ವಾರಭವಿಷ್ಯ |ಈ ರಾಶಿಯಲ್ಲಿ ಸಂಭವಿಸುವ ದಕ್ಷಿಣಾಯನ ಪುಣ್ಯಕಾಲವು ಭೋಗ ಭಾಗ್ಯಗಳನ್ನು ತರುತ್ತದೆ

Vara-Bhavishya-2
Published on

ಮೇಷ – ಮೇಷ ರಾಶಿ ಕುಜನ ಅಧಿಪತ್ಯದಲ್ಲಿ ಮೇಷ ಸಂಕ್ರಮಣದಿಂದ ಆರಂಭವಾಗಿ ಮೀನ ರಾಶಿಗೆ ಬಂದು ತಲುಪುವ ಕ್ರಿಯೆಯೇ ಹನ್ನೆರಡು ಸಂಕ್ರಮಣಗಳು. 16.07.2020 ರಂದು ಸೂರ್ಯನು ಮೇಷದಿಂದ ಚತುರ್ಥಕ್ಕೆ ಬಂದಿರುತ್ತಾನೆ. ಮೇಷ ರಾಶಿಯಲ್ಲೇ ಚಂದ್ರನು ಆ ದಿನ ಇದ್ದು, ಭಯದ ವಾತಾವರಣ ಉಂಟುಮಾಡುತ್ತಾನೆ. ಆದಿತ್ಯಾತ್ಮಕ ರುದ್ರನನ್ನು ಜಪ ಮಾಡಿ, ನೀಲಕಂಠನನ್ನು ಪೂಜಿಸಿ.

ವೃಷಭ – ಜುಲೈ 16ರ ಕರ್ಕಾಟಕ ಸಂಕ್ರಮಣದಿಂದ ರವಿಯು ದಕ್ಷಿಣಾಯಣದಲ್ಲಿ ಸಂಚರಿಸುತ್ತಾನೆ. ಭೀತಿಯನ್ನು ಸೃಷ್ಟಿಸುವ ವಿಚಾರ ಶೋಕಕ್ಕೆ ಕಾರಣವಾಗಬಹುದು. ಹೆದರದೆ ಮುನ್ನುಗ್ಗಿರಿ. ತೃತೀಯ ಸೂರ್ಯ, ಚಂದ್ರರು ಶತ್ರುನಾಶ, ಜಯವನ್ನು ಕೊಡುತ್ತಾರೆ. ದುರ್ಗೆಯ ಪ್ರಾರ್ಥನೆ ಮಾಡಿ, ಶ್ರಾವಣ ಮಾಸದಲ್ಲಿ ಸೋಮವಾರದಂದು (4 ಇಂದು ವಾಸರ) ಈಶ್ವರನಿಗೆ ರುದ್ರಾಭಿಷೇಕ, ಪಂಚಾಮೃತ ಹಾಗೂ ಲಡ್ಡು ನೈವೇದ್ಯ ಮಾಡಿ.

ಮಿಥುನ –21.06.2020ರಲ್ಲಿ ಸಂಭವಿಸಿದ ಗ್ರಹಣದಿಂದ ನಿಮ್ಮನ್ನು ಚಿಂತೆಗೀಡು ಮಾಡಿದರೂ ರವಿಯು ಎರಡನೆಯ ಮನೆಯಾದ ಕರ್ಕಾಟಕ ದಕ್ಷಿಣ ಪಥದಲ್ಲಿ ಸಂಚರಿಸುತ್ತಾನೆ. ಹಣಕಾಸಿನ ವಿಚಾರದಲ್ಲಿ ಎಚ್ಚರವಿರಲಿ. ಅನಂತಪದ್ಮನಾಭನನ್ನು ಧ್ಯಾನಿಸಿ, ಸ್ಮರಿಸಿ, ಅನಂತಪದ್ಮನಾಭ ಕಥೆಯನ್ನು ಓದಿ, ವಿಷ್ಣು ಪುರಾಣ ಪಠಿಸಲು ದೋಷಗಳು ದೂರವಾಗುತ್ತವೆ.

ಕಟಕ – ಈ ರಾಶಿಯಲ್ಲಿ ಸಂಭವಿಸುವ ದಕ್ಷಿಣಾಯನ ಪುಣ್ಯಕಾಲವು ಭೋಗ ಭಾಗ್ಯಗಳನ್ನು ಕೊಟ್ಟು ಹನ್ನೆರಡರ ರಾಹು ಹಾಗೂ ಆರರ ಕೇತು ವ್ಯಸನವನ್ನು ಉಂಟುಮಾಡಿ ನಿಮ್ಮನ್ನು ಪರೀಕ್ಷಿಸುತ್ತಾನೆ. ಪಿತೃಗಳಿಗೆ ತರ್ಪಣ ನೀಡಿ. ದೇವಿಪುರಾಣ ಪಾರಾಯಣ ಮಾಡಿ. ಶ್ರಾವಣ ಮಾಸದಲ್ಲಿ ಶನಿ ಪ್ರದೋಷ ದಿನದಂದು ಈಶ್ವರನ ಆರಾಧನೆ ಮಾಡಿ, ಸತ್ಯನಾರಾಯಣನನ್ನು ಪೂಜಿಸಿ.

ಸಿಂಹ – ದ್ವಾದಶದಲ್ಲಿ ಸೂರ್ಯ ನಿಮ್ಮ ರಾಶಿಯ ಅಧಿಪತಿ. ಪುಣ್ಯ ಕಾರ್ಯಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಲು ಸೂಚಿಸುತ್ತಾನೆ. ನೀವು ಗಳಿಸಿದ ಧನವನ್ನು ಪುಣ್ಯ ಕೆಲಸಗಳಿಗೆ ವ್ಯಯಮಾಡಿ. ನವಗ್ರಹಗಳನ್ನು ನೀವೇ ಸ್ವತಃ ಬಿಲ್ವಪತ್ರೆಯಲ್ಲಿ ಅರ್ಚನೆ ಮಾಡಿ ಮನಾನಂದ ಪಡೆಯಿರಿ. ಇಲ್ಲದವರಲ್ಲಿ ಮರುಕವಿರಲಿ. ದುಃಖದಲ್ಲಿರುವವರ ಕಣ್ಣೀರು ಒರೆಸಿ ಸಂತೈಸಿ. ಜೀವನವು ಸುಖಮಯವಾಗಿರುತ್ತದೆ.

ಕನ್ಯಾ – ಏಕಾದಶದ ಸೂರ್ಯನು ನಿಮಗೆ ಸ್ವಲ್ಪಮಟ್ಟಿಗೆ ಹಣಕಾಸಿನ ಮುಗ್ಗಟ್ಟನ್ನು ದೂರಪಡಿಸುತ್ತಾನೆ. ಸೂರ್ಯನ ಪಥ ದಕ್ಷಿಣಕ್ಕೆ ಬಂದು ಏಕಾದಶಿ ದಿನದಿಂದ ದೇವರು ಶಯನಾವಸ್ಥೆಯಲ್ಲಿದ್ದು, ಮಾನವರು ಮಾಡುವ ತಪೋಪೂಜೆಗಳನ್ನು ಸ್ವೀಕರಿಸುತ್ತಾನೆ. ಈ ರಾಷ್ಟ್ರವು ಕನ್ಯಾ ರಾಶಿಯಲ್ಲಿ ಉದಯಿಸಿರುವುದರಿಂದ, ಘೋರವ್ಯಾಧಿಗೆ ಮಾಯಾ ವಿಹಾರಿ ಮಹಾವಿಷ್ಣುವೆ ವಾಯುವಿನಲ್ಲಿರುವ ಸೋಂಕನ್ನು ನಿವಾರಿಸಿ, ಸ್ವಚ್ಛಗೊಳಿಸಿ ಶುದ್ಧವಾದ, ಸ್ವತಂತ್ರವಾದ, ಆಪತ್ತಿಲ್ಲದ ಅಖಂಡ ಭಾರತ ನಿರ್ವಣವಾಗುತ್ತದೆ. ನವೆಂಬರ್ 20ರವರೆಗೆ ವ್ಯಾಧಿಯ ಲಕ್ಷಣಗಳಿರುತ್ತದೆ. ಪಿತೃಮಾಸವು ಕನ್ಯಾ ರಾಶಿಯವರಿಗೆ ಪಿತೃಗಳ ತಿಲತರ್ಪಣದಿಂದ ಅವರು ಸಂತುಷ್ಟರಾಗುತ್ತಾರೆ.

ತುಲಾ – ದಶಮದಲ್ಲಿ ಸೂರ್ಯನು ಬಂದು, ತೃತೀಯ ಗುರುವು ನೀವು ಮಾಡುವ ಕೆಲಸಗಳಲ್ಲಿ ಜಯ, ಕೇತುವು ಧನಲಾಭ ತರುತ್ತಾನೆ. ನವಮ ರಾಹುವು ವ್ಯಸನವನ್ನು ಕೊಟ್ಟರೂ ಅದನ್ನು ಸಂತೋಷವನ್ನಾಗಿ ಪರಿವರ್ತಿಸುವವನೆ ನಿಜವಾದ ದೈವಭಕ್ತ. ಕೃಷ್ಣನ ಅಷ್ಟೋತ್ತರನಾಮವನ್ನು ಪಠಿಸಿ. ಕಾರ್ತವೀರ್ಯಾರ್ಜುನನನ್ನು ಧ್ಯಾನ ಮಾಡಿ.

ವೃಶ್ಚಿಕ- ದ್ವಿತೀಯ ಗುರು, ನವಮ ಸೂರ್ಯ ನಿಮ್ಮ ನಿರೀಕ್ಷೆಯನ್ನು ಮುಟ್ಟುವಂತೆ ನಡೆಸುತ್ತಾನೆ. ಮೇಷ ರಾಶಿಯ ಅಧಿಪತಿ ಅಂಗಾರಕನು ಕೆಲಸಗಳನ್ನು ತಡಮಾಡಿದರೂ ನಡೆಸಿಕೊಡುತ್ತಾನೆ. ಶ್ರಾವಣ ಮಾಸದಲ್ಲಿ ಒಂದು ದಿನವಾದರೂ ಮಹಾಲಕ್ಷ್ಮೀ ಸಹಸ್ರನಾಮವನ್ನು ಪಾರಾಯಣ ಮಾಡಿ. ಶಾಶ್ವತ ಲಕ್ಷ್ಮಿಯು ನಿಮ್ಮಲ್ಲಿ ನೆಲೆಸಿ ಸುಖ-ಸಮೃದ್ಧಿ ತರುತ್ತಾಳೆ.

ಧನಸ್ಸು – ಅಷ್ಟಮ ಸೂರ್ಯ ಆಲಸ್ಯ ಮಾಡಿದರೂ ಲಗ್ನದಲ್ಲಿ ಗುರುವು ಆಯಾಸ ಕಳೆದು ಶರೀರಕ್ಕೆ ಉಲ್ಲಾಸ ನೀಡು ತ್ತಾನೆ. ಮತ್ತೊಬ್ಬರ ವಿಚಾರದಲ್ಲಿ ತಾತ್ಸಾರ ಬೇಡ. ದೇವರು ಕೊಟ್ಟ ಕೆಲಸವನ್ನು ಅತ್ಯಂತ ಶ್ರದ್ಧೆಯಿಂದ ನಿರ್ವಹಿಸಿ. ಇಲ್ಲದಿದ್ದರೆ ದೈವಕ್ಕೆ ದ್ರೋಹವಾದೀತು ಎಚ್ಚರ. ರಾಹುವಿಗೆ ದುರ್ಗೆಯನ್ನು, ಕೇತುವಿಗೆ ಗಣಪತಿ ಯನ್ನು, ಶಾಶ್ವತವಾಗಿ ಶ್ರೀರಾಮಚಂದ್ರನನ್ನು ಭಜಿಸಿ.

ಮಕರ – ನಿಮ್ಮ ಮುಖಾರವಿಂದವು ಯಾವತ್ತೂ ಬಾಡಬಾರದು. ಬಳಲಿದಾಗ ವಿಶ್ರಾಂತಿ ಅಗತ್ಯ. ಗ್ರಹಗಳು ನಮ್ಮನ್ನು ಸುತ್ತುವರಿದಾಗ ದೇವರ ಧ್ಯಾನ ಬೇಕು. ಇನ್ನೊಬ್ಬರಿಗೆ ಒಂದು ತುತ್ತು ಅನ್ನವನ್ನು ಕೊಟ್ಟು ನಾವು ಊಟ ಮಾಡುವ ಬುದ್ಧಿ ಇದ್ದಾಗ ಗ್ರಹಗಳು ಬಾಧಿಸುವುದಿಲ್ಲ. ದೈವವು ಕಣ್ಣು ತೆರೆದು ನಿಮ್ಮನ್ನು ನೋಡುತ್ತಿದ್ದಾನೆ. ನೀತಿವಂತರಾಗಿರಿ. ಧರ್ಮವಿರಲಿ. ದೇವರು ಕೊಟ್ಟ ಕೆಲಸವನ್ನು ನಿಶ್ಚಿಂತೆಯಿಂದ ಮಾಡಿ.

ಕುಂಭ – ಮಹಾಲಕ್ಷ್ಮಿಯನ್ನೇ ಕುಂಭದಲ್ಲಿ ಆಹ್ವಾನಿಸಿ ಪೂಜಿಸಿ. ಆತ್ಮಸ್ಥೈರ್ಯ. ಧೃತಿಗೆಡದ ಮಹಾ ಸಂಕಲ್ಪ, ಗುರಿಯನ್ನು ಮುಟ್ಟುವುದು ನಿಮ್ಮ ನಂಬಿಕೆಯಾಗಿರಬೇಕು. ಎಲ್ಲಾ ಗ್ರಹಗಳು ಶುಭವಾಗಿರುವಾಗ ನೀವು ಪರೋಪಕಾರಿಗಳಾಗಿ ಬದುಕಿ ರಾಷ್ಟ್ರಕ್ಕೆ, ಪ್ರಜೆಗಳಿಗೆ, ರಾಷ್ಟ್ರಪಾಲಕರಿಗೆ ನಿಮ್ಮ ಪುಣ್ಯದ ಅಂಶವನ್ನು ದಾನ ಮಾಡಬಹುದು. ದತ್ತ ದೇವರ ಆವಾಹನೆ, ಪೂಜೆ, ನಿತ್ಯ ಮಾಡಿ, ದಕ್ಷಿಣಾಮೂರ್ತಿ ದರ್ಶನ ಮಾಡಿ. ಸರ್ವಸಿದ್ಧಿಯಾಗುತ್ತದೆ.

ಮೀನ – ಮೀನ ರಾಶಿಯ ಗುರುವು ಹತ್ತನೆಯ ಮನೆಯಲ್ಲಿದ್ದು, ಪಂಚಮ ರವಿಯು, ಕರ್ಕಾಟಕದಲ್ಲಿ ಗುರುವು ಉಚ್ಚನಾ ಗಿದ್ದು, ಅಲ್ಲಿಗೆ ರವಿಯು ಬಂದು ಸೇರುವುದರಿಂದ, ಮಯೂರವು ಸಂತೋಷವಾದಾಗ ಗರಿಬಿಚ್ಚಿ ನಾಟ್ಯ ವಾಡುವಷ್ಟೇ ಪ್ರಶಸ್ತ ಕಾಲ ನಿಮಗೆ. ನಿಮಗೆ ಜನ್ಮ ಕೊಟ್ಟವರನ್ನು ಹಾಡಿ ಹೊಗಳಿ. ದೈವವನ್ನು ಹೃದಯ ಮಂದಿರದಲ್ಲಿರಿಸಿ. ಪಿತೃ ಋಣ, ಋಷಿ, ಗುರು, ದೈವ, ರಾಷ್ಟ್ರ ಋಣವನ್ನು ತೀರಿಸಬೇಕಾದ್ದು ಮನುಷ್ಯನ ಆದ್ಯಕರ್ತವ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net