಸ್ತಿ, ಹಣದ ಆಮಿಷ

Published on

ಕಾಸರಗೋಡು: ಪೆರ್ಲ ಸಮೀಪದ ಬೆದ್ರಂಪಳ್ಳದಲ್ಲಿ ಹಿಂದು ಗೃಹಿಣಿ ಸಹಿತ ಇಬ್ಬರು ಮಕ್ಕಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲು ಪ್ರಯತ್ನಿಸಿದ ಘಟನೆಯೊಂದು ಬೆಳಕಿಗೆ ಬಂದಿದೆ.

ಪರಿಶಿಷ್ಟ ಪಂಗಡದ ಮಹಿಳೆಯೊಬ್ಬರನ್ನು ಎರಡು ಮಕ್ಕಳ ಸಹಿತ ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸಲು ಮಲಯಾಳಿ ವ್ಯಕ್ತಿ ನಡೆಸಿದ ಪ್ರಯತ್ನ ಪೊಲೀಸರ ಮಧ್ಯಸ್ಥಿಕೆಯಿಂದ ವಿಫಲಗೊಂಡಿದೆ. ಕೇರಳದಿಂದ ರಬ್ಬರ್ ಟ್ಯಾಪಿಂಗ್ ಕೆಲಸಕ್ಕಾಗಿ ಆಗಮಿಸಿದ್ದ ವ್ಯಕ್ತಿಯೊಬ್ಬ ಈ ಮಹಿಳೆಯ ಬಡತನವನ್ನು ಬಂಡವಾಳವಾಗಿಸಿಕೊಂಡು ಆಕೆಯೊಂದಿಗೆ ಪ್ರೀತಿಯ ಸೋಗಿನಲ್ಲಿ ಆಸ್ತಿ, ಹಣದ ಆಮಿಷವೊಡ್ಡಿ ಮತಾಂತರಕ್ಕೆ ಯತ್ನಿಸಿದ್ದಾನೆ.

ಮಹಿಳೆ ತನ್ನ ಗಂಡ, ಕುಟುಂಬದಿಂದ ದೂರವಾಗಿ ಇಬ್ಬರು ಮಕ್ಕಳೊಂದಿಗೆ ನಾಪತ್ತೆಯಾಗಿರುವ ಬಗ್ಗೆ ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬದಿಯಡ್ಕ ಠಾಣೆ ಪೊಲೀಸರು ಮಹಿಳೆ, ಮಕ್ಕಳನ್ನು ಶಿವಮೊಗ್ಗದ ಸಮೀಪದಿಂದ ಪತ್ತೆ ಹಚ್ಚಿ ಕರೆ ತಂದಿದ್ದರು. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಮಹಿಳೆ ತಮ್ಮ ಮನೆಯವರೊಂದಿಗೆ ತೆರಳುವ ಇಚ್ಛೆ ವ್ಯಕ್ತಪಡಿಸಿರುವುದರಿಂದ ಪ್ರಕರಣ ತಾತ್ಕಾಲಿಕ ಸುಖಾಂತ್ಯ ಕಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net