ಹಿಂದೂ ಯುವಕ-ಮುಸ್ಲಿಂ ಯುವತಿ ಊಟಕ್ಕೆ ಹೋಗಿ ಬರುವ ವೇಳೆ ಅಮಾನುಷವಾಗಿ ಹಲ್ಲೆ: ರಕ್ಷಿಸಲು ಬಂದ ದಾರಿಹೋಕರಿಗೆ ಚೂರಿ ಇರಿತ

indhor hindu muslim
Published on

ಇಂದೋರ್: ಹಿಂದೂ ಯುವಕನ ಜೊತೆ ಮುಸ್ಲಿಂ ಹುಡುಗಿಯೊಬ್ಬಳು ರಾತ್ರಿ ಊಟಕ್ಕೆ ಹೋಗಿ ವಾಪಾಸ್‌ ಬರುವಾಗ ಯುವಕರ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ನಡೆದಿದೆ.

ಮುಸ್ಲಿಂ ಹುಡುಗಿ ಹಾಗೂ ಆಕೆಯ ಸ್ನೇಹಿತ ಗುರುವಾರ ರಾತ್ರಿ ರೆಸ್ಟೋರೆಂಟ್​ನಲ್ಲಿ ಊಟ ಮಾಡಿ ಹೊರಬರುವ ವೇಳೆ ಯುವಕರ ಗುಂಪೊಂದು ಅವರನ್ನು ಹಿಂಬಾಲಿಸಿ ರಸ್ತೆಯ ಮಧ್ಯೆ ತಡೆದಿದೆ. ಈ ವೇಳೆ ಮುಸ್ಲಿಂ ಹುಡುಗಿಗೆ, ನೀವು ಹಿಜಾಬ್ ಧರಿಸಿದ್ದೀರಿ, ಆದರೆ ನೀವು ಇಸ್ಲಾಂ ಧರ್ಮದ ಕಾನೂನನ್ನು ಅನುಸರಿಸುತ್ತಿಲ್ಲ. ಮುಸ್ಲಿಮೇತರರೊಂದಿಗೆ ಹೊರಗೆ ಊಟಕ್ಕೆ ಹೋಗುವ ಬದಲು ಆನ್‌ಲೈನ್‌ನಲ್ಲಿಯೇ ಆರ್ಡರ್ ಮಾಡಬಹುದಾಗಿತ್ತು ಎಂದಿದ್ದಾರೆ.

ಆಗ ಹುಡುಗಿಯು, ತಾನು ಊಟಕ್ಕೆ ಹೋಗಲು ತನ್ನ ಮನೆಯಲ್ಲಿ ಪೋಷಕರ ಅನುಮತಿ ಇದೆ ಎಂದು ಹೇಳಿದ್ದು, ಹೀಗೆ ಮಾತಿಗೆ ಮಾತು ಬೆಳೆದು ಹಿಂದೂ ಯುವಕನಿಗೆ ಥಳಿಸಲು ಯುವಕರ ಗುಂಪು ಮುಂದಾಗಿದೆ. ಈ ವೇಳೆ ದಾರಿಹೋಕರು ಆತನನ್ನು ಬಿಡಿಸಲು ಮುಂದಾದಾಗ ಯುವಕರ ಗುಂಪಿನಲ್ಲಿನ ಓರ್ವ ವ್ಯಕ್ತಿಯು ದಾರಿಹೋಕರಿಬ್ಬರಿಗೆ ಚಾಕುವಿನಿಂದ ಇರಿದಿದ್ದಾನೆ.

ಇನ್ನು, ಘಟನೆಯ ಕುರಿತು ಪೊಲೀಸರು ಪ್ರಕರಣ ದಾಖಲಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿ ಉಳಿದವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net