ವಾರಭವಿಷ್ಯ: ಈ ರಾಶಿಯವರು ಗೋವನ್ನು ಪೂಜಿಸಿ. ಔದುಂಬರ ವೃಕ್ಷಕ್ಕೆ ಪ್ರದಕ್ಷಿಣೆ ಹಾಕಿರಿ

weekly-horoscope
weekly-horoscope
Published on
ಮೇಷ: ರಾಶಿಯ ಅಧಿಪತಿ ಸುಬ್ರಹ್ಮಣ್ಯ. ಷಣ್ಮುಖ, ದ್ವಾದಶಬಾಹು, ದ್ವಾದಶ ಕಣ್ಣು ಉಳ್ಳವನು. ನೀವು ಮಾಡುವ ಕೆಲಸದಲ್ಲಿ ಮೀನಮೇಷ ಎಣಿಸದೆ ಸಿದ್ಧ ಸಂಕಲ್ಪದಿಂದ ರಾಶ್ಯಾಧಿಪತಿಯನ್ನು ಪೂಜಿಸಿದರೆ ಸಂತೋಷವನ್ನು ಹೊಂದಿ ಜೀವನದಲ್ಲಿ ಸಾಧನೆಯನ್ನು ಮಾಡಬಹುದು. ಕಾರ್ತಿಕೇಯ ಸ್ತೋತ್ರವನ್ನು, ಸುಬ್ರಹ್ಮಣ್ಯ ಅಷ್ಟೋತ್ತರ ಪಠಿಸಿ. ಸುಖವಾಗಿರಿ.
ವೃಷಭ: ಇನ್ನು 11 ತಿಂಗಳ ಕಾಲ ಏಕಾದಶದಲ್ಲಿ ಶನಿ ಇದ್ದು ಗುರುವು ಸಿಂಹ ರಾಶಿಯನ್ನು ಕೂಡ ಪ್ರವೇಶಿಸುತ್ತಾನೆ. ಗುರುವಿನ ಮೇಲೆ ವಿಶ್ವಾಸ ಇಟ್ಟು ದೃಢ ಭಕ್ತಿಯಿಂದ ಅರ್ಚಿಸಿದರೆ ಬೇಕಾದ್ದೆಲ್ಲ ದೊರೆಯುವುದು. ದುರ್ಗೆಗೆ ಗಸಗಸೆ ಪಾಯಸವನ್ನು ನೈವೇದ್ಯ ಮಾಡಿರಿ. ಚಣಕಭ ಅರ್ಪಿಸಿ ಕಾರ್ಯ ಸಾಧನೆ ಮಾಡಿಕೊಳ್ಳಿ.
ಮಿಥುನ: ಶನಿ ದಶಮದಲ್ಲಿದ್ದು, ದ್ವೀತಿಯದಲ್ಲಿ ಗುರು. ಅಳೆದು ತೂಕವನ್ನು ಮಾಡದೆ ಫಲಾಫಲಗಳನ್ನು ನೀಡುತ್ತಾನೆ. ನಿಮಗೆ ಏನು ಬೇಕೆಂದು ನ್ಯಾಯಸಮ್ಮತವಾಗಿ ಗುರುಭಕ್ತಿಯಿಂದ ಕೇಳಿಕೊಂಡರೆ, ಸಕಾಲದಲ್ಲಿ ಬಯಸಿದ ಕಾರ್ಯಗಳು ನಡೆಯುತ್ತವೆ. ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ.
ಕಟಕ: ಚಂದ್ರನ ಮನೆಯಲ್ಲೆ ಗುರು ಇದ್ದಾನೆ. ಗುರು ಎಂದರೆ ಕತ್ತಲಿನಿಂದ ಬೆಳಕಿನೆಡೆಗೆ ಕರೆದುಕೊಂಡು ಹೋಗಿ ನಿಮ್ಮನ್ನು ಅನುಗ್ರಹಿಸಿ ವರವನ್ನು ಕೊಡುತ್ತಾನೆ. ಸರ್ವ ಸಂಕಟ ಪರಿಹಾರಕ್ಕಾಗಿ ಗುರು ಚರಿತ್ರೆಯ 14ನೇ ಅಧ್ಯಾಯ ಪಾರಾಯಣ ಮಾಡಿ, ಗುರುವಿನ ಪಾದಾರವಿಂದಗಳಲ್ಲಿ ಬಿಲ್ವಾರ್ಚನೆ ಮಾಡಿಸಿ.
ಸಿಂಹ: ಹುಲಿಯು ಹಸಿದರೂ ಹುಲ್ಲನ್ನು ತಿನ್ನುವುದಿಲ್ಲ. ತನ್ನ ಸ್ವಭಾವಕ್ಕೆ ಅನುಗುಣವಾಗಿ ಆಹಾರವನ್ನು ಸ್ವೀಕರಿಸುತ್ತದೆ. ಅದರಂತೆ ನೀವು ಏನೇ ಪಡೆಯಬೇಕಾದರೂ ಸೂರ್ಯ ನಾರಾಯಣನ ಪ್ರಾರ್ಥನೆ ಮಾಡಲೇಬೇಕು. ಗ ಕಾರ ಗಣಪತಿ ಸಹಸ್ರನಾಮ ಪಠಿಸಿ. ಆರೋಗ್ಯದ ಬಗ್ಗೆ ಜಾಗರೂಕರಾಗಿರಿ.
ಕನ್ಯಾ: ಏಕಾದಶದಲ್ಲಿ ಗುರು, ಕಟಕ ರಾಶಿಯಲ್ಲಿದ್ದು ಉಚ್ಚನಾಗಿದ್ದಾನೆ. ಬಯಸಿದ ಮೃಷ್ಟಾನ್ನವನ್ನು ಕೊಡುತ್ತಾನೆ. ಗುರುವಿನ ಮಾತನ್ನು ತಪ್ಪಿದರೆ ಅಲ್ಲೆ ಶಿಕ್ಷೆಯನ್ನೂ ನೀಡುತ್ತಾನೆ. ಗುರು ಏಕಾದಶದಲ್ಲಿರುವಾಗ ಯಾರ ಮನಸನ್ನೂ ನೋಯಿಸದೇ ಕಾರ್ಯ ಸಾಧನೆ ಮಾಡಿಕೊಂಡರೆ ಹೆಚ್ಚಿನ ಧನಸುಖವನ್ನು ಕೊಡುತ್ತದೆ.
ತುಲಾ: ನಮ್ಮ ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಂಡು ಮಾಡುವ ಕೆಲಸವನ್ನು ಅಳೆದು ತೂಗಿ ಮಾಡಿದರೆ ತಪ್ಪಾಗುವುದಿಲ್ಲ. ಕೆಲಸ ಕಾರ್ಯಗಳಲ್ಲಿ ಯಶಸ್ವಿಯಾಗಬೇಕಾದರೆ ದೈವಕೃಪೆ ಬೇಕೇ ಬೇಕು. ಗೃಹಸ್ಥಿತಿಯು ಅತ್ಯುತ್ತಮವಾಗಿದ್ದು ಕಮಲಶಿಲೆಯ ದುರ್ಗೆಯನ್ನು ನೆನೆಯಿರಿ. ವಿನಾಯಕನಿಗೆ ಗರಿಕೆಯನ್ನು ಕೊಟ್ಟು ಹೆಚ್ಚಿನ ಸೌಖ್ಯವನ್ನು ಪಡೆಯಿರಿ.
ವೃಶ್ಚಿಕ: ಪಂಚಮದಲ್ಲಿ ಶನಿ ಇದ್ದರೂ ಪರವಾಗಿಲ್ಲ. ನವಮದಲ್ಲಿ ಗುರು ಜೀವನಕ್ಕೆ ಬೇಕಾದ ಅಂಶವನ್ನೆಲ್ಲ ಕೊಟ್ಟು ನಿಮ್ಮ ಕಷ್ಟವನ್ನು ನೀಗಿಸುತ್ತದೆ. ಗುರು ಭಕ್ತಿಯೊಂದಿದ್ದರೆ ಗುರಿ ಮುಟ್ಟುವುದು ದೊಡ್ಡ ವಿಚಾರವಲ್ಲ. ಗೋವನ್ನು ಪೂಜಿಸಿ. ಔದುಂಬರ ವೃಕ್ಷಕ್ಕೆ ಪ್ರದಕ್ಷಿಣೆ ಹಾಕಿರಿ. ಇಚ್ಛಿತ ಕಾಮನೆಯು ಈಡೇರುತ್ತದೆ.
ಧನುಸ್ಸು: ಚತುರ್ಥದಲ್ಲಿ ಶನಿ, ಗುರು ಅಷ್ಟಮದಲ್ಲಿ ಇದ್ದರೂ ಉಚ್ಚ ರಾಶಿಯಲ್ಲಿರುವುದರಿಂದ ಶುಭಾಶುಭ ಫಲಗಳು ಸಮನಾಗಿರುತ್ತದೆ. ಗುರುರಾಶಿಯಲ್ಲಿ ಹುಟ್ಟಿದ ನಿಮಗೆ ದೈವ ಕೃಪೆ ಜನ್ಮಾಂತರದಿಂದ ಬಂದಿರುತ್ತದೆ. ಎಂತಹ ಸಮಯದಲ್ಲೂ ದುರ್ಗೆಯೇ ನಿಮ್ಮ ಕೈ ಹಿಡಿಯುತ್ತಾಳೆ. ಗುರುಪರಂಪರಾ ಸ್ತೋತ್ರವನ್ನು ಪಠಿಸಿ.
ಮಕರ: ತೃತೀಯದಲ್ಲಿ ಶನಿ, ಸಪ್ತಮದಲ್ಲಿ ಗುರು ಇದ್ದಾನೆ. ಗಾಣಗಾಪುರದ ಅಮರಜಾ ಸಂಗಮದಲ್ಲಿ ಸ್ನಾನ ಮಾಡಿ ಗುರುದತ್ತಾತ್ರೇಯನನ್ನು ಪೂಜಿಸಿದರೆ ಎಲ್ಲಾ ಕಷ್ಟಗಳು ದೂರವಾಗಿ ಅನುಕೂಲಕರ ಸ್ಥಿತಿಯನ್ನು ಕಾಣುವ ಸಮಯವಿದೆ. ಕಾಯಾ ವಾಚಾ ಮನಸಾ ಕೆಲಸದಲ್ಲಿ ತೊಡಗಿಸಿಕೊಂಡರೆ ನಿರ್ವಿಘ್ನವಾಗಿ ಕೆಲಸಗಳು ನಡೆದು ಸಂತೋಷವಾಗಿರುತ್ತೀರಿ. ಗುರು ನರಸಿಂಹನನ್ನು ಪ್ರಾರ್ಥಿಸಿ.
ಕುಂಭ: ಲಗ್ನದಲ್ಲಿ ರಾಹು, ಷಷ್ಟದಲ್ಲಿ ಗುರು. ಸುಖವು ಇಲ್ಲ ದುಃಖವೂ ಇಲ್ಲ. ಯಥಾಸ್ಥಿತಿಯಲ್ಲಿ ಜೀವನವು ನಡೆಯುತ್ತದೆ. ಶನಿಯ ಕಡೆಯ ಭಾಗದ ಸಂಚಾರ ಇರುವುದರಿಂದ ಕೆಲಸಗಳಲ್ಲಿ ಅಲ್ಪಸ್ವಲ್ಪ ಜಯವನ್ನು ಕಾಣುತ್ತೀರಿ. ದೈವ ಪ್ರಾರ್ಥನೆ ಮಾಡಿರಿ. ಖಂಡೋಬಾ ವಿಠಲನನ್ನು ಏಕಕಾಲದಲ್ಲಿ ಪೂಜಿಸಿ. ನಿಮ್ಮ ಸಂಕಟಗಳನ್ನು ದೂರ ಮಾಡಿ ಸುಪ್ಪತ್ತಿಗೆ ಮತ್ತು ಸಂಪತ್ತಿನ ಮಾರ್ಗವನ್ನು ತೋರುತ್ತದೆ.
ಮೀನ: ಆನಂದವೆಂಬುದು ಮನಸ್ಸಿನ ಒಂದು ಒಳ್ಳೆಯ ಮಾರ್ಗ. ಮಕ್ಕಳು ಕೊಡುವ ಸಂತೋಷವೇ ದೈವ ಮಾರ್ಗ. ಶನಿ ಸಂಚಾರದ ಈ ಸಮಯದಲ್ಲಿ ನೀವು ಎಲ್ಲಿ ತಪ್ಪಿ ನಡೆದಿದ್ದೀರಿ ಎಂದು ಅರ್ಥೈಸಿಕೊಂಡು ಅದನ್ನು ಸರಿಪಡಿಸಿಕೊಂಡು ದೈವ ಕೃಪೆಯಿಂದ ಮುಂದೆ ಸಾಗಿರಿ. ಪಂಚಮದಲ್ಲಿ ಗುರುವಿದ್ದು ಸುಖ ಜೀವನವನ್ನು ನಡೆಸಬಹುದು. ಶನಿಯ ಪ್ರಾರ್ಥನೆಯು ನಿಮ್ಮನ್ನು ಕಾಪಾಡುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net