ವಾರಭವಿಷ್ಯ: ಈ ರಾಶಿಯವರು ನಿಮ್ಮ ಧೈರ್ಯ, ಸ್ಥಿರ ಮನಸ್ಸು ಮತ್ತೊಬ್ಬರಿಗೆ ದಾನ ಮಾಡಿದ ವಿದ್ಯೆ ನಿಮಗೆ ಪುಣ್ಯವನ್ನು ತರುತ್ತದೆ.

ww
Published on

ಮೇಷ: ರಾಶಿಯಲ್ಲಿ ಸೂರ್ಯನಿದ್ದು, ಗುರು ವೃಷಭ ರಾಶಿಯನ್ನು ಸೇರಿದ್ದಾನೆ. ಮೇಷ ರಾಶಿಯವರಿಗೆ ಇದು ಸಂತಸದ ಕಾಲ. ವಸಂತ ಋತು ಒಳ್ಳೆಯ ಶುಭ ಫಲವನ್ನು ಪಡೆಯುವ ಕಾಲವಾಗಿದ್ದು, ಈ ವೈಶಾಖ ಮಾಸದಲ್ಲಿ ನರಸಿಂಹನನ್ನು ಆರಾಧಿಸಿ. ಕುಜನ ಆಧಿಪತ್ಯ ಇರುವ ರಾಶಿಯಲ್ಲಿ ಹುಟ್ಟಿದ ನೀವು ಸುಬ್ರಹ್ಮಣ್ಯನನ್ನು ಪ್ರಾರ್ಥಿಸಿ, ಪೂಜಿಸಿ. ಒಳ್ಳೆಯ ಸಮಯವೂ ಇದ್ದು, ಮನಸ್ಸಿಗೆ, ದೇಹಕ್ಕೆ ಉಲ್ಲಾಸ, ಆನಂದವೂ ದೊರಕಿ ಸುಖವಾಗಿರುತ್ತೀರಿ.

ವೃಷಭ: ಗುರುವು ಜನ್ಮಕ್ಕೆ ಬಂದಿದ್ದಾನೆ. ಆದರೆ ನಿಮ್ಮಂತೆ ನೀವು ಇರದೆ ಪಾಪಗಳನ್ನು ಗುಣಿಸಿಕೊಂಡು ಇನ್ನೊಬ್ಬರ ಶಾಪಕ್ಕೆ ಗುರಿಯಾಗುವ ಕಾಲ. ಎಚ್ಚರಿಕೆಯಿಂದ ಸಾಗಿರಿ. ಏಕಾದಶ ರಾಹು ಎಷ್ಟು ಒಳ್ಳೆಯವನೋ ಅಷ್ಟೇ ತೀಕ್ಷ್ಣನೂ ಹೌದು. ಅನ್ನದ ಪಾತ್ರೆ ತೂತಾದರೆ ಒಲೆಯೂ ಕೆಟ್ಟು ಅನ್ನವೂ ಇಲ್ಲ ನೀರೂ ಇಲ್ಲ ಎನ್ನುವಂತೆ ಮಾಡಿಕೊಳ್ಳಬೇಡಿ. ದುರ್ಗೆಯ ಪ್ರಾರ್ಥನೆ ಇರಲಿ. ಕಷ್ಟಗಳ ಪರಂಪರೆಯಿಂದ ನಿಮ್ಮನ್ನು ಹೊರ ತರುತ್ತಾಳೆ.

ಮಿಥುನ: ಮಿಥುನ ರಾಶಿಯವರಿಗೆ ಸಾವಧಾನ ಸಮಾಧಾನ ಎರಡೇ ದಾರಿ ಉಂಟು. ಸಾವಧಾನದಿಂದ ಇದ್ದರೆ ಜೀವನವನ್ನು ಗೆಲ್ಲಬಹುದು. ಸಮಾಧಾನದಿಂದಿದ್ದರೆ ಶಾಂತಿಯು ಲಭಿಸುತ್ತದೆ. ಮಾಡುವ ಕೆಲಸದಲ್ಲಿ ಜಯವನ್ನು ನೋಡಬಹುದು. ಗುರುಬಲವಿಲ್ಲ. ಶನಿಯು ಮಧ್ಯಮ ವರ್ಗದಲ್ಲಿ ಇದ್ದಾನೆ. ಆಗುಹೋಗುಗಳು ಏನೇ ಇರಲಿ, ವ್ಯಕ್ತಿತ್ವಕ್ಕೆ ಕುಂದು ಬಾರದಂತೆ ನೋಡಿಕೊಳ್ಳಬೇಕು. ರಾಮ ತಾರಕ ಮಂತ್ರವನ್ನು ಪಠಿಸಿ. ತಪ್ಪನ್ನು ತಿದ್ದಿಕೊಂಡು ಸಜ್ಜನರಾಗಿ ಬದುಕುವ ಕಾಲವಿದು.

ಕಟಕ: ಏಕಾದಶಿ ಗುರುವು ಸಾಕ್ಷಾತ್ ಪರಮೇಶ್ವರನೇ ಯಾವುದಕ್ಕೂ ಕೊರತೆ ಇಲ್ಲದಂತೆ ಮಾಡುತ್ತಾನೆ. ನಿಮ್ಮ ಮುಖದ ಕಾಂತಿ ವೃದ್ಧಿಸಿ ತೇಜೋಮಯವಾಗಿ ಶೋಭಿಸುತ್ತೀರಿ. ಪುರುಷರು ಬ್ರಹ್ಮತೇಜಸ್ಸಿನಿಂದ, ಹೆಣ್ಣು ಮಕ್ಕಳು ಮಹಾ ಸರಸ್ವತಿಯ ರೂಪದಿಂದ ಜೀವಿಸುವ ಒಳ್ಳೆಯ ಕಾಲ. ಅನ್ಯರಿಗೆ ಉಪಕಾರ ಮಾಡಬೇಕು. ಸಮಾಧಾನ ಚಿತ್ತರಾಗಿ ಎಲ್ಲರ ಕುಂದುಕೊರತೆ ವಿಚಾರಿಸಿ ಸಹಾಯ ಹಸ್ತ ನೀಡಿ. ಶಿವ ಸಹಸ್ರನಾಮ ಪಾರಾಯಣ ಮಾಡಿ.

ಸಿಂಹ: ದಶಮ ಗುರು ಕೈ ಹಿಡಿದು ನಡೆಸುತ್ತಾನೆ. ಶನಿಯು ಎಲ್ಲೇ ಇರಲಿ, ಯಾವ ಮನೆಗಾದರೂ ಹೋಗಲಿ, ಶಿವನ ಧ್ಯಾನ, ಆದಿತ್ಯ ಹೃದಯ ಪಾರಾಯಣ ಹಾಗೂ ನಾಗರಾಜ, ಗಣಪತಿಯ ಪೂಜೆ ಮಾಡಿದಲ್ಲಿ ನಿಮ್ಮ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂಬುದನ್ನು ಮರೆಯದಿರಿ. ನಿಮ್ಮ ಧೈರ್ಯ, ಸ್ಥಿರ ಮನಸ್ಸು ಮತ್ತೊಬ್ಬರಿಗೆ ದಾನ ಮಾಡಿದ ವಿದ್ಯೆ ನಿಮಗೆ ಪುಣ್ಯವನ್ನು ತರುತ್ತದೆ.

ಕನ್ಯಾ: ಪೌರ್ಣಮಿಯ ಚಂದ್ರನು ಪರಿಪೂರ್ಣವಾಗಿ ಆಕಾಶದಲ್ಲಿ ಮಿಂಚಿ ತನ್ನ ಪೌರ್ಣಮಿಯ ಬೆಳಕಿನಿಂದ ಮಂದಹಾಸವನ್ನು ಬೀರುತ್ತಾನೆ. ತದನಂತರ ಅಮಾವಾಸ್ಯೆಯ ಕತ್ತಲಲ್ಲಿ ಸಿಲುಕುತ್ತಾನೆ. ಈ ಸಮಯದಲ್ಲಿ ನಿಮಗೆ ಶನಿ ಗುರು ಚಂದ್ರನಿಗಿಂತ ಮಿಗಿಲಾದ ಬೆಳಕನ್ನು ನೀಡುತ್ತಾರೆ. ನಿಮಗೆ ಬೇಕಾದ್ದನ್ನು ಕೊಡುತ್ತಾರೆ. ಇನ್ನೂ ಹೆಚ್ಚು ದೇವತಾ ಪೂಜೆ, ಪ್ರಾರ್ಥನೆ ಮಾಡಿದಲ್ಲಿ ಎಲ್ಲವನ್ನೂ ಪಡೆಯುವ ಕಾಲ. ಸುದರ್ಶನ ಅಷ್ಟೋತ್ತರ ಪಠಿಸಿ. ಸಾಧ್ಯವಾದರೆ ಸುದರ್ಶನ ಹೋಮವನ್ನು ಮಾಡಿ. ನಿಮ್ಮ ಬುದ್ಧಿ ಧನ ವೃದ್ಧಿಯಾಗಿ ಸುಖವಾಗಿ ಇರುತ್ತೀರಿ.

ತುಲಾ: ಶನಿಯ ಉಚ್ಚ ಸ್ಥಾನವಾದ ತುಲಾ ರಾಶಿಗೆ ಅವನು ಪಂಚಮದಲ್ಲಿದ್ದರೂ ಯಾವ ಕೆಡುಕನ್ನೂ ಮಾಡಲಾರ. ಆದರೆ ಗುರು ಅಷ್ಟಮಕ್ಕೆ ಹೋಗಿ ಅನ್ಯರ ದುಷ್ಟ್ಟಾರಿಷ್ಟಗಳು ನಿಮ್ಮನ್ನು ಬಾಧಿಸಬಹುದು. ಅದನ್ನು ಕಳೆಯಲು ದೈವ ಸಹಾಯ, ಪ್ರಾರ್ಥನೆ, ಸ್ಥಿರ ಮನಸ್ಸು ಬೇಕೇ ಬೇಕು. ನಕಾರಾತ್ಮಕ ಚಿಂತನೆ ಬೇಡ. ಹಯಗ್ರೀವ ಅಷ್ಟೋತ್ತರ ಪಠಿಸಿ.

ವೃಶ್ಚಿಕ: ಚತುರ್ಥದಲ್ಲಿ ಶನಿ ಇದ್ದರೂ ಏನೂ ತೊಂದರೆ ಮಾಡಲಾರ. ಶನಿಯಿಂದ ಭಯವೂ ಬೇಡ. ಎಲ್ಲಿಯೂ ಹುಡುಕಿಕೊಂಡು ಓಡಬೇಡಿರಿ. ನಿಮಗೆ ಸಪ್ತಮದಲ್ಲಿರುವ ಗುರು ನೀವಿದ್ದಲ್ಲಿಗೆ ನೀವು ಇಷ್ಟಪಟ್ಟ ಧನ ಲಾಭವನ್ನು ತಂದು ಋಣವನ್ನು ಪರಿಹರಿಸಿ ಕಾಪಾಡುವ ಕಾಲವಿದು. ಗುರು ಚೆನ್ನಾಗಿರುವ ಕಾಲದಲ್ಲಿ ಗುರು ಚರಿತ್ರೆ 14ನೇ ಅಧ್ಯಾಯ ಪಾರಾಯಣ ಮಾಡಿ. ಸಾಧ್ಯವಾದಲ್ಲಿ ಈ 14 ತಿಂಗಳಲ್ಲಿ ದತ್ತನ ಸ್ಥಾನವಾದ ಪೀಠಾಪುರ, ಗಾಣಗಾಪುರಕ್ಕೆ ತೆರಳಿ ದತ್ತನ ದರ್ಶನವನ್ನು ಮಾಡಿ ಬನ್ನಿ. ನರಸಿಂಹನ ಋಣವನ್ನು ತೀರಿಸಲು ಮರೆಯದಿರಿ.

ಧನಸ್ಸು: ಇಂಗಿಲ್ಲದೆ ಅಡುಗೆ ಇಲ್ಲ. ಮಂಗನಿಲ್ಲದ ಊರಿಲ್ಲ. ಆ ದೇವರೇ ರಾವಣನ ಸಂಹಾರ ಮಾಡಲು ಹಾಕಿಕೊಂಡ ಮಾಯಾವೇಷವದು. ಸ್ಥಿರವಾದ ಮನಸ್ಸು ನಿಮ್ಮದಾಗಲಿ. ಮಾಡುವ ಕೆಲಸದಲ್ಲಿ ಜಯವನ್ನು ಕಾಣುವಿರಿ. ನಿಮ್ಮ ಚಿತ್ತವನ್ನು ಎತ್ತಲೂ ಹರಿಯದ ಹಾಗೆ ನೋಡಿಕೊಂಡು ‘ಅತ್ತಿತ್ತ ನೋಡದಿರು, ಶ್ರೀರಂಗನ ಮರೆಯದಿರು’ ಎಂಬಂತೆ ಬಾಳನ್ನು ಸಾಗಿಸಿ.

ಮಕರ: ಪಂಚಮಂ ಕಾರ್ಯ ಸಿದ್ಧಿ ಎಂಬಂತೆ ಗುರು ಪಂಚಮಕ್ಕೆ ಬಂದಾಗ ಏಕಾಗ್ರತೆ ಏಕದೃಷ್ಟಿಯಿಂದ ನಿಮ್ಮ ಕೆಲಸವನ್ನು ಮಾಡಿಕೊಂಡು ಶ್ರೇಯಸ್ಸಿನಿಂದ ಬದುಕಬಹುದು. ಗುರುವಿನ ಬಲವಿದ್ದು 12ರ ಶನಿ ಏನೂ ಮಾಡಲಾರ. ಶನಿಯ ಪ್ರಾರ್ಥನೆ ಇರಲಿ. ಶನೇಶ್ವರ ಅಷ್ಟೋತ್ತರ ಪಠಿಸಿ. ಶಿವಾಲಯಕ್ಕೆ ಹೋಗಿ ಪ್ರದೋಷದಲ್ಲಿ ಪೂಜೆಯನ್ನು ಮಾಡಿಸಿ. ಈಶ್ವರನ ಅನುಗ್ರಹವನ್ನು ಪಡೆದು ಬನ್ನಿ.

ಕುಂಭ: ಮಣ್ಣಿನ ಕುಂಭಕ್ಕೆ ಭಾರ ಹೇರಿದರೆ ಒಡೆದು ಚೂರಾಗುತ್ತದೆ. ತಾಮ್ರದ ಕುಂಭದಲ್ಲಿ ನೀರಿಟ್ಟರೆ ಆರೋಗ್ಯಕ್ಕೆ ಒಳ್ಳೆಯದು. ಬೆಳ್ಳಿಯ ಕುಂಭದಲ್ಲಿ ನೀರನ್ನು ಕುಡಿದರೆ ಭಾಗ್ಯವೇ ನಿಮ್ಮದಾಗುತ್ತದೆ. ಈ ಮೂರರಲ್ಲಿ ಏನು ಬೇಕೆಂದು ನೀವೇ ನಿರ್ಧಾರ ಮಾಡಿ. ಶನಿಯು ಲಗ್ನದಲ್ಲಿದ್ದು, ಶನೀಶ್ವರನ ಧ್ಯಾನವನ್ನು ಎಡಬಿಡದೆ ಮಾಡಿ. ಶ್ರೀರಾಮಚಂದ್ರನ ಪಟ್ಟಾಭಿಷೇಕದ ಸ್ವರ್ಗವನ್ನು ಪಾರಾಯಣ ಮಾಡಿ. ನಿಮ್ಮ ಧನದ ಕೊರತೆ ನೀಗಲು ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ.

ಮೀನ: ಗುರುವಿನ ಮನೆಯಲ್ಲಿ ಜನಿಸಿದ ನಿಮಗೆ ತೃತೀಯದಲ್ಲಿ ಗುರು ಇರುವುದರಿಂದ ಯಾವ ಕಷ್ಟಗಳೂ ಬರುವುದಿಲ್ಲ. ಶನಿಯು ಇನ್ನೂ ಹನ್ನೆರಡರಲ್ಲಿ ಇರುವುದರಿಂದ ಮನಸ್ಸಿನ ಶಾಂತಿ ಕದಡಿ ಎಲ್ಲರ ಮೇಲೂ ಅನುಮಾನ ಪಡುವ ಸಂದರ್ಭ ತಂದುಕೊಂಡು ದುಃಖ ಪಡದಿರಿ. ನಿಮ್ಮನ್ನು ನೀವು ಅರ್ಥೈಸಿಕೊಂಡು ಆತ್ಮ ಜೀವಾತ್ಮ ಪರಮಾತ್ಮನ ಅನುಸಂಧಾನ ಮಾಡಿ. ದುರ್ಗಾ ಸಹಸ್ರನಾಮ ಪಾರಾಯಣ ಮಾಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net