ವಾರ ಭವಿಷ್ಯ: ಈ ರಾಶಿಯವರಿಗೆ ಜೂನ್​ 29ರ ನಂತರದಲ್ಲಿ ಒಳ್ಳೆಯ ದಿನಗಳಿವೆ

Vara-Bhavishya
Published on

10-05-2020 ರಿಂದ 16-05-2020

ಮೇಷ: ಸೂರ್ಯನು ಮೇ 14ರಂದು ಮೇಷರಾಶಿಯಿಂದ ವೃಷಭ ರಾಶಿಗೆ ಚಲಿಸಿ ಬುಧ, ಶುಕ್ರರೊಂದಿಗೆ ಇರುತ್ತಾನೆ. ರವಿ-ಬುಧರು ಬುಧಾದಿತ್ಯ ಯೋಗವನ್ನು ನೀಡಿ ನಿಮ್ಮನ್ನು ಮುನ್ನಡೆಸುತ್ತಾರೆ. ನೆನೆಸಿದ ಕಾರ್ಯವು ಒಂದು ಹಂತಕ್ಕೆ ಬರಲಿದೆ. ಗುರು, ಶುಕ್ರರ ವಕ್ರಗತಿಯಿಂದ ಸ್ವಲ್ಪ ವಿಳಂಬವಾದರೂ ನಿಮ್ಮ ಆಸೆ ಈಡೇರುತ್ತದೆ.

ವೃಷಭ: ಸೂರ್ಯನು ವೃಷಭದಲ್ಲಿದ್ದು ರವಿ-ಬುಧರ ಸಂಯೋಗದಲ್ಲಿ ರಾಜಯೋಗವನ್ನು, ರಾಜಕಾರ್ಯಗಳಲ್ಲಿ ಯಶಸ್ಸನ್ನು, ಹಣಕಾಸಿನ ಮುಗ್ಗಟ್ಟನ್ನು ನಿವಾರಿಸುತ್ತಾನೆ. ಧೈರ್ಯವಿರಲಿ. ಒಂಬತ್ತರ ಗುರು-ಶನಿ ನಿಮ್ಮನ್ನು ಕಾಪಾಡುತ್ತಾರೆ. ಲಲಿತಾ ಪರಮೇಶ್ವರಿಯನ್ನು ಆರಾಧಿಸಿ. ಸ್ತ್ರೀಯರಿಗೆ ಗೌರವವನ್ನು ನೀಡಿ. ಸುಖವನ್ನು ಕಾಣಿರಿ.

ಮಿಥುನ: ದ್ವಾದಶದಲ್ಲಿ ರವಿ-ಶುಕ್ರ ಸೇರಿದ್ದರಿಂದ ನಿಮ್ಮ ಕೆಲಸಗಳು ಸುಸೂತ್ರವಾಗಿ ಆಗುವುದಿಲ್ಲ. ಅಲ್ಪಸ್ವಲ್ಪ ಲಾಭದಲ್ಲಿ ತೃಪ್ತಿಪಟ್ಟುಕೊಳ್ಳಿ. ಅಷ್ಟಮ ಗುರು-ಶನಿಯಿಂದ ಆರೋಗ್ಯಬಾಧೆ ಇರುತ್ತದೆ. ಸಂಕಟ ಕೊಡುವವರಿದ್ದಾರೆ. ಎಚ್ಚರ. ದೇವತಾಕಾರ್ಯಗಳನ್ನು ನಡೆಸಿ. ನವಗ್ರಹ ಸ್ತೋತ್ರ ಪಠಿಸಿ. ಸತ್ಯನಾರಾಯಣ ಪೂಜೆ ಮಾಡಿದರೆ ಒಳ್ಳೆಯದು.

ಕಟಕ: ಸಪ್ತಮ ಗುರುವೇ ಶ್ರೀರಕ್ಷೆ. ಶನಿಯಿಂದ ಕಾರ್ಯದಲ್ಲಿ ವಿಳಂಬ. ಕೈಕಾಲುಗಳಿಗೆ ನೋವಾದೀತು. ಪಂಚೇಂದ್ರಿಯಗಳಲ್ಲಿ ಅತಿ ಮುಖ್ಯ ಅಂಗ, ದೇಹಕ್ಕೆ ಸೌಂದರ್ಯ ಕೊಟ್ಟ ಕಣ್ಣನ್ನು ಜಾಗರೂಕತೆಯಿಂದ ಕಾಪಾಡಿಕೊಳ್ಳಿ. ಶ್ರೀ ಸುಬ್ರಹ್ಮಣ್ಯ ಭುಜಂಗ ಸ್ತೋತ್ರ ಪಠಿಸಿ. ಕಷ್ಟವನ್ನು ನಿವಾರಿಸಿಕೊಳ್ಳಿ. ಆರೋಗ್ಯವೇ ಮಹಾಭಾಗ್ಯ. ಸಂತೃಪ್ತನಿಗೆ ರೋಗದ ಭಯವಿಲ್ಲ.

ಸಿಂಹ: ಆರನೇ ಮನೆಯಲ್ಲಿ ಶನಿಯಿದ್ದು, ನಿಮ್ಮ ಭಾಗ್ಯೋದಯಕ್ಕೆ ಎದುರು ನೋಡುತ್ತಿರುತ್ತೀರ. ರಾಷ್ಟ್ರಕ್ಕೆ ಬಂದ ಸಂಕಟದಲ್ಲಿ ಮನುಷ್ಯಮಾತ್ರನಿಗೆ ಶುಭಫಲ ನಿಧಾನವಾಗುವುದೆಂಬ ಆತಂಕ. ಜೂನ್29ರ ನಂತರ ಒಳ್ಳೆಯ ದಿನ ಬರಲಿದೆ. ಶ್ರದ್ಧಾ ಭಕ್ತಿಯಿಂದ ಪಿತೃಸೇವೆ, ಧ್ಯಾನ, ಪೂಜೆ ಮಾಡಿರಿ. ಶುಭಫಲಗಳನ್ನು ಕಾಣುವುದರಲ್ಲಿ ಸಂದೇಹವಿಲ್ಲ.

ಕನ್ಯಾ: ಬುದ್ಧಿ ಹೇಳಿದವರನ್ನು ನೀವು ನಂಬುವುದಿಲ್ಲ. ಕೇತು ಹಾಗೂ ಶನಿಯಿಂದ ಬುದ್ಧಿ ಕ್ಲೇಶ. ಗುರು ಅಲ್ಪ ಶುಭದಾಯಕ. ಇನ್ನೊಬ್ಬರಿಗೆ ಉಪಕರಿಸದಿದ್ದರೂ ಅಪಕಾರ ಮಾಡದೆ ಇದ್ದರೆ ಅತೀ ಮಹದೋಪಕಾರ. ನಿಮ್ಮನ್ನು ನೀವು ತಿದ್ದಿಕೊಂಡು ನಡೆದಲ್ಲಿ ದೇವರು ಮೆಚ್ಚುತ್ತಾನೆ. ಅನಂತಪದ್ಮನಾಭ ಕಥೆ ಶ್ರವಣ ಮಾಡಿ ಹಾಗೂ ಅನಂತನ ಅಷ್ಟೋತ್ತರ ಪಠಿಸಿ.

ತುಲಾ: ದೇವರು ನಿಮಗೆ ಜನ್ಮ ಕೊಟ್ಟಿದ್ದೇ ಒಳ್ಳೆಯದು - ಕೆಟ್ಟದ್ದನ್ನು ತೂಕ ಮಾಡಲು. ಆತ್ಮನಿಂದನೆ ಸಲ್ಲದು. ಕೋರ್ಟ್ ಕಚೇರಿ ಏರುವುದನ್ನು ಕಡೆಯದಾಗಿ ಇಟ್ಟುಕೊಳ್ಳಿ. ತೃತೀಯ ಕೇತು ಧನಲಾಭ ತರುತ್ತಾನೆ. ವಾಕ್​ದೋಷದ ಪಾಪದ ಫಲವು ಹತ್ತಿರ ಬರದಂತೆ ನೋಡಿಕೊಳ್ಳಿ. ಶ್ರೇಷ್ಠ ಪಂಡಿತರಿಂದ ಚಂಡಿಕಾ ಪಾರಾಯಣ ಹಾಗೂ ದುರ್ಗಾಜಪ ಮಾಡಿಸಿ.

ವೃಶ್ಚಿಕ: ದಾನದಲ್ಲಿ ಅನ್ನದಾನ ಶ್ರೇಷ್ಠ. ಏಳಿಗೆ ಹೊಂದಲು ಸಂಯಮ, ಸಹೃದಯತೆ, ಪ್ರಚಾರವಿಲ್ಲದ ನೆರವು, ದಾನ-ಧರ್ಮ ನಡೆಸಬೇಕು. ಶನಿಯು ನೀವು ನೆನೆಸಿದ ಅಭ್ಯುದಯ ಕೊಡುತ್ತಾನೆ. ಎಲ್ಲದಕ್ಕೂ ಪರಿಹಾರ ಪಡೆಯಲು ಆರು ಶ್ರೀ ಸುಬ್ರಹ್ಮಣ್ಯ ಕ್ಷೇತ್ರಗಳನ್ನು ನೆನೆಸಿ, ಪ್ರಾರ್ಥಿಸಿ. ಒಳ್ಳೆಯ ದಿನ ಬಂದಕೂಡಲೇ ಶನಿಕಾಟದಲ್ಲಿನ ಪಾಪ ಕಳೆದುಕೊಳ್ಳಿ.

ಧನಸ್ಸು: ಎರಡನೇ ಮನೆಯಲ್ಲಿ ಗುರು-ಶನಿ, ಲಗ್ನದಲ್ಲಿ ಕೇತು ಇರುವುದರಿಂದ ಕಾರ್ಯ ವಿಳಂಬ. ಸಪ್ತಮದ ರಾಹುವಿನಿಂದ ಧನ ನಿಧಾನವಾಗಿ ಬರಬಹುದು. ಧೈರ್ಯವಾಗಿ ಸತ್ಸಂಕಲ್ಪ ಮಾಡಿ ಹೆಜ್ಜೆಯಿಟ್ಟರೆ ಕ್ರಮೇಣ ಒಳ್ಳೆಯ ದಿನ ಬರಲಿದೆ. ಸುಂದರಕಾಂಡ ಪಾರಾಯಣ ಮಾಡಿ. ಮನೆಯ ಹೆಣ್ಣುಮಕ್ಕಳಿಗೆ ಮಂಗಳದ್ರವ್ಯ, ವಸ್ತ್ರ ನೀಡಿ ಆಶೀರ್ವಾದ ಪಡೆಯಿರಿ.

ಮಕರ: ಧ್ಯಾನವೇ ಮೊದಲ ಹೆಜ್ಜೆ, ಧರ್ಮ ಎರಡನೆಯದು, ನ್ಯಾಯಸಮ್ಮತ ನಡೆ ಮೂರನೇ ಹೆಜ್ಜೆ. ಏನೇ ಬಂದರೂ ಸ್ವೀಕರಿಸಿ. ಅವರವರ ತಪ್ಪನ್ನು ತಿದ್ದಿಕೊಂಡಲ್ಲಿ ಲೋಕಕ್ಕೆ ಕಲ್ಯಾಣವುಂಟಾಗುತ್ತದೆ. ಶನಿಯ ಪ್ರೀತಿಗಾಗಿ ಕರಿ ಎಳ್ಳು, ಎಳ್ಳೆಣ್ಣೆ, ದೀಪದಾನ ಮಾಡಿ. ಬೆಲ್ಲದಲ್ಲಿ ತಿಲ (ಎಳ್ಳು) ಮಿಶ್ರಣ ಮಾಡಿ ದೇವರ ಮುಂದಿಟ್ಟು ಪ್ರಸಾದ ಸ್ವೀಕರಿಸಿ.

ಕುಂಭ: ಸೂರ್ಯನು ದೇಹಾರೋಗ್ಯವನ್ನು ಸ್ವಲ್ಪಮಟ್ಟಿಗೆ ಬಾಧಿಸುತ್ತಿರುವನಾದರೂ ಚಿಂತೆ ಬೇಡ. ಸನ್ನತಿಯ ಶ್ರೀ ಚಂದ್ರಲಾ ಪರಮೇಶ್ವರಿ ಧ್ಯಾನ ಮಾಡಿ. ರಾಷ್ಟ್ರೀಯ ವಿಪತ್ತು ಕಡಿಮೆಯಾದ ಕೂಡಲೇ ಶ್ರೀಕ್ಷೇತ್ರಕ್ಕೆ ಹೋಗಿ ದೇವಿಯನ್ನು ಪ್ರಾರ್ಥಿಸಿ. ಧೈರ್ಯವಿರಲಿ. ಕೊಡಬೇಕಾದವರಿಗೆ ಬೇಗನೆ ನೀಡುತ್ತೇನೆಂದು ಭರವಸೆ ನೀಡಿ.

ಮೀನ: ಯೌವನದಲ್ಲಿ ದೇವರ ಸೇವೆ, ಮಾತಾಪಿತೃಗಳಿಗೆ ಗೌರವ ಇಟ್ಟುಕೊಂಡಲ್ಲಿ ಶನಿ ಲಾಭ, ಸುಖ ಕೊಡುತ್ತಾನೆ. ಶ್ರೀ ದತ್ತಾತ್ರೇಯನನ್ನು ಪ್ರಾರ್ಥಿಸಿ. ಕಡಲೆಬೇಳೆ ಬೆಲ್ಲವನ್ನು ದೇವರಿಗೆ-ಸತ್ಪುರುಷರಿಗೆ ನೀಡಿ. ನಿಮ್ಮ ನಡೆ-ನುಡಿಯೇ ನಿಮಗೆ ರಕ್ಷೆ. ಸತ್ಪುರುಷರಲ್ಲಿ ದೇವರನ್ನು ಕಾಣಿ. ಸಜ್ಜನರ ಆಶೀರ್ವಾದವೇ ನಿಮ್ಮನ್ನು ಕಾಯುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net