_1771695570478.webp?w=480&auto=format%2Ccompress&fit=max)
_1771695570478.webp?w=480&auto=format%2Ccompress&fit=max)
ಮೇಷ: ಸೂರ್ಯನು ರಾಹು ಸಂಪರ್ಕದಲ್ಲಿ ಇರುವುದರಿಂದ ಅಲ್ಪ ಕಾಲದಲ್ಲಿ ಮಾರ್ಚ್ 15 ಕಳೆಯುವವರೆಗೂ ಕೆಲಸದಲ್ಲಿ ನಿರೀಕ್ಷಿಸಿದ ಪ್ರಗತಿ ಅಥವಾ ಪರಿಪೂರ್ಣತೆ ನೀಡಲು ಅಸಾಧ್ಯ. ರಾಹುವನ್ನು ಪೂಜಿಸಿ, ನಾಗರಾಜ ಅಷ್ಟೋತ್ತರ ಪಠಿಸಿ. ರವಿ ಶುಭಫಲ ನೀಡುತ್ತಾನೆ. ಗುರು ತೃತೀಯದಲ್ಲಿದ್ದು, ನಿಮ್ಮ ಕೆಲಸ ಮಾಡಿಕೊಳ್ಳಲು ಸರಿಯಾದ ಸಮಯವಿದು.
ವೃಷಭ: ಏಕಾದಶದಲ್ಲಿ ಶನಿಯಿದ್ದು ನಿರಾಸೆಗೆ ಕಾರಣವಿಲ್ಲ. ಆಸೆಯೂ ಈಡೇರುತ್ತದೆ. ನಮ್ಮ ವ್ಯವಹಾರ, ಸಂಕಲ್ಪ ಹಾಗೂ ಧ್ಯೇಯಗಳ ಪ್ರಯತ್ನಗಳ ಶುದ್ಧವಾಗಿರಬೇಕು. 2027ರ ಜೂನ್ 2ರವರೆಗೆ ಶನಿಯು 11ನೇ ಮನೆಯಲ್ಲಿ ಭಾಗ್ಯದಲ್ಲಿ ಇರುವುದರಿಂದ ಭಾಗ್ಯ ಚಕ್ರ ತಿರುಗುತ್ತದೆ. ಹೇಳಿಕೊಂಡಿರುವ ದೈವದ ಹರಕೆಯನ್ನು ತೀರಿಸಿದರೆ ಯಾವ ಬಾಧೆ ಇರುವುದಿಲ್ಲ. ಜೋಪಾನವಾಗಿ ಸಾಗಿದರೆ ನಿರೀಕ್ಷಿಸಿದ ಫಲವನ್ನು ದೇವರೇ ನೀಡುತ್ತಾನೆ.
ಮಿಥುನ: ಈ ರಾಶಿಗೆ ಲಗ್ನದಲ್ಲಿ ಗುರು ದಶಮದಲ್ಲಿ ಶನಿಯಿದ್ದು, ಶುಭಗ್ರಹಗಳು ಶುಭಫಲ ನೀಡುತ್ತವೆ. ಗುರುವಿನ ಮೇಲೆ ವಿಶ್ವಾಸವಿದ್ದು, ಕರ್ತವ್ಯ ಪ್ರಜ್ಞೆಯಿಂದ ಕೊಟ್ಟ ಮಾತು ಉಳಿಸಿಕೊಳ್ಳಿ. ದೈವಭಕ್ತಿಯಿಂದ ಗುರುವನ್ನು ಶಿವನರೂಪಿಯಾಗಿ ಪೂಜಿಸಿದರೆ ನಿಮಗೆ ಅಸಾಧ್ಯವಾದುದು ಯಾವುದೂ ಇಲ್ಲ. ಶಿವನ ತ್ರಿಶತಿನಾಮ ಪಠಿಸಿ. ಒಳ್ಳೆಯದಾಗುತ್ತದೆ.
ಕಟಕ: ಈ ರಾಶಿಗೆ 9ರ ಶನಿಯು ನಿರಂತರವಾಗಿ ಒಳ್ಳೆಯದನ್ನು ಮಾಡುತ್ತಲೇ ಇರುತ್ತಾನೆ. ಆಶ್ಲೇಷ ನಕ್ಷತ್ರದಲ್ಲಿ ಜನಿಸಿದವರು ಸುಬ್ರಹ್ಮಣ್ಯ ದೇವರನ್ನು ಪೂಜಿಸಲೇಬೇಕು. ಶಿವಧ್ಯಾನ ಮಾಡಿ. ಶಿವನಿಗೆ ಅಭಿಷೇಕವನ್ನು ಮಾಡಿಸಿ. ಬಿಲ್ವಪತ್ರೆಯಿಂದ ಪೂಜಿಸಿ. ತಿಲಾಕ್ಷತೆ ಸಮರ್ಪಣೆ ಮಾಡಿ ಪ್ರಾರ್ಥಿಸಿದರೆ ಏನೇನು ಬೇಕೋ ಎಲ್ಲವನ್ನು ಶಿವನೇ ನೀಡುತ್ತಾನೆ.
ಸಿಂಹ: ಈ ರಾಶಿಯವರಿಗೆ ಕೇತುವು ಅಲ್ಲೇ ಇದ್ದು ಏಕಾದಶದ ಗುರುಬಲವಿದೆ. ಬುದ್ಧಿಬಲ, ಧೈವಬಲ, ಗ್ರಹಬಲ ಎಲ್ಲವನ್ನು ಮೀರಿಸುವುದು ಗುರುಬಲವೊಂದೇ. ಶಿವಧ್ಯಾನ ಮಾಡಿ ಶಿವನ ಮಗನಾದ ಗಣಪತಿಯನ್ನು ಪೂಜಿಸಿದರೆ ಮುಂದೆ ಸಾಗಲು ಅನುಕೂಲವಾಗುತ್ತದೆ. ಅಷ್ಟಮದಲ್ಲಿ ಶನಿಯಿರುವುದರಿಂದ ಕೆಲಸವು ಹಿಂದೆ ಮುಂದಾದರೂ ದೈವಸಂಕಲ್ಪದಿಂದ ಉತ್ತಮ ರೀತಿಯಿಂದ ನಡೆದು ಹೋಗುತ್ತದೆ.
ಕನ್ಯಾ: ಈ ರಾಶಿಯವರಿಗೆ ಶನಿಯು ಸಪ್ತಮದಲ್ಲಿದ್ದು, ಗುರು ದಶಮದಲ್ಲಿದ್ದಾನೆ. ಜಾಗರೂಕರಾಗಿ ನಡೆಯುವ ಸಮಯವು ಬಂದಿದೆ. 7ನೇ ಮನೆ, 8ನೇ ಮನೆಯ ಶನಿಯು ಸಂಚಾರಕ್ಕೆ ಶನಿಶಾಂತಿಯನ್ನು ಮಾಡಿದರೆ ಗ್ರಹವು ತೃಪ್ತಿಯಾಗಿ ನಿಮ್ಮ ಕೆಲಸವು ನಡೆಯುತ್ತದೆ. ವಿಷ್ಣು ಸಹಸ್ರನಾಮ ಪಾರಾಯಣದಿಂದ ಶುಭಫಲ ದೊರಕಿ ಮನಃ ಸಂತೋಷ ಉಂಟಾಗುತ್ತದೆ.
ತುಲಾ: ನ್ಯಾಯದ ಸಂಕೇತ ತಕ್ಕಡಿ ಜಯ- ಅಪಜಯದ ಸಂಕೇತವೂ ಹೌದು. ಶನಿಗ್ರಹವು 6ರಲ್ಲಿ, 9ರಲ್ಲಿ ಗುರುವಿರುವುದು ನಿಮಗೆ ಚಿನ್ನ, ಬೆಳ್ಳಿ, ವಜ್ರ ವೈಢೂರ್ಯ ಇದ್ದಂತೆ. ನಿಮ್ಮಲ್ಲಿ ಸತ್ಯ, ಪಾರದರ್ಶಕತೆ ಇದ್ದರೆ ಯಾವುದೂ ಕಡಿಮೆಯಾಗುವುದಿಲ್ಲ. ಒಂದೊಮ್ಮೆ ತಪ್ಪಾಗಿದ್ದರೂ ನ್ಯಾಯಯುತವಾಗಿ ಸಮರ್ಥಿಸಿಕೊಳ್ಳುವ ಶಕ್ತಿಯನ್ನು ನೀಡಿ ಜನರು ನಿಮ್ಮನ್ನು ಕೊಂಡಾಡುತ್ತಾರೆ. ದುರ್ಗೆಯ ಪ್ರಾರ್ಥನೆ ಇರಲಿ.
ವೃಶ್ಚಿಕ: ಪಂಚಮ ಶನಿಯಲ್ಲಿ ಕೈ,ಕಾಲು, ಮೂಳೆ, ಬೆನ್ನು ಎಲ್ಲವನ್ನು ಸ್ವಸಾಮರ್ಥ್ಯದಿಂದ ಸರಿಯಾಗಿ ಇಟ್ಟುಕೊಳ್ಳುವುದು ಮನುಷ್ಯನ ಧ್ಯೇಯವಾಗಿರಲಿ. ಪಂಚೇಂದ್ರಿಯ ಸರಿಯಾಗಿದ್ದರೆ ಮನುಷ್ಯನ ಪರಿಪೂರ್ಣ ಆಹಾರ. ಪಂಚಮ ಶನಿಯು ಎಂತಹ ಶಕ್ತಿಶಾಲಿಯನ್ನು ಕೂಡ ಮುಗಿಸಿಬಿಡುತ್ತಾನೆ. ಶನಿಮಹಾರಾಜನನ್ನು ವಿಶೇಷವಾಗಿ ಪೂಜಿಸಿ. ದಾನವನ್ನು ಕೊಟ್ಟು ಪಾಪಗಳನ್ನು ಪರಿಹರಿಸಿಕೊಳ್ಳಿ.
ಧನಸ್ಸು: ಚತುರ್ಥದಲ್ಲಿ ಶನಿಯಿದ್ದು, ಗುರು ಸಪ್ತಮದಲ್ಲಿದ್ದು, ನಿಮ್ಮನ್ನು ಕಾಪಾಡುತ್ತಾನೆ. ಪರ್ವತವೇ ತಲೆಯ ಮೇಲೆ ಬಿದ್ದರೂ ನಿಮಗೆ ಏನೂ ಆಗುವುದಿಲ್ಲ. ಆ ಪರ್ವತವೇ ವಾಯುವಿಗೆ ಸಿಲುಕಿ ಎಲ್ಲಿಯೋ ಬೀಳುತ್ತದೆ. ಇದಕ್ಕಿಂತ ದೈವಕೃಪೆ ಬೇಕೆ? ಅಂತಹ ಗುರುದೇವರನ್ನು ಮನುಷ್ಯರಾದ ನಾವು ಭಜಿಸಲೇ ಬೇಕು. ಗುರುದತ್ತನನ್ನು ಪ್ರಾರ್ಥಿಸಿ ಪೂಜಿಸಿ.
ಮಕರ: ಈ ರಾಶಿಗೆ ತೃತೀಯ ಶನಿಬಲವೇ ಮಹಾಬಲವಾಗಿ ಪರಿವರ್ತನೆಯಾಗುತ್ತದೆ. ಸಮಸ್ಯೆ ಏನೇ ಇರಲಿ ಗುರುವನ್ನು, ಶನಿಯನ್ನು ಪೂಜಿಸಿದರೆ ಎಲ್ಲಾ ಕಾರ್ಯಗಳು ನೆರವೇರುತ್ತವೆ. ಅದರಲ್ಲೂ ಪ್ರತಿಮಾಸದಲ್ಲಿ ಚತುರ್ದಶಿಯಲ್ಲಿ ಮಾಸ ಶಿವರಾತ್ರಿಯನ್ನು ಮಾಡಿದರೆ ಧನದ ಕೊರತೆ ನೀಗಿ ಸಮೃದ್ಧಿ ನೀಡುತ್ತಾನೆ. ಶಿವಪೂಜೆ ಮಾಡಿ ಸಕಲ ಸಂಪತ್ತು ಹೊಂದಿ ಸುಖವಾಗಿರಿ.
ಕುಂಭ: ಈ ರಾಶಿಯು ಶನಿಯ ಮನೆ. ಅಲ್ಲೇ ತಂದೆಯಾದ ರವಿಯೂ ಇದ್ದಾನೆ. ಶನಿವತ್ ರಾಹು, ಕುಜವತ್ ಕೇತು ಎಂಬ ಮಾತಿದೆ. ಭಾಸ್ಕರನಿಗೆ ನಮಸ್ಕಾರ ಮಾಡಿರಿ, ಅಶ್ವತ್ಥ ಪ್ರದಕ್ಷಿಣೆ ಹಾಕಿದರೆ ಇಷ್ಟಾರ್ಥ ಸಿದ್ಧಿಸುತ್ತದೆ. ರಾಹುವಿಗೆ ಪ್ರಾರ್ಥನೆ ಇರಲಿ. ಸುಖಕ್ಕೆ ಶಿವಪಂಚಾಕ್ಷರಿಯನ್ನು ಜಪಿಸಿ.
ಮೀನ: ಜೀವನ ಶೈಲಿಯು ಬೇರೆ ಬೇರೆ ದಾರಿಯನ್ನು ತೆಗೆದುಕೊಂಡರೂ ಕವಲೊಡೆದ ದಾರಿಯಲ್ಲಿ ಹೋದರೆ ಕಾಡನ್ನು ಸೇರುತ್ತೇವೆ. ಸುಜ್ಞಾನದಿಂದ ಸತ್ಪುರುಷರ ಆಶೀರ್ವಾದ ಪಡೆದರೆ ಸನ್ಮಾರ್ಗದಲ್ಲಿ ನಡೆಯುತ್ತೇವೆ. ನಡೆಯುವ ಮಾರ್ಗ ಚೆನ್ನಾಗಿದ್ದರೆ ಪರಮಾತ್ಮನೇ ಮೆಚ್ಚಿ ನಿಮಗೆ ಭಿಕ್ಷೆಯನ್ನೇ ಭಕ್ಷ್ಯವನ್ನೂ ನೀಡುತ್ತಾನೆ. ಸಾಂಬಸದಾಶಿವನನ್ನು ಪ್ರಾರ್ಥಿಸಿ. ಶನಿಪ್ರದೋಷದ ಕಥೆಯನ್ನು ಸಾಯಂಕಾಲ ಸ್ನಾನಮಾಡಿ ಪಾರಾಯಣಮಾಡಿ ಸುಖವಾಗಿರಿ.