ವಾರ ಭವಿಷ್ಯ: ಈ ರಾಶಿಯವರ ಕೈಯನ್ನು ದೇವರು ಹಿಡಿದಿದ್ದು, ಸಂತೋಷ, ತೃಪ್ತಿ ಇರಲಿ

Vara-Bhavishya
Published on

19-04-2020ರಿಂದ 25-04-2020

ಮೇಷ: ರವಿಯು ಜ್ಞಾನದ ಬೆಳಕನ್ನು ನೀಡುತ್ತಾನೆ. ರವಿವಾರ ಗುರು ನಕ್ಷತ್ರವಾದ್ದರಿಂದ ಯಶಸ್ಸು ಮತ್ತು ನಷ್ಟ ಎರಡೂ ಶೇ. 50 ಭಾಗದ್ದಾಗಿರುತ್ತದೆ. ಆದರೆ ನಿರಾಶರಾಗಬೇಡಿ. ಧೈರ್ಯದಿಂದ ಮುನ್ನಡೆಯಿರಿ. ಆದಿತ್ಯ ಹೃದಯ ಪಠಿಸಿ. ಸುಬ್ರಹ್ಮಣ್ಯನ ಆರಾಧನೆಯಿಂದ ಮನಸ್ಸಿಗೆ ನೆಮ್ಮದಿ. ‘ದುಂ ದುರ್ಗಾಯೈ ನಮಃ’ ಮಂತ್ರವನ್ನು ಜಪಿಸಿ.

ವೃಷಭ: ಸವಾಲುಗಳನ್ನು ಎದುರಿಸಿದರೂ ಯಶಸ್ಸು ನಿಮ್ಮದಾಗುತ್ತದೆ. ಗುರುನಿಂದನೆ ಸಲ್ಲ. ಮುಂದೆ ನಿಮ್ಮ ಕೀರ್ತಿಯು ಆಕಾಶದೆತ್ತರಕ್ಕೆ ಏರಲಿದೆ. ಬಹಳ ವಿಚಾರಮಾಡಿ ಕೆಲಸಗಳನ್ನು ಮುನ್ನಡೆಸಿರಿ. ಬಹಳ ದಿನಗಳ ನಿರೀಕ್ಷೆಯ ಧನವು ಬಂದು ಕೈಸೇರುತ್ತದೆ. ಶ್ರೀದುರ್ಗೆಯನ್ನು ಆರಾಧಿಸಿ.

ಮಿಥುನ: ನುಡಿದಂತೆ ನಡೆಯಿರಿ. ಅಷ್ಟಮ ಶನಿಯಿರುವುದರಿಂದ ಆರೋಗ್ಯದ ಬಗ್ಗೆ ಎಚ್ಚರ ವಹಿಸಿ. ಶ್ರೀರಾಮ ಮಂತ್ರವೇ ನಿಮಗೆ ಸಂಜೀವಿನಿ. ರಾಮನು ಲೀಲಾಮಾನುಷನಾಗಿ ಅವತರಿಸಿ ನಾನಾ ಕಷ್ಟವನ್ನು ಅನುಭವಿಸಿಯೂ ಧರ್ಮದಿಂದ ನಡೆದ. ಹಾಗೆಯೇ ನೀವೂ ದೇವರು ಧರ್ಮವನ್ನು ನಂಬಿ ಬಾಳಿರಿ. ಮುಂದೆ ಅತಿಸುಖವಿಲ್ಲದಿದ್ದರೂ ನಿಂತಲ್ಲೇ ಸಂದರ್ಭವನ್ನು ಎದುರಿಸುವ ಧೈರ್ಯ ಬರುತ್ತದೆ.

ಕಟಕ: ಸಪ್ತಮದಲ್ಲಿರುವ ಶನಿಯ ಪ್ರಭಾವದಿಂದ ಕೈಕಾಲು ತೊಂದರೆ ಅನುಭವಿಸಬೇಕಾಗಬಹುದು. ವಿನಾಕಾರಣ ಎಚ್ಚರ ತಪ್ಪಿ ದುಃಖಿಸಬೇಡಿ. ಜಲರಾಶಿಯವರಾದ ನೀವು ಶ್ರೀದತ್ತಾತ್ರೇಯ ಹಾಗೂ ಇಷ್ಟದೇವರ ಆರಾಧನೆ ಮತ್ತು ಶ್ರೀದಕ್ಷಿಣಾಮೂರ್ತಿಯನ್ನು ಆರಾಧಿಸಿ.

ಸಿಂಹ: ಶನಿ, ಗುರು, ಕುಜ ಗ್ರಹಗಳು ಯುದ್ಧಕ್ಕೆ ಕಾರಣ. ದೈವಬಲ ದೂರಸರಿದಿದೆ. ಮನಸಾ ಕುಲದೇವರನ್ನು ಪೂಜಿಸಿ. ಕುಲಗುರುಗಳನ್ನು ಆರಾಧಿಸಿ. ವಿವೇಚನೆ ಮತ್ತು ವಿವೇಕದಿಂದ ವರ್ತಿಸಿ. ಮನುಕುಲಕ್ಕೆ ಒಳ್ಳೆಯದನ್ನು ಮಾಡಲು ದೇವರಲ್ಲಿ ಪ್ರಾರ್ಥಿಸಿ. ಶ್ರೀರಾಮನನ್ನು ಪೂಜಿಸಿ. ರಾಮತಾರಕ ಮಂತ್ರ ಜಪಿಸಿ.

ಕನ್ಯಾ: ಹಿರಿಯರು ಹೇಳಿದ ಬುದ್ಧಿಮಾತು ಕೇಳಬೇಕು. ಮನೆಯಲ್ಲಿ ಗಂಡುಮಕ್ಕಳ ಮೇಲೆ ಹತೋಟಿಯಿರಲಿ. ಎಚ್ಚರ ತಪ್ಪಿದರೆ ದುಃಖಪಡುವಿರಿ. ಉಪಯೋಗವಿಲ್ಲದ ಬುದ್ಧಿಹೇಳಿ ನಿಂದ್ಯಾಪವಾದಗಳಿಗೆ ಗುರಿಯಾಗಬೇಡಿ. ಅನಂತ ಪದ್ಮನಾಭನ ಕಥಾ ಶ್ರವಣ ಮಾಡಿರಿ. ಶ್ರೀಸತ್ಯ ನಾರಾಯಣನನ್ನು ಪ್ರಾರ್ಥಿಸಿ. ಪೂಜಿಸಿ.

ತುಲಾ: ಜೀವನದಲ್ಲಿ ಭ್ರಮೆ ಬೇಡ. ಜೀವನ ಯುದ್ಧದಲ್ಲಿ ಜಯ ಸಾಧಿಸುವಿರಿ. ಕೈಗೆತ್ತಿಕೊಂಡ ಕಾರ್ಯ ಪೂರ್ಣಮಾಡಬೇಕು. ಚತುರ್ಥದ ಶನಿಗೆ ಶಿವಪಂಚಾಕ್ಷರಿ ಜಪ ಮಾಡಿ. ಪ್ರಗತಿಪರ ವಾರವಾಗಿರುತ್ತದೆ. ಸಾಧ್ಯವಾದಷ್ಟು ವಾದ-ವಿವಾದಗಳಲ್ಲಿ ತೊಡಗಬೇಡಿ. ಗುರುವು ನಿಮಗೆ ಕಾರ್ಯಜಯ ಹಾಗೂ ಸುಖವನ್ನು ಕೊಡುತ್ತಾನೆ.

ವೃಶ್ಚಿಕ: ಭಗವಂತನು ನಿಮ್ಮ ಕೈಹಿಡಿದಿದ್ದಾನೆ. ಸಂತೋಷ ಹಾಗೂ ತೃಪ್ತಿ ಇರಲಿ. ಬರಬೇಕಾದದ್ದು ಬಹಳವಿದೆ. ಖಜಾನೆಯ ಕೀಲಿಕೈ ದೇವರ ಬಳಿಯಿದೆ. ಸೂಕ್ತ ಸಮಯಕ್ಕಾಗಿ ಕಾಯಿರಿ. ದುರ್ಜನರು ಬೇಡದವರು ಪಾಠ ಕಲಿಯದಿದ್ದರೆ ಅವರನ್ನು ಅಲ್ಲೇ ನಿಲ್ಲಿಸಿ ಮುಂದೆ ಸಾಗಿರಿ. ಶ್ರೀಲಕ್ಷ್ಮೀವೆಂಕಟೇಶ್ವರನ ದರ್ಶನ ಮಾಡಿ.

ಧನಸ್ಸು: ಮನಸ್ಸನ್ನು ಘರ್ಷಣೆಗೆ ಒಳಪಡಿಸದೆ ಕಾಲನಿಗೆ ನಮಸ್ಕರಿಸಿ. ಭಾಗ್ಯೋದಯ ಹತ್ತಿರದಲ್ಲಿದೆ. ಧನುರ್ಧಾರಿಯಾದ ರಾಮನು ನಿಮಗೆ ಅಮೃತಪಾನ ಮಾಡಿಸುತ್ತಾನೆ. ಈಶ್ವರ ಹಾಗೂ ರಾಮನ ಧ್ಯಾನವಿರಲಿ. ಖಿನ್ನತೆಯಿದ್ದರೂ ಮತ್ತೊಬ್ಬರಿಗೆ ಉಪಕಾರ ಮಾಡುವುದನ್ನು ರೂಢಿಸಿಕೊಳ್ಳಿ. ಮುಂದಿನ ಸುಖಭೋಗಕ್ಕೆ ಅನುಕೂಲವಾಗುತ್ತದೆ.

ಮಕರ: ಕಾಲವ್ಯಯ ಬೇಡ. ಎಲ್ಲಿ ದುಃಖ ಕಾಣುವುದೋ ಧೈರ್ಯವಾಗಿ ಎದುರಿಸಿ. ರಾಶಿಯಲ್ಲಿ ಶನಿ, ಕುಜನ ಸಂಚಾರವಿರುವುದರಿಂದ ಮನಸ್ಸೇ ರೋಗಕ್ಕೀಡಾಗಬಹುದು. ಸಂಯಮವಿರಲಿ. ಅಪಕಾರವನ್ನು ಯಾರಿಗೂ ಮಾಡದಿದ್ದರೆ ಅದೇ ದೊಡ್ಡ ಉಪಕಾರ. ಅನ್ಯರ ಕಷ್ಟಗಳಿಗೆ ಸ್ಪಂದಿಸಿ. ದೇವರು ನಿಮ್ಮ ಕೈಹಿಡಿಯುತ್ತಾನೆ. ಕದಳಿ ಫಲ ದಾನ ಮಾಡಿ. ಶ್ರೀ ಆಂಜನೇಯನ ಆರಾಧನೆ ಮಾಡಿರಿ.

ಕುಂಭ: ದ್ವಾದಶದಲ್ಲಿ ತ್ರಿಗ್ರಹಗಳ ಸಂಯೋಗ. ಪರೋಪಕಾರ ಹಾಗೂ ದೇವರಧ್ಯಾನವೇ ಮಾರ್ಗ, ಗ್ರಹಗಳ ಚಲನೆಯಿಂದ ಸುಖ-ದುಃಖ ಸಮಾನವಾಗಿರುತ್ತದೆ. ಇದ್ದುದ್ದರಲ್ಲೇ ತೃಪ್ತಿಪಡಿ. ಧನವನ್ನು ಮಿತವಾಗಿ ವಿನಿಯೋಗಿಸಿ. ಶನಿಯು ಸ್ವಕ್ಷೇತ್ರದಲ್ಲಿರುವುದರಿಂದ ಅತಿಯಾದ ಚಿಂತೆಬೇಡ. ಋಣಪರಿಹಾರಕ್ಕೆ ಮಹಾಲಕ್ಷ್ಮೀಯನ್ನು ಧ್ಯಾನಿಸಿ. ಭೈರವೇಶ್ವರ ಹಾಗೂ ವೈಷ್ಣೋದೇವಿಯನ್ನು ಸ್ಮರಿಸಿ.

ಮೀನ: ಜನ್ಮಾಂತರದ ಪುಣ್ಯದಿಂದ ಸುಖಜೀವನಕ್ಕೆ ಅಡ್ಡಿಯಿರುವುದಿಲ್ಲ. ಆದರೆ ಸುಖವು ಎಲ್ಲಾ ಕಾಲದಲ್ಲೂ ಇರುವುದಿಲ್ಲ. ದೇವರ ಧ್ಯಾನ ಗುರುಹಿರಿಯರಲ್ಲಿ ಗೌರವವನ್ನು ಇರಿಸಿಕೊಳ್ಳಿ. ಸಂತೋಷ ದ್ವಿಗುಣಗೊಳ್ಳುತ್ತದೆ. ಪುರುಷಸೂಕ್ತ ಪಠಿಸಿ. ಅಥವಾ ಶ್ರವಣ ಮಾಡಿ. ನಾರಾಯಣನನ್ನು ಸ್ಮರಿಸಿ. ಭಗವಂತನ ಸಾಕ್ಷಾತ್ಕಾರವಾದರೆ ನಿಮ್ಮಂಥ ಭಾಗ್ಯವಂತರಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net