

ಮಖಚ್ಕಲಾ: ರಷ್ಯಾದಲ್ಲಿ ಭೀಕರ ದುರಂತವೊಂದು ಸಂಭವಿಸಿದ್ದು, ಪೆಟ್ರೋಲ್ ಬಂಕ್ ಸ್ಫೋಟಗೊಂಡ ಪರಿಣಾಮ ಹಲವು ಮಕ್ಕಳು ಸೇರಿದಂತೆ ಕನಿಷ್ಠ 33 ಜನರು ಮೃತಪಟ್ಟಿರುವ ಘಟನೆ ಮಾಸ್ಕೋದಿಂದ 1,600 ಕಿಲೋಮೀಟರ್ ದೂರದಲ್ಲಿರುವ ಮಖಚ್ಕಲಾದಲ್ಲಿ ನಡೆದಿದೆ. .
ಈ ಘಟನೆಯಲ್ಲಿ ಹಲವಾರು ಮಂದಿ ಗಾಯಗೊಂಡಿದ್ದು, ಸೋಮವಾರ ಮಧ್ಯರಾತ್ರಿ ಈ ಘಟನೆ ನಡೆದಿದೆ. ಕ್ಯಾಸ್ಪಿಯನ್ ಸಮುದ್ರದ ತೀರದಲ್ಲಿರುವ ಈ ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಕಾರ್ ಸರ್ವಿಸಿಂಗ್ ಸೆಂಟರ್ನಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದ್ದು, ನಂತರ ಬೆಂಕಿಯು ಅನಿಲ ತುಂಬುವ ಟ್ಯಾಂಕ್ನತ್ತ ಹರಡಿ ಭಾರೀ ಸ್ಫೋಟ ಸಂಭವಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಘಟನೆಯಿಂದಾಗಿ ಸುತ್ತಮುತ್ತಲಿನ ಪ್ರದೇಶಗಳಿಗೂ ಬೆಂಕಿ ವ್ಯಾಪಿಸಿದ್ದು, ಅಗ್ನಿಶಾಮಕ ದಳ ಮತ್ತು ಪೊಲೀಸರು ಅಪಘಾತದ ಬಗ್ಗೆ ತಕ್ಷಣ ಸ್ಪಂದಿಸಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ. ಸುಮಾರು 260 ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿಯನ್ನು ನಿಯಂತ್ರಿಸಲು ಪ್ರಯತ್ನಿಸಿದ್ದು, ಹಲವಾರು ಕಾರುಗಳು ಬೆಂಕಿಗೆ ಆಹುತಿಯಾಗಿವೆ. ಅಲ್ಲದೇ ಹಲವಾರು ಮನೆಗಳು ಕುಸಿದು ಬಿದ್ದಿವೆ.
ಈ ಕುರಿತು ಪ್ರತ್ಯಕ್ಷದರ್ಶಿಗಳು ಮಾತನಾಡಿದ್ದು, ಬೆಂಕಿ ಏಕಕಾಲದಲ್ಲಿ 600 ಚದರ ಮೀಟರ್ ಪ್ರದೇಶದಲ್ಲಿ ವ್ಯಾಪಿಸಿದೆ. ಸ್ಫೋಟದ ನಂತರ ಎಲ್ಲವೂ ನಮ್ಮ ತಲೆಯ ಮೇಲೆ ಹಲವಾರು ವಸ್ತುಗಳು ಬಿದ್ದವು. ಬಳಿಕ ಏನನ್ನೂ ನೋಡಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ. ಆದರೆ, ಕಾರನ್ನು ದುರಸ್ತಿ ಮಾಡುತ್ತಿದ್ದಾಗ ಬೆಂಕಿ ಕಾಣಿಸಿಕೊಂಡು ಎದುರಿನ ಫಿಲ್ಲಿಂಗ್ ಸ್ಟೇಷನ್ಗೆ ವ್ಯಾಪಿಸಿದೆ ಎಂದು ರಷ್ಯಾದ ತನಿಖಾ ಸಮಿತಿ ತಿಳಿಸಿದೆ. ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.(ಏಜೆನ್ಸೀಸ್)