ವಾರಭವಿಷ್ಯ: ಈ ರಾಶಿಯವರು ಮೂಟೆಗಟ್ಟಲೆ ಹಣ ಬರುವುದೆಂದು ಕನಸು ಕಾಣಬೇಡಿ, ಬಂದಂತೆ ಹಣ ಸಂಗ್ರಹಿಸಿ ಇಟ್ಟುಕೊಳ್ಳಿ

weeklly
Published on

ಮೇಷ: ದಕ್ಷಿಣಾಯಣದ ಶ್ರಾವಣ ಮಾಸವು ಆರಂಭ ಆಗಿ ಹಬ್ಬ ಹರಿದಿನಗಳು ನಡೆದು ಬಂದಿವೆ. ಪರಮಾತ್ಮನು ಆಷಾಢ ಏಕಾದಶಿಯಿಂದ ಶಯನ ಯೋಗದಲ್ಲಿದ್ದು ಕಾರ್ತಿಕ ಶುದ್ಧ ಏಕಾದಶಿಯಂದು ತುಳಸಿ ಹಬ್ಬದಂದು ಒಬ್ಬಟ್ಟು ಮಾಡಿ ಎಬ್ಬಿಸುತ್ತಾರೆ. ಈ ಮಾಸಗಳು ವಿಶೇಷವಾಗಿ ಸುಖವನ್ನು ಮನಸ್ಸಿಗೆ ಧೈರ್ಯವನ್ನೂ ತುಂಬುತ್ತದೆ. ಮನುಷ್ಯನು ವ್ರತ ನಿಯಮಗಳಲ್ಲಿದ್ದು ಕಾರ್ಯ ಸಾಧನೆ ಮಾಡಿಕೊಳ್ಳುವುದೇ ಉದ್ದೇಶ ಆಗಿರುತ್ತದೆ. ಮೇಷ ರಾಶಿಯವರು ಪ್ರತಿ ನಿತ್ಯ ವಿಷ್ಣು, ಶಂಕರನನ್ನು ಆರಾಧಿಸಿದರೆ ಯಾವ ಕೊರತೆಯೂ ಇರದು. ಆರೋಗ್ಯ ಸಂಪತ್ತು ನೀಡುತ್ತಾನೆ.

ವೃಷಭ: ವೃಷಭ ರಾಶಿಯವರಿಗೆ ಗುರುಮಂಗಳ ಯೋಗವನ್ನು ಕೊಟ್ಟು ತಮ್ಮ ಮುಂದಿನ ಕಾರ್ಯಗಳನ್ನು ನಡೆಸಲು ದೀರ್ಘ ಆಲೋಚನೆ ಮಾಡಿ ಗುರು ಕಟಾಕ್ಷವನ್ನು ಪಡೆಯಲು ಪ್ರಯತ್ನ ಮಾಡಲೇಬೇಕು. ತಾತ್ಕಾಲಿಕವಾಗಿ ನವೆಂಬರ್ 15ರವರೆಗೂ ಮೌನವನ್ನು ಮುರಿಯದೆ ದೈವವನ್ನು ಪ್ರಾರ್ಥಿಸಿ. ಸುಖವನ್ನು ಕಂಡುಕೊಳ್ಳಬಹುದು. ದುರ್ಗೆ ಸ್ಮರಣೆ ಮಾಡಿ. ನಿಮ್ಮನ್ನು ಪವಿತ್ರವಾಗಿ ಇಟ್ಟು ಜೀವನ ಪಾವನ ಮಾಡುತ್ತಾಳೆ.

ಮಿಥುನ: ಮಿಥುನ ರಾಶಿಯವರಿಗೆ ರಾಶ್ಯಾಧಿಪತಿ ರವಿಯೊಂದಿಗೆ ಶುಕ್ರನೊಂದಿಗೆ ಇದ್ದು ಕೆಲಸಗಳ ಪ್ರಯತ್ನ ಮುಂದುವರಿಸಿದರೆ ನಿಮ್ಮ ಜೀವನಕ್ಕೆ ಸಾಕಾಗುವಷ್ಟು ಧನ ಧಾನ್ಯ ಲಭಿಸಿ ಸಂತೋಷ ಸಿಗುತ್ತದೆ. ಯಾರೊಂದಿಗೂ ವೃಥಾ ರ್ಚಚಿಸಬೇಡಿ. ವಿಷ್ಣು ಸ್ಮರಣೆ ಮಾಡಿ ಸಕಲವೂ ನಿಮ್ಮಂತೆ ನಡೆಯುವುದು.

ಕಟಕ: ಜಲ ರಾಶಿಯವರಾದ ನೀವು ಜಲದಂತೆ ಶುದ್ಧವಾಗಿದ್ದು, ನದಿಯಲ್ಲಿ ಇರುವ ಜಲವನ್ನು ಇಷ್ಟ ಬಂದಂತೆ ತುಳಿದರೆ ಕಲುಷಿತ ಆಗುತ್ತದೆ. ಸ್ವಲ್ಪ ಸಮಯದ ನಂತರ ಹಾಗೆಯೇ ಅದು ತಿಳಿಯಾಗುತ್ತದೆ. ನಿಮ್ಮ ಬಾಳು ಹಾಗಿರಬೇಕು. ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡಿ. ದೈವ ಬಲ ಇದೆ.ಶಿವ ಧ್ಯಾನ ಇರಲಿ.

ಸಿಂಹ: ಈ ರಾಶಿಯವರಿಗೆ ಅಕಸ್ಮಾತ್ ಮಹಾ ಯೋಗ ಆರಂಭ ಆಗಿದ್ದು ಕೆಲವು ವಿಚಾರಗಳಲ್ಲಿ ನಕಾರಾತ್ಮಕ ಕೆಲಸ ಆಗಿದೆ. ಅದನ್ನು ಸರಿ ಮಾಡಲು ರವಿ ಬುಧ ಶುಕ್ರರು ರಾಶಿಯಲ್ಲಿ ಕುಳಿತಿದ್ದಾರೆ. ಕೇತುವಿನ ಸಂಪರ್ಕವುಳ್ಳ ಮಖಾ ನಕ್ಷತ್ರದವರು ಖಂಡಿತವಾಗಿ ಸುಬ್ರಹ್ಮಣ್ಯನನ್ನು ಆರಾಧಿಸಿದರೆ ಎಲ್ಲವನ್ನೂ ಪಡೆಯಬಹುದು.

ಕನ್ಯಾ: ಕೆಲವೊಂದು ವಿಚಾರಗಳಿಗೆ ಮಾತನ್ನು ಕಡಿಮೆ ಮಾಡಲೇಬೇಕು. ದಾನ ಧರ್ಮ ಮಾಡುತ್ತಲೇ ಇರಬೇಕು. ಈ ತತ್ವವು ಕನ್ಯಾ ರಾಶಿಗೆ ಸ್ಪಷ್ಟವಾಗಿದೆ. ಗುರು ಶನಿ ಒಳ್ಳೆಯ ಮನೆಯಲ್ಲಿದ್ದಾರೆ. ನೀವು ಸುಖವಾಗಿದ್ದು ಇನ್ನೊಬ್ಬರನ್ನು ಸುಖವಾಗಿ ಇಡುವ ಚೈತನ್ಯ ಹೊಂದಿರುತ್ತೀರಿ. ಚಿಂತಾಮಣಿ ಗಣಪತಿಯನ್ನು ಪ್ರಾರ್ಥಿಸಿ. ಸುಬ್ರಹ್ಮಣ್ಯನನ್ನು ಪೂಜಿಸಿ, ಮನೋಭೀಷ್ಠ ಪರಿಪೂರ್ಣ ಆಗುತ್ತದೆ.

ತುಲಾ: ಆಕಸ್ಮಿಕ ಎಂಬ ಶಬ್ದವು ಹೊರಟಿರುವುದು ದೈವ ಕೃಪೆಯಿಂದಲೇ. ಧನವು ಆಕಸ್ಮಿಕ. ಮನುಷ್ಯನು ತನ್ನ ಬಾಳನ್ನು ಸುಖವಾಗಿ ಇಟ್ಟು ಕೊಳ್ಳಬೇಕಾದರೆ ದೈವ ಯತ್ನ ತುಂಬಿರಬೇಕು ಎಂದು ನೀವು ತಿಳಿದು ಜನಾರ್ದನ ದೇವರನ್ನು ಪ್ರಾರ್ಥಿಸಿ. ಎಲ್ಲವೂ ಒಳ್ಳೆಯದಾಗುತ್ತದೆ.

ವೃಶ್ಚಿಕ: ನೀರು ಜೋರಾಗಿ ಹರಿದರೆ ಪ್ರಾಣಕ್ಕೆ ಅಪಾಯ. ಎರಡು ಕಾಲುವೆ ಮಧ್ಯ ಹರಿದರೆ ನೋಡಲು ಚೆನ್ನ, ಕುಡಿಯಲೂ ಚೆನ್ನ. ಮೂಟೆಗಟ್ಟಲೆ ಹಣ ಬರುವುದೆಂದು ಕನಸು ಕಾಣಬೇಡಿ. ಬಂದಂತೆ ಹಣ ಸಂಗ್ರಹಿಸಿ ಇಟ್ಟುಕೊಳ್ಳಿ. ಸಾಕ್ಷಾತ್ ಲಕ್ಷ್ಮಿ ನರಸಿಂಹ ನಿಮ್ಮ ಜೊತೆಗೆ ಇರುತ್ತಾನೆ.

ಧನಸ್ಸು: ಏನಾದರೂ ಇರಲಿ ಎಂತಾದರೂ ಇರಲಿ ದೈವ ಕೃಪೆ ಸದಾ ಇರಲಿ. ಗುರು ರಾಶಿಯಲ್ಲಿ ಜನಿಸಿದ ನಿಮಗೆ ದೈವ ಕೃಪೆ ಇದ್ದು ಸೋಲೆಂಬ ಶಬ್ದವೇ ಇರುವುದಿಲ್ಲ. ಸೋಲು ಸಾಲ ಎಲ್ಲವೂ ಮನುಷ್ಯನ ನಿದ್ದೆ ಕೆಡಿಸುತ್ತದೆ. ದೈವ ಸಂಭೂತರಾಗಿ ನಡೆದರೆ ನಿಮ್ಮನ್ನು ಯಾರೂ ಸೋಲಿ ಸಲು ಆಗುವುದಿಲ್ಲ. ನಿತ್ಯ ಗುರು ಚರಿತ್ರೆಯ ಪಾರಾಯಣ ಇರಲಿ.

ಮಕರ: ಮಕರ ರಾಶಿಯವರಿಗೆ ಇನ್ನೇನು ಶನಿ ಸಂಚಾರ ಅಂತ್ಯಕ್ಕೆ ಬಂದಿದ್ದು ಒಳ್ಳೆಯ ದಿನಗಳ ನಿರೀಕ್ಷೆ ಇಟ್ಟುಕೊಂಡು ದೇವರನ್ನು ಪೂಜಿಸಿ. ಏಳು ವರ್ಷಗಳ ಕಷ್ಟ ಕಾರ್ಪಣ್ಯ ಕಳೆದು ಪರಮಾತ್ಮನೇ ಸೌಭಾಗ್ಯ ಕೊಟ್ಟು ಹರಸುತ್ತಾನೆ. ಶಾಂತಿ ಸಂಯಮ ಇರಲಿ. ಆಸೆ ಇರಲಿ, ದುರಾಸೆ ಇರಬಾರದು. ಸಂಕಲ್ಪ ಇರಬೇಕು ಒಳ್ಳೆಯದಕ್ಕೆ. ಲಕ್ಷ್ಮೀಸಹಿತ ಸತ್ಯನಾರಾಯಣನನ್ನು ಪೂಜಿಸಿ.

ಕುಂಭ:  ಕುಂಭ ರಾಶಿಯವರಿಗೆ ಶನಿಯ ಮುಂದುವರಿದ ಸಂಚಾರ ಇದ್ದುಕಳೆದ 5 ವರ್ಷಗಳ ಶನಿಯ ಮಾರ್ಗವು ಕಠಿಣ ಆಗಿದ್ದರೂಶನಿಯು ಗುರು ಮನೆಗೆ 2025ರ ಮಾರ್ಚ್​ನಲ್ಲಿ ಹೊರಡುತ್ತಾನೆ. ನೀವು ನಿಮ್ಮ ಏಳಿಗೆಯನ್ನು ಸುಖವನ್ನು ಕಾಣುತ್ತೀರಿ. ಮಾಡುವ ಕಾರ್ಯಗಳಲ್ಲಿ ಯಶಸ್ಸನ್ನು ಗಳಿಸುತ್ತೀರಿ. ಸಂಪತ್ತು ಬಂದು ಸೇರುತ್ತದೆ. ಶನಿ ಅಷ್ಟೋತ್ತರ ಪಠಿಸಿ.

ಮೀನ: ಈ ರಾಶಿಯ ದ್ವಾದಶ ಶನಿಯು ನಡೆದಿದ್ದು, 2025ರ ಮಾರ್ಚ್ ನಲ್ಲಿ ಮೀನ ರಾಶಿಗೆ ಬರಲಿದೆ. ಗುರು ಮನೆಯಾದರೂಗುರುವನ್ನು ಪೂಜಿಸಲೇಬೇಕು. ಮನುಷ್ಯನಿಗೆ ಗುರು ಇಲ್ಲದಿದ್ದರೆ ಗುರಿ ಇಲ್ಲ. ಅನಂತವಾಗಿ ಗುರುವನ್ನು ಪ್ರಾರ್ಥಿಸಿ. ನಿಮ್ಮ ಕಾಲು ಸದಾ ದೇವಮಂದಿರಕ್ಕೆ ಸಾಗಲಿ. ಕೈ ದೈವಕ್ಕೆ ಮುಗಿಯಲಿ. ನಿಮ್ಮ ಕಣ್ಣು ದೈವವನ್ನು ನೋಡುತ್ತಿರಲಿ. ಕಷ್ಟಗಳು ಕೂಡ ಸುಖವಾಗಿ ಬದಲಾಗುತ್ತವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net