ವಾರಭವಿಷ್ಯ; ಈ ರಾಶಿಯವರು ಭ್ರಮರಾಂಬಾ ಸಹಿತ ಮಲ್ಲಿಕಾರ್ಜುನನನ್ನು ಪೂಜಿಸಿ ಸರ್ವಸ್ವವನ್ನೂ ಗಳಿಸಬಹುದು

weekly-horoscope
weekly-horoscope
Published on
ಮೇಷ: ಮನುಷ್ಯನು ಜನಿಸಿದ ಮೇಲೆ ಬದುಕಿಗೆ ಬೆಳಕನ್ನು ಕೊಡುವ ಸೂರ್ಯನನ್ನು ಅರ್ಚಿಸಬೇಕು. ಅವನ ಬಲದಿಂದ ಮತ್ತು ತೇಜಸ್ಸಿನಿಂದ ಆರೋಗ್ಯವನ್ನು ರಕ್ಷಿಸಿಕೊಂಡು ಕೆಲಸ ಕಾರ್ಯಗಳನ್ನು ಮುಂದುವರಿಸಿ ಶ್ರೇಯಸ್ಸನ್ನು ಸಂಪಾದನೆ ಮಾಡಬಹುದು. ಸುಬ್ರಹ್ಮಣ್ಯ ದೇವರನ್ನು ಪೂಜಿಸಿದರೆ ಆತ ವಿಶೇಷವಾದ ಲಾಭವನ್ನು ನೀಡುತ್ತಾನೆ.
ವೃಷಭ: ಈ ರಾಶಿಯವರಿಗೆ ದ್ವಾದಶದಲ್ಲಿ ಸೂರ್ಯನು ಬಂದಿದ್ದಾನೆ. ದೇವರು ಏನೇ ಕೊಟ್ಟರೂ ಆರೋಗ್ಯವನ್ನು ಹಾಳು ಮಾಡಿಕೊಂಡರೆ ಪರ್ಯಾಯ ವ್ಯವಸ್ಥೆಯೇ ಇಲ್ಲ. ದೇವರ ಸಹಾಯ ದೊರಕಲು ಪೂರ್ವ ಜನ್ಮದ ಪುಣ್ಯವಿರಬೇಕು. ದ್ವಿತೀಯದಲ್ಲಿ ಗುರುವಿದ್ದಾನೆ. ಏಕಾದಶ ಶನಿಯಿಂದ ಸಂಯಮ, ಶಿಸ್ತು ಉಂಟಾಗಲಿದೆ; ವಿದ್ಯಾವಂತರು ಹಾಗೂ ಸೌಮ್ಯಚಿತ್ತರು ನಿಮ್ಮ ಜೊತೆಯಿರಲಿದ್ದಾರೆ. ಇವರು ಮುಂದಿನ 20 ವರ್ಷಗಳ ಬದುಕನ್ನು ಗುರಿಯಾಗಿಸಿ ನಿಮ್ಮನ್ನು ಮುನ್ನಡೆಸುವರು.
ಮಿಥುನ: ಬುಧನ ಮನೆಯಲ್ಲಿ ಗುರುವಿರುವುದರಿಂದ, ಗುರುವನ್ನು ಅತ್ಯಂತ ಶ್ರದ್ಧಾ-ಭಕ್ತಿಯಿಂದ ಪೂಜಿಸಿದರೆ ಜಾಣರಾಗಿ ಎಂತಹ ಸಮಯವನ್ನೂ ದಾಟಬಹುದು. ಗುರುವು ಇನ್ನು ಒಂದೇ ತಿಂಗಳಲ್ಲಿ ದ್ವಿತೀಯಕ್ಕೆ ಸಾಗುತ್ತಾನೆ. ಗುರುವಿನ ಅಡಿಪಾಯದಲ್ಲಿ ನೀವು ಜೀವನವನ್ನು ರೂಪಿಸಿಕೊಂಡು, ಶಿವನನ್ನೇ ಗುರುಭಾವನೆಯಿಂದ ಪೂಜಿಸಿದರೆ ಗಿರಿಜಾರಮಣನೇ ನಿಮಗೆ ಕಲ್ಯಾಣವನ್ನುಂಟು ಮಾಡುತ್ತಾನೆ.
ಕಟಕ: ಈ ರಾಶಿಗೆ ದ್ವಾದಶದಲ್ಲಿ ಗುರುವಿದ್ದಾನೆ. 9ರಲ್ಲಿ ಶನಿಯಿರುವುದರಿಂದ, ನೀವು ಸಮಚಿತ್ತರಾಗಿದ್ದರೆ ಕಷ್ಟಪಡಬೇಕಾದ ಅಗತ್ಯವಿಲ್ಲ. ನಿಮ್ಮ ಹಿಂದೆಯೇ ಶತ್ರುಗಳಿದ್ದಾರೆ, ಆದ್ದರಿಂದ ಎಚ್ಚರಿಕೆಯಿಂದ ಸಾಗಬೇಕು. ಗುರುವು ನಿಮ್ಮ ರಾಶಿಗೆ ಬಂದಾಗ ಜೀವನೋಪಾಯ ಮತ್ತು ಆರೋಗ್ಯವನ್ನು ಕೊಟ್ಟು ಹರಸುತ್ತಾನೆ. ಭ್ರಮರಾಂಬಾ ಸಹಿತ ಮಲ್ಲಿಕಾರ್ಜುನನನ್ನು ಪೂಜಿಸಿ ಸರ್ವಸ್ವವನ್ನೂ ಗಳಿಸಬಹುದು.
ಸಿಂಹ: 11ನೇ ಮನೆಯಲ್ಲಿ ಗುರುವಿದ್ದಾನೆ. ಶನಿಯು ಅಷ್ಟಮದಲ್ಲಿ ಹಾಗೂ ಸಾಮಾನ್ಯವಾಗಿ 4, 5, 7, 8, 12 ರಲ್ಲಿದ್ದರೆ ಅಥವಾ ಜನ್ಮ ಶನಿಯಾಗಿದ್ದರೆ ಮನುಷ್ಯನಿಗೆ ಪರಿಪೂರ್ಣತೆ ಕೊಡುತ್ತಾನೆ. ಆದರೆ ಕೆಲಸಗಳು ಪರಿಪೂರ್ಣವಾಗದೆ ಅಡೆತಡೆಗಳು ಬರುತ್ತವೆ. ಅಲ್ಲಿಯೇ ಕೇತುವೂ ಇದ್ದಾನೆ. ಗಣೇಶನನ್ನು ಪೂಜಿಸಿದರೆ ಆತ ಕಾರ್ಯಗಳಲ್ಲಿ ಯಶಸ್ಸು ನೀಡಿ, ಗುರುವಿನ ಏಕಾದಶ ಸ್ಥಾನದ ಅನುಗ್ರಹವನ್ನೂ ಕೊಡಿಸುತ್ತಾನೆ.
ಕನ್ಯಾ: ಗುರುವು ಏಕಾದಶ ಸ್ಥಾನಕ್ಕೆ ಬರಲು ಇನ್ನೂ 40 ದಿನಗಳ ಕಾಲ ನಿರೀಕ್ಷಿಸಬೇಕು. ಗುರುವಿನ ನೇರ ಸಂಚಾರ ಇರುವುದರಿಂದ ನಿಮ್ಮ ಸಮಸ್ಯೆಗಳಿಗೆ ಶೀಘ್ರವೇ ಪರಿಹಾರ ಸಿಗಲಿದೆ. ಇದರಿಂದ ಎಲ್ಲರೂ ನಿಮ್ಮ ನಗುಮುಖವನ್ನು ಕಾಣುವಂತಾಗುತ್ತದೆ. ಮುಖದ ಮೇಲಿನ ನಗುವು ನಿಮ್ಮ ಮನಸ್ಸಿಗೆ ಅಪಾರ ಸಂತೋಷವನ್ನು ನೀಡುತ್ತದೆ.
ತುಲಾ: ಗುರು ಗ್ರಹವು 9ರಲ್ಲಿ ಹಾಗೂ ಶನಿಯು ಗುರುವಿನೊಂದಿಗೆ 6ರಲ್ಲಿ ಇರುವುದರಿಂದ ನಿಮ್ಮ ಭಾಗ್ಯದ ಬಲ ಎಂತಹದ್ದು ಎಂಬುದು ಈಗ ನಿಮಗೆ ಅರಿವಾಗಲಿದೆ. ಭಗವಂತನೇ ನಿಮ್ಮನ್ನು ಮೆಚ್ಚಿ ಶ್ರೇಯಸ್ಸು ಮತ್ತು ಯಶಸ್ಸನ್ನು ನೀಡುತ್ತಿರುವಾಗ ಬೇರೆಯವರನ್ನು ಏನನ್ನೂ ಕೇಳುವ ಅಗತ್ಯವಿಲ್ಲ. ಭಗವಂತನು ನಿಮಗೆ ಸಕಲ ಭಾಗ್ಯಗಳನ್ನು ನೀಡಿ ಹರಸುತ್ತಾನೆ. ನಿಮ್ಮ ಮನದಾಳದಲ್ಲಿ ಸದಾ ಗುರು ಪ್ರಾರ್ಥನೆ ಇರಲಿ.
ವೃಶ್ಚಿಕ: ಶನಿ ಮತ್ತು ಗುರು ಗ್ರಹಗಳು ತಮ್ಮ ಸ್ಥಾನಗಳನ್ನು ಬದಲಿಸಿ ನಿಮಗೆ ಶ್ರೇಯಸ್ಸನ್ನು ಉಂಟುಮಾಡಲು ಸ್ವಲ್ಪ ಸಮಯ ಕಾಯಬೇಕಾಗುತ್ತದೆ. ಇವು ಶೀಘ್ರವೇ ನವಮ ಸ್ಥಾನಕ್ಕೆ ಬರಲಿವೆ. ಗುರುವಿಗೆ ಕಟಕ ರಾಶಿಯು ಉಚ್ಚ ಸ್ಥಾನವಾಗಿದ್ದು, ಅಲ್ಲಿ ಸ್ಥಿರವಾದ ಯೋಗವನ್ನು ಉಂಟುಮಾಡಿ ನಿಮ್ಮ ಕಷ್ಟ-ನಷ್ಟಗಳನ್ನು ಪರಿಹರಿಸುತ್ತಾನೆ ಹಾಗೂ ಲಾಭ-ಯಶಸ್ಸನ್ನು ತಂದುಕೊಡುತ್ತಾನೆ. ಶನಿಯು ಪಂಚಮದಲ್ಲಿ ಇರುವುದರಿಂದ ನಿಮ್ಮ ಆರೋಗ್ಯದ ಬಗ್ಗೆಯೂ ಹೆಚ್ಚಿನ ಗಮನವಿರಲಿ.
ಧನಸ್ಸು: ಸಪ್ತಮದಲ್ಲಿ ಗುರುವೂ, ನಾಲ್ಕನೇ ಮನೆಯಲ್ಲಿ ಶನಿಯೂ ಇದ್ದಾರೆ. ಆದ್ದರಿಂದ ಅನಗತ್ಯ ಚಿಂತೆಗಳಿಗೆ ಎಡೆಮಾಡಿಕೊಡದೆ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸುವುದು ಅವಶ್ಯಕ. ಗುರುವು ಅಷ್ಟಮ ಸ್ಥಾನಕ್ಕೆ ಬಂದರೂ ಅಲ್ಲಿ ಆತ ಉಚ್ಚನಾಗಿರುವುದರಿಂದ ನಿಮ್ಮ ಶ್ರೇಯಸ್ಸನ್ನು ಆತನೇ ಕಾಪಾಡುತ್ತಾನೆ. ಗುರುನಾಮ ಸ್ಮರಣೆಯಿಂದ ಅತ್ಯಧಿಕ ಲಾಭ ಮತ್ತು ಮನೋಭಿಲಾಷಿತ ಫಲಗಳು ಪ್ರಾಪ್ತಿಯಾಗುತ್ತವೆ.
ಮಕರ: ಮುಖದಲ್ಲಿ ಮಂದಹಾಸ, ಕಣ್ಣಿನಲ್ಲಿ ಹೊಳಪು ಹಾಗೂ ಆತ್ಮದಲ್ಲಿ ಶುದ್ಧತೆ ಇರಲಿ. ಪ್ರಾರ್ಥನೆಯಲ್ಲಿ ಏಕಾಗ್ರತೆ ಮತ್ತು ಭಕ್ತಿ ಇದ್ದರೆ ಯಾವುದನ್ನು ಬೇಕಾದರೂ ಸಾಧಿಸಬಹುದು. ಶನಿಯು ನಿಮಗೆ ಸಂಪತ್ತನ್ನು ನೀಡಿ ಕಷ್ಟಗಳನ್ನು ನೀಗಿಸುತ್ತಾನೆ. ಪ್ರಸ್ತುತ ಗುರು ದೃಷ್ಟಿ ಸ್ವಲ್ಪ ಕಡಿಮೆ ಇರುವುದರಿಂದ ಸದ್ಗುರು ಸಾಯಿನಾಥನನ್ನು ಭಕ್ತಿಯಿಂದ ಪೂಜಿಸಿ.
ಕುಂಭ: ಕಬ್ಬಿಗೆ ಸೋಂಕು ತಗುಲಿದರೂ ಅದರ ಸಿಹಿ ಕಡಿಮೆಯಾಗುವುದಿಲ್ಲ. ಅಂತಹ ಇಕ್ಷುವಿನಿಂದ (ಕಬ್ಬಿನ ರಸ) ಈಶ್ವರನಿಗೆ ಅಭಿಷೇಕ ಮಾಡುವುದು ಅತ್ಯಂತ ಶ್ರೇಷ್ಠ. ರಾಜರಾಜೇಶ್ವರಿ ಪೂಜೆಗೂ ಇಕ್ಷುದಂಡವೇ ಶ್ರೇಷ್ಠವಾದುದು. ಒಮ್ಮೆ ಕಮಲಶಿಲೆಯ ಶ್ರೀ ದುರ್ಗಾಪರಮೇಶ್ವರಿಯನ್ನು ದರ್ಶಿಸಿ ಪೂಜೆ ಸಲ್ಲಿಸಿ ಬನ್ನಿ. ನಿಮ್ಮ ಜೀವನದ ಮುಚ್ಚಿದ ಬಾಗಿಲನ್ನು ಅವಳೇ ತೆರೆಯುತ್ತಾಳೆ; ಸಾಧ್ಯವಾದರೆ ಒಂದು ಹೊರೆ ಕಬ್ಬನ್ನು ದುರ್ಗಾ ದೇವಸ್ಥಾನಕ್ಕೆ ಅಥವಾ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕಾಣಿಕೆಯಾಗಿ ನೀಡಿ.
ಮೀನ: ಸಕಾಲಕ್ಕೆ ಮಳೆ ಬಾರದಿದ್ದರೆ ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗುತ್ತದೆ ಮತ್ತು ಭೂಮಿ ಒಣಗುತ್ತದೆ. ಆ ಮಳೆಯಂತೆ ನಿಮ್ಮ ಆತ್ಮದಿಂದ ಹರಿಯುವ ಭಕ್ತಿಯು ಭಗವಂತನ ಪಾದವನ್ನು ತಲುಪಬೇಕು. ದೃಢವಾದ ಭಕ್ತಿ ಮತ್ತು ಭಗವಂತನಲ್ಲಿ ವಿಶ್ವಾಸವಿದ್ದರೆ ಶನಿ ಸಂಚಾರದ ದೋಷಗಳಿಂದ ಪಾರಾಗಿ ಉತ್ತಮ ಫಲಗಳನ್ನು ಪಡೆಯಬಹುದು. ಪಂಚಮ ಸ್ಥಾನಕ್ಕೆ ಗುರು ಬರಲಿದ್ದಾನೆ, ಆ ಗುರುವೇ ನಿಮಗೆ ಶ್ರೇಯಸ್ಸನ್ನು ತರುತ್ತಾನೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net