

ಏಪ್ರಿಲ್ 15ರ ವೇಳೆಗೆ ಕರೊನಾ ಅಂತ್ಯ: ಇದೀಗ ವಿಶ್ವವನ್ನೇ ಕರೊನಾ ಎಂಬ ಪೈಶಾಚಿಕ ಮಹಾಮಾರಿ ಆವರಿಸಿದೆ. ಚೀನಾ ಮಾಡಿದ ಸ್ವಯಂಕೃತ ಅಪರಾಧ ತನ್ನನ್ನೇ ಮೊದಲು ಆವರಿಸಿಕೊಂಡು ವಿಶ್ವವನ್ನು ಕಾಡುತ್ತಿದೆ. ಅರುಣಾಚಲಪ್ರದೇಶದ ಮೇಲೆ ಕಣ್ಣು ಹಾಕಿ ಮಾನಸ ಸರೋವರವನ್ನು ಹಾಳುಗೆಡುವಿದ ತಪ್ಪಿಗೆ ಚೀನಾ ತಕ್ಕ ಶಿಕ್ಷೆ ಅನುಭವಿಸಲಿದೆ. ಭಾರತಕ್ಕೂ ರೋಗದ ಭೀತಿ ತಟ್ಟಿದೆಯಾದರೂ ಚೀನಾ, ಇಟಲಿ, ಬ್ರಿಟನ್ ಬಾಧನೆಗೆ ಒಳಗಾಗಿರುವಷ್ಟು ಇಲ್ಲ. ಕಾರಣ ಭಾರತದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೈಗೊಂಡ ಮುನ್ನೆಚ್ಚರಿಕಾ ಕ್ರಮಗಳು. ಇದಕ್ಕೆ ಅತ್ತ ಮೋದಿ ಸರ್ಕಾರಕ್ಕೆ, ಇತ್ತ ಯಡಿಯೂರಪ್ಪ ಸರ್ಕಾರಕ್ಕೆ ಅಭಿನಂದನೆ ಸಲ್ಲಲೇಬೇಕು. ಆರ್ಥಿಕ ಹಿಂಜರಿತಕ್ಕೆ ಕರೊನಾ ಯಾವ ರೀತಿಯಲ್ಲೂ ಕಾರಣವಲ್ಲ. ಆಗಲೇ ಹೇಳಿದಂತೆ, ಧರ್ಮ ಬಿಟ್ಟು ನಡೆಯುವವರಿಗೆ ಉಳಿಗಾಲವಿಲ್ಲ. ದೇಶಕ್ಕೆ ಈ ಮಹಾಮಾರಿಯಿಂದ ಬಿಡುಗಡೆ ಸಿಕ್ಕು ಒಳ್ಳೆಯದಾಗಲಿ ಎಂದು ಮನೆಯಲ್ಲೆ ಸೂರ್ಯನಾರಾಯಣನನ್ನು ನಮಿಸಿ, ಸೂರ್ಯ ನಮಸ್ಕಾರ ಮಾಡಿ, ರೋಗದಿಂದ ಬಳಲುತ್ತಿರುವವರಿಗೆ ಆರೋಗ್ಯ ನೀಡು ಎಂದು ಪ್ರಾರ್ಥಿಸಿ.
ಮಾ. 29ರಿಂದ ರೋಗದ ತೀವ್ರತೆ ಇಳಿಮುಖವಾಗುತ್ತ ಸಾಗುತ್ತದೆ. ಏ. 15ರ ವೇಳೆಗೆ ಬಹುತೇಕ ನಿರಾಳವಾಗಿರುತ್ತದೆ. ಗ್ರಹಗಳ ಚಲನೆಯನ್ನು ಗಮನಿಸಿದರೆ ಮುಂದೆಯೂ ಭಾರತಕ್ಕೆ ಹೆಚ್ಚಿನ ಅಪಾಯವಿಲ್ಲ. ಜೂನ್ ಅಂತ್ಯದವರೆಗೂ ವಿದೇಶಕ್ಕೆ ಪ್ರಯಾಣ ಹಾಗೂ ಆಗಮನವನ್ನು ಸಂಪೂರ್ಣ ನಿರ್ಬಂಧಿಸಿದರೆ ಒಳ್ಳೆಯದು. ಸರ್ಕಾರದ ಪ್ರಯತ್ನಕ್ಕೆ ಪ್ರಜೆಗಳು ಸಂಪೂರ್ಣ ಬೆಂಬಲ ನೀಡಿದರೆ ಮಾತ್ರ ಇದು ಸಾಧ್ಯ.
ಆರ್ಥಿಕ ಸಂಕಷ್ಟ ನಿವಾರಣೆ: ಪ್ರಜೆಗಳಿಗೆ ಅನಾರೋಗ್ಯದ ಜತೆಗೆ ಇದೀಗ ದೇಶದ ಆರ್ಥಿಕ ಪರಿಸ್ಥಿತಿ ಮೇಲೆಯೂ ಅಪಾಯ ಉಂಟಾಗಿದೆ. ಆರು ವರ್ಷದಲ್ಲಿ ಯಾವುದೇ ಹಗರಣ, ಕಳಂಕ ಇಲ್ಲದೆ ಆಡಳಿತ ನಡೆಸಿದ್ದರೂ ಇದರ ಪರಿಣಾಮವಾಗಿ ಕಳಂಕ ಪ್ರಧಾನಿಗೆ ಅಂಟಿಕೊಳ್ಳುತ್ತಿದೆ. ಮಾ.29ರಿಂದ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಆರಂಭವಾಗುತ್ತದೆ.ಹೇರಳವಾಗಿರುವ ಖನಿಜ ಸಂಪತ್ತು ನಮ್ಮ ರಾಷ್ಟ್ರದ ಶ್ರೀಮಂತಿಕೆ ಹೆಚ್ಚಿಸಲಿದೆ.
ಮಾ.29ರಿಂದ ಜೂ.29ರವರೆಗೆ ಗುರು ಮಕರಕ್ಕೆ ಮುಂದೆ ಹೆಜ್ಜೆ ಇಟ್ಟರೆ, ಜೂ.30ರಿಂದ ನ.19ರವರೆಗೆ ಧನುರ್ ರಾಶಿಗೆ ಹಿಂದಡಿ ಇಡುತ್ತಾನೆ, ನ.20ರಿಂದ ಏ.21ರವರೆಗೆ ಮತ್ತೆ ಮಕರಕ್ಕೆ ಮುಂದಡಿ, ಏ.22ರಿಂದ ಮತ್ತೊಮ್ಮೆ ಮುಂದಕ್ಕೆ ಕುಂಭ ರಾಶಿಗೆ ಪ್ರಯಾಣ ಬೆಳೆಸುತ್ತಾನೆ. ಹೀಗೆ ಒಂದೇ ವರ್ಷದಲ್ಲಿ ಗುರು ನಾಲ್ಕು ಬಾರಿ ಸ್ಥಾನ ಪಲ್ಲಟ ಮಾಡುವ ‘ಅತಿಚಾರ ಪ್ರವೇಶ’ದ ಕಾರಣಕ್ಕೆ ಆರ್ಥಿಕತೆ ಸುಧಾರಿಸುತ್ತದೆ. ಜಿಎಸ್ಟಿ ಸೇರಿದಂತೆ ಆರ್ಥಿಕ ಸುಧಾರಣೆಗಳು ಫಲ ನೀಡಲು ಆರಂಭಿಸುತ್ತವೆ. ಜೂನ್ ವೇಳೆಗೆ ಆರ್ಥಿಕತೆ ಬಹುತೇಕ ಸುಧಾರಿಸಿರುತ್ತದೆ. ಆ ವೇಳೆಗೆ ಹಣಕಾಸು ಖಾತೆ ನಿರ್ವಹಿಸುವವರು ಹಾಗೂ ಆ ತಂಡದಲ್ಲಿರುವವರು, ರಕ್ಷಣಾ ಖಾತೆ ನಿರ್ವಹಿಸುವವರ ಬದಲಾವಣೆಯೂ ಆಗುವ ಸಾಧ್ಯತೆಯೂ ಇದೆ. ಆಗಸ್ಟ್ನಿಂದ ನವೆಂಬರ್ ವೇಳೆಗೆ ಕೆಲವರನ್ನು ಸಂಪುಟದಿಂದ ಕೈಬಿಟ್ಟು ಕೆಲವರನ್ನು ಸೇರಿಸಿಕೊಳ್ಳುವ ಸಾಧ್ಯತೆಯಿದೆ.
ಇದೇ ವೇಳೆಗೆ ಗುರು, ಶನಿ, ಅಂಗಾರಕ ಒಟ್ಟಾಗಿ ದೇಶಗಳ ನಡುವೆ ವೈರತ್ವ ಉಂಟಾಗುವ, ಯುದ್ಧಭೀತಿ ಸೃಷ್ಟಿಯಾಗುವ ಆತಂಕವೂ ಇದೆ. ಆದರೆ ಅಂತಿಮ ಜಯ ನಮ್ಮದೇ ಆಗಲಿದೆ. ಈ ಹಿಂದೆಯೇ ಅನೇಕ ಬಾರಿ ಹೇಳಿರುವಂತೆ, ಸರ್ಕಾರ ಎಂದಿಗೂ ನ್ಯಾಯಾಂಗ ಮತ್ತು ಹಣಕಾಸು ಕ್ಷೇತ್ರದಲ್ಲಿ (ಆರ್ಬಿಐ) ಮಧ್ಯಪ್ರವೇಶ ಮಾಡುವ ದುಸ್ಸಾಹಸ ಮಾಡಬಾರದು. ಆರ್ಬಿಐಗೆ ಕೈ ಹಾಕಿದ್ದರಿಂದ ಈಗ ಆಗಿರುವ ಅಪಾಯ ಕಣ್ಣಮುಂದೆಯೇ ಇದೆ. ಮೋಸ ಮಾಡಿ ದೇಶ ಬಿಟ್ಟು ಓಡಿಹೋದವರ ಅಪಾರ ಸಂಪತ್ತನ್ನು ಕೇಂದ್ರ ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳುವುದರ ಮೂಲಕವೂ ಆರ್ಥಿಕತೆಗೆ ಬಲ ದೊರಕುತ್ತದೆ.
ಉತ್ತರದಲ್ಲಿ ಉತ್ತಮ ಕೃಷಿ: ಉತ್ತರ ಭಾರತದಲ್ಲಿ ಈ ಸಂವತ್ಸರದಲ್ಲಿ ಉತ್ತಮ ಮಳೆಯಾಗಿ ಗೋಧಿ, ಜೋಳ, ಕಬ್ಬು ಬೆಳೆ, ಧಾನ್ಯಗಳೂ ಉತ್ತಮ ಫಲ ನೀಡುತ್ತದೆ. ಗುಜರಾತ್ ಭಾಗದಲ್ಲಿ ಉತ್ತಮ ಮಳೆ ಆಗುತ್ತದೆ. ಬೆಳ್ಳಿ- ಬಂಗಾರದ ಬೆಲೆಯಲ್ಲಿ ಅಪಾರ ಇಳಿಮುಖವಾಗಿ ಅನೇಕ ಉದ್ಯಮಗಳು ಮುಚ್ಚುವ ಆತಂಕವಿದೆ. ಪತ್ರಿಕೋದ್ಯಮ ಸೇರಿದಂತೆ ಬರವಣಿಗೆಯ ಉದ್ಯೋಗದಲ್ಲಿರುವವರು, ಸಂಶೋಧನಾ ಕ್ಷೇತ್ರದಲ್ಲಿರುವವರಿಗೆ ಉತ್ತಮ ಕೀರ್ತಿ ಸಂಪಾದನೆ ಮಾಡುವ ಅವಕಾಶವಿದೆ.
ಐದು ಸಂವತ್ಸರದೊಳಗೆ ಭಾರತ ವಿಶ್ವಗುರು: ಇದೀಗ ಜಾಗತಿಕ ಮಟ್ಟದಲ್ಲಿ ಅಮೆರಿಕ ಹಾಗೂ ಚೀನಾ ನಡುವೆ ಪೈಪೋಟಿ ನಡೆಯುತ್ತಿದೆ. ಚೀನಾದಲ್ಲಿ ಉತ್ತಮ ಜ್ಞಾನವಿದ್ದರೂ ಅವರ ಅಹಂಕಾರದಿಂದಾಗಿ ಅವನತಿಯೆಡೆಗೆ ಸಾಗುತ್ತಿದ್ದಾರೆ. ಧಾರ್ವಿುಕ ನಂಬಿಕೆ ಇಲ್ಲದ ಹೊರತಾಗಿಯೂ ಮಾನಸ ಸರೋವರ, ಕೈಲಾಸ ಪರ್ವತವನ್ನೂ ತಮ್ಮ ವಶದಲ್ಲಿಟ್ಟುಕೊಂಡಿದ್ದಾರೆ. ಭಾರತದಿಂದ ವಿವಿಧ ದೇಶಗಳಿಗೆ ವಲಸೆ ಹೋಗಿರುವ ಅನೇಕ ಬುದ್ಧಿವಂತ, ಜ್ಞಾನಿಗಳು ಮುಂದಿನ ಐದು ಸಂವತ್ಸರದೊಳಗೆ ಸ್ವಯಂಪ್ರೇರಣೆಯಿಂದ ವಾಪಸಾಗುತ್ತಾರೆ. ಮೋದಿಯವರ ಕೈ ಬಲಪಡಿಸುತ್ತಾರೆ. ಗಾಣಗಾಪುರದ ದತ್ತ ದೇವರ ಕೃಪೆಯು ಮೋದಿಯವರಿಗೆ ಸಿಕ್ಕಿ ಭಾರತ 2023ರಿಂದ 2025ರ ಅವಧಿಯಲ್ಲಿ ವಿಶ್ವಗುರುವಾಗಲಿದೆ. ಪ್ರಧಾನಿಯವರು ಒಮ್ಮೆ ಕಲಬುರಗಿ ಜಿಲ್ಲೆಯಲ್ಲಿರುವ ಶ್ರೀ ಕ್ಷೇತ್ರ ಗಾಣಗಾಪುರಕ್ಕೆ ಭೇಟಿ ನೀಡಿ ದತ್ತಾತ್ರೇಯ ದೇವರ ಆಶೀರ್ವಾದ ಪಡೆಯಬೇಕು ಎಂಬುದು, ದೇಶದ ಹಿತದೃಷ್ಟಿಯಿಂದ ನನ್ನ ಕಳಕಳಿಯ ಸಲಹೆ. ಅದೇ ರೀತಿ ಇಡೀ ವಿಶ್ವದಲ್ಲೆ ಎಲ್ಲೂ ಇಲ್ಲದಂತಹ ಇಡಗುಂಜಿ ಮಹಾಗಣಪತಿಯ ಕೈನಲ್ಲಿರುವ ಲೇಖನಿ ಪ್ರಧಾನಿಯವರ ಹಾಗೂ ದೇಶದ ಭವಿಷ್ಯವನ್ನೆ ಬದಲಿಸಬಲ್ಲದು. ಕೆಟ್ಟ ಅಧ್ಯಾಯಗಳನ್ನು ಸುಃಸ್ವಪ್ನದಲ್ಲಿ ಕಳೆದು ಸುಖಶಾಂತಿ ನೀಡುತ್ತಾನೆ. ಅಲ್ಲಿಗೂ ಪ್ರಧಾನಿ ಒಮ್ಮೆ ಭೇಟಿ ನೀಡಿ ಪಂಚಕಜ್ಜಾಯ ಸೇವೆ ನೆರವೇರಿಸಿದರೆ ಜಯ ದಕ್ಕುತ್ತದೆ.
ಮಾ.29ರಿಂದ ಕೇಂದ್ರ ಸರ್ಕಾರಕ್ಕೆ ಬಂಗಾರದ ದಿನಗಳು ಆರಂಭವಾಗುತ್ತವೆ. ದೇಶ ಒಳಿತಿಗಾಗಿ ಎಲ್ಲ ಕೆಲಸ ಮಾಡಿದ್ದನ್ನೂ ಗಣನೆಗೆ ತೆಗೆದುಕೊಳ್ಳದೆ ವಿರೋಧ ಪಕ್ಷಗಳು ದೂಷಣೆ ಮಾಡುತ್ತ, ಜನರ ಕಣ್ಣಿನಲ್ಲಿ ಕೆಳಮಟ್ಟಕ್ಕೆ ಇಳಿಯುತ್ತಿದ್ದಾರೆ. ಹೀಗೇ ಮುಂದುವರಿದರೆ, ದೇಶದಲ್ಲಿ ರಾಜಕಾರಣ ಮಾಡಲಾಗದಷ್ಟು ಸಂಕಷ್ಟಕ್ಕೆ ತಲುಪಬೇಕಾಗುತ್ತದೆ.
ಈ ಸಂವತ್ಸರದಲ್ಲಿ ಒಟ್ಟು 5 ಗ್ರಹಣಗಳು ಸಂಭವಿಸಲಿದ್ದು, ಜೂ.21ರ ಜ್ಯೇಷ್ಠ ಕೃಷ್ಣ ಅಮಾವಾಸ್ಯೆಯ ದಿನ ಸಂಭವಿಸುವ ಸೂರ್ಯ ಗ್ರಹಣದ ಕಾರಣಕ್ಕೆ ಸೆ.15ರಿಂದ ನ.15ರವರೆಗೆ ರಾಷ್ಟ್ರ ರಾಜಕಾರಣದಲ್ಲಿ ಬಿರುಕು ಉಂಟಾಗುವ ಆತಂಕವಿದೆ. ಎಚ್ಚರಿಕೆ ವಹಿಸಬೇಕು.
ಮಾ.29ರ ನಂತರದಲ್ಲಿ ಕೇಂದ್ರ ಸರ್ಕಾರದಲ್ಲಿ ಅನ್ಯರೀತಿಯಿಂದ ಐಶ್ವರ್ಯ ಸಂಪಾದನೆ ಮಾಡಿದ ಕೆಲವು ಮಂತ್ರಿಗಳು, ಅಧಿಕಾರಿಗಳನ್ನು ಮೋದಿ ಶಿಕ್ಷಿಸುತ್ತಾರೆ. ಇದೇ ವೇಳೆ ಕೆಲವು ಮಂತ್ರಿಗಳು ಉತ್ತಮ ಕಾರ್ಯನಿರ್ವಹಣೆ ತೋರಿ ಕೀರ್ತಿ ಸಂಪಾದಿಸುತ್ತಾರೆ. ಗುಜರಾತ್, ಪಂಜಾಬ್, ಉತ್ತರ ಪ್ರದೇಶ, ಮಹಾರಾಷ್ಟ್ರ, ದೆಹಲಿ, ಬಿಹಾರ ರಾಜಕಾರಣಗಳಲ್ಲಿ ವಿಚಿತ್ರ ಬದಲಾವಣೆಗಳಾಗಿ, ಪ್ರಧಾನಿ ಮಧ್ಯಪ್ರವೇಶಿಸಿ ಪರಿಹರಿಸುತ್ತಾರೆ. ಬಿಹಾರದಲ್ಲಿ ತುಸು ಹೆಚ್ಚು ಸಂಚಲನ ಉಂಟಾಗಬಹುದು.
ಆದರೆ ಎರಡೂ ರಾಷ್ಟ್ರೀಯ ಪಕ್ಷಗಳು ಎರಡನೇ ಹಂತದ ನಾಯಕರನ್ನು ಬೆಳೆಸುವಲ್ಲಿ ವಿಫಲಾಗುತ್ತಿವೆ. ಬಿಜೆಪಿಯಲ್ಲಷ್ಟೆ ಅಲ್ಲ, ದೇಶದಲ್ಲೆ ಮೋದಿಯವರನ್ನು ಹಿಂದಿಕ್ಕುವವರು ಯಾರೂ ಇಲ್ಲ. ಅಂದ ಮೇಲೆ ಯುವಕರನ್ನು ಮುನ್ನೆಲೆಗೆ ತರಲು ಏಕೆ ಹಿಂದೇಟು? ಯಾವುದೇ ಕಳಂಕವಿಲ್ಲದ, ಸಚ್ಚಾರಿತ್ರ್ಯವಂತ ಯುವಕರನ್ನು ದೇಶದ ಜನತೆಗೆ ಪರಿಚಯಿಸಬೇಕು. ಮಹಿಳಾ ರಾಜಕಾರಣಿಗಳಿಗೆ ಅವಕಾಶ ನೀಡಬೇಕು. ಈ ನಿಟ್ಟಿನಲ್ಲಿ ಆರೆಸ್ಸೆಸ್ ಸಹ ಕಾರ್ಯತತ್ಪರವಾಗಬೇಕು. ನಿಸ್ವಾರ್ಥ, ಬುದ್ಧಿವಂತ, ಜ್ಞಾನ, ಚರಿತ್ರೆ ಹೊಂದಿರುವ ಆಯ್ದ ಕಾರ್ಯಕರ್ತರನ್ನು ದೇಶದ ಸೇವೆಗೆ ಕಳಿಸಿಕೊಡಬೇಕು. ಇಂಥವರೇ ಮೊದಿಯವರ ಉತ್ತಮ ಆಡಳಿತವನ್ನು ಮುಂದುವರಿಸುತ್ತಾರೆ.
ಟ್ರಂಪ್ ಪುನರಾಯ್ಕೆ ಸಂಭವ: ವಿಶ್ವದ ರಾಜಕೀಯ ಗಣನೆಗೆ ತೆಗೆದುಕೊಂಡರೆ ರಷ್ಯಾದಲ್ಲಿ ಸರ್ವಾಧಿಕಾರ ಧೋರಣೆಯಿಂದಾಗಿ ಅಧಿಕಾರ ಹಿಡಿಯುವವರು ಎಡವುತ್ತಾರೆ. ಐರೋಪ್ಯ ಜಗತ್ತಿನಲ್ಲಿ ಅಶಾಂತಿ, ಮಹಾಮಾರಿಯಂತಹ ಆತಂಕವಿದೆ. ಅಮೆರಿಕ ಆರ್ಥಿಕವಾಗಿ ಕುಸಿದರೂ ಟ್ರಂಪ್ ಪುನಃ ಆಯ್ಕೆಯಾಗುವ ಸಂಭವ ಹೆಚ್ಚಿದೆ. ಇನ್ನೂ ದಿನಾಂಕಗಳು ಘೊಷಣೆಯಾಗಿಲ್ಲದಿರುವುದರಿಂದ ಖಚಿತತೆ ಇಲ್ಲ, ಆದರೆ ಪ್ರಧಾನಿ ಮೋದಿಯವರೂ ಬೆಂಬಲ ನೀಡಿದರೆ ಗೆಲುವಿನ ಸಾಧ್ಯತೆ ಹೆಚ್ಚು.
ಆಸ್ಟ್ರೇಲಿಯಾ ಸೇರಿ ಕೆಲವೆಡೆ ಬೆಂಕಿ ಮಳೆಯ ಆತಂಕವಿದ್ದರೂ, ಅವರವರ ಧರ್ಮದ ಅನುಸಾರ ನಡೆದರೆ ಸಂಕಷ್ಟ ಕಡಿಮೆಯಾಗುತ್ತದೆ. ಚೀನಾ ಈಗಿನಂತೆಯೇ ಮುಂದೆಯೂ ಇರುವುದಿಲ್ಲ. ಪಾಕಿಸ್ತಾನಕ್ಕೆ ಸಂಕಷ್ಟವಿದೆ, ಅದರ ಕಾರಣಕ್ಕೆ ಭಾರತದ ಮೇಲೆ ದಾಳಿ ಮಾಡುವ ಸಾಧ್ಯತೆ ಇದೆ.
ನೆರೆ ರಾಜ್ಯಗಳ ರಾಜಕಾರಣ: ನೆರೆ ರಾಜ್ಯಗಳ ರಾಜಕಾರಣ ನೋಡಿದರೆ, ತಮಿಳು ನಾಡಿನಲ್ಲಿ ಈಗಿರುವವರಿಗೇ ಅಧಿಕಾರ ಸಿಗುವುದು ಕಷ್ಟ. ಆಂಧ್ರ ಪ್ರದೇಶ ಮುಖ್ಯಮಂತ್ರಿ ದಿಢೀರ್ ನಿರ್ಧಾರ ಕೈಗೊಳ್ಳಬಾರದು, ಧರ್ಮದ ವಿಚಾರಕ್ಕೆ ಕೈಹಾಕಬಾರದು. ಧರ್ಮಕ್ಕೆ ಕೈಹಾಕಿದರೆ ಏನಾಗುತ್ತದೆ ಎಂಬುದಕ್ಕೆ ಕರ್ನಾಟಕವೇ ಉದಾಹರಣೆ. ತೆಲಂಗಾಣದಲ್ಲಿ ಎಲ್ಲವೂ ಸೌಖ್ಯವಾಗಿರುತ್ತದೆ, ಮಹಾರಾಷ್ಟ್ರದಲ್ಲಿ 18 ತಿಂಗಳು ಸರ್ಕಾರ ಸ್ಥಿರವಾಗಿದ್ದರೆ ಮಾತ್ರ ಭವಿಷ್ಯವಿದೆ. ಇಲ್ಲದಿದ್ದರೆ ಅನಾಯಾಸವಾಗಿ ಅಧಿಕಾರ ಸಿಗುತ್ತದೆ. ಪಂಜಾಬ್ನಲ್ಲಿ ಬಿಜೆಪಿಗೆ ಜಯ ಸಿಗುತ್ತದೆ, ಪಶ್ಚಿಮ ಬಂಗಾಳದಲ್ಲಿ ಈಗ ಅಧಿಕಾರದಲ್ಲಿರುವವರಿಗೆ ಸುಲಭದಲ್ಲಿ ಜಯ ದಕ್ಕುವುದಿಲ್ಲ.
ಸೆ.22ರ ನಂತರದಲ್ಲಿ ರಾಹು ಮಿಥುನದಿಂದ ವೃಷಭಕ್ಕೆ, ಕೇತು ಧನುವಿನಿಂದ ವೃಶ್ಚಿಕಕ್ಕೆ ಪ್ರಯಾಣ ಮಾಡುವುದರಿಂದ ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಮಹತ್ತರ ಬದಲಾವಣೆ ಆಗಬಹುದು. ಉತ್ತರಾಖಂಡ, ಕಾಶಿಯಲ್ಲಿ ವಿಪರೀತ ಮಳೆ, ಪ್ರವಾಹ ಉಂಟಾಗಬಹುದು.
ಮುಖ್ಯಮಂತ್ರಿ ಸ್ಥಾನ ಅಸ್ಥಿರಗೊಳಿಸುವ ಪ್ರಯತ್ನ: ಬಿ.ಎಸ್. ಯಡಿಯೂರಪ್ಪ ಅವರದ್ದು ಅನುರಾಧಾ ನಕ್ಷತ್ರ. ಮಾ.29ರವರೆಗೂ ಸಮಯ ಸರಿಯಿಲ್ಲ. ಧನಹಾನಿ, ಮಾನ ಹಾನಿ, ಆರೋಗ್ಯ ಹಾನಿಯ ಅಪಾಯವಿದೆ. ಈಗಾಗಲೆ ಸಾಕಷ್ಟು ಸಂಕಷ್ಟ ಅನುಭವಿಸಿದ್ದಾರೆ. ಶನಿಯ ನಕ್ಷತ್ರವಾದ್ಧರಿಂದ ಕೋಪವನ್ನು ಬಿಟ್ಟರೆ ಒಳ್ಳೆಯದು, ಎಲ್ಲರನ್ನೂ ಗೆಲ್ಲಬಹುದು. ಗುರು ಚಾಂಡಾಲನಾಗುವ ಕಾರಣಕ್ಕೆ ಚಾಂಡಾಲರಿಂದಲೇ ಅಸ್ಥಿರತೆಗೆ ಪ್ರಯತ್ನ ನಡೆಯುತ್ತದೆ. ದೇವರೊಬ್ಬನೇ ಅವರನ್ನು ಕಾಪಾಡುತ್ತಾನೆ. ನಾರಾಯಣ ಪೂಜೆ ಮಾಡಬೇಕು, ಉಜ್ಜಯಿನಿ ಮಹಾಕಾಲನ ದರ್ಶನ ಪಡೆದು ತಮ್ಮ ಉತ್ತಮ ಆರೋಗ್ಯಕ್ಕೆ ಪ್ರಾರ್ಥನೆ ಮಾಡಬೇಕು. ಆರೋಗ್ಯ ಸರಿಯಿಲ್ಲ ಎಂಬ ಕಾರಣವನ್ನೇ ಮುಂದಿಟ್ಟುಕೊಂಡು ಮುಖ್ಯಮಂತ್ರಿ ಬದಲಾವಣೆ ಪ್ರಯತ್ನ ಮಾಡುವ ಅಪಾಯವಿದೆ. ಶನಿ ಈಗ ಕಡೆಯ ಹಂತದಲ್ಲಿದ್ದು, ಜನರಿಗೆ ತಮ್ಮಿಂದ ಆದ ಸೇವೆ ಸಾಲುತ್ತಿಲ್ಲ ಎಂಬ ಕೊರಗು ಅವರಲ್ಲಿದೆ. ಇಷ್ಟೆಲ್ಲ ತ್ಯಾಗ ಮಾಡಿ ಸಿಕ್ಕಿರುವ ಸ್ಥಾನದಿಂದ ಸಾರ್ವಕಾಲಿಕ ಉತ್ತಮ ಕಾರ್ಯ ಮಾಡಬೇಕು. ಭ್ರಷ್ಟರನ್ನು ದೂರ ಮಾಡಿ ಶುದ್ಧ ಹಸ್ತರನ್ನು ಇರಿಸಿಕೊಂಡರೆ ಕರ್ನಾಟಕವನ್ನು ಅಕ್ಷರಶಃ ಸುವರ್ಣ ಕರ್ನಾಟಕವಾಗಿಸಲು ಯಡಿಯೂರಪ್ಪ ಅವರಿಂದ ಸಾಧ್ಯವಿದೆ. ಇಲ್ಲಿಯವರೆಗೆ ಉಪಕಾರ ಪಡೆದುಕೊಂಡವರಿಗೆ ಉತ್ತಮ ಸ್ಥಾನ ನೀಡಬೇಕು. ಉತ್ತಮ ಮಾರ್ಗದರ್ಶಕರ ಸಲಹೆ ಪಡೆದು ಅವಧಿಗೂ ಮುನ್ನವೇ ಚುನಾವಣೆಗೆ ತೆರಳಬಹುದು. ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಈ ಹಿಂದೆ ನಿಗದಿಯಾದಂತೆ ಬಂಗಾರದ ರಥ ನಿರ್ವಣಕ್ಕೆ ಚಾಲನೆ ನೀಡಲಿ. ಪ್ರಾಮಾಣಿಕರ ಪ್ರತ್ಯೇಕ ಸಮಿತಿ ಮೂಲಕ ಅನುಷ್ಠಾನವಾದರೆ ಸುಬ್ರಹ್ಮಣ್ಯನ ಕೃಪೆ ಸಿಗುತ್ತದೆ.
ರಾಜ್ಯದಲ್ಲಿ ಮಹಾಮಾರಿ ಬಲಿ ಕರೊನಾ ಕಲಬುರಗಿಯಿಂದಲೇ ಆರಂಭವಾಗಿದೆ. ಅದೇ ಜಿಲ್ಲೆಯಲ್ಲಿರುವ ಗಾಣಗಾಪುರಕ್ಕೆ ಭೇಟಿ ನೀಡಿ ಅಲ್ಲಿನ ಮೂಲಸೌಕರ್ಯವನ್ನು ಸ್ವತಃ ನೇತೃತ್ವ ವಹಿಸಿ ಕಾಶಿ ರೀತಿ ಅಭಿವೃದ್ಧಿಪಡಿಸಿದರೆ ದೇವರ ಕೃಪೆಗೆ ಪಾತ್ರರಾಗುತ್ತಾರೆ. ರಾಜ್ಯದ ಜನತೆಗೆ ಒಳಿತಾಗುತ್ತದೆ.
ಜೂನ್ ನಂತರ ಉತ್ತರ ಕರ್ನಾಟಕದ ಕೈಗಾರಿಕೆಗಳ ಅಭಿವೃದ್ಧಿಗೆ ವೇಗ ಸಿಗುತ್ತದೆ. ಮಹದಾಯಿಯಲ್ಲಿ ರಾಜ್ಯಕ್ಕೆ ಜಯ ಎಂಬುದರಲ್ಲಿ ಅನುಮಾನವಿಲ್ಲ, ಉತ್ತಮ ಮಳೆಯಾಗಿ ಈ ಬಾರಿಯೂ ಕಾವೇರಿ ಸಮಸ್ಯೆ ತಲೆದೋರುವುದಿಲ್ಲ. ಆದರೆ ವಿಪರೀತ ಮಳೆಯಿಂದಾಗಿ ಕೇರಳ, ಮಡಿಕೇರಿಯಲ್ಲಿ ಅಪಾಯವುಂಟಾಗುವ ಸಂಭವವಿದೆ. ನಾರಾಯಣನ ಪ್ರಾರ್ಥನೆಯಿಂದ ಸಂಕಟ ಪರಿಹಾರವಾಗಲಿದೆ.
ಸರ್ವರಿಗೂ ಶುಭವಾಗಲಿ.