ವಾರ ಭವಿಷ್ಯ: ಪರದಾಟಗಳ ದಿನಗಳೆಲ್ಲ ಕಳೆದು ಒಳಿತಿನ ದಿನಗಳಿಗಾಗಿ ನಂಬಿಕೆ ಇರಿಸಿಕೊಳ್ಳಿ, ನಕಾರಾತ್ಮಕ ಯೋಚನೆಗಳು ಬೇಡ.

VARA BHAVISHYA
Published on

ಮೇಷ: ಯಾರೇ ಟೀಕೆ ಮಾಡಲಿ, ಬುದ್ಧಿ ಬಲದಿಂದ ಎದುರಿಸಿ. ನಿಮಗೆ ಮಾತಿನ ಶಕ್ತಿ ಇದೆ. ಮೃದುವಾಗಿ ಮಾತನಾಡಿ. ಉತ್ತರವನ್ನು ಸ್ಪಷ್ಟವಾಗಿ ಕೊಡಿ. ಸತ್ಯದ ಆವರಣದಲ್ಲಿನ ಸ್ಪಷ್ಟತೆ ನಿಮ್ಮನ್ನು ಗೆಲ್ಲಿಸುವ ಉತ್ತಮ ಆಯುಧವಾಗಿರುತ್ತದೆ. ಒಂದೇ ಸಲ ಹಣ ಸುರಿದು ತಿಳಿದಿರದ ಕೆಲಸ ಶುರು ಮಾಡದಿರಿ. ಹಣ ಪಡೆದವರು ಮಾತು ತಪ್ಪುವ ಸಾಧ್ಯತೆ ಅಧಿಕ. ಜಗದ ಜಗುಲಿಯ ಮೇಲೆ ಕಷ್ಟ ಇದ್ದಿದ್ದೇ. ಇಂದ್ರಾಕ್ಷಿಯನ್ನು ಸ್ತುತಿಸಿ.

ಶುಭದಿಕ್ಕು: ನೈಋತ್ಯ ಶುಭಸಂಖ್ಯೆ: 2

ವೃಷಭ: ನಿಮ್ಮನ್ನು ನೀವು ಒಂದು ಹದದೊಡನೆ ರೂಪಿಸಿ ತಿದ್ದಿಕೊಳ್ಳಿ. ಶಿಸ್ತು, ತ್ಯಾಗ, ತಾಳ್ಮೆ ಇತ್ಯಾದಿಗಳೆಲ್ಲ ಈಗ ಪ್ರಯೋಜನಕ್ಕೆ ಬರುತ್ತಿಲ್ಲ ಎಂದೆನಿಸಿದರೂ ಪ್ರಯೋಜನಕ್ಕೆ ಬರುವ ಸಮಯ ಹತ್ತಿರವಾಗುತ್ತಿದೆ. ಬುಧನು ನಿಮಗೆ ಸಮಯಾವಧಾನ ಒದಗಿಸಿ ಆರ್ಥಿಕ ಬಲವನ್ನೂ ಸುಧಾರಿಸುತ್ತಾನೆ. ನೀವು ನಿರೀಕ್ಷಿಸಿದ ಲಾಭ ಅಥವಾ ಉತ್ಪನ್ನ ಬರಲಾರದು. ಆದರೂ ಶ್ರಮ ಬಿಡದಿರಿ. ಅವಕಾಶ ಕೈಚೆಲ್ಲದಿರಿ. ಸಂಪನ್ನತೆ ಸಾಧ್ಯ. ದುರ್ಗಾಸ್ತುತಿ ಒಳಿತು.

ಶುಭದಿಕ್ಕು: ಪೂರ್ವ ಶುಭಸಂಖ್ಯೆ: 5

ಮಿಥುನ: ಮನಸ್ಸು ಚಂಚಲವಾಗುತ್ತದೆ. ಆದರೂ ಮುನ್ನುಗ್ಗಿ. ಕೆಲವು ಸಲ ನಿಮ್ಮ ವ್ಯರ್ಥ ಪ್ರಯತ್ನಗಳಿಂದ ಫಲವೇನು ಎಂದಂದುಕೊಂಡರೂ ಮುಂದೊಂದು ದಿನಕ್ಕೆ ಭದ್ರ ಬುನಾದಿಯಾಗಿ ನಿಲ್ಲುವ ವಿಸ್ಮಯ ಶತಸ್ಸಿದ್ಧ. ಹಿರಿಯರೊಬ್ಬರು ಕಟುವಾಗಿ ವರ್ತಿಸಿದರೂ ನಿಮಗೆ ದಾರಿ ತೋರಿಸುತ್ತಾರೆ. ಬಾಳ ಸಂಗಾತಿಯ ಆರೋಗ್ಯದ ಬಗೆಗೆ ಕಾಳಜಿ ವಹಿಸಿ. ನೀವು ಕೋಪದಿಂದ ದೂರವಿರಿ. ಗಣಪತಿ ಸ್ತುತಿ ಕ್ಷೇಮ.

ಶುಭದಿಕ್ಕು: ಆಗ್ನೇಯ ಶುಭಸಂಖ್ಯೆ: 9

ಕಟಕ: ಮನಸ್ಸು ನಿಯಂತ್ರಣಕ್ಕೆ ಸಿಗಲಾರದು. ಹೆಚ್ಚಾಗಿ ಉದರದ ಸಮಸ್ಯೆ ನಿಮ್ಮ ಶಾಂತಿಯನ್ನು ನಾಶ ಮಾಡುತ್ತಿದೆ. ಸೂಕ್ತ ವಾದ ವೈದ್ಯರ ಬಳಿ ಸಲಹೆ, ಔಷಧ ಪಡೆಯರಿ. ಮಕ್ಕಳು ಕಿರಿಕಿರಿ ಮಾಡಲು ಸಾಧ್ಯ. ವರ್ಚಸ್ಸಿನ ದೃಷ್ಟಿಯಿಂದ ಕಾಲ ಉತ್ತಮವಾದರೂ ಹುಲಿಯ ಮೇಲಿನ ಸವಾರಿಯಿಂದಾಗಿ ದಣಿವು ತೋರಬಹುದು. ಹಣಕಾಸಿನ ಸಮಸ್ಯೆ ತೋರಲಾರದು. ಶ್ರೀ ಕೃಷ್ಣನನ್ನು ಸ್ತುತಿಸಿ. ಒಳಿತಾಗುತ್ತದೆ.

ಶುಭದಿಕ್ಕು: ಪಶ್ಚಿಮ ಶುಭಸಂಖ್ಯೆ: 5

ಸಿಂಹ: ಇನ್ನೇನು ಒಂದು ವಾರದಲ್ಲಿ ಪಂಚಮ ಶನಿ ಕಾಟದಿಂದ ವಿಮುಕ್ತಿಗೊಳ್ಳಲಿದ್ದೀರಿ. ಪರದಾಟಗಳ ದಿನಗಳೆಲ್ಲ ಕಳೆದು ಒಳಿತಿನ ದಿನಗಳಿಗಾಗಿ ನಂಬಿಕೆ ಇರಿಸಿಕೊಳ್ಳಿ. ನಕಾರಾತ್ಮಕ ಯೋಚನೆಗಳು ಬೇಡ. ಮುಖದಲ್ಲಿನ ಪ್ರಸನ್ನತೆಯನ್ನು ಒಳ್ಳೆಯ ಮಾತಿನ ಶಕ್ತಿಯಿಂದ, ಉತ್ಸಾಹಶೀಲತೆ ತಳೆದು ವ್ಯವಹರಿಸುವುದರಿಂದ ಸಂಪಾದಿಸಿಕೊಳ್ಳಿ. ದಯಾಮಯನಾದ ಅಂಜನಾಸುತ ಮಾರುತಿಯನ್ನು ಸ್ತುತಿಸಿ.

ಶುಭದಿಕ್ಕು: ನೈಋತ್ಯ ಶುಭಸಂಖ್ಯೆ: 8

ಕನ್ಯಾ: ಹತ್ತಿರದ ಜನರು ದಣಿಯುವಂತೆ ಮಾಡುತ್ತಿದ್ದಾರೆ. ಆದರೂ ವಿಶ್ವಾಸವಿರಿಸಿ ಹತ್ತಿರದವರಿಂದಲೇ ಕೆಲಸ ತೆಗೆದುಕೊಳ್ಳಿ. ಅವರ ಬೆನ್ನು ಹತ್ತಿ ಕೆಲಸ ಮಾಡಿಸಿ. ರಾಜಕಾರಣಿಗಳಿಗೆ ನಿಸ್ಸಂದಿಗ್ಧವಾದ ಜಯ ಕಷ್ಟ. ನಿಮ್ಮ ಹಳೆಯ ಕಡತಗಳು ಈಗ ಬಹಳ ಮುಖ್ಯವಾದುದಾಗಿವೆ. ಒಪ್ಪ ಓರಣದಿಂದ ಕಾಪಾಡಿಕೊಳ್ಳಿ. ಇಲ್ಲೇ ಇದೆ ಎಂಬುದು ಅವಶ್ಯವಿದ್ದಾಗ ಕಾಣದಿರಬಹುದು. ಎಚ್ಚರ ಇರಲಿ. ಶಿವಸ್ತುತಿ ಉತ್ತಮ.

ಶುಭದಿಕ್ಕು: ಪೂರ್ವ ಶುಭಸಂಖ್ಯೆ: 2

ತುಲಾ: ದಿನಗಳು ಜಾರುತ್ತಿವೆ. ಅಂದುಕೊಂಡ ಕೆಲಸಗಳು ಸಲೀಸಾಗಿ ಸಾಗುತ್ತಿಲ್ಲ ಎಂಬ ಭಾವನೆ ಮನಸ್ಸನ್ನು ಘಾಸಿಗೊಳಿಸಿದೆ. ಬರುವ ದಿನಗಳಲ್ಲಿ ಪಂಚಮ ಶನಿಯೂ ತಲೆ ಎತ್ತಿ ನಿಲ್ಲುತ್ತಿದ್ದಾನೆ. ಯಾವುದೋ ಒಂದು ಶಕ್ತಿ ಚೈತನ್ಯವನ್ನು ತಡೆಯುತ್ತಿದೆ. ರಾಹುವಿನ ಕಾಠಿಣ್ಯ, ವಿಷಮಯವಾದ ರಾಹುವಿನ ಘಟಕಗಳು ನಿಮ್ಮ ಕ್ರಿಯಾಶೀಲತೆಯನ್ನು ತಿನ್ನುತ್ತಿವೆ. ಶ್ರೀ ದುರ್ಗಾಂಬಿಕೆಗೆ ಶರಣಾಗಿ. ಅನುಗ್ರಹಿಸುವ ತಾಯಿ ಶಕ್ತಿ ನೀಡುತ್ತಾಳೆ.

ಶುಭದಿಕ್ಕು: ಆಗ್ನೇಯ ಶುಭಸಂಖ್ಯೆ: 8

ವೃಶ್ಚಿಕ: ಪ್ರವಾಸಗಳು ಪ್ರಯಾಸ ತರಬಹುದಾದರೂ ನಿರೀಕ್ಷಿತ ಫಲಾವಳಿಗಳನ್ನು ನಿಮಗೆ ಎಂದಾದರೊಂದು ದಿನ ನೀಡಲು ಸಮರ್ಥವಾಗುತ್ತವೆ. ಕೆಲವು ಧೂರ್ತರನ್ನು ನೀವು ಗುರುತಿಸಿ ದೂರವಿಟ್ಟುಕೊಳ್ಳಲೇಬೇಕು. ಅಸಾಮಾನ್ಯವಾದ ಉತ್ಸಾಹ, ಶಕ್ತಿ ನಿಮಗಿದೆಯಾದರೂ ಕೆಲವು ಸತ್ವಪರೀಕ್ಷೆಗಳನ್ನು ಎದುರಿಸಬೇಕಾಗಿ ಬರಬಹುದು. ಶ್ರೀಶಕ್ತಿ ಪ್ರಚ್ಛನ್ನ ಗುರುಸ್ತೋತ್ರ ಓದಿ. ವಿಘ್ನ ನಿವಾರಣೆ ಸಾಧ್ಯ.

ಶುಭದಿಕ್ಕು: ಈಶಾನ್ಯ ಶುಭಸಂಖ್ಯೆ: 3

ಧನಸ್ಸು: ವಿವಾಹಾಪೇಕ್ಷಿಗಳಿಗೆ, ಉದ್ಯೋಗಾಕಾಂಕ್ಷಿಗಳಿಗೆ ಇದು ಸೂಕ್ತವಾದ ವಾರವಲ್ಲ. ನಿರೀಕ್ಷೆ ನಿರೀಕ್ಷೆ ಎನ್ನುತ್ತಲೇ ನಿಮ್ಮ ತಾಳ್ಮೆ ಪರೀಕ್ಷಿಸುವ ಕೆಲಸ ಆಗುತ್ತಿರುತ್ತದೆ. ಸೂಕ್ತವಾಗಿ ಕೆಲಸ ಮುಗಿಸಿಕೊಡಬೇಕಾದವರು ಗೋಳು ಹೊಯ್ದುಕೊಳ್ಳುತ್ತಾರೆ. ಖರ್ಚಿನ ಯಾದಿಯನ್ನು ನಿಯಂತ್ರಿಸಿ. ನಿಮ್ಮನ್ನು ವಿನಾಕಾರಣ ನೋಯಿಸುವವರ ಬಗ್ಗೆ ನಿರ್ಲಕ್ಷ್ಯ ತೋರಿ. ಆದರೂ ಚತುರತೆಯಿಂದ ನಗುಮುಖ ತೋರಿ. ಹನುಮಾನ್ ಚಾಲೀಸಾ ಓದಿ.

ಶುಭದಿಕ್ಕು: ಉತ್ತರ ಶುಭಸಂಖ್ಯೆ: 7

ಮಕರ: ಕೊಂಕು ಹುಡುಕುವ ಜನ, ದಾಂಪತ್ಯದಲ್ಲಿ ಬಿರುಕು ತರಲೆಣಿಸುವ ಜನ ಕಾಟ ನೀಡುತ್ತಾರೆ. ನೀವು ಎಲ್ಲದರ ಬಗ್ಗೆಯೂ ನಿರ್ಲಕ್ಷ್ಯ ತೋರದಿರಿ. ಸಮಸ್ಯೆ ಉಲ್ಬಣಿಸಲು ಸಾಧ್ಯ. ಯಾವುದು ಅನಪೇಕ್ಷಿತ ಎಂಬುದನ್ನು ತಿಳಿದು ಅಂಥವನ್ನೆಲ್ಲ ದೂರಕ್ಕೆ ಅಟ್ಟಿಬಿಡಿ. ಪದೋನ್ನತಿಯು ಸಾಧ್ಯವಿದೆ. ಚಾತುರ್ಯದಿಂದ ನಿಮ್ಮನ್ನು ರಕ್ಷಿಸುವ ವ್ಯೂಹವನ್ನು ರೂಪಿಸಿಕೊಳ್ಳಿ. ದಶರಥ ರಾಜ ವಿರಚಿತ ಶನಿ ಸ್ತೋತ್ರ ಓದಿ.

ಶುಭದಿಕ್ಕು: ವಾಯವ್ಯ ಶುಭಸಂಖ್ಯೆ: 1

ಕುಂಭ: ಸಮಸ್ಯೆಗಳವನ್ನು ನೀವೇ ನಿರ್ವಿುಸಿಕೊಳ್ಳದಿದ್ದರೆ ತೊಂದರೆ ಬರಲಾರದು. ಯಾರು ನಿಮ್ಮನ್ನು ನಿರ್ಲಕ್ಷಿಸುತ್ತಾರೋ ಅವರನ್ನೇ ಹುಡುಕಿಕೊಂಡು ಹೋಗಿ ನಿರ್ಲಕ್ಷ್ಯ್ಕೆ ತುತ್ತಾಗುತ್ತಿದ್ದೀರಿ. ನಿಮ್ಮ ಪಾಲಿನ ಕೇತು ಮತ್ತು ಗುರು ಬಲ ಒಳಿತಿನ ದಾರಿ ತೋರಬಹುದಾದ ಕೈದೀಪಗಳು. ಆದರೆ ರಾಹುವಿನ ಕಾರಣದಿಂದ ದಾರಿ ತಪ್ಪುವ, ಮಕ್ಕಳ ಬಗೆಗೆ ಗಮನ ಹರಿಸಲಾಗದ ಅಸಹಾಯಕತೆ ಉಂಟಾಗಬಹುದು. ದತ್ತನನ್ನು ಆರಾಧಿಸಿ.

ಶುಭದಿಕ್ಕು: ದಕ್ಷಿಣ ಶುಭಸಂಖ್ಯೆ: 4

ಮೀನ: ನೀವು ಬುದ್ಧಿವಂತರಾದರೂ ಕೆಲವು ಸ್ವಯಂ ನಿರ್ವಿುತ ತೊಂದರೆಗಳಿಂದ ಬಾಧೆ ಎದುರಾಗಿದೆ. ಶಾಂತ ಚಿತ್ತರಾಗಿರಿ. ಮೌನವೇ ಈಗ ವಜ್ರಾಯುಧ. ಈಗ ಮುಸುಕಿನ ಗುದ್ದಾಟ ಬೇಡ. ಬೆಂಬಲಿಗರ ಶಕ್ತಿ ಸಂಪಾದಿಸಿಕೊಳ್ಳಿ. ವಿರೋಧಿಗಳನ್ನು ನೈತಿಕ ಬಲದೊಂದಿಗೆ ಎದುರಿಸಿ. ಯಾಯುವ ದೈವ ಅನೂಹ್ಯ. ಮೂಲದಿಂದ ಶಕ್ತಿ ಪಡೆಯುವ ವರ್ತಮಾನ ಪಕ್ವವಾಗಿದೆ. ನಿಶ್ಚಿತ ಗುರಿ ತಲುಪಿ. ಕಾಳಿಕಾ ದೇವಿ ಸ್ತುತಿ ಮಾಡಿ.

ಶುಭದಿಕ್ಕು: ಪಶ್ಚಿಮ ಶುಭಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net