ವಾರಭವಿಷ್ಯ: ಈ ರಾಶಿಯವರಲ್ಲಿ ನಡೆಯಲ್ಲಿ, ನುಡಿಯಲ್ಲಿ ಗಾಂಭೀರ್ಯವಿರಲಿ, ಕೆಲಸವನ್ನು ಮಾಡುತ್ತೇನೆ ಎಂಬ ಛಲವಿರಲಿ

ಡೆಎ
Published on

ಮೇಷ: ಕೊಟ್ಟ ಮಾತನ್ನು ಮುರಿಯುವುದು ಮುತ್ತನ್ನು ಒಡೆದಂತೆ. ನಡೆಯಲ್ಲಿ, ನುಡಿಯಲ್ಲಿ ಗಾಂಭೀರ್ಯವಿರಲಿ. ಕೆಲಸವನ್ನು ಮಾಡುತ್ತೇನೆ ಎಂಬ ಛಲವಿರಲಿ. ಗ್ರಹ ಬಲ, ಬುದ್ಧಿಬಲ, ಮನೋಬಲ ಇವೆಲ್ಲವನ್ನೂ ಒಗ್ಗೂಡಿಸಿಕೊಂಡು ಮಾಡುವ ಕೆಲಸದಲ್ಲಿ ಮುಂದೆ ಸಾಗಿರಿ. ಜನ್ಮದಾತರ ಆಶೀರ್ವಾದವನ್ನು ಪಡೆಯಿರಿ. ಸುಬ್ರಹ್ಮಣ್ಯನನ್ನು ಆರಾಧಿಸಿ. ಅವನ ಅನುಗ್ರಹಕ್ಕೆ ಪಾತ್ರರಾಗಿ.

ವೃಷಭ: ಅಗಸನು ಆಗಸದೆತ್ತರದ ಹೊರೆಯನ್ನು ಕತ್ತೆಯ ಮೇಲೆ ಹಾಕಿ ಜೀವನವನ್ನು ನಡೆಸುತ್ತಾನೆ. ಮೂಕ ಪ್ರಾಣಿಯು ಕಿರುಚಿದರೂ ಭಾರ ಹೊತ್ತು ಸಾಗುತ್ತದೆ. ಕತ್ತೆಯಂತೆ ದುಡಿದು ಅದು ಪ್ರಯೋಜನಕ್ಕೆ ಬಾರದೆ ಇದ್ದಾಗ ದೈವವೆಂಬ ಮಾಯೆಯು ನಿಮಗೆ ದಾರಿ ತೋರುತ್ತದೆ. ಎಚ್ಚರಿಕೆಯಿಂದ ಮುಂದೆ ಸಾಗಿ. ಅತಿ ಮುಖ್ಯವಾದ ಕೆಲಸವನ್ನು ಗುರುತಿಸಿಕೊಂಡು ಅದನ್ನು ಮೊದಲು ಮಾಡಲು ಗುರುವೆ ನಿಮಗೆ ಅನುಗ್ರಹಿಸುತ್ತಾನೆ.

ಮಿಥುನ: ತಾತ್ಕಾಲಿಕವಾಗಿ ಗುರು ಹಿಂದೆ ಸರಿದು ಏಕಾದಶ ಫಲ ಕೊಡುತ್ತಿದ್ದಾನೆ. ದಶಮ ಶನಿಯು ಕ್ರಿಯಾಶೀಲರಾಗುವಂತೆ ಫಲ ಕೊಡುವುದು ಸಾಧ್ಯವಾಗದ ಮಾತು. ನಾಲಿಗೆಯ ಮೇಲೆ ಹಿಡಿತ ಇಲ್ಲದಿದ್ದರೆ ಜೀವನಕ್ಕೇ ಅಪಾಯ. ಅದನ್ನು ಮಾಡದೆ ಕಾರ್ಯಯೋನ್ಮುಖರಾಗಿ. ವಿಷ್ಣು ಸಹಸ್ರನಾಮ ಪಾರಾಯಣ ಮಾಡಿರಿ.

ಕಟಕ: ಮನಸ್ಸು ಹತೋಟಿಯಲ್ಲಿ ಇಟ್ಟುಕೊಳ್ಳದೆ ಮನಬಂದಂತೆ ಮಾತನಾಡಿದರೆ ಅದರ ಲಾಭನಷ್ಟಕ್ಕೆ ನಾವೇ ಜವಾಬ್ದಾರರು. ಗುರು ಹಿಂದೆ ಸರಿದಿರುವುದರಿಂದ ಆರೋಗ್ಯದ ಬಗ್ಗೆ ಎಚ್ಚರವಿರಲಿ. ಚಂದ್ರಬಲ ಉಳ್ಳ ಕಟಕ ರಾಶಿಯವರು ಚಂದ್ರಚೂಡನನ್ನು ಆರಾಧಿಸಿ. ಶಿವ ಸಹಸ್ರನಾಮ ಪಾರಾಯಣ ಮಾಡಿ.

ಸಿಂಹ: ಮನುಷ್ಯನ ಜೀವನದಲ್ಲಿ ವಿಸ್ಮಯಕಾರಿ ಘಟನೆಗಳು ಬರುವುದು ದೈವ ಕೃಪೆಯಿಂದ. ಈ ಮಾಸದಲ್ಲಿ ದೈವ ಕೃಪೆಯಿದ್ದು ಅದ್ಭುತವಾದ ಕಾರ್ಯಗಳು ಜರುಗಿ ನೀವು ಸಮರ್ಥರು ಎಂಬುದನ್ನು ತೋರಿಸಿ ಕೊಡುತ್ತದೆ. ನಿಮ್ಮನ್ನು ಯಶಸ್ಸಿನ ಕಡೆಗೆ ಕೊಂಡೊಯ್ಯುತ್ತದೆ. ಸೂರ್ಯನಾರಾಯಣ ಅಷ್ಟಕವನ್ನು ಪಾರಾಯಣ ಮಾಡಿ. ಸೇನಾ ನಾಯಕ ಜುಂಜೇಶ್ವರನನ್ನು ಪ್ರಾರ್ಥಿಸಿ.

ಕನ್ಯಾ: ಯಾವುದೇ ಗ್ರಹ ಬಲವಿದ್ದರೂ ಅಸ್ಥಿರವಾದ ಮನಸ್ಸಿನ ದೋಷವಿರುತ್ತದೆ. ಮನಸ್ಸನ್ನು ಹೊತ್ತು ಉಯ್ಯಾಲೆಯ ಮೇಲೆ ಇಟ್ಟು ಕೆಲಸ ಮಾಡಲು ಹೇಗೆ ಸಾಧ್ಯ? ಇದನ್ನು ಅರಿಯುವ ನಿರ್ಣಯ ನಿಮ್ಮದಿರಲಿ. ದೈವಬಲ ನಿಮ್ಮನ್ನು ಬಂದು ಸೇರಿಕೊಳ್ಳಲಿ. ಮಾತಿನ ಮೇಲೆ ಹತೋಟಿ ಇರಲಿ. ಮಾಡುವ ಕಾರ್ಯದಲ್ಲಿ ಆಸಕ್ತಿ ಇರಲಿ. ನರಸಿಂಹ ಸ್ತೋತ್ರವನ್ನು ಪಠಿಸಿ.

ತುಲಾ: ತುಲಾ ರಾಶಿಯವರಿಗೆ ಆ. 16ರಂದು ಸೂರ್ಯನು ಏಕಾದಶಕ್ಕೆ ಬಂದು ಬುಧನ ಜತೆಗೂಡಿ ಶುಕ್ರನು ಅಲ್ಲೇ ಇರುವುದರಿಂದ ನಿಮ್ಮ ಚಿಂತನೆಗಳು ನೂತನವಾಗಿ ಕಾರ್ಯರೂಪಕ್ಕೆ ಬರುವ ಕಾಲ. ವ್ಯಾಪಾರ ವೃದ್ಧಿಯಾಗಿ ಆರ್ಥಿಕ ಸಂತೋಷವನ್ನು ತರುತ್ತದೆ. ವಕ್ರಿ ಗುರು ಸಮತೋಲನವಾದ ಸಪ್ತಮದ ಫಲ ಕೊಡುವುದರಿಂದ ನಿಮ್ಮ ಜತೆಗಾರರು ನಿಮ್ಮ ಮಾತನ್ನು ಕೇಳಲೇಬೇಕು. ಲಲಿತಾ ಪರಮೇಶ್ವರಿ ಯನ್ನು ಪೂಜಿಸಿ ಲಲಿತಾ ಸಹಸ್ರನಾಮ ಪಾರಾಯಣ ಮಾಡಿ.

ವೃಶ್ಚಿಕ: ಚಂದ್ರಮನ ಬೆಳದಿಂಗಳ ಸೊಗಸಾದ ಬಾನನ್ನು ನೋಡುತ್ತಾ ತೋಟದ ಮನೆಯಲ್ಲಿ ಊಟ ಮಾಡುವ ಚಂದವನ್ನು ವರ್ಣಿಸಲು ಅಸಾಧ್ಯ. ಅಸಾಧ್ಯವಾದದ್ದನ್ನು ನೀವು ಕಾಣುವ ಸಮಯ ಬಂದಿದೆ. ಅನ್ನದಾನವನ್ನು ಮಾಡಿ ಜೇಬಿನಲ್ಲಿ ದುಡ್ಡು ತುಂಬಿ ಮನೆಗೆ ತರುವ ಕಾಲ. ಜನ್ಮ ಕೊಟ್ಟ ತಾಯಿಯನ್ನು ವಂದಿಸಿ. ಸುಬ್ರಹ್ಮಣ್ಯನ ಪ್ರಾರ್ಥನೆ ಸದಾ ಇರಲಿ.

ಧನಸ್ಸು: ನಮ್ಮ ಕೆಲಸವನ್ನು ಮಾತ್ರವೇ ನಿಗದಿಯಾದ ವೇಳೆ ಗೊತ್ತುಪಡಿಸಿಕೊಳ್ಳ ಬಾರದು. ಮಾತನ್ನು ಮೀರಬಾರದು. ಎಲ್ಲರಿಗೂ ನಿಮ್ಮ ಸಮಯ ಕೊಟ್ಟು ಅವರ ಸಮಕ್ಕೆ ನಡೆದಾಗಲೇ ಶ್ರೀರಾಮಚಂದ್ರನ ಗುಣವನ್ನು ಹೊಂದುತ್ತೀರಿ ಎಂಬ ಭಾವ ಬರುತ್ತದೆ. ಆತುರ- ಅವಾಂತರ ಇವು ಜಗತ್ತಿನಲ್ಲಿರುವ ದೊಡ್ಡ ಕಾಯಿಲೆ. ತಾಳ್ಮೆಯಿಂದ ಸುಖವಾಗಿರಲು ಪ್ರಯತ್ನಿಸಿ. ಗುರು ದತ್ತಾತ್ರೇಯನ ಗುರು ಚರಿತ್ರೆ ಪಾರಾಯಣ ಮಾಡಿರಿ.

ಮಕರ: ಬಾಲ ಶಿಶುಗಳು ಮಾತನ್ನು ಕೇಳದಿದ್ದರೆ ಚಂಡಿ ಹಿಡಿದು ರೋದಿಸುತ್ತಾರೆ. ಇದು ಜನ್ಮ ಗುಣಗಳನ್ನು ತೋರಿಸುತ್ತದೆ. ಅದರಂತೆ ಶನಿಯು ಬಿಡುವ ಸಮಯದಲ್ಲಿ ಕೆಲವೊಂದು ಅಜ್ಞಾನದಿಂದ ಕೆಲಸವನ್ನು ಮಾಡಿ ಅದರಿಂದ ಪ್ರಯೋಜನ ಇಲ್ಲದಂತೆ ಆಗುತ್ತದೆ. ಸೂರ್ಯೋದಯಕ್ಕೆ ಮುಂಚೆ ಎದ್ದು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುವುದು ಒಳ್ಳೆಯದು. ಮಕ್ಕಳಂತೆ ರೋದಿಸದೆ ಶುದ್ಧವಾದ ಮನಸ್ಸಿಟ್ಟು ದೇವರನ್ನು ಪ್ರಾರ್ಥಿಸಿರಿ.

ಕುಂಭ: ಕಂಬವನ್ನು ಹೊರಲು ಜಾಣ್ಮೆ, ಶಕ್ತಿ ಬೇಕು. ಕುಂಭದೊಳಗೆ ಕೈ ಹಾಕಲು ಧೈರ್ಯ ಬೇಕು. ಇದನ್ನು ಅರಿತು ಸನ್ನಿವೇಶಕ್ಕೆ ತಕ್ಕಂತೆ ಕೆಲಸ ಕಾರ್ಯ ಮುಗಿಸಿಕೊಳ್ಳಬೇಕು. ದೇವರೇ ಕೊಟ್ಟ ಕೆಲಸವೆಂದು ಜೀವನದಲ್ಲಿ ಮುಂದೆ ಸಾಗಿರಿ. ಶನಿ ಅಷ್ಟೋತ್ತರ ಪಾರಾಯಣ ಮಾಡಿ. ಕರಿ ಎಳ್ಳು ದಾನ ಮಾಡಿ. ದೈವ ಕೃಪೆಗೆ ಪಾತ್ರರಾಗಿ.

ಮೀನಾ: ಪಾಪ ಗ್ರಹಗಳು ಲಗ್ನದಲ್ಲೇ ಇರುವುದು ಬುದ್ಧಿಯನ್ನು ಕೆಡಿಸಲು, ಆತಂಕ- ನಿರಾಸೆ ಉಂಟುಮಾಡಲು. ಈ ಸಮಯದಲ್ಲಿ ನೀವು ಮೌನ ವಹಿಸಿ ಜಗತ್ ಸೃಷ್ಟಿಕರ್ತ ಗುರು ದಕ್ಷಿಣಾಮೂರ್ತಿಯನ್ನು ಹಾಗೂ ಗುರು ನರಸಿಂಹನನ್ನು ಪ್ರಾರ್ಥಿಸಿ, ಈ ಸಮಯದಲ್ಲಿ ಶೃಂಗೇರಿಗೆ ತೆರಳಿ ಶಾರದೆಯನ್ನು ದರ್ಶಿಸಿ. ಸುಜ್ಞಾನವನ್ನು ಸದ್ಬುದ್ಧಿಯನ್ನು ನೀಡಿ ಮಾರ್ಗವನ್ನು ತೋರಿಸುತ್ತಾಳೆ. ಯಾವ ದೊಡ್ಡ ವ್ಯಾಪಾರಕ್ಕೆ ಕೈ ಹಾಕದಿರಿ. ಮನೋ ವೇಗವನ್ನು ತಡೆದು ಮಾತಿನಲ್ಲಿ ತೂಕವಿದ್ದರೆ ದೇವರೇ ನಿಮಗೆ ಸಹಾಯ ಮಾಡುತ್ತಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net