ವಾರ ಭವಿಷ್ಯ: ಈ ರಾಶಿಯವರು ಒಳ್ಳೆಯ ಸಮಯಕ್ಕೆ ಕಾಯುವುದು ಒಳಿತು

Vaara-Bhavishya-1
Published on

12-04-2020 ರಿಂದ 18-04-2020ರವರೆಗೆ

ಮೇಷ: ಸೂರ್ಯದೇವನು ಉಚ್ಚನಾಗಿದ್ದು, ಹಲವಾರು ಸಮಸ್ಯೆಗಳಿಗೆ ಪರಿಹಾರವನ್ನು ತಂದುಕೊಡುತ್ತಾನೆ. ಉಷ್ಣಕ್ಕೆ ಸಂಬಂಧಪಟ್ಟ ಹಾಗೂ ಜಠರಕ್ಕೆ ಸಂಬಂಧಿಸಿದ ಏರುಪೇರು ಇರುತ್ತದೆ. ಆತಂಕ ಪಡಬಾರದು. ಸೂರ್ಯನನ್ನು ಧ್ಯಾನಿಸಿ. ಮೇ15ರ ನಂತರ ಒಳ್ಳೆಯ ದಿನಗಳನ್ನು ಕಾಣುವಿರಿ.

ವೃಷಭ: ದ್ವಾದಶದಲ್ಲಿರುವ ರವಿಯಿಂದ ‘ಮಾತೇ ಮುತ್ತು ಮಾತೇ ಮೃತ್ಯು’ ಎಂಬಂತೆ ಯಾರೊಂದಿಗೂ ವಾದ-ವಿವಾದಗಳಲ್ಲಿ ತೊಡಗಬೇಡಿ. ವೈರತ್ವ ಬೇಡ. ದೇಹ ಹಾಗೂ ಮನಸ್ಸಿಗೆ ಆಲಸ್ಯ ಹಾಗೂ ಶ್ರಮವಹಿಸುವ ಕೆಲಸವನ್ನು ಮುಂದೂಡಿ. ಹಿಂದೆ ಕೊಟ್ಟಿದ್ದು ಮುಂದೆ ಬಾರದು. ಮಾರ್ಗ ತೋರಿಸಿದ ಗುರುವನ್ನು ಮರೆಯದಿರಿ. ಸನ್ಮಾರ್ಗದಲ್ಲಿ ನಡೆಯಿರಿ.

ಮಿಥುನ: ಅಷ್ಟಮದಲ್ಲಿರುವ ಶನಿ, ಗುರು, ಕುಜ ಗ್ರಹಗಳಿಂದ ಮಾಡುವ ಕೆಲಸಗಳು ಫಲಕಾರಿಯಾಗುವುದಿಲ್ಲ. ಅಲ್ಪತೃಪ್ತಿಯಿರಲಿ. ಜೀವನದಲ್ಲಿ ಸುಖ ಹಾಗೂ ಸವಾಲುಗಳು ಸಮಾನವಾಗಿರುತ್ತವೆ. ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ. ಹನುಮಾನ್ ಚಾಲೀಸ ಪಠಿಸಿ.

ಕಟಕ: ಸಪ್ತಮದಲ್ಲಿರುವ ಗುರುವಿನಿಂದ ತೃಪ್ತಿಕರವಾದ ಜೀವನ ನಿಮ್ಮದಾಗಲಿದೆ. ನಾಡಿಗಾಗಿ, ನುಡಿಗಾಗಿ ನಿಮ್ಮ ಪ್ರಾರ್ಥನೆ ಹಾಗೂ ಸೇವೆಯಿರಲಿ. ಶನಿಯಿಂದ ಓಡಾಟದಲ್ಲಿ ಅತಿಯಾದ ಪ್ರಯಾಸ ಬೇಡ. ಆತುರದಲ್ಲಿ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಬೇಡ. ಶ್ರೀ ದತ್ತದೇವರ ಆರಾಧನೆಯಿಂದ ಶಾಂತಿ ದೊರೆಯುವುದು.

ಸಿಂಹ: ಕಾಲಾಯ ತಸ್ಮೈ ನಮಃ. ಒಳ್ಳೆಯ ಸಮಯಕ್ಕಾಗಿ ಕಾಯಿರಿ. ದೇವರೇ ದಾರಿ ತೋರುವನು. ಷಷ್ಠದಲ್ಲಿರುವ ಗುರು ಹಾಗೂ ಶನಿಗೆ ಶ್ರೀದಕ್ಷಿಣಾಮೂರ್ತಿ ಆರಾಧನೆ ಶ್ರೇಯಸ್ಕರ. ದೇಶಕ್ಕಾಗಿ ನಿಮ್ಮ ಪ್ರಾರ್ಥನೆ ಇರಲಿ. ಬಲಾಢ್ಯನಾದ ಶನಿಯು ಏನನ್ನಾದರೂ ಕೊಡಬಲ್ಲನು.

ಕನ್ಯಾ: ಪಂಚಮದಲ್ಲಿರುವ ಶನಿಯು ಬುದ್ಧಿಯನ್ನು ವಿಕಾರಗೊಳಿಸುವನು. ಇನ್ನೊಬ್ಬರಿಗೆ ಕೇಡು ಮಾಡಬೇಡಿ. ಬೇರೆಯವರ ಸಂಕಟಕ್ಕೆ ಮರುಗಿ. ಬಡಬಗ್ಗರಿಗೆ ಅನ್ನದಾನವನ್ನು ಮಾಡಿ. ಮನೋಧೈರ್ಯವನ್ನು ಇರಿಸಿಕೊಂಡು ಮಾಡುವ ಕೆಲಸಗಳಲ್ಲಿ ಮುನ್ನಡೆಯಿರಿ.ಶ್ರೀಮನ್ನಾರಾಯಣನನ್ನು ಭಜಿಸಿ.

ತುಲಾ: ಮನಸ್ಸನ್ನು ಸಮತೋಲನದಲ್ಲಿರಿಸಿಕೊಳ್ಳಿ. ದೇವರ ದಯೆಯಿಂದ ಕರುಣಿಸಿರುವ ಭಾಗ್ಯವನ್ನು ಚಿಂತಿಸಿ. ಇಲ್ಲದ್ದನ್ನು, ಆಗಬೇಕಾದ್ದನ್ನು ಚಿಂತಿಸಿ ಖಿನ್ನರಾಗಬೇಡಿ. ನಿಮ್ಮ ಪೂರ್ವ ಪುಣ್ಯದಿಂದ ನೆನೆಸಿದ ಕಾರ್ಯ ಕೈಗೂಡುತ್ತದೆ. ಜಯ ನಿಮ್ಮದಾಗುತ್ತದೆ. ನಿಮ್ಮ ಆರಾಧ್ಯದೈವವನ್ನು ಭಜಿಸಿ ಆನಂದಿಸಿ.

ವೃಶ್ಚಿಕ: ಸುಬ್ರಹ್ಮಣ್ಯನ ಆರಾಧನೆಯಿಂದ ದೊಡ್ಡ ಆಪತ್ತು ಹಾಗೂ ಧನಸಂಕಷ್ಟದಿಂದ ಆಚೆ ತರುತ್ತಾನೆ. ಅಂಜದಿರಿ. ಶ್ರೀರಾಮಚಂದ್ರನು ಇದಕ್ಕೆ ಪರಿಹಾರ ಮಾರ್ಗವನ್ನು ತೋರಿಸುತ್ತಾನೆ. ಆರೋಗ್ಯ, ಆಯಸ್ಸು ಇದ್ದಮೇಲೆ ಹೇರಳವಾದ ಧನವು ಬರುತ್ತದೆ. ಶ್ರೀಸೂಕ್ತ ಪಠಿಸಿ ಶ್ರವಣ ಮಾಡಿ.

ಧನಸ್ಸು: ದ್ವಿತೀಯದಲ್ಲಿರುವ ಗುರು, ಶನಿಗ್ರಹಗಳು ಲಾಭ-ನಷ್ಟವನ್ನು ಸಮಾನವಾಗಿ ನೀಡುತ್ತವೆ. ಮಹತ್ತರವಾದ ಯೋಜನೆಗಳು ರೂಪುಗೊಳ್ಳುವ ಸಮಯ. ನಾವು ಉಪಯೋಗಿಸುವ ವಸ್ತುಗಳಿಗಿಂತಲೂ ಶ್ರೇಷ್ಠವಾದದ್ದನ್ನೇ ದಾನ ನೀಡಿ. ಮುಂದಿನ ದಿನಗಳಲ್ಲಿ ಶನಿಯ ಸಂಚಾರದಿಂದ ಜಯ, ಲಾಭ, ಕೀರ್ತಿ ನಿಮ್ಮದಾಗಲಿದೆ. ವಿಶ್ವಾಸವಿರಲಿ.

ಮಕರ: ಚಿಂತಿಸಿ ಫಲವಿಲ್ಲ. ಪರಸ್ಪರ ನಿಂದನೆಯಲ್ಲಿ ತೊಡಗಬೇಡಿ. ಶನಿಯ ತಾಪದಿಂದ ಬಿಡುಗಡೆ ಬೇಕಾದಲ್ಲಿ ಕ್ಷೀರಾಭಿಷೇಕ ಮಾಡಿಸಿ, ಈಶ್ವರನಿಗೆ ಬಿಲ್ವಪತ್ರೆಯಿಂದ ಪೂಜಿಸಿ. ನಿಮ್ಮ ಮೌನದಿಂದಲೇ ನಿಮಗೆ ಯಶಸ್ಸು ದೊರೆಯುವುದು. ಮಕ್ಕಳನ್ನು ಜೋಪಾನ ಮಾಡಿರಿ.

ಕುಂಭ: ಹುತ್ತದಲ್ಲಿ ಕೈಹಾಕಿದ ಮೇಲೆ ಹಾವೇ ಇರಬಹುದು ಅಥವಾ ಹೊನ್ನಿನ ಕೊಡವೇ ದೊರೆಯಬಹುದು. ನಿರಂತರವಾದ ಆತ್ಮಜ್ಞಾನ ಹಾಗೂ ಸಚ್ಚಿಂತನೆ ಅತ್ಯಗತ್ಯ. ದ್ವಾದಶ ಶನಿಯು ವಿಲಕ್ಷಣ ಮಾಡುವುದಿಲ್ಲ. ಕೆಲಸಗಳನ್ನು ಶ್ರಮವಹಿಸಿ ಮಾಡಿ. ವಿನಾಕಾರಣ ದುಃಖಿಸಿ ಮುಖಲಕ್ಷಣ ಕಳೆದುಕೊಳ್ಳಬೇಡಿ. ಶ್ರೀಲಕ್ಷ್ಮೀಯನ್ನು ಆರಾಧಿಸಿ.

ಮೀನ: ಏಕಾದಶದಲ್ಲಿರುವ ಗುರು ಮತ್ತು ಶನಿಗ್ರಹಗಳು ಸಾಮರ್ಥ್ಯವನ್ನು ಕೊಡುತ್ತವೆ. ಕೊಟ್ಟು ಆನಂದಿಸಿ. ಇಟ್ಟು ದುಃಖಿತರಾಗಬೇಡಿ. ಧನ ಹಾಗೂ ದೇವತಾರಾಧನೆ ನಿಷ್ಕಳಂಕವಾಗಿದ್ದು ಅದರಿಂದ ಅನ್ಯರಿಗೆ ಉಪಯೋಗವಾಗಬೇಕು. ದೇವರು ನಿಮಗೆ ಹತ್ತಿರವಾಗಿದ್ದಾನೆ. ಆದ್ದರಿಂದ ಒಳ್ಳೆಯ ಮನಸ್ಸಿನಿಂದ ದೇಶಕ್ಕಾಗಿ ಪ್ರಾರ್ಥಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net