ವಾರಭವಿಷ್ಯ: ಈ ರಾಶಿಯವರು ನಿಮಗೆ ಮೌನವೇ ದಾರಿ. ಕುಟುಂಬದಲ್ಲಿ ಕಲಹ, ಸಂಘರ್ಷ ಜೀವನ ಬೇಡ.

bh
Published on

ಮೇಷ: ಮೇಷ ರಾಶಿಯಿಂದ ಸೂರ್ಯನು 14-5-24ರಂದು ವೃಷಭ ರಾಶಿಯನ್ನು ಪ್ರವೇಶಿಸುತ್ತಾನೆ. ಅಂಗಾರಕನ ಮನೆಯಲ್ಲಿ ಬುಧನು ಇದ್ದಾನೆ. ರವಿ-ಶುಕ್ರರು ವೃಷಭದಲ್ಲಿ ದ್ವಿತೀಯ ಗುರುವು ಶುಭವನ್ನು, ಮನಸ್ಸಿಗೆ ಆಹ್ಲಾದವನ್ನು ತಂದುಕೊಡುವ ಸಮಯವಿದು. ಬುಧನು ಮೇಷ ರಾಶಿಯಲ್ಲಿ ಇರುವುದರಿಂದ ಈ ವಾರದಲ್ಲಿ ಮೇಷ ರಾಶಿಯವರು ವಿಶೇಷವಾಗಿ ಮಹಾವಿಷ್ಣು ಸ್ವರೂಪಿ ನರಸಿಂಹನನ್ನು ಪೂಜಿಸಿ.

ವೃಷಭ: ಲಗ್ನದಲ್ಲಿ ಗುರು-ಶುಕ್ರರು, ಸೂರ್ಯನೂ ಬಂದು ಸೇರುವುದರಿಂದ ಗುರುವಿನ ಸಂಯೋಗದಲ್ಲಿ ಶುಕ್ರನು ಸ್ವಕ್ಷೇತ್ರದಲ್ಲಿದ್ದು ಆಸೆಗಳು ಈಡೇರುವ ಸಮಯ. ಅತಿ ಆಸೆ ದುಃಖಕ್ಕೆ ಕಾರಣ. ಗುರು-ಶುಕ್ರರು ಏಕರಾಶಿಯಲ್ಲಿ ಇರುವುದರಿಂದ ಶುಕ್ರನಿಗೆ ನೀಳಾದೇವಿಯನ್ನು ಪೂಜಿಸಿ. ಉಮಾಮಹೇಶ್ವರ ಅಷ್ಟೋತ್ತರ ಪಾರಾಯಣ ಮಾಡಿ.

ಮಿಥುನ: ಒಂಬತ್ತರ ಶನಿಯನ್ನು ಬಿಟ್ಟರೆ ಯಾವ ಗ್ರಹಗಳೂ ಅನುಕೂಲಕರ ಪರಿಸ್ಥಿತಿಯಲ್ಲಿ ಇಲ್ಲದಿರಲು, ದ್ವಾದಶ ಗುರುವೂ ನೆರವಾಗುವುದಿಲ್ಲ. ಎಲ್ಲೆಲ್ಲಿಯೂ ಕ್ರೋಧವು ಮನಸ್ಸಿಗೆ ಅತಿಯಾದ ದುಃಖವು ವ್ಯಕ್ತಿತ್ವಕ್ಕೆ ಧಕ್ಕೆಯು ಉಂಟಾಗುವ ಸಮಯ. ದ್ವಾದಶ ಗುರುವಿಗೆ ದತ್ತಾತ್ರೇಯನನ್ನು ಪೂಜಿಸಿ. ಆಕಳ ತುಪ್ಪದಿಂದ ದೀಪ ಹಚ್ಚಿ. ಪ್ರಾರ್ಥನೆ ಸಲ್ಲಿಸಿ.

ಕಟಕ: 11ರಲ್ಲಿ ಗುರು, ಶುಕ್ರರು ಇದ್ದು, ಬೇಡಿಕೆ ನೆರವೇರಿಸಿ ಶುಭ, ಆರೋಗ್ಯ, ಮೇಲಿಂದ ಮೇಲೆ ತೀರ್ಥಕ್ಷೇತ್ರ ಸಂದರ್ಶನ ಮಾಡಿಸಿ ಸಂತೋಷದಲ್ಲಿಟ್ಟು ಕಾಪಾಡುತ್ತಾನೆ. ಪಾರ್ವತಿ ಸಹಿತ ಶ್ರೀಕಂಠೇಶ್ವರನನ್ನು ಪೂಜಿಸಿ. ಯಾವ ದುಃಖವೂ ಹತ್ತಿರ ಸುಳಿಯದು.

ಸಿಂಹ: ಶ್ರೀರಾಮಚಂದ್ರನು ಮನುಷ್ಯನಿಗೆ ಬೆಲೆ ಎಷ್ಟು ಕೊಟ್ಟಿದ್ದಾನೋ, ಅವನೇ ಸೃಷ್ಟಿ ಮಾಡಿರುವ ಈ ಜಗತ್ತಿನ ಪ್ರತಿಯೊಂದು ಜೀವಿಗೂ ತೃಣ-ಕಾಷ್ಟ, ಸಸ್ಯ- ಮೃಗಗಳಿಗೂ ಜೀವಾತ್ಮ ಕೊಟ್ಟು ಅಲ್ಲೂ ಸಂಚಾರ ಮಾಡುತ್ತಾನೆ. ದಶಮ ಗುರು ಕಾಪಾಡುತ್ತಾನೆ. ಅಂಗಾರಕನು ಭಾಗ್ಯದ ಬಾಗಿಲು ತೆಗೆದು ಹರಿಯೇ ಸಲಹುತ್ತಾನೆ. ಇಷ್ಟದಂತೆ ಧನ-ಸಂಪತ್ತು ಸಿಗುತ್ತದೆ.

ಕನ್ಯಾ: ಕನ್ಯಾ ರಾಶಿಗೆ 9ರ ಗುರು, 6ರ ಶನಿ ಇದ್ದರೂ ಲಗ್ನದಲ್ಲಿ ಕೇತು ಇರುವುದರಿಂದ ಗಣಪತಿಯನ್ನು ಪೂಜಿಸಿ. ಇಷ್ಟ ದೇವರನ್ನು ಪ್ರಾರ್ಥಿಸಿ. ಹಿರಿಯರ ಅನುಗ್ರಹ ಸಂಪಾದಿಸಿ. ನಿಮಗೆ ತೃಪ್ತಿಕರವಾದ ಧನ, ಕೆಲಸದಲ್ಲಿ ಜಯ, ಕೊಟ್ಟು ವ್ಯವಹಾರ ನಿಮ್ಮಂತೆ ಆಗುತ್ತದೆ. ನೋವು ಉಂಟು ಮಾಡಿದವರು ಅದರ ಫಲ ಅವರೇ ಅನುಭವಿಸುತ್ತಾರೆ. ಅದರ ಯೋಚನೆ ನಿಮಗೆ ಬೇಡ. ಕಾಯಲು ದೇವರಿದ್ದಾನೆ. ಒಳ್ಳೆಯದಾಗುತ್ತದೆ.

ತುಲಾ: ರಾಶ್ಯಾಧಿಪತಿ ಶುಕ್ರನು, ಗುರುವು ಅಷ್ಟಮಕ್ಕೆ ಹೋಗಿದ್ದರೂ, ಶುಕ್ರನ ಮನೆಯಲ್ಲಿ ಗುರುವು ಏನೂ ತೊಂದರೆ ಮಾಡಲಾರನು. ನಿತ್ಯ ವ್ಯವಹಾರ, ಕಾರ್ಯ ಚಟುವಟಿಕೆ ನಿಮ್ಮ ಕರ್ತವ್ಯಪ್ರಜ್ಞೆ, ಕೀರ್ತಿ-ಧೈರ್ಯ ಧನ ಕಡಿಮೆಯಾಗದು. ಮಹಾಲಕ್ಷ್ಮೀಯನ್ನು ಪೂಜಿಸಿ. ಅದು ನಿಮ್ಮ ಆದ್ಯ ಕರ್ತವ್ಯ. ಗುರು ಚರಿತ್ರೆಯ ಪಾರಾಯಣವೇ ನಿಮ್ಮ ಪ್ರಾಣವಾಗಿರಲಿ.

ವೃಶ್ಚಿಕ: ಸಪ್ತಮದಲ್ಲಿ ಗುರುವಿದ್ದಾಗ ಬೇರೆ ಯಾವುದೇ ಗ್ರಹ ದುರ್ಬಲವಾದರೂ ಅದನ್ನು ತಡೆದು ನಿಮಗೆ ಮಂಗಳಕರವಾದ ಸುದ್ದಿಯನ್ನು ಧನವನ್ನು ಕರುಣಿಸಿ ನಿಮ್ಮನ್ನು ಕಾಪಾಡುವುದರಲ್ಲಿ ಸಂದೇಹವಿಲ್ಲ. ಬರಬೇಕಾದ ಹಣ ಬಂದು ನಿಮ್ಮ ಕಷ್ಟ ಕಾರ್ಪಣ್ಯ ಕಳೆದು ಸುಖವನ್ನು ಪಡೆಯುವ ಕಾಲವಿದು. ಮಾತೆಗಿಂತ ದೇವರಿಲ್ಲ. ತಂದೆಯ ಕರುಣೆಯನ್ನು ಯಾರೂ ಕೊಡಲಾಗದು. ಸದಾ ಕಾಲ ಅವರ ಸ್ಮರಣೆ ಇರಲಿ.

ಧನಸ್ಸು: ಗುರುವು ಷಷ್ಟಕ್ಕೆ ಹೋಗಿದ್ದಾರೆ. ಶುಕ್ರನ ಮನೆಯಲ್ಲಿ ಇರುವುದರಿಂದ ಯಾವುದೇ ಕೆಟ್ಟ ಫಲ ಕೊಡನು. ಗುರು ಚರಿತ್ರೆಯ ಒಂದು ಅಧ್ಯಾಯವನ್ನು ಓದಿ ನಿಮ್ಮ ಸಂರಕ್ಷಣೆ ನೀವೇ ಮಾಡಿಕೊಳ್ಳಬೇಕು. ಕೀರ್ತಿಯನ್ನು ಅತಿಶಯವಾಗಿ ಕೊಟ್ಟು ಶಾಂತಿ ಸಮಾಧಾನದಿಂದ ಒಳ್ಳೆಯ ಕೆಲಸ ಮಾಡಿಸುತ್ತಾನೆ.

ಮಕರ: ಮಕರ ರಾಶಿಯವರಿಗೆ ಪಂಚಮ ಗುರು-ಶುಕ್ರರು ಇದ್ದು, ಶುದ್ಧವಾದ ಬೆಳಕು-ಗಾಳಿಯನ್ನು ಕೊಡಲು ಸೂರ್ಯನು ಬಂದು ಕುಳಿತಿದ್ದಾನೆ. ರಾತ್ರಿಯಲ್ಲಿ ಕತ್ತಲಿಗೆ ದೀಪ ಬೇಕೇ ಬೇಕು. ಸೂರ್ಯ ರಶ್ಮಿಯೂ, ಯಾವ ದೀಪವೂ ನಿಮಗೆ ಬೇಡ. ನಿಮ್ಮ ಸತ್ಕರ್ಮವೇ ದಾರಿದೀಪವಾಗುವ ಒಳ್ಳೆಯ ಕಾಲವನ್ನು ಸುಖವಾಗಿ ಅನುಭವಿಸಿ. ನಿತ್ಯವೂ ಭ್ರಮರಾಂಬಿಕೆ ಸಹಿತ ಮಲ್ಲಿಕಾರ್ಜುನನ್ನು ಪೂಜಿಸಿ. ಶಿವನನ್ನು ತಪ್ಪದೇ ದರ್ಶಿಸಿ ಬನ್ನಿ.

ಕುಂಭ: ಕುಂಭ ರಾಶಿಯವರಿಗೆ ದ್ವಿತೀಯದಲ್ಲಿ ಶನಿಯಿದ್ದು, ಕುಟುಂಬ ಸ್ಥಾನದಲ್ಲಿ ರಾಹುವಿದ್ದಾನೆ. ನಿಮ್ಮನ್ನು ನೀವು ತಿದ್ದಿಕೊಂಡು ನಡೆಯಿರಿ. ನಿಮಗೆ ಮೌನವೇ ದಾರಿ. ಕುಟುಂಬದಲ್ಲಿ ಕಲಹ, ಸಂಘರ್ಷ ಜೀವನ ಬೇಡ. ಇನ್ನು 2 ವರ್ಷ ಕಾಲ ಪ್ರಾತಃಕಾಲದಲ್ಲಿ ಶಿವಪೂಜೆ ಮಾಡಿ ಸಾಯಂಕಾಲದಲ್ಲಿ ದುರ್ಗೆಯನ್ನು ಪೂಜಿಸಿ. ದುರ್ಗಾದೀಪ ನಮಸ್ಕಾರ ಮಾಡಿ. ಮುಂದೆ ಒಳ್ಳೆಯ ದಿನಗಳು ಬರಲಿವೆ.

ಮೀನ: ಹನುಮಂತನು ಮೇರು ಪರ್ವತ ತುಳಿದು ಲಂಕೆಗೆ ಹೊರಟಾಗ ದಾರಿಯಲ್ಲಿ ಗಂಧರ್ವ ಸ್ತ್ರೀಯು ಅವನನ್ನು ಪರೀಕ್ಷಿಸಲು ಬಾಯಿಯನ್ನು ಹೊಕ್ಕಿ ಹೊರಬಾ ಮುಂದೆ ದಾರಿ ತೋರುತ್ತೇನೆ ಎನ್ನುತ್ತಾಳೆ. ಅವಳಾಜ್ಞೆಯಂತೆ ನಡೆದು ಸಾಗಿದಾಗ ಮೈನಾಕ ಪರ್ವತ ತನ್ನ ಆತಿಥ್ಯಸ್ವೀಕರಿಸು ಎಂದಾಗ ಈಗ ಶ್ರೀರಾಮಸೇವೆಯಲ್ಲಿದ್ದೇನೆ ಎಂದು ಹೇಳಿ ಮುಂದುವರೆಯುತ್ತಾನೆ. ಹಾಗೆಯೇ ನೀವು ಸ್ವಾಮಿನಿಷ್ಠೆ ಇಟ್ಟುಕೊಂಡು ಮುನ್ನಡೆಯಿರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net