ವಾರಭವಿಷ್ಯ: ಗುರುವಿನ ಉಚ್ಚ ರಾಶಿಯವರಾದ ನೀವು ಸದಾ ಉಮಾ ಮಹೇಶ್ವರನನ್ನು ಪ್ರಾರ್ಥಿಸಿ

weekly-horoscope
weekly-horoscope
Published on
ಮೇಷ: ಈ ರಾಶಿಯ ಅಧಿಪತಿ ಅಂಗಾರಕನು ಚಂದ್ರನ ಮನೆಯಲ್ಲಿ ಇರುವುದರಿಂದ ಚತುರ್ಥದಲ್ಲಿರುವ ಆತ ಚಂದ್ರನ ಮನೆಯಲ್ಲಿ ಏನು ಕೊಡಲಾಗದ ಸ್ಥಿತಿಯಲ್ಲಿದ್ದಾನೆ. ಮನಸ್ಸು ಚಂಚಲದಲ್ಲಿ ಇದ್ದು ನಿಮ್ಮನ್ನು ಸತ್ವ ಪರೀಕ್ಷೆಗೆ ಸಿಲುಕಿಸುತ್ತದೆ. ಈ ಸಂದರ್ಭದಲ್ಲಿ ನಿಮ್ಮ ಕುಲ ಗುರುಗಳ ದರ್ಶನ ಅವಶ್ಯವಾಗಿರುತ್ತದೆ. ಗುರು ಗಣೇಶನನ್ನು ಪೂಜಿಸಿ ಪ್ರಾರ್ಥಿಸಿ.
ವೃಷಭ: ಶುದ್ಧಾತ್ಮನಿಗೆ ಪರಮಾತ್ಮನ ಅನುಗ್ರಹ ಇದ್ದರೆ ಆಕಾಶವನ್ನೂ ಮುಟ್ಟಬಹುದು. ಗುರು ಮೂರನೇ ಮನೆಯಲ್ಲಿ ಹಾಗೂ ಶನಿಯು ಏಕಾದಶದಲ್ಲಿ ಇದ್ದು, ಅಭ್ಯುದಯಕ್ಕೆ ಸಕಲ ಪ್ರಯತ್ನ ಹಾಗೂ ಗುರುವಿನ ಅನುಗ್ರಹ ಅತ್ಯಗತ್ಯ. ಧರ್ಮಮೂರ್ತಿಯನ್ನು ಪ್ರಾರ್ಥಿಸಿ. ಉದ್ವೇಗ ಬೇಡ. ಮನಸ್ಸಿನ ಚಂಚಲತೆ ಕಟ್ಟಿ ಹಾಕಿ ಪ್ರಯೋಜನಕಾರಿ ಕೆಲಸ ಮಾಡಿಕೊಳ್ಳಲು ಅನಂತವಾಗಿ ಅನಂತ ಪದ್ಮನಾಭನನ್ನು ಪೂಜಿಸಿ, ಪ್ರಾರ್ಥಿಸಿ.
ಮಿಥುನ: ಶನಿ ಬಲವು ಇಲ್ಲ. ಆದರೆ ಗುರು ದ್ವಿತೀಯದಲ್ಲಿ ಇರುವುದರಿಂದ ಎಂಥ ಸಂದಿಗ್ಧ ಪರಿಸ್ಥಿತಿಯನ್ನೂ ದಾಟಬಹುದು.  ಆರೋಗ್ಯ ಕಾಪಾಡಿಕೊಳ್ಳಬೇಕು. ವ್ಯಾದಿಯು ಶರೀರಕ್ಕೆ ಬರಬಾರದೆಂಬ ಅನಿಸಿಕೆ ಇದ್ದರೆ ಪಿತೃ ಋಣ, ದೈವ ಋಣ ತೀರಿಸಿಕೊಳ್ಳಿ. ಪ್ರತಿ ದಿನ ಸಾಯಂಕಾಲ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿರಿ.
ಕಟಕ: ಲಗ್ನದಲ್ಲಿ ಗುರು ಸ್ಥಿತನಾಗಿದ್ದು,  ಶನಿಯು ನವಮದಲ್ಲಿ ಇದ್ದಾನೆ. ಯಾರೊಂದಿಗೂ ದ್ವೇಷ,  ಕಲಹ ಮಾಡದೆ ನಿಮ್ಮಷ್ಟಕ್ಕೆ ನೀವಿದ್ದರೆ ಗೊಂದಲ ಆಗುವುದಿಲ್ಲ. ಗುರುವಿನ ಉಚ್ಚ ರಾಶಿಯವರಾದ ನೀವು ಸದಾ ಉಮಾ ಮಹೇಶ್ವರನನ್ನು ಪ್ರಾರ್ಥಿಸಿ. ಪ್ರದೋಷ ಕಾಲದಲ್ಲಿ ಶಿವನಿಗೆ  ಬಿಲ್ವಾರ್ಚನೆ ಮಾಡಿಸಿ.  ಶಿವನ ಶಿರಸ್ಸಿನಲ್ಲಿ ಇರುವ ಚಂದ್ರನೇ ನಿಮ್ಮ ಮನಸ್ಸಿಗೆ ಶಾಂತಿಯನ್ನು, ನೆಮ್ಮದಿಯನ್ನು ನೀಡುತ್ತದೆ.
ಸಿಂಹ: ರವಿ ದ್ವಿತೀಯಕ್ಕೆ ಪ್ರವೇಶಿಸಿದ್ದು ಜೀವಕ್ಕೆ ಹುರುಪು ತಂದು ಮಾಡುವ ಕಾರ್ಯಗಳಲ್ಲಿ ತೃಪ್ತಿ ಉಂಟಾಗುತ್ತದೆ. ದ್ವಾದಶದಲ್ಲಿ ಗುರು ಇರುವುದರಿಂದ ನಡೆನುಡಿ ಎಚ್ಚರವಾಗಿರಬೇಕು. ಕೈಲಾದಷ್ಟು ಕೆಲಸವನ್ನು ಮಾತ್ರ ಮಾಡಬೇಕು. ಆರೋಗ್ಯವನ್ನು ಕೆಡಿಸಿಕೊಳ್ಳದಿರಿ. ಆದಿತ್ಯ ಹೃದಯ ಪಾರಾಯಣ ಮಾಡಲೇಬೇಕು. ಜೀವನವು ಸುಖಮಯವಾಗುತ್ತದೆ.
ಕನ್ಯಾ: ಏಕಾದಶದಲ್ಲಿ ಗುರು ಇದ್ದಾನೆ. ಆದರೆ ಸಪ್ತಮದಲ್ಲಿ ಶನಿ ಇರುವುದು ಚಿತ್ತವನ್ನು, ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಿಮ್ಮ ಜವಾಬ್ದಾರಿಯೇ. ಅಣ್ಣ ತಮ್ಮಂದಿರೊಂದಿಗೆ ಕಲಹ ಮಾಡಿಕೊಂಡು ನೆಮ್ಮದಿ ಕೆಡಿಸಿಕೊಳ್ಳಬೇಡಿ. ಧರ್ಮ ವಿಚಾರಕ್ಕೆ ನಿಮ್ಮ ಕೈ ಮುಂದೆ ಇರಲಿ. ದೇವರಿಗೆ ಶರಣಾದರೆ ನಿಮ್ಮ ಜೀವನ ನಡೆಸಲು ದೈವವೇ ಸಹಕಾರ ಕೊಡುತ್ತದೆ.
ತುಲಾ: ಶುಕ್ರನ ರಾಶಿಯಾಗಿದ್ದು, ಆರರ ಶನಿ, ಗುರು ದಶಮದಲ್ಲಿ ಇದ್ದಾರೆ.  ಬಾಣಕ್ಕೆ ಗುರಿಯಿರಬೇಕು. ದೈವವೆಂಬ ಬಾಣವನ್ನು ಹೂಡಲು ಭಕ್ತಿ ಇರಬೇಕು. ಯಾವುದೇ ವಿದ್ಯೆಯನ್ನು ಅಪೂರ್ಣವಾಗಿ ಕಲಿತರೆ ಫಲ ನೀಡದು. ಹಾಗೆಯೇ ಭಕ್ತಿಯೊಂದಿಗೆ ದೇವರ ಧ್ಯಾನವೂ ಮುಖ್ಯ. ದುರ್ಗಾ ಸಹಸ್ರನಾಮ ಪಠಿಸಿ ದುರ್ಗೆಯೇ ನಿಮ್ಮನ್ನು ಕಾಪಾಡುತ್ತಾಳೆ.
ವೃಶ್ಚಿಕ: ಶನಿ ಪಂಚಮದಲ್ಲಿದ್ದು, ಕೆಲಸಗಳು ನಿಂತಲ್ಲೇ ನಿಂತು ಧನವು ಕೈ ಸೇರದ ಪರಿಸ್ಥಿತಿ ಎದುರಿಸುವಂತಾಗಿದೆ. ಆದರೆ ಗುರುವು ನವಮದಲ್ಲಿ ಇರುವುದರಿಂದ ಗುರುವಿಗೆ ಕೈಲಾದ ಸೇವೆ ಮಾಡಿದಲ್ಲಿ ಕೆಲಸವೂ ಮುಂದೆ ಸಾಗಿ ಸ್ವಲ್ಪ ಮಟ್ಟಿಗೆ ಧನಾಗಮವಾಗುತ್ತದೆ. ಪಳನಿ ಸುಬ್ರಹ್ಮಣ್ಯನನ್ನು ಪೂಜಿಸಿ. ಸಾಧ್ಯವಾದಲ್ಲಿ ದರ್ಶಿಸಿ ಬನ್ನಿ.  ಕಷ್ಟಗಳು ಕಳೆದು ಸುಖವಾದ ಜೀವನವನ್ನು ಕಾಣಬಹುದು.
ಧನಸ್ಸು: ಗುರುವು ಸಿಂಹ ರಾಶಿ ತಲುಪುವವರೆಗೂ ಆತುರದ ನಿರ್ಧಾರ ಬೇಡ. ತಾಳ್ಮೆ ಇರಲಿ. ತಣ ಎಲ್ಲವೂ ಸಿಗಬೇಕೆಂಬ ಹಂಬಲ ಬೇಡ.  ಮನುಷ್ಯ ತನ್ನ ಸವಾಲು ಎದುರಿಸಲು ಎಚ್ಚರಿಕೆಯಿಂದ ಹೆಜ್ಜೆ ಇಟ್ಟು  ಕೆಲಸ ಮಾಡಬೇಕು. ಸರ್ವಸಂಕಟ ಪರಿಹಾರಕ್ಕಾಗಿ ಗುರು ಚರಿತ್ರೆಯ 14ನೇ ಅಧ್ಯಾಯ ಪಾರಾಯಣ ಮಾಡಿರಿ.
ಮಕರ: ಸುಖವಿದ್ದರೆ ಸಂತಸ. ಸಂತಸ ಇದ್ದರೆ ತೃಪ್ತಿ. ಜೀವನವನ್ನು ಉತ್ತುಂಗಕ್ಕೆ ಕೊಂಡೊಯ್ದು ಎಲ್ಲವನ್ನೂ ನೀಡಿ, ಒಳ್ಳೆಯ ಮಾರ್ಗವನ್ನು, ಸ್ಥಿರವಾದ ಶಾಂತಿಯನ್ನು ಕರುಣಿಸುವ ಶನಿಯು ತೃತೀಯದಲ್ಲಿ  ಇದ್ದಾನೆ. ಗುರು ಸಪ್ತಮದಲ್ಲಿ ಇದ್ದು,  ನಿಮ್ಮ ಗುರುಗಳ ವಚನ ಮೀರದಿರಿ. ಗುರು ಅಷ್ಟೋತ್ತರ ಪಾರಾಯಣ ಮಾಡಿ.
ಕುಂಭ: ಶನಿಯು ಕುಂಭ ರಾಶಿಯನ್ನು ಬಿಟ್ಟು ಮೀನ ರಾಶಿಗೆ ಹೋಗಿ ಇನ್ನು ಒಂದು ವರ್ಷ ಗುರು ಮನೆಯಲ್ಲಿ ಇರುವುದರಿಂದ  ದೈವ ಯೋಗದಿಂದ ತೃಪ್ತಿಕರ ಜೀವನ ನಡೆಸಲು ಯಾವ ಅಡ್ಡಿ ಆತಂಕ ಇಲ್ಲ. ಶನಿಯನ್ನು ಪೂಜಿಸಿ. 6ನೇ ಮನೆಯ ಗುರುವಿಗೆ,  ಗುರು ದತ್ತಾತ್ರೇಯನನ್ನು ಆರಾಧಿಸಿ. ನಿಮ್ಮ ಸಮಯವು ಸುಧಾರಿಸುತ್ತದೆ.
ಮೀನ: ದ್ವಾದಶದಲ್ಲಿ ರಾಹು, ಲಗ್ನದಲ್ಲಿ ಶನಿ. ಈ ಎರಡು ಪಾಪಗ್ರಹ ಏನನ್ನು ಕೊಡುತ್ತಾವೆಂದು ಯೋಚಿಸಲು ಆಗುವುದಿಲ್ಲ. ಗುರುವು ಪಂಚಮದಲ್ಲಿ ಇದ್ದು, ಈ ಸಮಯದಲ್ಲಿ ಉಪಾಯದಿಂದ ಜೀವನ ನಡೆಸಿ ನಂಜನಗೂಡಿನಲ್ಲಿರುವ ಪಾರ್ವತಿ ಸಹಿತ ಶ್ರೀಕಂಠೇಶ್ವರನನ್ನು ಪೂಜಿಸಿ. ಈಶ್ವರನೇ ನಿಮ್ಮ ಸಹಾಯಕನಾಗಿ ಇದ್ದು ನಿಮ್ಮ ಜೀವನದ ಸಂಕೋಲೆ ಬಿಡಿಸಿ ಜೀವನ ರೂಪಿಸಿಕೊಡುತ್ತಾನೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net