ವಾರಭವಿಷ್ಯ: ಈ ರಾಶಿಯವರು ಮಾತಿಗೆ ಮಾತು ಜೋಡಿಸಿ ಸಂಸಾರದಲ್ಲಿ ಅಶಾಂತಿ ತಂದುಕೊಳ್ಳಬೇಡಿ

ome
Published on

ಮೇಷ: ಯಾವ ತಪ್ಪೂ ಮಾಡದಂತೆ ಮುಂದೆ ಹೋದರೆ ಒಳ್ಳೆಯದಾಗುತ್ತದೆ. ಕೊಡುವವರಿಗೆ ದೇವರೇ ಕೊಡುತ್ತಾನೆ. ಧನ, ಸುಖ, ಶಾಂತಿ ತರುತ್ತಾನೆ. ಕೊಡದವರಿಗೆ ಕಂಡೂಕಾಣದವರಿಗೆ ಬಿಟ್ಟುಹೋಗುವುದೇ ಅವರ ಕರ್ಮಫಲವಾಗುತ್ತದೆ. ಕೊಟ್ಟದ್ದಕ್ಕೆ ಸಂತೋಷಪಡಿ. ಕೊಟ್ಟಿದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ ಎಂಬುದನ್ನು ಅರಿತು ಜೀವನ ಸಾಗಿಸಿ.

ವೃಷಭ: ಶನಿಸಂಚಾರದಲ್ಲಿ ವ್ಯತ್ಯಯವಾಗುವುದರಿಂದ ನಿಮ್ಮ ಅಭೀಷ್ಟಗಳು ಪೂರೈಸಿ ಧನಸಂಪತ್ತು ವೃದ್ಧಿಸಿ ನಿಮ್ಮನ್ನು ಆಪಾದನೆಯಿಂದ ಮುಕ್ತರನ್ನಾಗಿ ಮಾಡಿ ಸನ್ಮಾರ್ಗಕ್ಕೆ ತರುತ್ತಾನೆ. ಸಂಕಲ್ಪದಲ್ಲಿ ಶುದ್ಧತೆ, ಮನಸ್ಸಿನಲ್ಲಿ ಶಾಂತಿ ಇರಲಿ. ಕೆಟ್ಟ ಆಲೋಚನೆ ದೂರವಿಟ್ಟು ದೈವಕ್ಕೆ ತಲೆಬಾಗಿ. ನಿಮ್ಮ ಛಲ ಮುಂದುವರಿಸಿ. ದೈವವು ನಿಮ್ಮ ಪಾಲಿಗಿದೆ.

ಮಿಥುನ: ಗುರುಬಲವಿಲ್ಲದೆ ನಲುಗುವುದು ಸಹಜವೇ. ಆದರೂ ಪೂರ್ವ ಜನ್ಮದಪುಣ್ಯದಿಂದ ಅಪೂರ್ವ ಸ್ಥಾನಮಾನ ಪಡೆದಿದ್ದೀರಿ. ಹಾಗೆ ಭಾವಿಸಿ ಕಾರ್ಯಗಳಲ್ಲಿ ತೊಡಗಿಕೊಳ್ಳಿ. ಕೆಲಸ ಸರಾಗವಾಗಿ ಸಾಗಿ ಸಂತೋಷವನ್ನು ಕೊಡುತ್ತದೆ. ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ.

ಕಟಕ: ವಿಶೇಷ ಕೊಡುಗೆಯನ್ನು ಭಗವಂತನೇ ಕೊಡುತ್ತಾನೆ. ಎಂದೂ ಮನಸ್ಸಿಗೆ ವಿರುದ್ಧವಾಗಿ ನಡೆಯದೆ ಶಾಂತವಾಗಿದ್ದರೆ ಜೀವನವನ್ನು ಉತ್ತುಂಗಕ್ಕೆ ಕೊಂಡೊಯ್ಯಬಹುದು. ಪಾರ್ವತಿಸಹಿತ ಸಾಂಬಸದಾಶಿವನನ್ನು ಪ್ರಾರ್ಥಿಸಿ. ಶನಿ ಅಷ್ಟಕವನ್ನು ಪಾರಾಯಣ ಮಾಡಿ.

ಸಿಂಹ: ದೈವವೇ ಸಕಲಾಭೀಷ್ಟವನ್ನು ಕರುಣಿಸಿ ಮನಃಶಾಂತಿ ಕೊಟ್ಟು ನಿಮ್ಮ ಪೂರ್ವಪುಣ್ಯದ ಫಲದಿಂದ ಉತ್ತುಂಗಕ್ಕೆ ಕೊಂಡೊಯ್ಯುತ್ತದೆ. ಸೂರ್ಯನಾರಾಯಣನನ್ನು ಪ್ರಾರ್ಥಿಸಿ. ಶಾಂತಚಿತ್ತರಾಗಿ ಮುನ್ನಡೆದರೆ ನೀವು ದೇವರನ್ನೇ ಕಾಣಬಹುದು. ಸುಬ್ರಹ್ಮಣ್ಯನ ಪೂಜೆ ಅತ್ಯಗತ್ಯ.

ಕನ್ಯಾ: ಹೆಣ್ಣು ಮೃದುಸ್ವಭಾವದವಳು. ಹೆಣ್ಣು ರೊಚ್ಚಿಗೆದ್ದರೆ ಪರಾಕ್ರಮಿ ರಾವಣನೇ ಉಳಿಯಲಿಲ್ಲ. ಹೆಣ್ಣನ್ನು ಜೋಪಾನವಾಗಿ ಕಾಪಾಡಿಕೊಂಡು ಸಾಗಿದರೆ ಕನ್ಯಾ ರಾಶಿಯವರಿಗೆ ಕನ್ಯಾಕುಮಾರಿಯೇ ಒಳ್ಳೆಯದನ್ನು ಮಾಡುತ್ತಾಳೆ. ಸಾಧ್ಯವಾದರೆ ಕನ್ಯಾಕುಮಾರಿಯನ್ನು ದರ್ಶಿಸಿ ಬನ್ನಿ.

ತುಲಾ: ಏನೇ ಇದ್ದರೂ ಎಲ್ಲೇ ಇದ್ದರೂ ನೀವು ಕಾರ್ಯ ಸಾಧಕರು, ಶ್ರಮಜೀವಿಗಳು. ಕೆಲಸ ಒಂದು ಹಂತ ಮುಟ್ಟುವವರೆಗೆ ನಿದ್ದೆಯೂ ಬರುವುದಿಲ್ಲ. ಹಸಿವೂ ಆಗುವುದಿಲ್ಲ. ಅಂತಹ ಸಂಕಲ್ಪ ಹೊಂದಿರುವ ನೀವು ದೃಢಭಕ್ತಿಯಿಂದ ದುರ್ಗೆಯ ಧ್ಯಾನ, ಗುರುಚರಿತ್ರೆಯ 16ನೇ ಅಧ್ಯಾಯ ಪಾರಾಯಣ ಮಾಡಿ. ಎಲ್ಲವೂ ಸಮತೋಲನದಲ್ಲಿ ಸಾಗಿ ದುರ್ಗೆ ನಿಮ್ಮನ್ನು ರಕ್ಷಿಸುತ್ತಾಳೆ.

ವೃಶ್ಚಿಕ: ಗುರು ಇಲ್ಲದಿದ್ದರೆ ಗುರಿ ಮುಟ್ಟಲು ಸಾಧ್ಯವಿಲ್ಲ. ಗುರು ಒಬ್ಬನನ್ನು ನಂಬಿದರೆ, ನಿಮ್ಮನ್ನು ಇನ್ನಷ್ಟು ಉನ್ನತಿಗೆ ಕೊಂಡೊಯ್ಯುತ್ತಾನೆ. ಸ್ವಾಭಿಮಾನ, ಸತ್ಯಸಂಕಲ್ಪ ಅತ್ಯಗತ್ಯ. ಸುಬ್ರಹ್ಮಣ್ಯನ ಧ್ಯಾನ ಸದಾ ಇರಲಿ. ನಿಮ್ಮ ಗುರುಗಳಿಗೆ ಶರಣಾಗಿ. ನಿಮ್ಮನ್ನು ರಕ್ಷಿಸಿ ಶ್ರೀರಾಮನು ಹನುಮಂತನನ್ನೇ ಆಲಂಗಿಸಿದಂತೆ ಧೈರ್ಯ ಸ್ಥೈರ್ಯ ಕೊಟ್ಟು ಕೆಲಸಗಳಲ್ಲಿ ಜಯ ತಂದುಕೊಡುತ್ತಾರೆ.

ಧನಸ್ಸು: ಗುರುವು ಷಷ್ಠದಲ್ಲಿದ್ದು ಶನಿಯು ವಕ್ರಗತಿಯಲ್ಲಿ ಮಕರಕ್ಕೆ ಬಂದರೂ ಶನಿಗೆ ಮಕರ ರಾಶಿಯು ಸ್ವಕ್ಷೇತ್ರದಲ್ಲಿರುತ್ತಾನೆ. ಅವನು ಹಿಂದೆ ಬಂದಾಗ ಮುಂದೆ ಆಗಬೇಕಾದ ಕೆಲಸದಲ್ಲಿ ಧೈರ್ಯ, ಸ್ಥೈರ್ಯ, ಐಶ್ವರ್ಯ, ಸುಖವನ್ನು ಕೊಡುತ್ತಾನೆ. ಶಿವಪಂಚಾಕ್ಷರೀ ಜಪ ಮಾಡಿರಿ. ಶಿವನನ್ನು ಒಲಿಸಿಕೊಳ್ಳಿ.

ಮಕರ: ಈ ರಾಶಿಯವರಿಗೆ ಪಂಚಮದಲ್ಲಿ ಗುರುವಿದ್ದು ವಕ್ರಗತಿಯಲ್ಲಿ ಶನಿ ಜನ್ಮಕ್ಕೆ ಬರುವುದು, ಬಿಟ್ಟುಹೋದ ಶನಿಯು ಮತ್ತೆ ಬಂದಿದ್ದು, ಸತ್ಯವೇ ಸೂರ್ಯ, ಸುಳ್ಳೇ ಕತ್ತಲು, ಸತ್ಯವೇ ಸ್ವರ್ಗ, ಸುಳ್ಳೇ ನರಕವಾಗಿರುತ್ತದೆ. ನಷ್ಟವನ್ನು ತುಂಬಿಕೊಡಲು ಸುಖ, ಧನ, ಆರೋಗ್ಯ, ಒಳ್ಳೆಯ ಮಾರ್ಗ ತೋರಿಸುತ್ತಾನೆ. ನ. 16ರವರೆಗೆ ಸೋಮವಾರದಂದು ಉಪವಾಸ ಮಾಡಿ. ಶಿವನನ್ನು ಪ್ರಾರ್ಥಿಸಿ.

ಕುಂಭ: ಜೀವನದಲ್ಲಿ ಕೆಲವೊಮ್ಮೆ ವಿಭಿನ್ನ ವಿಚಾರಗಳು ಹೇಗೆ ಬಂದರೂ ಸಹಿಸಿಕೊಳ್ಳಬೇಕು. ದೇವರು ಕಷ್ಟ ಕೊಡುವುದು ನಮ್ಮ ಒಳ್ಳೆಯದಕ್ಕಾಗಿಯೇ. ನಾವು ಆಸೆಪಟ್ಟ ವಸ್ತುವು ಸಿಗದಿದ್ದಾಗ ಮನಸ್ಸಿಗೆ ನೋವಾಗುವುದು ಸಹಜ. ಆದರೆ ಅದರಲ್ಲಿರುವ ನಕಾರಾತ್ಮಕ ಗುಣ ತಡೆಯಲು ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಗುರುಚರಿತ್ರೆಯ 14ನೇ ಅಧ್ಯಾಯ ಓದಿರಿ. ನೆಮ್ಮದಿ, ಸುಖ, ಇಚ್ಛಿತ ಫಲ ದೊರಕುತ್ತದೆ.

ಮೀನ: ಮತ್ತೆ ಶನಿಯ ಸಂಚಾರವು ವಕ್ರಗತಿಯಲ್ಲಿ 11ಕ್ಕೆ ಬಂದು ನ.16ರವರೆಗೆ ಸಮಸ್ಯೆಗಳಿಗೆ ಪರಿಹಾರ ದೊರಕುತ್ತದೆ. ಸತತ ಪ್ರಯತ್ನವಿರಲಿ. ಗುರುಹಿರಿಯರ ಅನುಗ್ರಹದಿಂದ, ತಂದೆ-ತಾಯಿ ಆಶೀರ್ವಾದದಿಂದ ಎಲ್ಲ ಕಷ್ಟ ದೂರವಾಗಿ ರಾಶ್ಯಾಧಿಪತಿ ಗುರು ಮತ್ತು ಶನಿಯ ಏಕಾದಶ ಸ್ಥಾನ ನಿಮ್ಮನ್ನು ಕಾಪಾಡುತ್ತದೆ. ಮಾತಿಗೆ ಮಾತು ಜೋಡಿಸಿ ಸಂಸಾರದಲ್ಲಿ ಅಶಾಂತಿ ತಂದುಕೊಳ್ಳಬೇಡಿ. ಮೌನವೇ ಪರಮೌಷಧ. ಅಶ್ವಿನೀ ದೇವತೆಯನ್ನು ಪ್ರಾರ್ಥಿಸಿ. ಧನ್ವಂತರಿ ಅಷ್ಟೋತ್ತರ, ಮೂಲಮಂತ್ರ ಜಪಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net