

ಮೇಷ: ಈ ಭಾನುವಾರ ಜು. 21 ವ್ಯಾಸಪೂರ್ಣಿಮೆಯಾಗಿದ್ದು, ದ್ವಾದಶ ರಾಶಿಯವರು ಗುರುಗಳನ್ನು ಪೂಜಿಸಿ ಪ್ರಾರ್ಥಿಸಿ. ಹಿರಿಯರು ಹಾಗೂ ನಿಮ್ಮ ಗುರುಗಳು ಹಾಕಿಕೊಟ್ಟ ದಾರಿಯನ್ನು ಅರಿತು ಸನ್ಮಾರ್ಗದಲ್ಲಿ ಸಾಗಬೇಕು. ಕುಜನೂ ವೃಷಭ ರಾಶಿಯಲ್ಲಿ ಇರುವುದರಿಂದ ಮೇಷ ರಾಶಿಯವರು ಎಚ್ಚರಿಕೆಯಿಂದ ಸಾಗಬೇಕು. ಅಹಿತಕರ ಘಟನೆಗಳು ನಡೆಯುವ ಸಂಭವವಿರುವುದರಿಂದ ದೇವರ ಧ್ಯಾನವೇ ನಿಮಗೆ ಔಷಧವಾಗಿರಲಿ.
ವೃಷಭ: ವೃಷಭದಲ್ಲಿ ಗುರು ಇದ್ದು ಅಂಗಾರಕನ ಜತೆ ಇದ್ದಾನೆ. ಸದ್ಭಕ್ತಿ ಸದ್ಭಾವನೆಯಿಂದ ಜೀವನ ಸಾಗಿಸಬೇಕು. ಸ್ವಾರ್ಥ ಬಿಟ್ಟು ನೀವು ಎಲ್ಲರಿಗೂ ಹಿತವಾಗುವ ಕಾರ್ಯವನ್ನು, ಉಪಕಾರವನ್ನು ಮಾಡಿದರೆ ಗುರುವೇ ನಿಮ್ಮ ಕೈಹಿಡಿಯುತ್ತಾನೆ. ದೈವವನ್ನು ಪ್ರಾರ್ಥಿಸಿ, ಸೂಕ್ಷ್ಮ ವಿಚಾರಗಳಿಂದ ದೂರವಿರಿ. ದೇವರ ನಾಮವೇ ನಿಮಗೆ ಆಧಾರ.
ಮಿಥುನ: ಈ ರಾಶಿಯವರಿಗೆ ದ್ವಾದಶದಲ್ಲಿ ಗುರು ಅಂಗಾರಕನು ಇರುವುದು ಅಷ್ಟೇನೂ ಒಳ್ಳೆಯದಲ್ಲ. ರಾಮಾಯಣ ಪಾರಾಯಣ ಮಾಡಿದರೆ ರಾಮನು ಕಷ್ಟಗಳನ್ನು ಸುಖಕ್ಕೆ ಪರಿವರ್ತಿಸುತ್ತಾನೆ. ರಾಮತಾರಕ ಮಂತ್ರ ಜಪಿಸಿದರೆ ಎಂತಹ ದುಃಖವನ್ನೂ ಗೆಲ್ಲಬಹುದು. ಯಾವ ವಿಚಾರಗಳಲ್ಲೂ ಸಿಲುಕದೆ ಎಚ್ಚರಿಕೆಯಿಂದ ಮುಂದೆ ಸಾಗಬೇಕು.
ಕಟಕ: ಈ ರಾಶಿಯವರಿಗೆ ಏಕಾದಶದಲ್ಲಿ ಅಂಗಾರಕ ಗುರು ಇದ್ದು ಗುರುಮಂಗಳ ಯೋಗವನ್ನು ಕರುಣಿಸುತ್ತಾನೆ. ಗುರುವಿನಿಂದ ಭಾಗ್ಯ, ಅಂಗಾರಕನಿಂದ ಕಾರ್ಯಜಯ ಆಗುವುದರಲ್ಲಿ ಸಂದೇಹವಿಲ್ಲ. ಯಾರು ದೇವರ ನಾಮ ಜಪಿಸುತ್ತಾರೋ ಅವರಿಗೆ ಜೀವನದಲ್ಲಿ ಅಡ್ಡಿ ಆತಂಕಗಳು ಬರುವುದಿಲ್ಲ. ಸುಂದರಕಾಂಡ ಪಾರಾಯಣ ಮಾಡಿ. ಹನುಮಂತನನ್ನು ಪ್ರಾರ್ಥಿಸಿದರೆ ಏನನ್ನು ಬೇಕಾದರೂ ಪಡೆಯಬಹುದು.
ಸಿಂಹ: ಗುರು ವಕ್ರದಲ್ಲಿ ಸಾಗಿ ಸಪ್ತಮ ಸ್ಥಾನದಲ್ಲಿ ಬಂದು ಸುಖ ಕೊಡುತ್ತಾನೆ. ಅಂಗಾರಕನು ಭಾಗ್ಯವನ್ನು ಕೊಡುತ್ತಾನೆ. ಗುರುವಿನ ಪ್ರಾರ್ಥನೆ ಇರಲಿ, ಗುರು ದಕ್ಷಿಣಾಮೂರ್ತಿಯನ್ನು ಪ್ರಾರ್ಥಿಸಿ, ಕಡಲೆ ಬೇಳೆ ದಾನ ಕೊಡಿ. ಎಲ್ಲವೂ ನಿಮಗೆ ಬೇಕಾದಂತೆ ನಡೆದು ಸಂತೋಷವನ್ನು ಉಂಟು ಮಾಡುತ್ತದೆ.
ಕನ್ಯಾ: ಈ ರಾಶಿಗೆ ಶನಿಯು ಚೆನ್ನಾಗಿದ್ದು ಗುರು ಹಿಂದೆ ಬಂದಿದ್ದಾನೆ. ಯಾವ ಗುರು ದ್ರೋಹವನ್ನೂ ಮಾಡಬಾರದು. ಕೊಟ್ಟ ಮಾತಿನಿಂದ ತಪ್ಪಿಸಿಕೊಂಡು ನಡೆಯುವುದನ್ನು ಮಾಡಲೇಬಾರದು. ಗುರುವಿನಲ್ಲಿ ವಿಶ್ವಾಸವಿಟ್ಟು ಜೀವನದಲ್ಲಿ ಮುಂದೆ ಸಾಗಬೇಕು. ಗುರು ದತ್ತಾತ್ರೇಯನನ್ನು ಪ್ರಾರ್ಥಿಸಿ.
ತುಲಾ: ಜಗದೋದ್ಧಾರಕ ಜಗದ್ರಕ್ಷಕನಾದ ಕೃಷ್ಣನು ತುಲಾಭಾರದಲ್ಲಿ ತೂಗಿದಾಗ ತುಳಸಿಯ ದಳದಿಂದ ಅವನ ತೂಕವು ಸಮತೋಲನವಾಯಿತು. ತಕ್ಕಡಿಯ ಚಿಹ್ನೆ ಹೊಂದಿರುವ ರಾಶಿ ನಿಮ್ಮದು. ಆತಂಕಕ್ಕೆ ಒಳಗಾಗಬೇಡಿ. ಶನಿಯು ಪಂಚಮದಲ್ಲಿದ್ದರೂ ತುಲಾ ರಾಶಿಯು ಶನಿಗೆ ಉಚ್ಚ ಸ್ಥಾನವಾದ್ದರಿಂದ ಎಲ್ಲ ಸಂಕಟ ಪರಿಹರಿಸುತ್ತಾನೆ. ಯಾವುದೇ ಕಹಿ ಘಟನೆ ನಡೆದರೂ ದೈವೇಚ್ಛೆ ಎಂದು ಅರ್ಥೈಸಿಕೊಂಡು ಛಲ-ಬಲದಿಂದ ಬದುಕಬೇಕು. ವಕ್ರಗತಿಯಲ್ಲಿ ಗುರು ಸಪ್ತಮಕ್ಕೆ ಬಂದಿದ್ದಾನೆ. ನಿತ್ಯವೂ ಗುರು ಚರಿತ್ರೆಯ ಪಾರಾಯಣವಿರಲಿ. ದುರ್ಗೆಯನ್ನು ಆರಾಧಿಸಿ.
ವೃಶ್ಚಿಕ: ಜೋರಾಗಿ ವರ್ಷ ಧಾರೆಯು ಭೂಮಿಯ ಮೇಲೆ ಬಿದ್ದು ಎಲ್ಲವೂ ಸಮುದ್ರವನ್ನು ಸೇರಿದರೆ ಏನು ಪ್ರಯೋಜನ? ಅದೇ ವರ್ಷ ಧಾರೆಯ ಜಲವನ್ನು ಸಂರಕ್ಷಣೆ ಮಾಡಿದರೆ ಎಲ್ಲರೂ ಸ್ಮರಿಸುತ್ತಾರೆ. ಅದರಂತೆ ಧನಧಾರೆಯು ನಿಮ್ಮ ಕೈ ಸೇರಿ ಕಷ್ಟಗಳು ದೂರವಾಗಿ ಸುಖ ಕಾಣುವ ಕಾಲ ಹತ್ತಿರದಲ್ಲಿದೆ. ನಿಮಗೆ ದಾರಿ ತೋರಿಸಿದ ಗುರುಗಳನ್ನು ಮರೆಯದಿರಿ. ಅನುಗ್ರಹ ಬೇಕಾದಲ್ಲಿ ಗುರುವನ್ನು ಪೂಜಿಸಿ. ಕಾರ್ಯಸಿದ್ಧಿಯಾಗುತ್ತದೆ.
ಧನಸ್ಸು: ಷಷ್ಟ ಗುರು ವಕ್ರಗತಿಯಲ್ಲಿ ಪಂಚಮಕ್ಕೆ ಬಂದಿದ್ದು ಗುರುವಿನ ಬಲವಿದೆ. ಶನಿಯು ವಕ್ರಗತಿಯಲ್ಲಿ ಮಕರ ರಾಶಿಯಲ್ಲಿ ಇರುವುದರಿಂದ ಯಾವುದೇ ಕಾರ್ಯಗಳಿಗೆ ಕೈ ಹಾಕುವ ಮುನ್ನ ಯೋಚಿಸಿ, ದುಷ್ಟರ ಸಂಗವನ್ನು, ಅರಿಷ್ಟವನ್ನು ದೂರ ಮಾಡಿಕೊಂಡರೆ ಉತ್ತಮ. ವಿನಾಕಾರಣ ಮನಸಿಗೆ ಒತ್ತಡ ಮಾಡಿಕೊಳ್ಳದೆ ಜಾಣ್ಮೆಯಿಂದ ಜೀವನ ನಡೆಸಿರಿ. ನಿತ್ಯವೂ ಗುರು ಚರಿತ್ರೆ ಪಾರಾಯಣ ಮಾಡಿ. ಸಕಲ ಅಭೀಷ್ಟಗಳನ್ನೂ ಸಿದ್ಧಿಸಿಕೊಳ್ಳಿ.
ಮಕರ: ಶನಿಯು ದ್ವಿತೀಯದಿಂದ ಲಗ್ನಕ್ಕೆ ವಕ್ರಗತಿಯಲ್ಲಿ ಬಂದಿರುವುದರಿಂದ ಅಪಾಯ ಇಲ್ಲದೆ ಉಪಾಯದಿಂದ ಜೀವನ ಸಾಗಿಸಬೇಕಾದರೆ ದೈವಬಲವಿರಲೇಬೇಕು. ಸುಲಭವಾಗಿ ಯಾವ ಕೆಲಸವೂ ಆಗುವುದಿಲ್ಲ. ಸೋಮಾರಿತನ ಬಿಟ್ಟು ಕಷ್ಟಪಟ್ಟು ಕೆಲಸ ಮಾಡಿದಾಗ ಮಾತ್ರ ಸುಖ ಸಿಗುತ್ತದೆ. ಪಂಚಮ ಗುರುವು ಚತುರ್ಥಕ್ಕೆ ಬಂದಿರುವುದರಿಂದ ಗುರು ಶನಿಯನ್ನು ನಿತ್ಯವೂ ಪ್ರಾರ್ಥಿಸಿ ಕೈ ಹಿಡಿದು ನಡೆಸು ಎಂದು ಬೇಡಿಕೊಳ್ಳಿ.
ಕುಂಭ: ಜನ್ಮದಿಂದ ದ್ವಾದಶಕ್ಕೆ ಶನಿ ವಕ್ರಗತಿಯಲ್ಲಿ ಸಾಗಿದ್ದು, ಗುರು ತೃತೀಯಕ್ಕೆ ಬಂದಿದ್ದಾನೆ. ಅಲ್ಪ ಗುರುಬಲವಿದ್ದು, ಶನಿಯ ಉಪಟಳವನ್ನೂ ಕಡಿಮೆ ಮಾಡುತ್ತಾನೆ. ಕುಂಭ ರಾಶಿಯವರು 2025ರ ಮಾ. 29ರವರೆಗೆ ಶನಿಯನ್ನು ಪ್ರಾರ್ಥಿಸಲೇಬೇಕು. ಜೊತೆಗೆ ಗುರುವಿನ ಪ್ರಾರ್ಥನೆಯೂ ಇರಲಿ. ಪಾರ್ವತಿ ಸಹಿತ ಸಾಂಬಸದಾಶಿವನನ್ನು ಪೂಜಿಸಿ.
ಮೀನ: ಮತ್ತೆ ಗುರು ವಕ್ರಗತಿಯಲ್ಲಿ ದ್ವಿತೀಯಕ್ಕೆ ಬಂದಿದ್ದು, ಶನಿಯು ಏಕಾದಶಕ್ಕೆ ಬಂದಿದ್ದಾನೆ. ಸ್ವಲ್ಪ ಕಾಲ ಕಷ್ಟ ಚಿಂತೆ ಎಲ್ಲವನ್ನೂ ದೂರವಿಟ್ಟು ಗುರುವಿನ ಅನುಗ್ರಹ ಪಡೆಯಬೇಕು. ವಿಳಂಬ ಮಾಡಿದರೆ ನಿಮಗೆ ನೀವೇ ವಂಚನೆ ಮಾಡಿಕೊಂಡಂತೆ. ಗುರುಚರಿತ್ರೆಯ 14ನೇ ಅಧ್ಯಾಯ ಪಾರಾಯಣ ಮಾಡಿ. ಕತ್ತಲು ಹರಿದು ಬೆಳಕಲ್ಲಿ ಓಡಾಡುವ ಸಮಯವಿದು.