

17-05-2020 ರಿಂದ 23-05-2020
ಮೇಷ: ಗುರುಬಲ ಸಾಧಾರಣವಾಗಿದ್ದು ಎಲ್ಲಾ ಕಾರ್ಯಗಳಲ್ಲಿ ಜಯ ಕಾಣಬೇಕಾದರೆ ಧನುಸ್ಸು ರಾಶಿಗೆ ಗುರುವಿನ ಪ್ರವೇಶವನ್ನು ಎದುರುನೋಡಿ. ಗುರುವು ವಕ್ರಗತಿಯಲ್ಲಿರುವುದರಿಂದ ಅವನ ಅನುಗ್ರಹ ಸಂಪಾದಿಸಿ, ಉಮಾಮಹೇಶ್ವರನನ್ನು ಆರಾಧಿಸಿ ಹಾಗೂ ದಕ್ಷಿಣಾಮೂರ್ತಿಯನ್ನು ಪೂಜಿಸಿ. ಗುರುವಿನ ಪ್ರೀತಿಗೆ ಕಡಲೆಕಾಳು ಬೆಲ್ಲವನ್ನು ದಾನ ಮಾಡಿ ಹಾಗೂ ನಾಗದೇವರನ್ನು ಪೂಜಿಸಿದಲ್ಲಿ ನಿಮ್ಮ ಕಾರ್ಯಸಾಧನೆಯಾಗುತ್ತದೆ.
ವೃಷಭ: ಗುರು - ಶನಿ ಗ್ರಹಗಳು ಭಾಗ್ಯದಲ್ಲಿದ್ದು ಆನಂದವನ್ನು ಉಂಟುಮಾಡಲಿವೆ. ಸ್ವಕ್ಷೇತ್ರದಲ್ಲಿರುವ ಶುಕ್ರನು ಭೋಗ, ವಿಲಾಸ, ಅಧಿಕಾರದಲ್ಲಿ ಯಶಸ್ಸು ತರುತ್ತಾನೆ. ಆಕಸ್ಮಿಕವಾಗಿ ಧನಲಾಭ ತಂದುಕೊಡುತ್ತಾನೆ. ಬಹುದಿನಗಳಿಂದ ಕಾದು ತಡೆದಿದ್ದ ವಿವಾಹವು ಕೂಡಿಬರುತ್ತದೆ. ಆರೋಗ್ಯದ ಬಗ್ಗೆ ನಿಮಗೆ ದೃಷ್ಟಿ ಇರಲಿ. ಧನ್ವಂತರಿಯನ್ನು ಪ್ರಾರ್ಥಿಸಿ, ಪೂಜಿಸಿ, ಎಳ್ಳೆಣ್ಣೆಯನ್ನು ಪಾತ್ರೆಯ ಸಮೇತ ದಾನ ಮಾಡಿ.
ಮಿಥುನ: ಅಧಿಪತಿ ಬುಧನು ಹನ್ನೆರಡನೇ ಮನೆಯಲ್ಲಿದ್ದು, ಮಂಗಳಕಾರ್ಯ ನಡೆಯಲು ಶನಿ, ಕೇತು ಅಡ್ಡಿಯನ್ನು ಉಂಟುಮಾಡುತ್ತಾನೆ. ಸದಾಚಾರ ಸಂಪನ್ನರು ದೈವಂ ಮಾನುಷರೂಪೇಣ ಎಂಬಂತೆ ಉತ್ತಮರ ಆಶೀರ್ವಾದ ಪಡೆಯಿರಿ. ವಿದ್ಯಾರ್ಥಿಗಳು ಸಮಯ ಹಾಳು ಮಾಡಬೇಡಿ. ಹೋದ ಸಮಯ, ಕಳೆದ ದುಡ್ಡು ಬರುವುದಿಲ್ಲ. ವಿಷ್ಣುಸಹಸ್ರನಾಮ ಪಾರಾಯಣ ಮಾಡಿ.
ಕಟಕ: ನಿತ್ಯ ಸಂಚಾರ ಮಾಡುವ ಚಂದ್ರನು, ಸಪ್ತಮದಲ್ಲಿ ಗುರು-ಶನಿ ನಿಮ್ಮ ಕೆಲಸಕಾರ್ಯಗಳಲ್ಲಿ ಗಡಿಬಿಡಿ ಮಾಡಿದರೆ ತೊಂದರೆಯಾದೀತು. ಹನ್ನೊಂದರ ಶುಕ್ರನು ಹಾಗೂ ಬುಧನು ಸ್ವಲ್ಪ ಧನಲಾಭವಿರುತ್ತದೆ. ನೂತನ ವಾಹನ, ಭೂಲಾಭ, ನೂತನ ಗೃಹದ ಪ್ರವೇಶದಿಂದ ಮನಸ್ಸಿಗೆ ಸಂತಸ. ದೇವರನ್ನು ಒಲಿಸಿಕೊಳ್ಳಿ. ಒಳ್ಳೆಯ ಫಲವು ನಿಮ್ಮದಾಗುತ್ತದೆ.
ಸಿಂಹ: ಚಿಂತೆಯು ಚಿತೆಗೆ ಸಮಾನ. ಗುರು - ಶನಿ ಹಾಗೂ ಕುಜನು ಒಳ್ಳೆ ಫಲವನ್ನು ಕೊಟ್ಟರೂ ಕೇತುವು ಅದನ್ನು ಹಾಳು ಮಾಡುವನು. ದೈವ ಬಲ, ಗುರುಬಲ ಕ್ಷೀಣಿಸಿದ್ದು, ಗುರುವಿನ ಬದಲಾವಣೆಗೆ ಎದುರು ನೋಡಿ. ರಕ್ತಸಂಬಂಧಿಗಳು ಆಸ್ತಿ ವಿಚಾರದಲ್ಲಿ ತೊಂದರೆ ನೀಡಿದರೂ ಶಾಂತಚಿತ್ತರಾಗಿರಿ. ಶನಿಯು ರಾಜಕೀಯ ಹಾಗೂ ಸಾಮಾಜಿಕವಾಗಿ ಯಶಸ್ಸು ತರುತ್ತಾನೆ. ಅನಂತವಾಗಿ ಗುರು ದತ್ತಾತ್ರೇಯನನ್ನು ಪೂಜಿಸಿ, ಪ್ರದೋಷದಲ್ಲಿ ದುರ್ಗೆಯನ್ನು ಆರಾಧಿಸಿ.
ಕನ್ಯಾ: ಚತುರ್ಥದ ಕೇತು, ದಶಮ ರಾಹು, ಪಂಚಮದಲ್ಲಿ ಶನಿ-ಗುರು ಎಲ್ಲರೂ ನಿಮ್ಮನ್ನು ಸುತ್ತುವರಿದಿದ್ದಾರೆ. ನೇತ್ರಕ್ಕೆ ಹಾನಿಯಾದೀತು ಎಚ್ಚರ. ನಿಮ್ಮ ಅತಿಯಾದ ಪ್ರೇಮದಿಂದ ಮಕ್ಕಳಿಂದ ತೊಂದರೆ, ಧನನಷ್ಟ ಆಗುವ ಸಂಭವವಿದೆ. ಪಾಪ ಪುಣ್ಯಗಳೇ ನಿಮ್ಮ ಸಹಾಯಕ್ಕೆ ಬರಬೇಕು. ಯಾರಿಗಾದರು ತೊಂದರೆಯನ್ನು ಕೊಟ್ಟರೆ ನಿಮ್ಮ ತಪ್ಪನ್ನು ದೇವರ ಮುಂದೆ ಪ್ರಕಟಿಸಿ. ಮೃತ್ಯುಂಜಯನನ್ನು ಪ್ರಾರ್ಥಿಸಿ, ಶೃಂಗೇರಿ ಕ್ಷೇತ್ರದ ಮಲ್ಹಾನಿಕರೇಶ್ವರನನ್ನು ಪ್ರಾರ್ಥಿಸಿ.
ಇದನ್ನೂ ಓದಿ: ಕ್ವಾರಂಟೈನ್ ನಿಯಮ ಗೊತ್ತಿದ್ದರೆ ಮಾತ್ರ ರೈಲು ಟಿಕೆಟ್
ತುಲಾ: ಅಧಿಪತಿ ಶುಕ್ರನು ಅಷ್ಟಮದಲ್ಲಿದ್ದಾನೆ. ಸ್ವಕ್ಷೇತ್ರದಲ್ಲಿರುವುದರಿಂದ ನಿಮಗೆ ನಿರೀಕ್ಷಿತ ದೈವಸಹಾಯ, ಹಣಕಾಸಿನ ವಿಚಾರದಲ್ಲಿ ಭಾಗ್ಯೋದಯವಾಗುತ್ತದೆ. ಶನಿಗೆ ತುಲಾರಾಶಿಯು ಉಚ್ಚರಾಶಿ. ಆ ಗ್ರಹವು ಚತುರ್ಥದಲ್ಲಿರುವುದರಿಂದ ನರದೌರ್ಬಲ್ಯ, ಹೃದಯಸಂಬಂಧಿ ಕಾಯಿಲೆ ಕಂಡುಬರಬಹುದು. ಆದರೆ ಆಯುಷ್ಯಕ್ಕೆ ತೊಂದರೆ ಇಲ್ಲ. ವೈದ್ಯರನ್ನು ಕಾಣಿ ಹಾಗೂ ಅವರನ್ನೇ ಶ್ರೀಹರಿ ಎಂದು ಕಾಣಿರಿ. ಶ್ರೀ ಅಶ್ವಿನಿದೇವತೆಗಳ ಆರಾಧನೆ ಮಾಡಿ.
ವೃಶ್ಚಿಕ: ಎರಡರ ಕೇತು ನಿಮ್ಮ ಮನಸ್ಸಿನ ಒತ್ತಡವನ್ನು ಉಂಟುಮಾಡುತ್ತಾನೆ. ನಿಮ್ಮ ಆತ್ಮೀಯರಲ್ಲಿ ಲಾಭ - ನಷ್ಟವನ್ನು ಹಂಚಿಕೊಳ್ಳಿ. ಗುರುಗಳಿಂದ ಸಹಾಯ ಪಡೆಯಿರಿ. ಭೂಮಿಯಲ್ಲಿ ಹೂಡಿದ ಹಣವು ದುಪ್ಪಟ್ಟು ಬರುವುದರಲ್ಲಿ ಸಂದೇಹವಿಲ್ಲ. ಲಾಭ ಪಡೆದವನು ಮಾತೃಹರಣ ದೋಷಕ್ಕೆ ಒಳಪಟ್ಟಿರುತ್ತಾನೆ. ಸುಖಜೀವನಕ್ಕೆ ಋಣಮುಕ್ತರಾಗಬೇಕಾದಲ್ಲಿ ವಿಚಾರವಂತರಾದ ಗುರುಗಳಲ್ಲಿ ಸಲಹೆ ಪಡೆದು ಸತ್ಪಾತ್ರರಿಗೆ ಮನೋಚ್ಛಿತ ದಾನವನ್ನು ಮಾಡಿರಿ.
ಧನಸ್ಸು: ಸಂತೋಷ ಹಾಗೂ ನಗುಮೊಗ ಕೊಟ್ಟ ಕೀರ್ತಿ ದೇವರದ್ದು. ಬೇಡದ ತಪ್ಪುಗಳನ್ನು ಮಾಡಿ ಚಿಂತಿಸಬೇಡಿ. ಬಾಲರನ್ನು ಹಿಂಸಿಸಬೇಡಿ. ತಾಯಿಯನ್ನು ಸ್ಮರಿಸಿ ದುರ್ಗಾಪೂಜೆಯನ್ನು ಮಾಡಿ. ರಾಹುವಿನ ಪ್ರೀತಿಗಾಗಿ ಉದ್ದಿನಕಾಳು ಕೊಟ್ಟು, ನಾಗದೇವರ ಅನುಗ್ರಹಕ್ಕೆ ಪಾತ್ರರಾಗಿ. ಹಿರಿಯರ ಮಾತನ್ನು ಬದಿಗೊತ್ತಿ ದುಃಖಿತರಾಗಬೇಡಿ. ಸರ್ವಶ್ರೇಷ್ಠವಾದ ಇಷ್ಟಾರ್ಥಸಿದ್ಧಿ ಕೊಡುವ ಸುಬ್ರಹ್ಮಣ್ಯನನ್ನು ಪ್ರಾರ್ಥಿಸಿ. ಕಾರ್ಯಜಯಕ್ಕೆ ದತ್ತಾತ್ರೇಯನ ಅನುಗ್ರಹ ಅವಶ್ಯ.
ಮಕರ: ಮಕರಾಧಿಪತಿ ಶನಿಯು ಮಕರಕ್ಕೆ ಬಂದು ತಾಪವು ಕಡಿಮೆಯಾದರೂ, ಜನ್ಮಶನಿ ದುಃಖವನ್ನು ಆಸ್ತಿ ವಿಚಾರದಲ್ಲಿ, ಶುಭ ಕಾರ್ಯಗಳಲ್ಲಿ ವಿಘ್ನವನ್ನು ಕೊಡುತ್ತಾನೆ. ದುಡ್ಡಿಗಾಗಿ ಒತ್ತಡವಿರುತ್ತದೆ. ಖರ್ಚು ವೆಚ್ಚವನ್ನು ಯೋಚಿಸಿ ಮಾಡಿ ಅಗತ್ಯವಾದ ಕೆಲಸಗಳಿಗೆ ಮಾತ್ರ ಹಣವನ್ನು ಉಪಯೋಗಿಸಿ, ಕುಲಗುರುಗಳನ್ನು ಆರಾಧಿಸಿ, ರ್ಚಚಿಸಿ ನಿಮ್ಮ ಕೆಲಸಗಳಲ್ಲಿ ಸಲಹೆಯನ್ನು ಪಡೆದು ಮುಂದೆ ಸಾಗಿರಿ. ಸುಂದರಕಾಂಡ ಪಾರಾಯಣ ಮಾಡಿ.
ಕುಂಭ: ದ್ವಾದಶ ಶನಿಯು ಸಾಡೇಸಾತಿಯ ಆರಂಭದಲ್ಲಿದ್ದು ತಾಪತ್ರಯಗಳೇ ಜಾಸ್ತಿ - ಪಂಚಮದಲ್ಲಿ ರಾಹು ಹಾಗೂ ಲಾಭದಲ್ಲಿ ಕೇತು ಇದ್ದರೂ ಕೂಡ ಮೇಲಿಂದ ಮೇಲೆ ಒತ್ತಡಕ್ಕೆ ಸಿಲುಕಿ ಆರೋಗ್ಯದಲ್ಲಿ ವ್ಯತ್ಯಯ ಕಾಣುತ್ತದೆ. ಶೀತ - ಕಫ ನರದೌರ್ಬಲ್ಯ ಮಾನಸಿಕ ಒತ್ತಡವಿರುತ್ತದೆ. ಧನನಷ್ಟವಾದೀತು ಎಚ್ಚರ. ಇದರ ಪರಿಣಾಮ ನಿಮ್ಮ ಆರೋಗ್ಯದ ಮೇಲೆ ಬೀಳಲಿದೆ. ತಾಳಿದವನು ಬಾಳಿಯಾನು. ಕಾಲಭೈರವನನ್ನು ಪೂಜಿಸಿ. ರೇಣುಕಾಂಬ ಯಲ್ಲಮ್ಮನನ್ನು, ಬಾದಾಮಿ ಬನಶಂಕರಿಯನ್ನು ಪ್ರಾರ್ಥಿಸಿ.
ಮೀನ: ಶನಿ, ಕುಜ, ಗುರು ಲಾಭದಲ್ಲಿದ್ದು ನಿಮ್ಮ ನಿರೀಕ್ಷೆಯಂತೆ ನಿಮ್ಮ ಕಾರ್ಯಕಲಾಪಗಳು ಜರುಗುವುವು. ಸುಖ ಸಂತೋಷಗಳಿಗೆ ಯಾವ ಭಂಗವಿಲ್ಲ. ರಾಜಯೋಗದ ವೈಭವವು ಪ್ರಾಪ್ತವಾಗುತ್ತದೆ. ನಿಮ್ಮ ಸುಸಮಯವನ್ನು ಹಾಳಮಾಡಬೇಡಿ. ಅನ್ಯರಿಗೆ ಉಪಕಾರ, ಮಾತಾಪಿತೃಗಳ ಸೇವೆ ಮಾಡಿದಲ್ಲಿ ಚಿಂತಿಸಬೇಕಾಗಿಲ್ಲ. 2 ವರ್ಷ ನಿಮಗೆ ತಡೆಹಾಕಲು ಯಾವ ಗ್ರಹಗಳಿಲ್ಲ. ಅಧಿಪತಿ ಬುಧ ವಿಷ್ಣುವಿನ ದಶಾವತಾರಗಳಲ್ಲಿ ಅತ್ಯಂತ ಶ್ರೇಯಸ್ಕರವಾದ ಶ್ರೀರಾಮನ ಪೂಜೆಯನ್ನು ಮಾಡಿ, ಬಂದ ಲಾಭದಲ್ಲಿ ನಾಡಿಗೂ ದಾನವನ್ನು ಮಾಡಿ.