ಎಟಿಪಿ ಯಂತ್ರಗಳ ಸೇವೆ ಸ್ಥಗಿತ

atp
Published on

ಬಿ.ರಾಘವೇಂದ್ರ ಪೈ ಗಂಗೊಳ್ಳಿ ಕುಂದಾಪುರ

ಮೆಸ್ಕಾಂ ವ್ಯಾಪ್ತಿಯ ವಿಭಾಗಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಕಾರ್ಯಾಚರಿಸುತ್ತಿದ್ದ ಎಟಿಪಿ (ಎನಿಟೈಮ್ ಪೇಮೆಂಟ್) ಯಂತ್ರಗಳ ಸೇವೆ ಮಂಗಳವಾರದಿಂದ ಸ್ಥಗಿತಗೊಂಡಿದೆ. ಸೇವೆ ಗುತ್ತಿಗೆ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಎಟಿಪಿ ಸೇವೆ ಸ್ಥಗಿತಗೊಳಿಸಲಾಗಿದೆ.

ಮೆಸ್ಕಾಂ ಉಪವಿಭಾಗಾಧಿಕಾರಿ ಕಚೇರಿ, ವಿಭಾಗೀಯ ಕಚೇರಿಗಳಲ್ಲಿ ಕಾರ್ಯಾಚರಿಸುತ್ತಿದ್ದ ಎಟಿಪಿ ಸೇವೆ ಖಾಸಗಿ ಕಂಪನಿ ಸಹಯೋಗದೊಂದಿಗೆ 15 ವರ್ಷಗಳಿಂದ ನಡೆದುಕೊಂಡು ಬಂದಿತ್ತು. ಬೆಂಗಳೂರಿನ ಇನ್ಫಿನಿಟಿ ಸೊಲ್ಯೂಶನ್ ಸಂಸ್ಥೆ ಕಾರ್ಯಾಚರಣೆ ನಡೆಸುತ್ತಿತ್ತು. ಮೆಸ್ಕಾಂ ಕಚೇರಿಗೆ ತೆರಳಿ ಎಟಿಪಿ ಮೂಲಕ ನೇರ ಪಾವತಿಗೆ ಇದು ಅನುಕೂಲವಾಗುತ್ತಿತ್ತು. ದಿನದ 24 ಗಂಟೆ ಸೇವೆ ಅವಕಾಶ ಇದರಲ್ಲಿದೆ. ಅಲ್ಲದೆ ಎಟಿಪಿ ಆಪರೇಟರ್‌ಗಳ ಮೂಲಕವೂ ಬಿಲ್ ಪಾವತಿಸಬಹುದಾಗಿತ್ತು. ಬಿಲ್ ಪಾವತಿ ಮೇಲಿನ ಶುಲ್ಕ ಹೆಚ್ಚಳದ ಕಾರಣಕ್ಕೆ ಮತ್ತು ಎಟಿಪಿ ಮೂಲಕ ಬಿಲ್ ಪಾವತಿ ಮಾಡುವ ಗ್ರಾಹಕರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿರುವುದರಿಂದ ಮೆಸ್ಕಾಂ ಎಟಿಪಿ ಸೇವೆ ಕೊನೆಗಾಣಿಸುವ ತೀರ್ಮಾನಕ್ಕೆ ಬಂದಿದೆ ಎಂದು ಹೇಳಲಾಗುತ್ತಿದೆ.

ಬಿಲ್ ಪಾವತಿಗೆ ಬೇಕಾದಂತಹ ಹತ್ತು ಹಲವು ವ್ಯವಸ್ಥೆ ಇರುವುದರಿಂದ ಸದ್ಯಕ್ಕೆ ಎಟಿಪಿ ಅಗತ್ಯತೆ ಅಷ್ಟೊಂದಿಲ್ಲ. ಬಿಲ್ ಪಾವತಿಸಲು ಮೆಸ್ಕಾಂ ವಿಭಾಗೀಯ ಕಚೇರಿಗೆ ಬರುವವರ ಸಂಖ್ಯೆ ಕಡಿಮೆಯಾಗಿದೆ. ಬ್ಯಾಂಕ್, ಅಂಚೆ ಕಚೇರಿ, ಕ್ಯೂಆರ್ ಕೋಡ್, ಮೊಬೈಲ್ ಆ್ಯಪ್ ಸೇರಿದಂತೆ ಇನ್ನಿತರ ಹತ್ತು ಹಲವು ಕ್ರಮಗಳಿಂದ ಬಿಲ್ ಪಾವತಿ ನಡೆಯುತ್ತಿರುವುದರಿಂದ ಮೆಸ್ಕಾಂ ಎಟಿಪಿ ಸೇವೆ ಸ್ಥಗಿತಗೊಳಿಸುವ ನಿರ್ಧಾರ ತಳೆದಿದೆ ಎನ್ನಲಾಗಿದೆ.

ಖಾಸಗಿ ಕಂಪನಿ ಎಟಿಪಿ ಯಂತ್ರದ ನಿರ್ವಹಣೆ ಜವಾಬ್ದಾರಿ ಹೊತ್ತಿರುವುದಲ್ಲದೆ ಅದಕ್ಕೆ ಸಿಬ್ಬಂದಿ ನಿಯೋಜನೆ ಕೂಡ ಮಾಡಿದೆ. ಎಟಿಪಿ ಯಂತ್ರದ ಸೇವೆ ಸ್ಥಗಿತಗೊಂಡಿರುವುದರಿಂದ ಅದಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿ ಭವಿಷ್ಯ ಡೋಲಾಯಮಾನವಾಗಿದೆ.

ಎಟಿಪಿ ಯಂತ್ರ ಸೇವೆ ಸ್ಥಗಿತಗೊಳ್ಳುವುದರಿಂದ ಗ್ರಾಹಕರಿಗೆ ತೊಂದರೆಯಾಗದು. ಸೆಕ್ಷನ್ ಆಫೀಸ್ ಕೌಂಟರ್ ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದು, ಕೌಂಟರ್‌ಗಳಲ್ಲಿ ಗ್ರಾಹಕರು ಬಿಲ್ ಪಾವತಿಸಬಹುದು. ಬಿಲ್ ಪಾವತಿಗೆ ಡಿಜಿಟಲ್ ವ್ಯವಸ್ಥೆ ಹೆಚ್ಚು ಅನುಕೂಲತೆ ಸೃಷ್ಟಿಸಿರುವುದರಿಂದ ಗ್ರಾಹಕರಿಗೆ ಇದರಿಂದ ಯಾವುದೇ ತೊಂದರೆಯಾಗುವುದಿಲ್ಲ. -ಹರೀಶ್ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ತಲ್ಲೂರು https://www.vijayavani.net/shri-satyanarayana-puja https://www.vijayavani.net/handover-of-vatsalya-house

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net