ವಾರ ಭವಿಷ್ಯ: ಈ ರಾಶಿಯ ಗುರುವು ಏಕಾದಶದಲ್ಲಿದ್ದು ನಿಮಗೆ ರಕ್ಷಣೆಯನ್ನು ನೀಡುತ್ತಾನೆ

Weekly Prediction
Weekly Prediction
Published on

ಮೇಷ: ಮೇಷ ರಾಶಿಯಲ್ಲಿ ಸೂರ್ಯನಿದ್ದು, ದ್ವಾದಶದಲ್ಲಿ ಶನಿಯಿದ್ದಾನೆ. ಅಶ್ವಿನಿ, ಭರಣಿ, ಕೃತ್ತಿಕಾ ನಕ್ಷತ್ರದವರಿಗೆ ಎಲ್ಲವೂ ನಿಮಗೆ ಬೇಕಾದಂತೆ ಸಾಗುವುದಿಲ್ಲ. ಗುರುವು 3ನೇ ಮನೆಯಲ್ಲಿ ಇರುವುದರಿಂದ ಹಾನಿಕರ ಸಂಗತಿ ಆಗದಿದ್ದರೂ ಕಾರ್ಯಸಾಧನೆಯಲ್ಲಿ ಎಚ್ಚರಿಕೆಯ ಹೆಜ್ಜೆ ಇಡಬೇಕು. ಸುಂದರಕಾಂಡ ಪಾರಾಯಣ ಮಾಡಿ. ಹನುಮ ದೇವರ ದರ್ಶನ ಮಾಡಿ ತುಳಸಿಯಿಂದ ಅರ್ಚಿಸಿ.

ವೃಷಭ : ವೃಷಭ ರಾಶಿಗೆ ದ್ವಿತೀಯದಲ್ಲಿ ಗುರುವಿದ್ದು, ಶನಿ ಏಕಾದಶದಲ್ಲಿ ಇದ್ದಾನೆ. ಮನುಷ್ಯ ತಾನು ಮಾಡಿದ ಕೆಲಸದಿಂದ ಪಾಪ- ಪುಣ್ಯ ಎರಡನ್ನೂ ಸಂಪಾದಿಸುತ್ತಾನೆ. ಪುಣ್ಯದಿಂದ ಗುರುವಿನ ಪುರ್ಣಫಲವನ್ನು ಅನುಭವಿಸಿ. ಶನಿಯು ಶ್ರೇಯಸ್ಸು, ಲಾಭ, ಕೀರ್ತಿಯನ್ನು ನೀಡುತ್ತಾನೆ. ಭೂ ವ್ಯವಹಾರಕ್ಕೆ ಕೈ ಹಾಕಿದರೆ ಉತ್ತಮ ಫಲವನ್ನೇ ಪಡೆಯಬಹುದು.

ಮಿಥುನ: ಆರಿದ್ರಾ, ಪುನರ್ವಸು ನಕ್ಷತ್ರದವರಿಗೆ ಗುರುವು ಮಿಥುನ ರಾಶಿಯಲ್ಲೆ ಇರುವುದರಿಂದ ಹಾಗೂ ಅದು ಬುಧನ ಮನೆಯಾದ್ದರಿಂದ ಸೀತಾ ಲಕ್ಷ್ಮಣ ಸಹಿತ ಶ್ರೀರಾಮಚಂದ್ರನನ್ನು ಪೂಜಿಸಿದರೆ ಕೆಲಸಗಳು ಗೊತ್ತಿಲ್ಲದ ಹಾಗೆ ಪೂರ್ಣಗೊಂಡು ನಿಮ್ಮ ಇಚ್ಛೆಯನ್ನು ಸತ್ಯವನ್ನಾಗಿ ಮಾಡುತ್ತದೆ. ‘ಓಂ ಶ್ರೀಂ ಹ್ರೀಂ ರಂ ರಾಮಾಯ ನಮಃ’ ಪಠಿಸಿ ಮನಸ್ಸಿಗೆ ಶಾಂತಿ ದೊರೆತು, ಆರೋಗ್ಯಕ್ಕೂ ಒಳ್ಳೆಯದಾಗುತ್ತದೆ.

ಕಟಕ: ಕಟಕ ರಾಶಿ ರಾಮನ ರಾಶಿಯೂ ಹೌದು, ಆದ್ದರಿಂದ ಗುರುವು ಜೂ. 1 ರಿಂದ ಅಲ್ಲಿಗೇ ಬರುವುದರಿಂದ, ಜೀವನದಲ್ಲಿ ನಗು, ಆರೋಗ್ಯ, ಮಾಡುವ ಕೆಲಸದಲ್ಲಿ ಧೈರ್ಯ- ಸ್ಥೈರ್ಯ ತುಂಬಿ, ಆನಂದವನ್ನು ಅನುಭವಿಸುವಂತೆ ಮಾಡುತ್ತಾನೆ.

ಸಿಂಹ: ಗುರುವು ಏಕಾದಶದಲ್ಲಿದ್ದು ನಿಮಗೆ ರಕ್ಷಣೆಯನ್ನು ನೀಡುತ್ತಾನೆ. ಯಾರಿಗೂ ಹೆದರುವ ಅಗತ್ಯವಿಲ್ಲ. ಆದರೆ ಅಷ್ಟಮ ಶನಿಯ ಸಂಚಾರವಿರುವುದರಿಂದ ಈಶ್ವರನನ್ನು ಪ್ರಾರ್ಥಿಸಿ. ನಿಮ್ಮ ಕಾಲುಗಳು ದೇವಮಮಂದಿರಕ್ಕೆ ಸಾಗಲಿ. ಕೈಮುಗಿದು ಒಳಗೆ ಹೋಗಿ, ಕಣ್ಣುಗಳು ದೇವರ ಪಾದದ ಮೇಲಿರಲಿ. ಅಶುಭ ಫಲಗಳು ಉಂಟಾಗದಂತೆ ಅವನೇ ನಿಮ್ಮನ್ನು ರಕ್ಷಿಸುತ್ತಾನೆ.

ಕನ್ಯಾ: ಸಪ್ತಮದಲ್ಲಿ ಶನಿಯಿದ್ದಾನೆ. ಜೀವನದಲ್ಲಿ ಜಾಗ್ರತೆಯಿಂದ ಕೆಲಸವನ್ನು ಮಾಡಿ. ಬರುವ ಕೋಪ ತ್ಯಜಿಸಿ ಶಾಂತವಾಗಿರಿ. ಕಾಲ ಕೆಟ್ಟಾಗ ಮಾತನ್ನು ಕಡಿಮೆ ಮಾಡಬೇಕು. ದೇವಮಂದಿರದಲ್ಲಿ ನಿಮ್ಮ ಪ್ರಾರ್ಥನೆಯನ್ನು ಮಾಡಿಬಂದರೆ ನಿಮಗೆ ಶ್ರೇಯಸ್ಸು ಉಂಟಾಗುತ್ತದೆ. ಜಗತ್ ಸಂರಕ್ಷಕನಾದ ಮಹಾವಿಷ್ಣುವನ್ನು ಅಷ್ಟೋತ್ತರದಿಂದ ಪಠಿಸಿ.

ತುಲಾ: ತುಲಾ ರಾಶಿಯಲ್ಲಿ ಜನಿಸಿದವರಿಗೆ 6ನೇ ಮನೆಯಲ್ಲಿ ಶನಿ, 9ನೇ ಮನೆಯಲ್ಲಿ ಗುರು ಏನನ್ನು ಬೇಕಾದರೂ ಕೊಡುತ್ತಾರೆ. ರಕ್ಷಣೆ ಮಾಡಿ, ಹಿರಿಯರು ಮಾಡಿದ ತಪಸ್ಸಿನ ಫಲವು ನಿಮಗೆ ದೊರೆತು ಕಾರ್ಯದಲ್ಲಿ ಓಟಗಾರ್ತಿ ಉಷಾರಂತೆ ಓಡಬಹುದು. ಏನು ಬೇಕಾದರೂ ಮಾಡಿ. ದೈವಬಲ ಹೆಚ್ಚಿಸಿಕೊಳ್ಳಲು ಗುರುದತ್ತಾತ್ರೇಯನನ್ನು, ದುರ್ಗೆಯನ್ನು ಪೂಜಿಸಿ, ಪ್ರಾರ್ಥಿಸಿ.

ವೃಶ್ಚಿಕ: 5ನೇ ಮನೆಯ ಶನಿ, 27ರವರೆಗೂ ಅಲ್ಲಿಯೇ ಇರುತ್ತಾನೆ. ಈ ಒಂದೂವರೆ ವರ್ಷದಲ್ಲಿ ಸೋಲನ್ನು ಉಂಡಿರುತ್ತೀರಿ. ಅಕಸ್ಮಾತ್ ಧನ ಲಾಭವನ್ನೂ ಕಂಡಿರುತ್ತೀರಿ. ಜೇಬಿಗೆ ಸಾಕಾಗುವಷ್ಟು ಮಾತ್ರ ಧನವು ಇರುತ್ತದೆ. ಲಾಭಾಂಶ ಇನ್ನೂ ತಡವಾಗುತ್ತದೆ. ಭೂಮಾತೆಯಿಂದ ಧನ ಪಡೆಯಲು ಸುಬ್ರಹ್ಮಣ್ಯ ದೇವರನ್ನು ಪ್ರಾರ್ಥಿಸಲೇಬೇಕು. ಸುಬ್ರಹ್ಮಣ್ಯನನ್ನು ವಿಭೂತಿಯಿಂದ ಅರ್ಚಿಸಿ.

ಧನಸ್ಸು: ಚತುರ್ಥ ಶನಿಯು ಆರೋಗ್ಯದಲ್ಲಿ ಏರುಪೇರನ್ನು ಕೊಡುತ್ತಾನೆ. ಯಾವ ಸೂಚನೆ ಇಲ್ಲದೆ ಬಿರುಗಾಳಿ ಬೀಸಿದಂತೆ ಆರೋಗ್ಯವು ಹೆಚ್ಚು-ಕಡಿಮೆ ಆಗುತ್ತಲೇ ಇರುತ್ತದೆ. ಸಪ್ತಮದಲ್ಲಿರುವ ಗುರು ನಿಮ್ಮನ್ನು ಸಂರಕ್ಷಣೆ ಮಾಡಿ ಧನ ಸ್ಥಾನ-ಮಾನ ಕೊಡುತ್ತಾನೆ. ಆದರೆ ಶನಿಗಾಗಿ ಈಶ್ವರನನ್ನು ಪೂಜಿಸಿ. ಆರೋಗ್ಯ ಸಹಿತವಾಗಿ ನಿಮ್ಮ ಇಷ್ಟಾರ್ಥವನ್ನು ಪೂರೈಸುತ್ತದೆ.

ಮಕರ: ಎರಡನೇ ಮನೆಯಲ್ಲಿ ರಾಹುವಿದ್ದಾನೆ. ಕುಟುಂಬದಲ್ಲಿ ವಿನಾಕಾರಣ ಉದ್ವೇಗ, ಕೋಪ, ವೈಮನಸ್ಯ ಎಲ್ಲವೂ ಉಂಟಾಗುತ್ತದೆ. ಗುರುಬಲ ಸದ್ಯದಲ್ಲಿ ಇರುವುದಿಲ್ಲ. ಆದರೆ ಸಮಾಧಾನ ಚಿತ್ತರಾಗಿ ಗುರುವಿನ ಅನುಗ್ರಹ ಪಡೆಯುಲು ನಿಮ್ಮ ಕುಲಗುರುವನ್ನು ಪೂಜಿಸಿ. ಪ್ರತ್ಯಕ್ಷ ಪಾರ್ವತಿ- ಪರಮೇಶ್ವರರಾದ ತಂದೆ-ತಾಯಿಯ ಆಶೀರ್ವಾದ ಪಡೆಯಿರಿ.

ಕುಂಭ: ಕುಂಭ ರಾಶಿಯವರಿಗೆ ಗುರುಬಲವಿದ್ದರೂ ಲಗ್ನದಲ್ಲಿ ರಾಹುವಿದ್ದು, ದ್ವಂದ್ವ ಯೋಚನೆ ಮಾಡದಿರಿ. ನಂಬಿಕೆಯಿಂದಲೆ ಜೀವನವನ್ನು ಮುಂದೆ ಸಾಗಿಸಿ, ಶನಿ- ಕುಜ ಒಟ್ಟಿಗೇ ಇದ್ದಾರೆ, ಮಿತ್ರರು ಬಂಧು- ಬಾಂಧವರು, ಹೆಣ್ಣು ಮಕ್ಕಳಲ್ಲಿ ಜಗಳ ಮಾಡದಿರಿ, ಸಮಾಧಾನದಿಂದ ಮಾತನಾಡಿ, ಮಾತು ಬೇಡವೆಂದರೆ ಸುಮ್ಮನಿರಿ. ಯಾರದೇ ಮನಸ್ಸು ನೋಯಿಸಿದರೆ ಪುಣ್ಯವು ಸವೆಯು ತ್ತದೆ. ಪ್ರದೋಷ ಕಾಲದಲ್ಲಿ ಪೂಜಿಸಿ ಶಿವಾಷ್ಣೋತ್ತಾರ ಪಾರಾಯಣ ಮಾಡಿ.

ಮೀನ: ಮೀನ ರಾಶಿಯಲ್ಲಿ ಶನಿ ಕುಜ ಇದ್ದು ದೇಶಗಳ ಕಲಹ, ನೋವು, ಸಂಕಟ ಉಂಟಾಗಿದೆ, ದೇಶವು ಚೆನ್ನಾಗಿದ್ದರೆ ಎಲ್ಲರೂ ಚೆನ್ನಾಗಿರುತ್ತೇವೆ. ಸಮೃದ್ಧಿಯ ಬೆಳಕನ್ನು ಕೊಡುವ ದೇವರು ಕಾಪಾಡುತ್ತಾನೆ. ಅವನ ಧ್ಯಾನ ಮಾಡುವುದು ಮೊದಲ ಕರ್ತವ್ಯವಾಗಿರಲಿ. ಉಪಕಾರ ಮಾಡಿದವರನ್ನು ಸ್ಮರಿಸಿ. ನಿಮ್ಮ ಧ್ಯೇಯವು ಈಡೇರಲು ಕುಲದೇವರನ್ನು ಪೂಜಿಸಿ. ಪ್ರತಿ ಸಂಕಷ್ಟಹರ ಚತುರ್ಥಿಯ ದಿವಸ ಗಣೇಶನಿಗೆ ದೂರ್ವಾರ್ಚನೆ ಮಾಡಿಸಿ, ಎಲ್ಲವೂ ದೊರೆತು ಮನಶಾಂತಿ ಸಿಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net